Abu Hisham Saquafi

Official Website Of Hafiz Ilyas Saquafi Padaladka

Thursday, June 30, 2022

ಪ್ರವಾದಿ ಮುಹಮ್ಮದ್ ﷺ) ತಂಙಳವರ ಜೀವನ ಚರಿತ್ರೆ || ಭಾಗ -16 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ಮಕ್ಕಾ ಪಟ್ಟಣದಲ್ಲಿ ಬಹು ದೈವಾರಾಧನೆ ತಾಂಡವವಾಡುತ್ತಿತ್ತು. ಅದರ ಹೆಸರಿನಲ್ಲಿ ಮೂರ್ತಿ ಪೂಜೆಯೂ ಕೂಡ ಅಧಿಕವಾಗಿತ್ತು. ವಿವಿಧ ಪಂಗಡಗಳಿಗೆ ವಿವಿಧ ರೀತಿಯ ದೈವಗಳ ವಿಗ್ರಹಗಲೂ ಇತ್ತು. ಸೃಷ್ಟಿಕರ್ತನೊಬ್ಬನನ್ನು ಮಾತ್ರ ಆರಾಧಿಸಲು ನಿರ್ಮಿಸಿದ ಕಅಬಾಲಯದ ಒಳಗೂ, ಹೊರಗೂ, ಅದರ ಸುತ್ತಲಿನ ಪರಿಸರದಲ್ಲೂ ಕೂಡ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನೈಜವಾದ ಏಕ ದೇವ ವಿಶ್ವಾಸವು ಮಕ್ಕಾ ನಿವಾಸಿಗಳಲ್ಲಿ ಕೆಲವೊಂದು ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರವೇ ಇತ್ತು. ಮನುಕುಲದ ಆರಂಭದಿಂದಲೂ ಮಕ್ಕಾದಲ್ಲಿ ಅಲ್ಲಾಹನನ್ನು ಮಾತ್ರವೇ ಆರಾಧಿಸಲಾಗಿತ್ತು. ಪ್ರವಾದಿ ನೂಹ್'ರವರ (ಅ) ಕಾಲದಲ್ಲಿ ಅವರ ಜನತೆಯಾಗಿದೆ ಮೊದಲ ಬಾರಿ ವಿಗ್ರಹರಾಧನೆ ಆರಂಭಿಸಿದ್ದು. ಅಮ್ರ್ ಬಿನ್ ಲಹಿಯ ಎನ್ನುವ ವ್ಯಕ್ತಿಯಾಗಿದ್ದಾನೆ ಅರೇಬಿಯನ್ ಭೂಖಂಡದಲ್ಲಿ ಮೊದಲ ಬಾರಿಗೆ ವಿಗ್ರಹವನ್ನು ನಿರ್ಮಿಸಿದ್ದು.  ಪ್ರವಾದಿಗಳ ಉಪದೇಶ ಲಭಿಸದ ಕಾರಣ ಮಕ್ಕಾ ಜನತೆ ಅದರಲ್ಲಿ ಆಕರ್ಷಿತರಾದರು. ಪ್ರವಾದಿ ಮೂಸರವರ (ಅ), ಪ್ರವಾದಿ ಈಸರವರ (ಅ) ಅನುಯಾಯಿಗಳು ಬಹಳಷ್ಟು ಸತ್ಯಸಂದೇಶ ತಲುಪಿಸಿದರೂ ಮಕ್ಕಾ ನಿವಾಸಿಗಳು ಅದನ್ನು ಅಂಗೀಕರಿಸಲಿಲ್ಲ. ಈ ರೀತಿಯ ಅಸುರಕ್ಷಿತವಾದ ಜನರ ನಡುವೆಯಾಗಿತ್ತು ಪುಣ್ಯ ಪ್ರವಾದಿಯವರು ﷺ ಬೆಳೆದು ಬಂದದ್ದು, ಆದರೆ ಒಂದೇ ಒಂದು ಬಾರಿಯೂ ಕೂಡ ಪ್ರವಾದಿವರ್ಯರು ﷺ ಬಹು ದೈವರಾಧನೆಯ ಕಡೆಗೆ ವಾಲಿಕೆಯೂ ಆಗಿರಲಿಲ್ಲ. ಒಂದೇ ಒಂದು ವಿಗ್ರಹವನ್ನು ಪೂಜಿಸುವುದೋ, ನಮಸ್ಕರಿಸುವುದೋ ಮಾಡಿರಲಿಲ್ಲ. ಸೃಷ್ಟಿಕರ್ತನಿಂದ ಪುಣ್ಯ ಪ್ರವಾದಿಯವರಿಗೆ ﷺ ವಿಶೇಷವಾದ ರಕ್ಷಣೆ ಯಾವಾಗಲೂ ಇರುತ್ತಿತ್ತು. ಇದರ ಕುರಿತು ಕೆಲವೊಂದು ಘಟನೆಗಳನ್ನು ಈ ರೀತಿ ವಿವರಿಸಬಹುದು.

