ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಖದೀಜ (ರ) ತಮ್ಮ ಸೇವಕರಾದ ಮೈಸರನನ್ನು ಕರೆದು ಪ್ರವಾದಿಯವರ ﷺ ಜೊತೆಯಲ್ಲಿ ಕಳುಹಿಸಿದರು. ಮೈಸರನಿಗೆ ಕೆಲವೊಂದು ನಿರ್ದೇಶನಗಳನ್ನು ನೀಡಲಾಗಿತ್ತು. ನೀನು ಅವರನ್ನು ಸಂಪೂರ್ಣವಾಗಿ ಅನುಸರಿಸಬೇಕು, ಅವರು ಏನೇ ಹೇಳಿದರೂ ಅದನ್ನು ತಿರಸ್ಕರಿಸಬಾರದು ಎಂದು ಖದೀಜರವರು (ರ) ಹೇಳಿದಾಗ ಮೈಸರ ಅದಕ್ಕೆ ಸರಿ ಎಂದು ಉತ್ತರಿಸಿದನು.
ಇತ್ತ ಅಬೂತ್ವಾಲಿಬರು ಕೂಡ ತಮ್ಮ ಮಗನಿಗೆ ಬೇಕಾದ ಉಪದೇಶ ನೀಡಿ ಯಾತ್ರೆ ಕಳುಹಿಸಿದರು. ಯಾತ್ರೆಯ ಗುಂಪಿನಲ್ಲಿ ಪ್ರವಾದಿಯವರ ﷺ ಚಿಕ್ಕಪ್ಪ ಝುಬೈರ್ ಕೂಡ ಜೊತೆಯಲ್ಲಿದ್ದರು. ಮುಹಮ್ಮದ್ ﷺ ಮಗನನ್ನು ಪ್ರತ್ಯೇಕವಾಗಿ ಗಮನ ಹರಿಸಬೇಕೆಂಬ ನಿರ್ದೇಶನದಿಂದಾಗಿತ್ತು ಝುಬೈರ್'ರವರನ್ನು ಜೊತೆಯಲ್ಲಿ ಕಳುಹಿಸಿದ್ದು. ಮೈಸರ ಬಹಳ ಶ್ರದ್ಧೆಯಿಂದ ಪ್ರವಾದಿವರ್ಯರನ್ನು ﷺ ಅನುಸರಿಸುತ್ತಿದ್ದನು. ಯಾತ್ರೆಯ ಆರಂಭದಿಂದಲೇ ನಡೆಯುತ್ತಿದ್ದ ಅದ್ಭುತ ವಿಸ್ಮಯಗಳನ್ನು ಗಮನಿಸುತ್ತಿದ್ದನು. ಪ್ರವಾದಿವರ್ಯರು ﷺ ಸಂಚರಿಸುವಾಗ ಮೋಡ ನೆರಳು ನೀಡುತ್ತಿತ್ತು, ಕೆಲವು ಸಂದರ್ಭದಲ್ಲಿ ಎರಡು ಮಲಕ್'ಗಳು (ಫರಿಶ್ತ , angel ) ಪ್ರತ್ಯೇಕವಾದ ನೆರಳು ನೀಡುತ್ತಿದ್ದವು. ಹೀಗೆ ಇದೆಲ್ಲವನ್ನು ಗಮನಿಸುತ್ತಾ ಸಿರಿಯಾದ ಬುಸ್ವ್'ರ ಪಟ್ಟಣಕ್ಕೆ ತಲುಪಿದ ನಂತರ ಅಲ್ಲಿ ಒಂದು ಮರದ ಕೆಳಗೆ ಡೇರೆ ಹಾಕಿ ವಿಶ್ರಾಂತಿ ಪಡೆಯ ತೊಡಗಿದರು. ಅಲ್ಲೇ ಪಕ್ಕದಲ್ಲಿ "ನಸ್'ತೂರಾ" ಎನ್ನುವ ಪುರೋಹಿತರಿದ್ದರು ಮೈಸರನಿಗೆ ಮೊದಲೇ ಅವರ ಪರಿಚಯ ಕೂಡ ಇತ್ತು. ಅವರು ಮುಹಮ್ಮದರನ್ನು ﷺ ಬಹಳ ಗಂಭೀರವಾಗಿ ನಿರೀಕ್ಷಿಸುತ್ತಿದ್ದರು ನಂತರ ಆ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು ಯಾರೆಂದು ಮೈಸರನಲ್ಲಿ ಪುರೋಹಿತ ಕೇಳಿದಾಗ ಅದು ಖುರೈಷ್ ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿದ್ದಾರೆ, ಹರಮಿನಲ್ಲಾಗಿದೆ ಅವರ ವಾಸ ಸ್ಥಳ ಎಂದು ಮೈಸರ ಉತ್ತರಿಸಿದನು. ಓಹ್ ಹೌದಾ ಈ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ವ್ಯಕ್ತಿಯು ಅಂತ್ಯ ಪ್ರವಾದಿಯಾಗಿರಲು ಹೆಚ್ಚಿನ ಸಾಧ್ಯತೆಯಿದೆ ಎಂದು ನಮ್ಮ ಪೂರ್ವಕರಾದ ಪಂಡಿತರು ಹೇಳುತಿದ್ದರು. ಅವರ ಕಣ್ಣುಗಳಲ್ಲಿರುವ ಕೆಂಪು ಛಾಯೆಯನ್ನು ನೋಡಿದ್ದೀರಾ.? ನೋಡಿದ್ದೇನೆ ಎಂದು ಮೈಸರ ಹೇಳಿದಾಗ, ಅದು ಯಾವಾಗಲೂ ಇರುತ್ತದೆಯೇ.? ಪುನಃ ಆ ಪಂಡಿತರು ಕೇಳಿದರು. ಹೌದು ಯಾವಾಗಲೂ ಇರುತ್ತದೆ ಅದು ಬದಲಾದದ್ದು ನಾನು ಕಂಡಿಲ್ಲ ಹೀಗೆ ಮೈಸರನಲ್ಲಿ ಹಲವಾರು ಲಕ್ಷಣಗಳನ್ನು ಪಂಡಿತರು ಕೇಳಿ ತಿಳಿದ ನಂತರ ಇದು ಖಂಡಿತ ಅಂತ್ಯ ಪ್ರವಾದಿಯವರೇ ಆಗಿರುತ್ತಾರೆ ಇವರನ್ನು ನಿಯೋಗಿಸಲ್ಪಡುವ ಸಂದರ್ಭದಲ್ಲಿ ಬಹುಶಃ ನಾನು ಇರುತ್ತಿದ್ದರೆ ಒಳ್ಳೆದಿತ್ತು ಎಂದು ಹೇಳಿದರು.
ಮತ್ತೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು ಪ್ರವಾದಿವರ್ಯರು ﷺ ಮರದ ಬಳಿ ತಲುಪುದಕ್ಕೂ ಮೊದಲೇ ನಸ್'ತೂರ ಅವರನ್ನು ಗಮನಿಸುತ್ತಲೇ ಇದ್ದರು. ಕಾರ್ಮೋಡ ನೆರಳು ನೀಡುತ್ತಿದ್ದದ್ದನ್ನು ಪ್ರತ್ಯೇಕವಾಗಿ ಗಮನಿಸಿದ್ದರು, ಮರದ ಕೆಳಗೆ ವಿಶ್ರಾಂತಿ ಪಡೆಯಲು ಮುಂದಾದಾಗ ಕುತೂಹಲ ಅಧಿಕವಾಯಿತು ನಂತರ ಮೈಸರನಿಂದ ವಿಷಯಗಳನ್ನು ಕೇಳಿ ತಿಳಿದು ಪ್ರವಾದಿವರ್ಯರನ್ನು ﷺ ಭೇಟಿಯಾಗಲು ಆಶ್ರಮದಿಂದ ಹೊರಟರು. ಬಹಳ ಗೌರವ ಪೂರಕವಾಗಿ ಪ್ರವಾದಿಯವರ ﷺ ನೆತ್ತಿಯ ಮೇಲೆ ಹಾಗೂ ಪಾದಗಳಿಗೆ ಮುತ್ತಿಟ್ಟು ಈ ರೀತಿ ಹೇಳಿದರು "ನಾನು ತಮ್ಮನ್ನು ಸಂಪೂರ್ಣವಾಗಿ ವಿಶ್ವಾಸವಿರಿಸುತ್ತೇನೆ. ತೌರಾತಿನಲ್ಲಿ ಉಲ್ಲೇಖಿಸಿದ ಪ್ರವಾದಿಯವರು ﷺ ತಾವೇ ಆಗಿರುತ್ತೀರಿ ಎಂದು ನಾನು ಗುರುತಿಸಿದ್ದೇನೆ." ಎಂದು ಹೇಳುತ್ತಾ ನನಗೆ ಅಂತ್ಯ ಪ್ರವಾದಿಯವರ ಲಕ್ಷಣಗಳಲ್ಲಿ ಒಂದನ್ನು ಬಿಟ್ಟು ಬಾಕಿ ಎಲ್ಲವೂ ಅರ್ಥವಾಯಿತು ದಯವಿಟ್ಟು ತಮ್ಮ ಭುಜವನ್ನು ಒಮ್ಮೆ ತೋರಿಸುವಿರೇ ಎಂದು ಕೇಳಿದಾಗ ಪುಣ್ಯ ಪ್ರವಾದಿಯವರು ﷺ ತಮ್ಮ ಭುಜವನ್ನು ತೋರಿಸಿದರು. ಬಹಳಷ್ಟು ಹೊಳಪಿನಿಂದ ಶೋಭಿಸುತ್ತಿದ್ದ ಪ್ರವಾದಿತ್ವದ ಮುದ್ರೆಯನ್ನು ಕಂಡು ಪ್ರವಾದಿವಾರ್ಯರನ್ನು ﷺ ಬಹಳ ಗೌರವದಿಂದ ಚುಂಬಿಸಿ ಸತ್ಯ ವಚನವನ್ನು ಸ್ವೀಕರಿಸುತ್ತಾ ಮರಿಯಮ್ (ರ) ಅವರ ಮಗನಾದ ಪ್ರವಾದಿ ಈಸರವರು (ಅ) ಮುನ್ಸೂಚನೆ ನೀಡಿದ ಆ ಸತ್ಯದೂತರು ತಾವೇ ಆಗಿರುವಿರಿ, ಈ ಮರದ ಕೆಳಗೆ ಒಂದು ದಿನ ಖಂಡಿತ ವಿಶ್ರಾಂತಿ ಪಡೆಯುತ್ತೀರಿ ಎನ್ನುವ ಮುನ್ಸೂಚನೆ ನೀಡಿದ್ದನ್ನು ಪೂರ್ವಿಕರಾದ ಪಂಡಿತರು ನಮಗೆ ಕಲಿಸಿದ್ದಾರೆ ಎಂದೂ ಹೇಳಿದರು.
ವಿವಿಧ ಅನುಭವಗಳಿಗೆ ಸಾಕ್ಷಿಯಾಗುತ್ತಾ ಮೈಸರ ಹೇಗೋ ಪ್ರವಾದಿಯವರೊಂದಿಗೆ ﷺ ಸಿರಿಯ ನಗರಕ್ಕೆ ತಲುಪಿದರು. ವ್ಯಾಪಾರ ಅಂದುಕೊಂಡದ್ದಕ್ಕಿಂತ ಅಧಿಕವಾಗಿತ್ತು. ವಹಿವಾಟಿನ ಸಮಯದಲ್ಲಿ ಮತ್ತೊಂದು ಘಟನೆ ನಡೆಯಿತು ಅದೇನೆಂದರೆ ವ್ಯಾಪಾರದ ನಡುವೆ ವ್ಯಾಪಾರ ಸರಕುಗಳ ವಿಷಯದಲ್ಲಿ ಒಬ್ಬರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು ಆ ಸಂದರ್ಭದಲ್ಲಿ ಆ ವ್ಯಕ್ತಿಯು ಲಾತವನ್ನು, ಹುಝ್ಝವನ್ನು ಮುಂದೆ ನಿಲ್ಲಿಸಿ ಸತ್ಯ ಹಿಡಿದರು. ಅದನ್ನು ಕೇಳಿದ ತಕ್ಷಣ ನಾನು ನನ್ನ ಜೀವನದಲ್ಲಿ ಒಂದು ಬಾರಿಯ ಕೂಡ ಅವುಗಳ ಮೇಲೆ ಸತ್ಯ ಹಾಕಲಿಲ್ಲ, ನನ್ನ ಊರಿನಲ್ಲೂ ಕೂಡ ಅದನ್ನು ಕಂಡ ತಕ್ಷಣವೇ ಹಿಂತಿರುಗುತ್ತಿದ್ದೆ ಎಂದು ಪ್ರವಾದಿವರ್ಯರು ಆ ವ್ಯಕ್ತಿಯಲ್ಲಿ ಹೇಳಿದಾಗ ಇವರ ಮಾತಿನಲ್ಲಿ ಏನೋ ಪ್ರತ್ಯೇಕತೆ ಇದೆ ಎಂದೆನಿಸಿ ಆ ವ್ಯಕ್ತಿಯು ತಕ್ಷಣವೇ ಮೈಸರನನ್ನು ಭೇಟಿಯಾಗಿ ಇವರು ನಮ್ಮ ವೇದ ಗ್ರಂಥದಲ್ಲಿ ಹೇಳಿದ ಅಂತ್ಯ ಪ್ರವಾದಿಯವರಾಗಿದ್ದಾರೆ ಎಂದು ಹೇಳಿದರು.
ಮೈಸರ ಎಲ್ಲಾ ಘಟನೆಗಳನ್ನು ವೀಕ್ಷಿಸುತ್ತಾ ಬಹಳಷ್ಟು ಶ್ರದ್ಧೆಯಿಂದಲೇ ಜೊತೆಯಲ್ಲಿ ಸಂಚರಿಸ ತೊಡಗಿದರು. ಈ ಬಾರಿಯ ವ್ಯಾಪಾರದಲ್ಲಿ ಅವರಿಗೆ ಉತ್ತಮ ಲಾಭ ಲಭಿಸಿತ್ತು. ಇದನ್ನು ಕಂಡ ಮೈಸರ ಪ್ರವಾದಿವರ್ಯರಲ್ಲಿ ﷺ ಹೇಳಿದರು ನಾವು ಬಹಳಷ್ಟು ಬಾರಿ ಖದೀಜರವರ (ರ) ಸರಕುಗಳೊಂದಿಗೆ ವ್ಯಾಪಾರಕ್ಕೆ ಬಂದಿದ್ದೇವೆ ಆದರೆ ಯಾವತ್ತೂ ಇಷ್ಟೊಂದು ಲಾಭ ಸಿಕ್ಕಿರಲಿಲ್ಲ ಎಂದು.
ಮೈಸರನು ಪ್ರವಾದಿಯವರ ﷺ ಬಳಿ ತಾನೊಬ್ಬ ಸೇವಕನ ರೀತಿಯಲ್ಲಿ ವರ್ತಿಸುತಿದ್ದರು ಈಗ ಮೈಸರನ ಮನಸ್ಸಿನಲ್ಲಿ ಪ್ರವಾದಿವರ್ಯರ ﷺ ಮೇಲಿದ್ದ ಗೌರವ, ಸ್ನೇಹ ಅಧಿಕವಾಯಿತು. ಹೀಗೆ ಯಾತ್ರಾ ಸಂಘವು ಮಕ್ಕಾ ಪಟ್ಟಣಕ್ಕೆ ಯಾತ್ರೆ ತಿರುಗಿಸಿದರು. ಮರಳಿ ಬರುತ್ತಿರುವಾಗಳೂ ಮೋಡ ನೆರಳು ನೀಡುತ್ತಿದ್ದದ್ದನ್ನು ಮೈಸರ ನೋಡುತ್ತಲೇ ಇದ್ದರು, ಮಕ್ಕಾ ಪಟ್ಟಣಕ್ಕೆ ಹೊರಟಿದ್ದ ಒಂಟೆಯ ಗುಂಪಿನಲ್ಲಿ ಪ್ರವಾದಿವರ್ಯರು ﷺ ಮುಂದಿನ ಸಾಲಿನಲ್ಲಾಗಿತ್ತು ಸಂಚರಿಸುತ್ತಿದ್ದದ್ದು ಮೈಸರ ಹಿಂದಿನ ಸಾಲಿನಲ್ಲಿ ಚಲಿಸುತ್ತಿದ್ದರು. ಯಾತ್ರೆಯ ನಡುವೆ ಮೈಸರ ಪ್ರಯಾಣಿಸುತ್ತಿದ್ದ ಎರಡು ಒಂಟೆಗಳು ಅಸ್ವಸ್ಥಗೊಂಡವು.ಅವುಗಳಿಗೆ ನಡೆಯಲು ಕೂಡ ಸಾಧ್ಯವಾಗಲಿಲ್ಲ ಮೈಸರ ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದರು ಕೊನೆಗೆ ಪ್ರವಾದಿಯವರಿಗೆ ﷺ ವಿಷಯ ತಲುಪಿಸಲಾಯಿತು. ತಕ್ಷಣವೇ ಪ್ರವಾದಿವರ್ಯರು ﷺ ಬಂದು ಏನೋ ಕೆಲವೊಂದನ್ನು ಮಂತ್ರಿಸಿ ಒಂಟೆಯನೊಮ್ಮೆ ತಟ್ಟಿದರು. ಏನದ್ಭುತ ನಂತರ ಆ ಒಂಟೆಗಳು ಉತ್ತಮ ಆರೋಗ್ಯದೊಂದಿಗೆ ಯಾತ್ರೆ ಸಂಘದ ಮೊದಲ ಸಾಲಿನಲ್ಲಿ ಚಲಿಸತೊಡಗಿತು..
(ಮುಂದುವರೆಯುತ್ತಿದೆ...)

No comments:
Post a Comment