Abu Hisham Saquafi

Official Website Of Hafiz Ilyas Saquafi Padaladka

Friday, July 8, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -23 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ವಿಶಾಲವಾದ ತಲೆ, ಪ್ರವಾದಿವಾರ್ಯರ ﷺ ತಲೆಕೂದಲು ಹೆಣೆದುಕೊಂಡ ರೀತಿಯಲ್ಲೋ, ಚದುರಿದ ರೀತಿಯಲ್ಲೋ ಇರಲಿಲ್ಲ, ಕೂದಲನ್ನು ಬಾಚಿದಾಗ ಮರಳ ದಿಬ್ಬದಂತೆ ಕಂಗೊಳಿಸುತ್ತಿತ್ತು. ಕೆಲವೊಮ್ಮೆ ಅವರ ತಲೆಕೂದಲು ಭುಜದವರೆಗೂ, ಇನ್ನೂ ಕೆಲವೊಮ್ಮೆ ಕಿವಿಯವರೆಗೂ ತಲುಪುತ್ತಿತ್ತು. ಅದನ್ನು ಮಧ್ಯದಿಂದ ಎರಡು ಭಾಗಗಳಾಗಿ ವಿಂಗಡಿಸಿ ಕೆಲವೊಮ್ಮೆ ಸಡಿಲಗೊಳಿಸಿ ಇಡುತ್ತಿದ್ದರು, ಇನ್ನು ಕೆಲವೊಮ್ಮೆ ಬಿಗಿಯಾಗಿ ಇಡುತ್ತಿದ್ದರು. ತಲೆಗೆ ಎಣ್ಣೆ ಹಾಕದಿದ್ದರೂ ಹಾಕಿದಂತೆ ಸುಂದರವಾಗಿ ಕಾಣುತ್ತಿದ್ದರು. 

    ಸುಂದರವಾಗಿ ಕತ್ತರಿಸಿದ ಉದ್ದನೆಯ ದಪ್ಪನೆಯ ಗಡ್ಡವಾಗಿತ್ತು, ಚಿಂತೆಯಲ್ಲಿ ಮುಳುಗಿರುವಾಗ ಗಡ್ಡವನ್ನು ಸವರುತಿದ್ದರು. ಅಂಗಸ್ನಾನ (ಉಲೂಅ್) ಮಾಡುವಾಗ ಗಡ್ಡದ ಕೂದಲಿನ ನಡುವೆ ಬೆರಳುಗಳ ಮೂಲಕ ತೊಳೆಯುತಿದ್ದರು. ಕೂದಲನ್ನು ನಲ್ವತ್ತು ದಿವಸಕೊಮ್ಮೆ ಕತ್ತರಿಸಿದರೆ, ಉಗುರುಗಳನ್ನು ವಾರಕೊಮ್ಮೆ ಕತ್ತರಿಸಿ ಸ್ವಚ್ಛಗೊಳಿಸುತ್ತಿದ್ದರು. ಬಲಗೈಯ ಉಗುರುಗಳನ್ನು ಕತ್ತರಿಸುವಾಗ ತೋರು ಬೆರಳಿನಿಂದ ಆರಂಭಿಸಿ ಹೆಬ್ಬೆರಳಿನಲ್ಲಿ ಕೊನೆಗೊಳಿಸುತ್ತಿದ್ದರು, ಆದರೆ ಎಡಗೈಯಲ್ಲಿ ಕಿರುಬೆರಳಿನಿಂದ ಆರಂಭಿಸಿ ಹೆಬ್ಬೆರಳಿನಲ್ಲಿ ಕೊನೆಗೊಳಿಸುತ್ತಿದ್ದರು. ಎರಡು ದಿನಕೊಮ್ಮೆ ಎಣ್ಣೆ ಹಾಕಿ ತಲೆಗೂದಲನ್ನು ಬಾಚಿ ಸ್ವಚ್ಛವಾಗಿಡುತ್ತಿದ್ದರು. 

      ಶರೀರದಲ್ಲಿ ಅಧಿಕವಾಗಿ ರೋಮಗಳಿರಲಿಲ್ಲ, ಅವರ ಕೈ ಬೆರಳಿನ ಮೇಲೆ, ಎದೆಯ ಹಾಗೂ ಬೆನ್ನಿನ ಮೇಲೆ ರೋಮಗಳಿತ್ತು. ಎದೆಯಿಂದ ಹೊಕ್ಕುಳಿನವರೆಗೆ ಒಂದು ರೇಖೆಯ ರೂಪದಲ್ಲಿ ರೋಮಗಳಿತ್ತು, ಅದಲ್ಲದೆ ಇತರ ಭಾಗಗಳಲ್ಲಿ ರೋಮಗಳಿರಲಿಲ್ಲ. ಕಂಕುಳದಲ್ಲಿ ರೋಮಗಳಿದ್ದರೂ, ಇಲ್ಲದಿದ್ದರೂ ಕಂಕುಳದಿಂದ ಶ್ವೇತವರ್ಣದ ಪ್ರಕಾಶವು ಯಾವಾಗಲೂ ಹೊರಹೊಮ್ಮುತ್ತಿತ್ತು. 

     ಬಲಿಷ್ಠವಾದ ಕೈಕಾಲುಗಳು, ಆರೋಗ್ಯಕರವಾದ ಸ್ನಾಯುಗಳು, ಗಟ್ಟಿ ಮೂಳೆಗಳು. ಮೊಣಕೈ ಮತ್ತು ಮೊಣಕಾಲುಗಳು ಬಲಿಷ್ಠವಾಗಿ ಅಗಲವಾಗಿತ್ತು, ವಿಶಾಲವಾದ ಅಂಗೈ. ಬಲಿಷ್ಠ ಸಾಮರ್ಥ್ಯವಿರುವ ಅಂಗಾಂಗಗಳು. ರೇಷ್ಮೆಯಂತೆ ಮೃದುವಾದ ಅಂಗೈ. ಅದನ್ನು ಸ್ಪರ್ಶಿಸಿದಾಗ ನಾವು ಸ್ಪರ್ಶಿಸಿದ ಎಲ್ಲಾ ರೇಷ್ಮೆಗಿಂತಲೂ ಮೃದುವಾಗಿದ್ದವು ಪ್ರವಾದಿವರ್ಯರ ﷺ ಪವಿತ್ರ ಕೈಗಳೆಂದು ಅವರ ಅನುಚರರು ಹೇಳುತ್ತಿದ್ದರು. 
    ದೃಢವಾದ ಕಾಲುಗಳಾಗಿತ್ತು. ಸಾಮಾನ್ಯವಾಗಿ ಕಾಲಿನಲ್ಲಿರುತ್ತಿದ್ದ ಸುಕ್ಕುಗಳು ಪ್ರವಾದಿವರ್ಯರ ﷺ ಕಾಲಿನಲ್ಲಿರಲಿಲ್ಲ, ಅವರ ಕಾಲಿನ ಹೆಬ್ಬೆರಳು ಉದ್ದವಾಗಿತ್ತು, ತೆಳುವಾದ ಹಿಮ್ಮಡಿ, ಅವರ ಪಾದಗಳಿಂದ ಕಸ್ತೂರಿಯ ಸುಗಂಧ ಹೊರಬರುತಿತ್ತು. ನಡೆಯುವಾಗ ಮುಂದಕ್ಕೆ ಬಾಗುತ್ತಿದ್ದರು, ಕಾಲುಗಳನ್ನು ಎಳೆಯುತ್ತಾ ನಡೆಯುತ್ತಿರಲಿಲ್ಲ, ಎತ್ತರದಿಂದ ಕೆಳಗೆ ಬಂದ ರೀತಿಯಲ್ಲಿ ಬಹಳ ಲವಲವಿಕೆಯಿಂದ ಹೆಜ್ಜೆ ಇಡುತ್ತಿದ್ದರು. ಪ್ರವಾದಿವರ್ಯರು ﷺ ನಡೆಯುವಾಗ ಪಾದ ಎತ್ತಿ ನಡೆಯುತ್ತಿದ್ದರೆಂದು ಆಯಿಷಾ ಬೀವಿಯವರು (ರ) ಹೇಳುತ್ತಿದ್ದರು. 

    ಪ್ರವಾದಿವರ್ಯರು ﷺ ತನ್ನ ಆರೋಗ್ಯ ಕಾಲದಲ್ಲಿ ಎಷ್ಟೇ ದೃಢ ಗಾತ್ರದ ಮಲ್ಲನನ್ನೂ ಸೋಲಿಸುವಷ್ಟು ಶಕ್ತಿಶಾಲಿಯಾಗಿದ್ದರು. ತನ್ನೆದುರು ಕುಸ್ತಿಗೆ ತಯಾರಾಗಿದ್ದ ಅರಬ್ ಲೋಕದ ಶಕ್ತಿಶಾಲಿ ಫೈಲ್ವಾನ ರುಖಾನನ್ನು ನಿಮಿಷಾರ್ಧದಲ್ಲಿ ಸೋಲಿಸಿದ್ದರು. 
       ಪುಣ್ಯ ಪ್ರವಾದಿಯವರ ﷺ ಸೌಂದರ್ಯದ ಕುರಿತು ಹಸ್ಸಾನ್'ರವರು (ರ) ಈ ರೀತಿ ಹೇಳಿದ್ದರು. ಸೌಂದರ್ಯದ ಪರಿಪೂರ್ಣತೆಯನ್ನು ಅಲ್ಲಾಹನು ಪ್ರವಾದಿವರ್ಯರ ﷺ ಉದ್ದೇಶದಂತೆ ಸೃಷ್ಟಿಸಿದಂತಿದೆ, ಪ್ರವಾದಿ ಯೂಸುಫ್ (ಅ) ರವರ ಸೌಂದರ್ಯಕ್ಕೆ ಮಾರುಹೋದ ಅಂದಿನ ಯುವತಿಗಳು ಸೇಬಿನ ಬದಲಾಗಿ ತಮ್ಮ ಕೈಗಳನ್ನು ಕತ್ತಿರಿಸಿದ್ದರು, ಆದರೆ ಅವರು ಮುಹಮ್ಮದರ ﷺ ಸೌಂದರ್ಯವನ್ನು ನೋಡಿರುತ್ತಿದ್ದರೆ ಬೆರಳಿಗೆ ಬದಲಾಗಿ ತಮ್ಮ ಹೃದಯವನ್ನೇ ಕತ್ತರಿಸುತ್ತಿದ್ದರೇನೋ.?

     ಕಪ್ಪು ಶಿರವಸ್ತ್ರ ಧರಿಸಿ ಬಂದಿದ್ದ ಪ್ರವಾದಿವರ್ಯರನ್ನು ﷺ ಕಂಡು, ತಮ್ಮ ಬಿಳಿ ವರ್ಣದಿಂದ ಕಪ್ಪು ಬಣ್ಣದ ಸೌಂದರ್ಯ ಅಧಿಕವಾಯಿತೊ.? ಅಥವಾ ಬಟ್ಟೆಯ ಕಪ್ಪು ಬಣ್ಣವು ತಮ್ಮ ಶರೀರದ ಬಿಳಿಯನ್ನು ಅಧಿಕಗೊಳಿಸುತ್ತಿದೆಯೋ.? ಎಂದು ಆಯಿಷ (ರ) ಬೀವಿಯವರು ಕೇಳಿದ್ದರು. 
    ಒಟ್ಟಾರೆ ಪ್ರವಾದಿವರ್ಯರು ﷺ ಪರಿಪೂರ್ಣ ಸೌಂದರ್ಯದಿಂದ ತುಂಬಿದ್ದರು. ಯಾವುದೇ ವಿವರಣೆಗೂ ನಿಲುಕದ ವಿಶ್ವ ಸೌಂದರ್ಯವಾಗಿದೆ ಪ್ರವಾದಿಯವರದ್ದು ﷺ. ಅದನ್ನು ವಿವರಿಸಲು ನಾನೆಷ್ಟೇ ಪ್ರಯತ್ನ ಪಟ್ಟರೂ ವ್ಯರ್ಥವೆಂದು ಮಾತ್ರ, ಸೋಲು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇಲ್ಲ. 

(ಮುಂದುವರಿಯುವುದು...)

No comments: