ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಬಹಳ ಉತ್ತಮವಾಗಿ ವಿವಾಹ ಸಮಾರಂಭ ಸಮಾಪ್ತಿಯಾದ ಕಾರಣ ಅಬೂತ್ವಾಲಿಬರಿಗೆ ಬಹಳ ಸಂತೋಷವಾಯಿತು. ಅಲ್ಲಾಹನಿಗೆ ಸ್ತುತಿಸುತ್ತಾ ಅವರು ಹೀಗೆ ಹೇಳಿದರು, "ಅಲ್ಲಾಹನಿಗಾಗಿದೆ ಸರ್ವ ಸ್ತುತಿಯು, ಅವನು ನಮ್ಮೆಲ್ಲಾ ಸಮಸ್ಯೆಗಳನ್ನು ನಿವಾರಿಸಿದನು. ಬೇಸರವನ್ನು ದೂರೀಕರಿಸಿದನು."
ಮದುವೆಯ ನಿಮಿತ್ತ ವಧುವಿನ ಮನೆಯಲ್ಲಿ ಅದ್ದೂರಿ ಔತಣ ಏರ್ಪಡಿಸಲಾಗಿತ್ತು. ಮಾಂಸದ ಆಹಾರ ತಯಾರಿಸಲಾಗಿತ್ತು. ಮಧುಚಂದ್ರದ ಆಹಾರವನ್ನು (ವಲೀಮ) ಪ್ರವಾದಿಯವರು ﷺ ಆಯೋಜಿಸಿದ್ದರು, ಎರಡು ಒಂಟೆಯ ಮಾಂಸದಿಂದ ಆಹಾರ ತಯಾರಿಸಲಾಗಿತ್ತು. ಪ್ರವಾದಿಯವರು ﷺ ಅತೀ ಹೆಚ್ಚು ಮಹರ್ ನೀಡಿದ್ದು ಖದೀಜರಿಗಾಗಿತ್ತು (ರ). ಇಪ್ಪತ್ತು ಒಂಟೆಯನ್ನಾಗಿತ್ತು ನೀಡಿದ್ದು ಎನ್ನುವ ಅಭಿಪ್ರಾಯವೂ ಇದೆ. ಎರಡು ಅಭಿಪ್ರಾಯಗಳನ್ನು ಪರಿಗಣಿಸಿ ಈ ರೀತಿಯೂ ಹೇಳಬಹುದು. ಮಹರ್ ಮೊದಲು ಹೇಳಿದ್ದು ಹನ್ನೆರಡುವರೆ ಊಖಿಯವಾಗಿದ್ದರೂ, ನಂತರ ನೀಡಿದ್ದು ಮಾತ್ರ ಅದರ ಬೆಲೆಗೆ ಸಮಾನವಾದ ಇಪ್ಪತ್ತು ಒಂಟೆಯನ್ನಾಗಿತ್ತು ಎಂದು.
ಖದೀಜರನ್ನು (ರ) ವಿವಾಹವಾದ ಕಾರಣ ಪ್ರವಾದಿಯವರಿಗೆ ﷺ ಲಭಿಸಿದ್ದು, ಕೇವಲ ಒಬ್ಬರು ಪತ್ನಿಯನ್ನು ಮಾತ್ರವಾಗಿರಲಿಲ್ಲ. ಬದಲಾಗಿ ಪ್ರಬುದ್ಧರಾದ ಒಬ್ಬರು ಒಡನಾಡಿಯನ್ನಾಗಿತ್ತು, ತಬ್ಬಲಿತನವನ್ನು ದೂರ ಮಾಡಲು ಸಿಕ್ಕಿದ ಜೊತೆಗಾರ್ತಿಯಾನ್ನಾಗಿತ್ತು. ಅವರು ಪರಸ್ಪರ ಪ್ರೀತಿ, ಗೌರವ ಹಾಗೂ ಸಮಾನ ಭಾವನೆಯಿಂದ ಕಾಣುತ್ತಿದ್ದರು, ಇಪ್ಪತ್ತೈದು ವರ್ಷಗಳ ವೈವಾಹಿಕ ಜೀವನದ ನಂತರವೇ, ಪ್ರವಾದಿಯವರು ﷺ ಇತರ ವಿವಾಹವಾಗಿದ್ದರು. ಅದರಲ್ಲಿ ಕನ್ಯೆಯಾದ ಆಯಿಷ (ರ) ಬೀವಿಯವರಿದ್ದರೂ, ಖದೀಜರ (ರ) ಮೇಲಿನ ಪ್ರೀತಿಯನ್ನು ಹಾಗೂ ಅವರ ನೆನಪುಗಳನ್ನು ತಮ್ಮ ಜೀವನದ ಕೊನೆಯವರೆಗೂ ಉಳಿಸಿಕೊಂಡಿದ್ದರು.
ಮದುವೆಯ ನಂತರವೂ ಪ್ರವಾದಿಯವರು ﷺ ವ್ಯಾಪಾರಕ್ಕೆ ತೆರಳುತ್ತಿದ್ದರು, ಅದಕ್ಕೆ ಪುರಾವೆಯಾಗಿ ಕೆಲವೊಂದು ಘಟನೆಗಳಿವೆ. ಅವುಗಳಲ್ಲಿ ಒಂದನ್ನು ಹೀಗೆ ವಿವರಿಸಬಹುದು. ಮಕ್ಕಾ ಪಟ್ಟಣದ ಗಣ್ಯ ವ್ಯಕ್ತಿಯಾಗಿದ್ದ ಉಮಯ್ಯತ್ ಬಿನ್ ಅಬಿಸಲ್'ತ್ವ್ ಎನ್ನುವವರು, ತನ್ನ ಗೆಳೆಯನಾಗಿದ್ದ ಅಬೂಸೂಫಿಯಾನ್'ರೊಂದಿಗೆ ಮಾತುಕತೆಯ ನಡೆಸುತ್ತಿದ್ದಾಗ ಹೇಳಿದ ಮಾತು ಈ ರೀತಿಯಾಗಿತ್ತು. ನಾನು ಯಮನ್'ನಿಂದ ವ್ಯಾಪಾರ ಮುಗಿಸಿ ಮನೆಗೆ ತಲುಪಿದೆನು. ಎಲ್ಲರೂ ನನ್ನನ್ನು ಭೇಟಿಯಾಗಿ ಶುಭಾಶಯ ತಿಳಿಸಿ ವ್ಯಾಪಾರ ಸರಕುಗಳನ್ನು ವಾಪಸು ನೀಡಿ, ವ್ಯಾಪಾರದ ಲಾಭದಲ್ಲಿ ಪಾಲು ಕೇಳಿದ್ದರು. ಅವರ ಜೊತೆಯಲ್ಲಿ ಮುಹಮ್ಮದ್ ﷺ ಕೂಡ ಇದ್ದರು, ಅವರು ನನ್ನ ಬಳಿ ಬಂದು ಶುಭಾಶಯ ತಿಳಿಸಿ, ಯೋಗಕ್ಷೇಮ ವಿಚಾರಿಸಿ ಹಿಂತಿರುಗಿ ಹೋದರು ಆದರೆ ಲಾಭದಲ್ಲಿ ಪಾಲು ಕೇಳಿರಲಿಲ್ಲ. ನನ್ನ ಮಡದಿ ಹಿಂದ್'ಕೂಡ ಜೊತೆಯಲ್ಲಿದ್ದರು, ಅದನ್ನು ಕಂಡು ಇದೆಂಥ ಅದ್ಭುತ ಎಲ್ಲರೂ ಅವರ ಲಾಭದಲ್ಲಿ ಪಾಲು ಕೇಳಿದರೆ ಮುಹಮ್ಮದರು ﷺ ಮಾತ್ರ ಯೋಗಕ್ಷೇಮ ವಿಚಾರಿಸಿ ಹಿಂತಿರುಗಿದರೆಂದು ಹಿಂದ್ ಹೇಳಿದರು.
ಉಮಯ್ಯತ್ತಿನ ವಿವರಣೆ ಕೇಳಿದ ಅಬೂಸುಫಿಯಾನ್ ನನಗೂ ಕೂಡ ಮುಹಮ್ಮದರೊಂದಿಗಿರುವ ﷺ ಕೆಲವು ಅನುಭವಗಳನ್ನು ಹೇಳಲಿದೆ. ನಾನು ಕೂಡ ವ್ಯಾಪಾರ ಯಾತ್ರೆ ಕಳೆದು ಕಅಬಾದ ಪ್ರದಕ್ಷಿಣೆ ಹಾಕಲು ತೆರಳಿದ್ದಾಗ ಅಲ್ಲಿ ಮುಹಮ್ಮದರನ್ನು ﷺ ಭೇಟಿಯಾದೆನು. ನೀವು ಹಿಂತಿರುಗಿಸಿದ ಸರಕುಗಳು ಅಧಿಕವಾಗಿತ್ತು, ಒಳ್ಳೆಯ ಲಾಭ ಲಭಿಸಿದೆ, ನೀವು ಯಾರನ್ನಾದರೂ ಮನೆಗೆ ಕಳುಹಿಸಿದರೆ ಲಾಭಾಂಶವನ್ನು ನೀಡುತ್ತೇನೆ. ನಾನು ಇತರರಿಂದ ಪಡೆಯುವಷ್ಟು ಲಾಭಾಂಶವನ್ನು ನೀವು ನನಗೆ ನೀಡಬೇಕಾಗಿಲ್ಲ ಎಂದು ಹೇಳಿದೆನು. ತಕ್ಷಣವೇ ಎಲ್ಲರಿಂದ ಪಡೆಯುವಷ್ಟು ಲಾಭಾಂಶವನ್ನು ನನ್ನಿಂದಲೂ ಪಡೆಯುದಾದರೆ ಮಾತ್ರ ಲಾಭಾಂಶ ಪಡೆಯಲು ವ್ಯಕ್ತಿಯನ್ನು ಕಳುಹಿಸುತ್ತೇನೆಂದು ಮುಹಮ್ಮದ್ ﷺ ಉತ್ತರಿಸಿದರು. ನಾನು ಅದಕ್ಕೆ ಒಪ್ಪಿದೆನು, ಅವರು ವ್ಯಕ್ತಿಯನ್ನು ಕಳುಹಿಸಿದಾಗ ನನ್ನ ಲಾಭಾಂಶವನ್ನು ತೆಗೆದು ನಂತರ ಬಾಕಿರುವ ಪಾಲನ್ನು ಅವರಿಗೆ ಕೊಟ್ಟು ಕಳುಹಿಸಿದೆನು.
ವಿವಾಹದ ನಂತರವೂ ಸ್ವಾಭಿಮಾನದಿಂದಲೇ ಸಂಸಾರ ನಡೆಸುತ್ತಿದ್ದರು. ವ್ಯಾಪಾರ ವಹಿವಾಟುಗಳಲ್ಲಿ ನ್ಯಾಯ, ನೀತಿಯನ್ನು ತನ್ನ ಸ್ವಂತ ಜೀವನದ ಮೂಲಕ ತೋರಿಸಿಕೊಟ್ಟರು. ಪತ್ನಿ ಖದೀಜರ (ರ) ಜೊತೆಯಲ್ಲಿ ಕಳೆದ ಜೀವನವು, ಪ್ರವಾದಿಯವರ ﷺ ಸುತ್ತಮುತ್ತಲಿನ ವಾತಾವರಣವನ್ನು ಸುಧಾರಿಸಿತು. ಸಂತೋಷವಾದ ದಾಂಪತ್ಯ ಜೀವನವನ್ನು ನಡೆಸಿದರು. ಖದೀಜರ (ರ) ಕನಸುಗಳು ವಿಧವೆಯ ಪ್ರಪಂಚವನ್ನು ತೊರೆದು ಭರವಸೆಯ ಹೊಸ ನಾಳೆಗಳಿಗಾಗಿ ಕಾಯುತ್ತಿದ್ದವು. ತನ್ನ ರಾಜಕುಮಾರನ ಎಲ್ಲಾ ಆಸಕ್ತಿಯಲ್ಲೂ ಜೊತೆಯಲ್ಲಿದ್ದರು. ಪ್ರವಾದಿಯವರ ﷺ ಪತ್ನಿಯಾದ ನಂತರ ಖದೀಜರು (ರ) ಮಕ್ಕಾ ಪಟ್ಟಣದಲ್ಲಿ ಬಹಳಷ್ಟು ಗೌರವಿಸಲ್ಪಟ್ಟರು.
ನವದಂಪತಿಗಳ ದಾಂಪತ್ಯದಲ್ಲಿ ಜೇನು ಸವಿಯಲು ಚಿಟ್ಟೆಗಳು ಮುಗಿಬಿದ್ದಿದ್ದವು, ಜೋಡಿ ಹಕ್ಕಿಗಳಿಗಾಗಿ ಸಮಯವು ಕಾಯುತ್ತಿತ್ತು...
(ಮುಂದುವರಿಯುವುದು...)

No comments:
Post a Comment