Abu Hisham Saquafi

Official Website Of Hafiz Ilyas Saquafi Padaladka

Thursday, July 14, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -30 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ಸಂತೋಷದ ವಸಂತದಲ್ಲಿ ದಾಂಪತ್ಯ ಜೀವನವು ಅರಳಲು ತೊಡಗಿತು. ಪ್ರವಾದಿಯವರ ﷺ ಪತ್ನಿ ಖದೀಜ (ರ) ಗರ್ಭಿಣಿಯಾದರು, ಇಬ್ಬರಿಗೂ ಸಂತೋಷ ಇಮ್ಮಡಿಯಾಯಿತು.  ಇತಿಹಾಸದ ಪ್ರಮುಖ ಉಲ್ಲೇಖದ ಪ್ರಕಾರ, ಮುಹಮ್ಮದ್ ﷺ ಖದೀಜ  (ರ) ದಂಪತಿಗಳಿಗೆ ಆರು ಮಕ್ಕಳು ಜನಿಸಿದವು. ಎರಡು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು. 
     ಮೊದಲು ಹುಟ್ಟಿದ ಮಗನಿಗೆ ಅಲ್ ಖಾಸಿಂ ಎಂದು ಹೆಸರಿಟ್ಟರು. ಅದರೊಂದಿಗೆ ಪ್ರವಾದಿಯವರನ್ನು ﷺ ಖಾಸಿಮರ ತಂದೆ "ಅಬುಲ್ ಖಾಸಿಂ" ಎನ್ನುವ ಹೆಸರಿನಿಂದ ಕರೆಯಲ್ಪಟ್ಟರು. ಆದರೆ ಅಧಿಕ ಸಮಯದವರೆಗೆ ಆ ಸಂತೋಷ ಬಾಕಿಯಾಗಲಿಲ್ಲ, ಎರಡು ವರ್ಷ ಪೂರ್ತಿಯಾದಾಗ ಖಾಸೀಮ್ ಎಂಬ ಮಗು ಮರಣ ಹೊಂದಿತು. ಜನಿಸಿದಾಗಲೇ ತಂದೆಯನ್ನು ಕಳೆದುಕೊಂಡು, ಆರನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ನೋವನ್ನೂ ಸಹಿಸಿಕೊಂಡವರಲ್ಲವೇ ಪ್ರವಾದಿಯವರು ﷺ. ಈಗ ಹಿರಿಯ ಮಗ ಖಾಸಿಂ ಬಾಲ್ಯದಲ್ಲೇ ಮರಣ ಹೊಂದಿದ ನೋವನ್ನೂ ಕೂಡ ಸಹಿಸಿಕೊಂಡರು. ಗುಲಾಮನು ತನ್ನ ಯಜಮಾನನ ತೀರ್ಪುಗಳಲ್ಲಿ ಹೇಗೆ ತೃಪ್ತನಾಗಬೇಕು ಎಂಬುದನ್ನು ತನ್ನ ಜೀವನದ ಮೂಲಕ ಪ್ರವಾದಿಯವರು ﷺ ತೋರಿಸಿಕೊಟ್ಟರು. ಖದೀಜರನ್ನು ಸಮಾಧಾನ ಪಡಿಸಿದರು. ಖಾಸೀಮರ ಮರಣ ಎರಡು ವಯಸ್ಸಿನಲ್ಲಿ ಅಲ್ಲ, ಒಂಟೆಯ ಮೇಲೆ ಸವಾರಿ ಮಾಡಲು ಸಾಧ್ಯವಾಗುವ ಪ್ರಾಯದಲ್ಲಾಗಿತ್ತು ಎನ್ನುವ ಅಭಿಪ್ರಾಯ ಕೂಡ ಇತಿಹಾಸದಲ್ಲಿ ಕಾಣಬಹುದು. 

     ಎರಡನೇ ಬಾರಿ ಜನಿಸಿದ್ದು ಝೈನಬ್ (ರ) ಮಗಳಾಗಿತ್ತು ಎನ್ನುವ ಅಭಿಪ್ರಾಯವೂ ಇದೆ. ಅಂದು ಪ್ರವಾದಿಯವರಿಗೆ ﷺ ಮೂವತ್ತು ವರ್ಷ ಪ್ರಾಯವಾಗಿತ್ತು. ಎಂದು ಇಬ್'ನು ಅಬ್ದುಲ್ ಬರ್ರ್ ಉಲ್ಲೇಖಿಸಿದ್ದಾರೆ. ಝೈನಬ್ (ರ) ತಂದೆತಾಯಿಯೊಂದಿಗೆ ಸಂತೋಷದೊಂದಿಗೆ ಬೆಳೆದರು. ದೊಡ್ಡವಳಾದ ನಂತರ ಖದೀಜರ (ರ) ಚಿಕ್ಕಪನ ಮಗನಾದ ಅಬ್ದುಲ್ ಆಸ್ ಬಿನ್ ರಬೀಅರ ಜೊತೆಯಲ್ಲಿ ವಿವಾಹ ನಡೆಸಿದರು. ಅವರಿಗೆ ಅಲಿ ಎಂಬ ಮಗನೂ, ಉಮಾಮ ಎಂಬ ಮಗಳು ಜನಿಸಿದರು. ಅಲಿ ಬಾಲ್ಯದಲ್ಲಿ ಮರಣ ಹೊಂದಿದರು. ಪ್ರವಾದಿಯವರ ﷺ ಮಗಳು ಫಾತಿಮರ ವಿಯೋಗದ ನಂತರ ಅವರ ಪತಿ ಅಲಿ (ರ) ಉಮಾಮರನ್ನು ವಿವಾಹವಾದರು. ಅದೂ ಕೂಡ ಫಾತಿಮರ (ರ) ನಿರ್ದೇಶನದ ಮೇರೆಗೆಯಾಗಿತ್ತು. 

      ಝೈನಬ್ (ರ) ಪ್ರಾರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದರು. ಆದರೆ ಅವರ ಪತಿ ಅಬ್ದುಲ್ ಆಸ್ ಸ್ವಕರಿಸಿರಲಿಲ್ಲ, ಝೈನಬ್ (ರ) ತಂದೆಯ ಜೊತೆಯಲ್ಲಿ ಮದೀನಕ್ಕೆ ಪಲಾಯನ (ಹಿಜ್'ರ) ನಡೆಸಿದರು. ಅಬ್ದುಲ್ ಆಸ್ ಬದ್ರ್ ಯುದ್ಧದಲ್ಲಿ ವಿರೋಧಿಗಳ ಪಕ್ಷದಲ್ಲಿದ್ದರು, ಯುದ್ಧ ಖೈದಿಯಾಗಿ ಮುಸ್ಲಿಮರು ಅವರನ್ನು ಬಂಧಿಸಿದ್ದರು. ಬಂಧನದಿಂದ ಮುಕ್ತಿ ಲಭಿಸಿದ ನಂತರವಾಗಿತ್ತು ಝೈನಬರಿಗೆ (ರ) ಪಲಾಯನಕ್ಕೆ ಅನುಮತಿ ಕೊಟ್ಟದ್ದು. ಬಹಳ ವರ್ಷಗಳ ನಂತರವಾಗಿತ್ತು ಅವರು ಇಸ್ಲಾಂ ಸ್ವೀಕರಿಸಿದ್ದು. ನಂತರ ಝೈನಬರ (ರ) ಜೊತೆಯಲ್ಲಿ ಜೀವಿಸತೊಡಗಿದರು, ಆದರೆ ಅವರ ದಾಂಪತ್ಯ ಜೀವನ ಅಧಿಕ ಸಮಯ ಉಳಿಯಲಿಲ್ಲ, ಹಿಜ್'ರಾದ ಎಂಟನೇ ವರ್ಷ ಪ್ರವಾದಿಯವರ ﷺ ಜೀವಿತ ಕಾಲದಲ್ಲೇ ಮರಣ ಹೊಂದಿದರು. 
(ಅಬುಲ್ ಆಸ್'ರ ಇತಿಹಾಸಕ್ಕೆ ನಂತರ ಬರೋಣ) 

       ಪುಣ್ಯ ಪ್ರವಾದಿಯವರ ﷺ ಮೂವತ್ಮೂರನೇ ವಯಸ್ಸಿನಲ್ಲಿ ಮೂರನೇ ಮಗುವಾದ ರುಖಿಯ ಜನಿಸಿದರು. ಬೆಳೆದು ದೊಡ್ಡವಳಾದ ನಂತರ ಅಬೂಲಹಬರ ಮಗನಾದ ಉತ್'ಬರ ಜೊತೆಯಲ್ಲಿ ವಿವಾಹ ನಡೆಸಿದರು. ಆದರೆ ಮಧುಚಂದ್ರದ ಮೊದಲೇ ತಂದೆ ಅಬೂಲಹಬರ ನಿರ್ದೇಶನದ ಮೇರೆಗೆ ವಿವಾಹ ವಿಚ್ಛೇದನ ನಡೆಸಿದರು. ನಂತರ ಅವರನ್ನು ಉಸ್ಮಾನ್ ಬಿನ್ ಅಫ್ಫಾನ್'ರವರ (ರ) ಜೊತೆಯಲ್ಲಿ ವಿವಾಹ ನಡೆಸಲಾಯಿತು. ಅವರೂ ಕೂಡ ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿ ಮದೀನಕ್ಕೆ ಪಲಾಯನ ನಡೆಸಿದ್ದರು. ರುಖಿಯ, ಉಸ್ಮಾನ್ ದಂಪತಿಗಳಿಗೆ ಅಬ್ದುಲ್ಲಾ ಎಂಬ ಗಂಡು ಮಗು ಜನಿಸಿತು. ಆದರೆ ಆರನೇ ವಯಸ್ಸಿನಲ್ಲಿ ಅವರು ಕೂಡ ಮರಣ ಹೊಂದಿದರು. ಹಿಜ್'ರಾದ ಎರಡನೇ ವರ್ಷ ಬದ್ರ್ ಯುದ್ಧದ ನಂತರ ಮದೀನಾದಲ್ಲಿ ಬೀವಿ ರುಖಿಯ ಕೂಡ (ರ) ಮರಣ ಹೊಂದಿದರು. ಅಂದು ಇಪ್ಪತ್ತು ವಯಸ್ಸಾಗಿತ್ತು ಬೀವಿಯವರಿಗಿದ್ದ ಪ್ರಾಯ. ರುಖಿಯರನ್ನು (ರ) ಮೊದಲು ಮದುವೆಯಾಗಿದ್ದ ಉತ್'ಬ ಮಕ್ಕಾವಿಜಯದ ದಿನ ಇಸ್ಲಾಮ್ ಸ್ವೀಕರಿಸಿದರು.
   
     ಪ್ರವಾದಿಯವರ ﷺ ನಾಲ್ಕನೇ ಮಗುವಾಗಿ ಉಮ್ಮು ಕುಲ್ಸ್ ಜನಿಸಿದರು. ಅಬೂಲಹಬಿನ ಮಗನಾದ ಉತೈಬತ್ ವಿವಾಹವಾದರು. ಮಧುಚಂದ್ರದ ಮೊದಲೇ ತಂದೆಯ ಆದೇಶದ ಮೇರೆಗೆ ಅವನು ಕೂಡ ವಿವಾಹ ವಿಚ್ಛೇದನ ನಡೆಸಿದನು. ಉತೈಬತ್ ಪ್ರವಾದಿಯವರ ﷺ ವಿರೋಧಿಗಳ ಪಕ್ಷದಲ್ಲಿ ಸಜೀವರಾಗಿ ಕಿರಿಕಿರಿಯುಂಟಾಗುವ ಚಟುವಟಿಕೆಗಳನ್ನು ಮಾಡತೊಡಗಿದನು. ನಂತರ ಅದರ ಪರಿಣಾಮವಾಗಿ ಬಹಳಷ್ಟು ದುಃಖದ ಫಲವನ್ನು ಅನುಭವಿಸಬೇಕಾಯಿತು. 
      ಬೀವಿ ರುಖೀಯರ (ರ) ಮರಣದ ನಂತರ ಉಸ್ಮಾನ್ (ರ) ರವರಿಗೆ ಹಿಜ್'ರಾದ ಮೂರನೇ ವರ್ಷ ರಬಿವುಲ್ ಅವ್ವಲ್ ತಿಂಗಳಲ್ಲಿ ಉಮ್ಮು ಕುಲ್ಸುರವರನ್ನು (ರ) ವಿವಾಹ ನಡೆಸಿದರು. ಆದರೆ ಆ ದಾಂಪತ್ಯ ಜೀವನವೂ ಅಧಿಕ ಸಮಯ ಬಾಕಿಯಾಗಲಿಲ್ಲ, ಹಿಜ್'ರಾ ಒಂಬತನೇ ವರ್ಷ ಶಅಬಾನ್ ತಿಂಗಳಲ್ಲಿ ಉಮ್ಮು ಕುಲ್ಸು ಕೂಡ ಮರಣ ಹೊಂದಿದರು. ಈ ಸಂದರ್ಭದಲ್ಲಿ ಉಸ್ಮಾನ್'ರವರನ್ನು (ರ) ಹೋಗಳುತ್ತಾ ಹೀಗೆ ಹೇಳಿದರು " ನನಗೆ ಹತ್ತು ಹೆಣ್ಣು ಮಕ್ಕಳಿರುತಿದ್ದರೆ ಒಂದರ ಹಿಂದೆ ಒಂದರಂತೆ ಸಾಲಾಗಿ ಉಸ್ಮಾನರಿಗೆ ವಿವಾಹ ನಡೆಸಿ ಕೊಡುತ್ತಿದ್ದೆ."

(ಮುಂದುವರಿಯುವುದು...)

No comments: