ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪುಣ್ಯ ಪ್ರವಾದಿಯವರ ﷺ ಸೌಂದರ್ಯವು ವರ್ಣನಾತೀತವಾಗಿದೆ, ಪ್ರವಾದಿವರ್ಯರ ﷺ ಸೌಂದರ್ಯದ ಕುರಿತು ಬರೆದು ಮುಗಿಸಲು ಅಥವಾ ಹೇಳಿ ಮುಗಿಸಲು ಎಂದಿಗೂ ಸಾಧ್ಯವಿಲ್ಲ. ಇಡೀ ಜಗತ್ತಿನಲ್ಲೇ ಅವರ ಸೌಂದರ್ಯದ ಕುರಿತು ತಿಳಿಯಲ್ಪಟ್ಟಷ್ಟು, ಬರೆಯಲ್ಪಟ್ಟಷ್ಟು ಇನ್ಯಾರ ಕುರಿತು ಇಷ್ಟೊಂದು ತಿಳಿಯಲ್ಪಟ್ಟಿಲ್ಲ. ಇವತ್ತಿಗೂ ಲಕ್ಷಾಂತರ ಜನರು ಪ್ರವಾದಿವರ್ಯರ ﷺ ಸೌಂದರ್ಯ ಕುರಿತು ಕಲಿಯುತ್ತಲಿದ್ದಾರೆ. ಶೈಕ್ಷಣಿಕ ಪಠ್ಯಕ್ರಮದ ಪ್ರಮುಖ ಭಾಗವಾಗಿ ವಿಶ್ಲೇಷಿಸಲ್ಪಟ್ಟಿದೆ. ಪ್ರವಾದಿಯವರನ್ನು ﷺ ಪ್ರತ್ಯಕ್ಷವಾಗಿ ಕಂಡು ತಿಳಿದವರಿಂದ ಹಿಡಿದು ಪರಂಪರೆ ತಪ್ಪದೆ ಅವರ ಸೌಂದರ್ಯದ ಕುರಿತು ಪರಿಚಯಿಸಲಾಗಿದೆ. ಭೌತಿಕವಾಗಿ ಪ್ರವಾದಿಯವರು ﷺ ಮರಣಹೊಂದಿ ಒಂದೂವರೆ ಸಹಸ್ರಮಾನ ಕಳೆದರೂ ಕೂಡ ಅವರ ಸೌಂದರ್ಯದ ಕುರಿತು ಇವತ್ತಿಗೂ ಬಹಳ ಕುತೂಹಲದಿಂದ ವಿವರಿಸಲಾಗುತ್ತಿದೆ. ಒಂದೇ ಒಂದು ಪ್ರತಿಮೆಯೋ, ಚಿತ್ರವೋ ಇಲ್ಲದೆ ಕೋಟ್ಯಂತರ ಹೃದಯಗಳಲ್ಲಿ ಆ ವಿಶ್ವ ಸೌಂದರ್ಯವು ಹೊಳೆಯುತ್ತಲಿದೆ.
ಹೀಗೆ ಇರುವ ಒಂದು ವ್ಯಕ್ತಿತ್ವದ ಸೌಂದರ್ಯವನ್ನು ಹೇಗೆ ವಿವರಿಸುವುದು. ಪ್ರಾಮಾಣಿಕವಾಗಿ ಗ್ರಂಥಗಳಲ್ಲಿ ದಾಖಲಿಸಲಾದ ಉಲ್ಲೇಖಗಳ ಕುರಿತು ತಿಳಿಯಬಹುದು ಎಂದು ಮಾತ್ರ. ಪ್ರವಾದಿವರ್ಯರ ﷺ ಸೌಂದರ್ಯದ ಕುರಿತು ಸಣ್ಣ ಮಟ್ಟಿಗೆ ತಿಳಿಯಲು ಪ್ರಯತ್ನಿಸೋಣ. ಅದನ್ನು ಮೀರಿ ಹೀಗೇ ಎಂದು ಬರೆಯಲು ಯಾರೊಬ್ಬರಿಗೂ ಸಾಧ್ಯವಿಲ್ಲ. ಪ್ರವಾದಿವರ್ಯರ ﷺ ಕುರಿತು ಸರಳವಾಗಿ ನಮಗೆ ಈ ರೀತಿ ತಿಳಿಯಬಹುದು.
ಪ್ರವಾದಿವರ್ಯರು ﷺ ಆಂತರಿಕವಾಗಿಯೂ, ಬಾಹ್ಯಾವಾಗಿಯೂ ಸೌಂದರ್ಯದ ಗಣಿಯಾಗಿದ್ದರು, ಪ್ರವಾದಿವಾರ್ಯರಿಗೆ ﷺ ಮಾತ್ರ ಪ್ರತ್ಯೇಕವಾಗಿ ಇದ್ದ ಸೌಂದರ್ಯದ ಭವ್ಯತೆ ಅವರ ಮುಖದಲ್ಲಿ ಯಾವಾಗಲೂ ಎದ್ದು ಕಾಣುತ್ತಿತ್ತು. ಅವರ ಪವಿತ್ರ ಶರೀರದಲ್ಲಿ ಕೊರತೆಯಿದೆ ಎಂದೋ ಅಥವಾ ಅಧಿಕವಾಗಿದೆ ಎಂದೋ ಹೇಳುವಂತ ಯಾವುದೇ ವಿಷಯ ಇರಲಿಲ್ಲ. ಕೆಂಪು ಮಿಶ್ರಿತ ಶ್ವೇತ ವರ್ಣದ ಜೊತೆಯಲ್ಲಿ ಚಿನ್ನ, ಬೆಳ್ಳಿಯನ್ನು ಒಟ್ಟಿಗೆ ಸೇರಿಸಿ ನಯಗೊಳಿಸಿದ ಹಾಗೆ ಹೊಳಪು. ಶರೀರದ ರೋಮವಿಲ್ಲದ ಭಾಗಗಳಿಂದ ಪ್ರಕಾಶಗಳು ಹೊರ ಹೊಮ್ಮುತ್ತಿತ್ತು, ಪ್ರವಾದಿವರ್ಯರ ﷺ ಉಪಸ್ಥಿತಿಯಿಂದ ಸುತ್ತಮುತ್ತಲಿನ ಪರಿಸರವೂ ಕೂಡ ಪ್ರಕಾಶಿಸುತ್ತಿತ್ತು. ಪ್ರವಾದಿವರ್ಯರು ﷺ ಎತ್ತರದ ವ್ಯಕ್ತಿಯೋ ಗಿಡ್ಡ ವ್ಯಕ್ತಿಯೋ ಆಗಿರಲಿಲ್ಲ, ಆದರೆ ಒಂದು ಸಭೆಯಲ್ಲಿ ಕುಳಿತುಕೊಂಡಾಗ ಬಹಳ ಎತ್ತರವಾಗಿ ಕಾಣುತ್ತಿದುದು ಮಾತ್ರ ಅವರೇ ಆಗಿದ್ದರು. ಒಂದು ಗುಂಪಿನಲ್ಲಿ ಪ್ರವಾದಿವರ್ಯರು ﷺ ಜೊತೆಯಲ್ಲಿದ್ದರೆ ಪ್ರವಾದಿಯವರನ್ನು ﷺ ಬಿಟ್ಟು ಬಾಕಿಯಿರುವವರೆಲ್ಲರೂ ಗಿಡ್ಡವಾಗಿಯೇ ಕಾಣುತ್ತಿದ್ದರು. ಆ ಪವಿತ್ರ ಶರೀರದಿಂದ ಭವ್ಯತೆಯುವ ಯಾವಾಗಲೂ ಹೊರಹೊಮ್ಮುತ್ತಿತ್ತು.
ಅಧಿಕ ದಪ್ಪವಿರುವ ಶರೀರವಾಗಿರಲಿಲ್ಲ ಹಾಗಂತ ತೆಳ್ಳಗಿನ ವ್ಯಕ್ತಿಯೆಂದೋ, ದಪ್ಪವಿರುವ ವ್ಯಕ್ತಿಯೆಂದೋ ಹೇಳಲು ಸಾಧ್ಯವಿಲ್ಲ ಅವರೊಂದು ಸಾಧಾರಣ ಶರೀರದ ವ್ಯಕ್ತಿಯಾಗಿದ್ದರು. ಅವರ ಮುಪ್ಪಿನ ಕಾಲದಲ್ಲಿ ಶರೀರವು ಅಲ್ಪ ಪುಷ್ಟಿಯಾಗಿತ್ತು ಆದರೆ ಸ್ನಾಯುಗಳ ಶಕ್ತಿ ಕುಗ್ಗಿರಲಿಲ್ಲ, ಶರೀರದಲ್ಲಿ ವಯಸ್ಸಿನ ಗುರುತೂ ಇರಲಿಲ್ಲ, ಯಾವುದೇ ಕಾಲವಾಗಲಿ, ಹವಾಮಾನವಾಗಲಿ ದೇಹದ ಸೌಂದರ್ಯವನ್ನು ಕುಗ್ಗಿಸಿರಲಿಲ್ಲ, ಯಾವಾಗಲೂ ಪ್ರಕಾಶದಿಂದ ಜ್ವಲಿಸುತ್ತಿದ್ದರು
ಹುಣ್ಣಿಮೆ ಚಂದ್ರನನ್ನು ಹೋಲುವ ಮುಖ, ಪ್ರವಾದಿವರ್ಯರನ್ನು ﷺ ವಿವರಿಸಿದವರೆಲ್ಲರೂ ಹುಣ್ಣಿಮೆ ಚಂದ್ರನನ್ನು ಉದಾಹರಣೆಯಾಗಿ ನೀಡಿದ್ದಾರೆ ಅದು ಅಲಂಕಾರಕ್ಕಾಗಿ ಆಗಿರಲಿಲ್ಲ ಬದಲಾಗಿ ಅವರಿಗೆ ಪ್ರವಾದಿವರ್ಯರ ﷺ ಮುಖದ ವರ್ಣನೆಯನ್ನೂ, ಭವ್ಯತೆಯನ್ನು ಪರಿಚಯಿಸಲು ಬೇರೆ ಉದಾಹರಣೆ ಸಿಗದ ಕಾರಣವಾಗಿತ್ತು. ಹೊಳೆಯುವ ಹಣೆ, ಬೆಳಕು ಚೆಲ್ಲುತ್ತಿದ್ದ ಕೆನ್ನೆಗಳಾಗಿತ್ತು ಅವರದ್ದು. ಪ್ರವಾದಿವರ್ಯರ ﷺ ಸೌಂದರ್ಯದ ಕುರಿತು ಜಾಬಿರ್ (ರ) ರವರು ಹೀಗೆ ಹೇಳುತ್ತಾರೆ. ಒಂದು ದಿನ ಹುಣ್ಣಿಮೆ ರಾತ್ರಿಯಲ್ಲಿ ಕೆಂಪು ವಸ್ತ್ರಧಾರಿಯಾಗಿ ಪ್ರವಾದಿಯವರು ﷺ ಬಂದಿದ್ದರು, ನಾನು ಅವರ ಭವ್ಯತೆಯಿರುವ ಮುಖವನೊಮ್ಮೆ, ಬಾನಿನಲ್ಲಿರುವ ಹುಣ್ಣಿಮೆ ಚಂದಿರನನೊಮ್ಮೆ ನೋಡಿದಾಗ, ಅಲ್ಲಾಹನಾಣೆ.! ಹುಣ್ಣಿಮೆ ಚಂದಿರನಿಗಿಂತಲೂ ಹೊಳೆಯುವ ಪ್ರಕಾಶವಾಗಿತ್ತು ಪ್ರವಾದಿವರ್ಯರ ﷺ ಮುಖದಲ್ಲಿ ಕಾಣುತಿದ್ದದ್ದು. ಅಬೂಹುರೈರ (ರ) ರವರು ಹೇಳುತ್ತಿದ್ದರು ಪುಣ್ಯ ಪ್ರವಾದಿಯವರನ್ನು ﷺ ನೋಡುತ್ತಿದ್ದರೆ ಆ ಮುಖದಲ್ಲಿಯು ಕೂಡ ಸೂರ್ಯನು ಸಂಚರಿಸುವ ಹಾಗೆ ಕಾಣುತಿತ್ತು ಎಂದು. ಬರಾಅರೊಂದಿಗೆ (ರ) ಪ್ರವಾದಿಯವರ ﷺ ಮುಖ ಖಡ್ಗದ ಹಾಗೆ ಹೊಳೆಯುತ್ತಿತ್ತೋ ಎಂದು ಕೇಳಿದಾಗ ಅಲ್ಲ ಹುಣ್ಣಿಮೆ ಚಂದಿರನ ಹಾಗೆಯಾಗಿತ್ತು ಹೊಳೆಯುತ್ತಿದ್ದದ್ದು ಅಥವಾ ಅವರ ಮುಖದಲ್ಲಿ ಯಾವಾಗಲೂ ದುಂಡಕಾರವಾಗಿ ಶಾಂತವಾದ ಪ್ರಭೆಯಿರುತಿತ್ತು ಎಂದು ಹೇಳಿದರು.
ಪ್ರವಾದಿವರ್ಯರ ﷺ ಮುಖದಲ್ಲಿ ಅವರ ಭಾವನೆಗಳನ್ನು ತಿಳಿಯಬಹುದಾಗಿತ್ತು. ಗಂಭೀರವಾದ ಆಲೋಚನೆಗಳಿದ್ದಾಗ ಮುಖದ ಭಾವವು ಕೆಂಪಾಗುತಿತ್ತು, ಸಂತೋಷವಾದಾಗ ಅವರ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿತ್ತು, ಅವರನ್ನು ದೂರ ನಿಂತು ನೋಡಿದರೆ ಭವ್ಯತೆಯ ಪ್ರತೀಕವಾಗಿದ್ದರು, ಅವರ ಮುಖವನ್ನು ನೋಡುತ್ತಲೇ ಹೃದಯದಲ್ಲಿ ಗೌರವ ತುಂಬಿ ತುಳುಕುತ್ತಿತ್ತು, ಹತ್ತಿರ ಬಂದು ನಿಂತಾಗ ಪ್ರೀತಿ ಉಕ್ಕಿ ಹರಿಯುತ್ತಿತ್ತು, ಅವರು ಜೊತೆಯಲ್ಲಿದ್ದರೆ ಪ್ರೀತಿ ಅಧಿಕವಾಗುತ್ತಿತ್ತು, ಆದೇಶ ನೀಡುತ್ತಿದ್ದ ಸಮಯದಲ್ಲಿ ಮುಖದಲ್ಲಿರುವ ಗಾಂಭೀರ್ಯತೆ ಎದ್ದು ಕಾಣುತ್ತಿತ್ತು. ನಿರ್ದೇಶನಗಳನ್ನು ನೀಡುವ ಸಮಯದಲ್ಲಿ ಸೌಮ್ಯತೆ ಇರುತ್ತಿತ್ತು, ಹಾಸ್ಯದ ಸಮಯದಲ್ಲಿ ಮುಖದಲ್ಲಿ ಮುಗುಳ್ನಗೆ ಕಾಣುತಿತ್ತು. ಅಲ್ಲಾಹುವಿನ ಕುರಿತು ಹೇಳುತ್ತಿದ್ದಾಗ ಸಂಪೂರ್ಣ ವಿನಮ್ರತೆಯಿಂದಾಗಿತ್ತು ಅವರ ಮುಖ ಭಾವ ಇರುತ್ತಿದ್ದದ್ದು. ಹೀಗೆ ಎಲ್ಲಾ ಅಂಶಗಳನ್ನು ಹೊಂದಿರುವ ಒಂದು ವಿಶಿಷ್ಟ ವ್ಯಕ್ತಿತ್ವವಾಗಿರುವರು ಪುಣ್ಯ ಪ್ರವಾದಿಯವರು. ﷺ
(ಮುಂದುವರಿಯುವುದು...)

No comments:
Post a Comment