ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಖದೀಜ (ರ) ಬೀವಿ ಜನಿಸಿದ್ದು, ಬೆಳೆದದ್ದೆಲ್ಲವೂ ತಾತ ಅಬ್ದುಲ್ಉಝ್ಝರವರ ಮನೆಯಲ್ಲಾಗಿತ್ತು. ಕಅಬಾಲಯದ ಪರಿಸರದಲ್ಲಿ, ಅಂದರೆ, ಕಅಬಾದಿಂದ ಕೇವಲ ಒಂಬತ್ತು ಮೊಳ ದೂರದಲ್ಲಾಗಿತ್ತು. ಬೆಳಿಗ್ಗೆ ಕಅಬಾದ ನೆರಳು ಮನೆಯ ಮೇಲೆ ಬಿದ್ದರೆ, ಸಂಜೆ ಮನೆಯ ನೆರಳು ಕಅಬಾದ ಮೇಲೂ ಬೀಳುತ್ತಿತ್ತು. ಒಟ್ಟಾರೆ ಹೇಳುವುದಾದರೆ, ಕಅಬಾಲಯದ ನೆರಳಿನಲ್ಲಾಗಿತ್ತು ಖದೀಜ (ರ) ಬೀವಿ ಬೆಳೆದದ್ದು.
ಖಲೀಫ ಉಮರ್ (ರ) ರವರ ಕಾಲದಲ್ಲೂ, ಆ ಮನೆ ಅದೇ ಸ್ಥಳದಲ್ಲಿತ್ತು. ಅದರ ಬಳಿಯಿದ್ದ ಮರದ ಒಂದು ಕೊಂಬೆಯು, ಕಅಬಾದ ಪ್ರದಕ್ಷಿಣೆ ಹಾಕುವವರಿಗೆ ತೊಂದರೆಯಾಗಿತ್ತು. ಉಮರ್ (ರ) ರವರು ಅದನ್ನು ಕತ್ತರಿಸಿ ಬದಲಾಗಿ ಒಂದು ಹಸುವನ್ನು ನೀಡಿದ್ದರು. ಉಮರ್ (ಅ) ರವರ ಆಡಳಿತ ಕಾಲದ ಕೊನೆಯ ಸಂದರ್ಭಗಳಲ್ಲಿ, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮನೆಯನ್ನೇ ಕೆಡವಿ, ಸ್ಥಳವನ್ನು ಮಸೀದಿಗೆ ಸೇರಿಸಲಾಯಿತು.
ಬೀವಿಯವರು ಬೆಳೆದ ನಂತರ, ಕಅಬಾದ ಪರಿಸರದಲ್ಲೇ ಇನ್ನೊಂದು ಮನೆಗೆ ತೆರಳಿದರು. ಅಜ್'ಯಾದಿನ 'ಜಬಲ್ ಖಲ್'ಅ' ಎನ್ನುವ ಮನೆಯಲ್ಲಾಗಿತ್ತು ಮೊದಲ ವಿವಾಹ ನಡೆದದ್ದು. ಅಭಿವೃದ್ಧಿಯ ಭಾಗವಾಗಿ ಇಂದು ಈ ಪ್ರದೇಶವನ್ನು ಕೆಡವಲಾಗಿದೆ.
ಪುಣ್ಯ ಪ್ರವಾದಿಯವರ ﷺ ಜೊತೆಗಿನ ಮದುವೆಯ ಸಂದರ್ಭದಲ್ಲಿ, ಮರ್ವಾದ ಬಳಿಯಿರುವ ಮನೆಯಲ್ಲಾಗಿತ್ತು ವಾಸವಾಗಿದ್ದದ್ದು. ಸುರಾತ್ ಬಿನ್ ನಬ್ಬಾಶ್'ರ ಮಗನಾದ ಹಿಂದ್ ಎನ್ನುವವರ ಜೊತೆಯಲ್ಲಾಗಿತ್ತು, ಖದೀಜರ (ರ) ಮೊದಲ ವಿವಾಹ ನಡೆದದ್ದು. ಅಬೂಹಾಲ ಎಂದಾಗಿತ್ತು ಅವರನ್ನು ಕರೆಯುತ್ತಿದ್ದದ್ದು. ತಮೀಮ್ ಜನಾಂಗದ ಪ್ರಮುಖ ವ್ಯಕ್ತಿಯಾಗಿದ್ದರು. ಅವರ ದಾಂಪತ್ಯ ಜೀವನದಲ್ಲಿ ಹಿಂದ್ ಹಾಗೂ ಹಾಲ ಎಂಬ ಎರಡು ಮಕ್ಕಳು ಜನಿಸಿದರು. ಆದರೆ ಅವರ ಪತಿ ಯೌವನದಲ್ಲಿಯೇ ಮರಣ ಹೊಂದಿದರು. ಅವರ ಮರಣದ ನಂತರ ಅವರ ಆಸ್ತಿ ಬೀವಿಯವರಿಗೆ ಲಭಿಸಿತು. ಅಧಿಕ ದಿನಗಳು ಅವರು ವಿದವೆಯಾಗಿರಲಿಲ್ಲ, ಮಖ್'ಸೂಮಿ ಜನಾಂಗದ ಆಬಿದಿನ ಮಗನಾದ ಅತಿಖಾರ ಜೊತೆಯಲ್ಲಿ ಇನ್ನೊಂದು ವಿವಾಹವಾದರು. ಅವರೂ ಕೂಡ ಹಿಂದ್ ಎನ್ನುವ ಮಗಳು ಜನಿಸಿದ ನಂತರ ಮರಣ ಹೊಂದಿದರು.
ಮೊದಲು ಹಿಂದನ್ನು ಮದುವೆಯಾಗಿದ್ದರೋ, ಅಥವಾ ಅತೀಖರನ್ನು ಮದುವೆಯಾಗಿದ್ದರೋ, ಎನ್ನುವುದರಲ್ಲಿ ಅಭಿಪ್ರಾಯ ವ್ಯತ್ಯಾಸವಿದೆ. ಎರಡು ಬಾರಿ ವಿದವೆಯಾಗಿ, ಮೂರು ಮಕ್ಕಳ ತಾಯಿಯಾಗಿದ್ದ ಖದೀಜ ತಕ್ಷಣಕ್ಕೆ ಯಾವುದೇ ಮದುವೆಯ ಕುರಿತು ಆಲೋಚಿಸಿರಲಿಲ್ಲ. ಖದೀಜರ ಉದಾತ್ತತೆ, ಸೌಂದರ್ಯ ಹಾಗೂ ಆರ್ಥಿಕ ಭದ್ರತೆಯ ಉದ್ದೇಶದಿಂದಾಗಿತ್ತು. ಬಹಳಷ್ಟು ಉನ್ನತ ಪರಿವಾರದ ವಿವಾಹನ್ವೇಷನೆ ಬಂದಿದ್ದರೂ, ಯಾರನ್ನೋ ಕಾದು ಕುಳಿತಿರುವ ಹಾಗೆ ಯಾವುದಕ್ಕೂ ಅನುಮತಿ ನೀಡಿರಲಿಲ್ಲ. ಅಂಧಕಾರದ ಕಾಲದಲ್ಲಿಯೂ ಪರಿಶುದ್ಧವಾದ ಜೀವನ ನಡೆಸಿದ, ಅಪರೂಪದ ಮಹಿಳೆಯಾಗಿದ್ದರು ಖದೀಜ (ರ ) ಬೀವಿ. ಅವತ್ತಿನ ಯಾವುದೇ ಅನಾವಶ್ಯ ಕಾರ್ಯಗಳಲ್ಲಿ ಸೇರುತ್ತಿರಲಿಲ್ಲ. ಆಕೆಯನ್ನು ಶುದ್ದವತಿ ಅಥವಾ ತ್ವಾಹಿರ ಎಂದು ಕರೆಯಲಾಗುತ್ತಿತ್ತು. ಬುದ್ದಿವಂತೆಯಾಗಿದ್ದ ಬೀವಿ ತನ್ನ ಸಂಪತ್ತನ್ನು ವ್ಯಾಪಾರದಲ್ಲಿ ತೊಡಗಿಸಿದರು, ಕ್ರಮೇಣ ಮಕ್ಕಾದ ಪ್ರಸಿದ್ಧ ವ್ಯಾಪಾರಿಯಾದರು. 'ಸೈಯ್ಯದತು ನಿಸಾಯಿ ಖುರೈಶ್' ಅಥವಾ ಖುರೈಶ್ ವನಿತೆಯರ ನಾಯಕಿ ಎನ್ನುವ ಹೆಸರು ಕೂಡ ಪಡೆದುಕೊಂಡರು.
ಬೀವಿಯವರು ತಮ್ಮ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಂಡರು. ಮಗನಿಗೂ, ಮಗಳಿಗೂ, ಪತಿಗೂ ಹಿಂದ್ ಎನ್ನುವ ಹೆಸರಾಗಿತ್ತು. ಇದೊಂದು ಕುತೂಹಲಕಾರಿ ಸಂಗತಿಯಾಗಿದೆ. ಹಿರಿಯ ಮಗನಾದ ಹಿಂದ್'ನ ಮಗ ಹಿಂದ್ ತಾಯಿಯ ಜೊತೆಯಲ್ಲೇ ಇದ್ದರು. ಅವರ ಮೂಲಕ ನಂತರದ ಕಾಲದಲ್ಲಿ ಪ್ರವಾದಿಯವರ ﷺ ಶಿಕ್ಷಣವೂ ಲಭಿಸಿತು. ಆರಂಭಿಕ ಹಂತದಲ್ಲೇ ಇಸ್ಲಾಮ್ ಸ್ವೀಕರಿಸಿದ್ದರು. ಪ್ರವಾದಿಯವರ ﷺ ಶರೀರದ ವರ್ಣನೆಯಲ್ಲೂ, ಸ್ವಭಾವದ ವರ್ಣನೆಯಲ್ಲೂ ಹಿಂದ್ ಮೊದಲಿನಲ್ಲಿ ಇರುತ್ತಿದ್ದರು. ನಂತರದ ಕಾಲದಲ್ಲಿ ಪ್ರವಾದಿಯವರ ﷺ ಮೊಮ್ಮಕ್ಕಳು ಕೂಡ ಪ್ರವಾದಿವರ್ಯರ ﷺ ವರ್ಣನೆಯನ್ನು ಕೇಳಲು ಹಿಂದ್'ರ ಬಳಿ ಹೋಗುತ್ತಿದ್ದರು. ಜಮಲ್ ಯುದ್ಧದಲ್ಲಿ ಅಲಿಯವರ (ರ) ಜೊತೆಯಲ್ಲಿದ್ದರು, ಆದೇ ಯುದ್ಧದಲ್ಲೇ ಮರಣ ಹೊಂದಿದರು.
ಹಾಲ ಎನ್ನುವ ಮಗನೂ ನಂತರದ ದಿನಗಳಲ್ಲಿ ಇಸ್ಲಾಂ ಸ್ವೀಕರಿಸಿ ಮದೀನಕ್ಕೆ ಬಂದದ್ದು ಕಾಣಬಹುದು. ಆದರೆ ಅವರ ಕುರಿತಾದ ಚರಿತ್ರೆಗಳು ಲಭ್ಯವಿಲ್ಲ.
ಮಗಳು ಹಿಂದ್ ಕೂಡ ತಾಯಿಯ ಜೊತೆಯಲ್ಲೇ ಇದ್ದರು. ಚಿಕ್ಕಪ್ಪನ ಮಗನಾದ ಸ್ವಫಿಯ್ಯ್ ಬಿನ್ ಉಮಯ್ಯರನ್ನು ಮದುವೆಯಾಗಿ 'ಮುಹಮ್ಮದ್' ಎನ್ನುವ ಮಗನಿಗೆ ಜನ್ಮ ನೀಡಿದರು. ನಂತರದ ಕಾಲದಲ್ಲಿ ಅವರ ಕುಟುಂಬ ಪರಂಪರೆಯು ಬನೂತ್ವಾಹಿರ ಅಥವಾ ಖದೀಜರ ಮಕ್ಕಳು ಎನ್ನುವ ಹೆಸರಿನಲ್ಲಿ ಪ್ರಸಿದ್ಧಿ ಪಡೆಯಿತು. ಬೀವಿಯವರ ಇತರ ಎರಡು ಮಕ್ಕಳ ಕುರಿತು ಚರಿತ್ರೆಯಲ್ಲಿ ಮಾಹಿತಿ ಲಭ್ಯವಿಲ್ಲ.
(ಮುಂದುವರಿಯುವುದು...)

No comments:
Post a Comment