      1. ಅಲಿರವರು (ರ) ಉಲ್ಲೇಖಿಸಿದ ಘಟನೆ, ಪ್ರವಾದಿವರ್ಯರ ﷺ ಬಳಿ ಒಬ್ಬ ವ್ಯಕ್ತಿಯು ಬಂದು ನೀವು ಮೂರ್ತಿ ಪೂಜೆ ಮಾಡಿದ್ದೀರಾ ಅಥವಾ ಯಾವತ್ತಾದರೂ ಮಧ್ಯಪಾನ ಮಾಡಿದ್ದೀರಾ.? ಎಂದು ಕೇಳಿದಾಗ, ಇಲ್ಲ ಅವರು ಮಾಡುವುದು ಸತ್ಯ ನಿಷೇಧವಾಗಿದೆ (ಕುಫ್'ರ್) ಎಂದು ನನಗೆ ಅವತ್ತೇ ತಿಳಿದಿತ್ತು ಎಂದು ಪ್ರವಾದಿವರ್ಯರು ﷺ ಹೇಳಿದರು. 

    2. ಪ್ರವಾದಿವರ್ಯರ ﷺ ಪರಿಚಯದ ವ್ಯಕ್ತಿಯಾದ ಝೈದ್ ಬಿನ್ ಹಾರಿಸ ಎನ್ನುವವರು ವಿವರಿಸುತ್ತಾರೆ. ಪುಣ್ಯ ಪ್ರವಾದಿಯವರು ﷺ ಒಮ್ಮೆಯೂ ಕೂಡ ಯಾವುದೇ ವಿಗ್ರಹಕ್ಕೂ ನಮಸ್ಕರಿಸಿರಲಿಲ್ಲ. ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ನನಗೆ ಅದು ಇಷ್ಟವಿರಲಿಲ್ಲ, ಕಅಬಾವನ್ನು ಪ್ರದಕ್ಷಿಣೆ ಹಾಕುತ್ತಿದ್ದ ಅವತ್ತಿನ ಮಕ್ಕಾ ನಿವಾಸಿಗಳು ಇಸಾಫ, ನಾಇಲ ಎನ್ನುವ ವಿಗ್ರಹಗಳಿಗೆ ನಮಸ್ಕರಿಸುತ್ತಿದ್ದರು ಆದರೆ ಪ್ರವಾದಿಯವರು ﷺ ಅದನ್ನೂ ಕೂಡ ಮಾಡಿರಲಿಲ್ಲ. 

3. ಸಾಕು ತಾಯಿ ಉಮ್ಮು ಐಮನ್'ರವರು ವಿವರಿಸುತ್ತಾರೆ,  ಖುರೈಷಿಗಳು ಬುವಾನ ಎನ್ನುವ ಮೂರ್ತಿಯನ್ನು ಪೂಜಿಸುತಿದ್ದರು, ಅದರ ಸನ್ನಿಧಿಯಲ್ಲಿ ವಾರ್ಷಿಕೋತ್ಸವವನ್ನು ನಡೆಸುತ್ತಿದ್ದರು, ಬಲಿ ಕೊಟ್ಟು ತಲೆ ಕೂದಲನ್ನೂ ನೀಡುತ್ತಿದ್ದರು, ಉತ್ಸವದ ದಿವಸ ಅಲ್ಲಿಯೇ ಭಜನೆಯನ್ನು ನಡೆಸುತ್ತಿದ್ದರು.
     ಅಬೂತ್ವಾಲಿಬರೂ ಕೂಡ ಕುಟುಂಬದ ಎಲ್ಲಾ ಸದಸ್ಯರನ್ನು ಸೇರಿಸಿ ಭಾಗವಹಿಸುತ್ತಿದ್ದರು. ಆದರೆ ಪ್ರವಾದಿವರ್ಯರು ﷺ ಅದನ್ನು ವಿರೋಧಿಸುತ್ತಿದರು ಆದರೆ ಅದು ಅಬೂತ್ವಾಲಿಬರಿಗೆ ಇಷ್ಟವಾಗುತ್ತಿರಲಿಲ್ಲ. ಅದಕ್ಕೆ ದೊಡ್ಡಮ್ಮಂದಿರು ಯಾಕೆ ಮಗನೇ ಕುಟುಂಬದ ಎಲ್ಲಾ ಸದಸ್ಯರು ಸೇರುವ ಈ ಕಾರ್ಯಕ್ರಮದಿಂದ ದೂರ ಸರಿಯುತ್ತಿದ್ದೀಯ.? ನಮ್ಮ ಆರಾಧ್ಯರನ್ನು ವಿರೋಧಿಸುವುದು.? ನಾವು ನಮ್ಮ ಶಕ್ತಿ ತೋರಿಸಬೇಕಾದ ಈ  ಸಂದರ್ಭದಲ್ಲಿ ಮಗನು ನಮ್ಮಿಂದ ದೂರಸರಿಯುತ್ತಿದ್ದೀಯ? ಎಂದು ಹೇಳುತಿದ್ದರು.

   ಒಲ್ಲದ ಮನಸ್ಸಿನಿಂದ ಬರುತ್ತೇನೆಂದು ಹೇಳಿ ಪ್ರವಾದಿವರ್ಯರು ﷺ ಅವರ ಹಿಂದೆಯೇ ನಡೆದರು. ಆದರೆ ಸ್ವಲ್ಪ ಸಮಯದ ನಂತರ ಮುಹಮ್ಮದ್ ﷺ ಮಗನು ಕಾಣೆಯಾಗಿದ್ದರು. ನಂತರ ಭಯದಿಂದ ನಡುಗುತ್ತಾ ನಮ್ಮ ಬಳಿ ಓಡಿ ಬಂದಾಗ ಮಗನೇ ಏನಾಯಿತು? ಎಂದು ದೊಡ್ಡಮ್ಮಂದಿರು ಕೇಳಿದಾಗ. ಅದಕ್ಕೆ ನನಗೆ ಏನೋ ತಪ್ಪಾಗಿದೆಯೆಂದು ಅನಿಸುತ್ತಿದೆ ಎಂದು ಮುಹಮ್ಮದ್ ﷺ ಮಗನು ಹೇಳಿದರು, ಮಗನಿಗೆ ಯಾವತ್ತೂ ಪಿಶಾಚಿಯ ಕಾಟ ಇರಲಾರದು ಕಾರಣ ಮಗನ ಸ್ವಭಾವವೇ ಅಂತದ್ದಲ್ಲವೇ ಆದರೆ ಈಗ ಏನಾಯಿತು ಎಂದು ಪುನಃ ದೊಡ್ಡಮ್ಮಂದಿರು ಕೇಳಿದಾಗ. ನಾನು ಉತ್ಸವ ನಡೆಯುವ ಸ್ಥಳಕ್ಕೆ ಬರುತಿದ್ದೆ ದೇಗುಲದ ಹತ್ತಿರಕ್ಕೆ ತಲುಪುತ್ತಿದ್ದಾಗ ಒಬ್ಬರು ವಿಶಾಲ ಗಾತ್ರದ ಬಿಳಿ ವಸ್ತ್ರಧಾರಿ ಪ್ರತ್ಯಕ್ಷವಾಗಿ "ಓ ಮುಹಮ್ಮದ್ ﷺ ಹಿಂದೆ ಹೋಗಿರಿ ಮೂರ್ತಿಯ ಬಳಿ ಹೋಗದಿರಿ" ಎಂದು ಅವರು ಹೇಳಿದ್ದಾಗಿ ಮುಹಮ್ಮದ್ ﷺ ಮಗನು ಹೇಳಿದರು. ಅದರ ನಂತರ ಯಾವತ್ತೂ ಅಂತಹ ಉತ್ಸವಕ್ಕೆ ಹೋಗಿರಲಿಲ್ಲ. 

4. ಮಧುಚಂದ್ರದ ದಿನಗಳಲ್ಲಿ  ಮದುಮಗ ಮುಹಮ್ಮದ್ ﷺ ರವರು ತಮ್ಮ ಪ್ರೀತಿಯ ಪತ್ನಿ ಖದೀಜ (ರ) ಬೀವಿಯವರಲ್ಲಿ  ನಾನು ಲಾತವನ್ನು, ಉಝ್ಝವನ್ನು ಯಾವತ್ತೂ ಆರಾಧಿಸುದಿಲ್ಲ, ನಮಸ್ಕರಿಸುವುದು ಇಲ್ಲ ಎಂದು ಹೇಳಿದಾಗ ಖದೀಜ (ರ) ಬೀವಿಯವರು ನೀವು ಲಾತವನ್ನೂ, ಉಝ್ಝ ಎರಡನ್ನು  ವಿರೋಧಿಸಿರಿ ಎಂದು ಹೇಳಿದರು. 

    ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ಇರುವ ಪವಿತ್ರತೆಯ ಪ್ರಮಾಣಗಳಾಗಿವೆ ಇವುಗಳು. ಕತ್ತಲು ತುಂಬಿದ ವಾತಾವರಣದಲ್ಲಿ ಸೂರ್ಯ ತೇಜಸ್ಸಿನ ಹಾಗೆ ಪ್ರಜ್ವಲಿಸುತ್ತಿರುವ ಮುಹಮ್ಮದ್ ﷺ ಎಂಬ ಯುವಕ. ಸಾಮಾಜಿಕ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ನ್ಯಾಯಯುತವಾಗಿ ಪರಿಹಾರಗಳು ನೀಡಿದ ಘಟನೆಗಳ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

(ಮುಂದುವರಿಯುವುದು...)

No comments: