ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಲ್ ಅಮೀನರ ಸೇವಕ, ಅಬ್ದುಲ್ ಮುತ್ತಲಿಬರ ಪೌತ್ರ ಮುಹಮ್ಮದರ ﷺ ಸೇವಕ. ಮಕ್ಕಾ ನಿವಾಸಿಗಳಿಗೆ ಝೈದ್ ಹಾಗೂ ಝೈದಿಗೆ ಮಕ್ಕವೂ ಕೂಡ ಪರಿಚಯವಾಯಿತು. ಝೈದಿಗೆ ವಿರಹದ ನೋವಿರಲಿಲ್ಲ, ಇಲ್ಲಿ ತಂದೆ ತಾಯಿ, ಸಹೋದರಿಯರು ಎಲ್ಲವೂ ಸಿಕ್ಕಿದ್ದಾರೆ. ಜೊತೆಯಲ್ಲಿ ಅಸಾಮಾನ್ಯವಾದ ಏನೋ ಒಂದು ವಿಷಯವನ್ನು ಕಾಯುತ್ತಿದ್ದರು. ಹೀಗಿರುವಾಗ ಹಜ್ಜ್ ಸಮಯವೂ ಬಂದಿತು. ಬೇರೆ ಬೇರೆ ಪ್ರದೇಶಗಳ ಜನರು ಮಕ್ಕಾದಲ್ಲಿಯೂ, ಅದರ ಪರಿಸರದಲ್ಲಿಯೂ ಬಂದು ಸೇರಿದ್ದರು. ಜೊತೆಯಲ್ಲಿ 'ಕಲ್'ಬ್' ಜನಾಂಗದ ಜನರು ಕೂಡ ಇದ್ದರು. ಅವರಲ್ಲಿ ಕೆಲವರು ಅನಿರೀಕ್ಷಿತವಾಗಿ ಝೈದನ್ನು ಭೇಟಿಯಾದರು. ಅವರು ಝೈದನ್ನು ಕಂಡಾಗ ತಕ್ಷಣವೇ ಗುರುತಿಸಿದರು, ಝೈದ್ ಕೂಡ ತಕ್ಷಣವೇ ಅವರನ್ನು ಗುರುತಿಸಿದನು. ಅವರಲ್ಲಿ ಮಾತುಕತೆ ನಡೆಸಿದ ನಂತರ ತಾನು ವಾಸಿಸುತ್ತಿರುವ ಮನೆಯ ಪರಿಚಯವನ್ನೂ ತಿಳಿಸಿದನು. ಒಡೆಯನ ಕುರಿತು ಸ್ಪಷ್ಟವಾಗಿ ತಿಳಿದುಕೊಂಡರು. ಝೈದ್ ಅವರಿಗೆ ಒಂದು ಕವಿತೆ ಬರೆದು ಕೊಟ್ಟನು, ನಾನಿಲ್ಲಿ ಕ್ಷೇಮವಾಗಿ, ಸಂತೋಷವಾಗಿದ್ದೇನೆ ಎಂಬುದಾಗಿತ್ತು ಕವಿತೆಯ ಸಾರಾಂಶ. ಇದನ್ನು ನನ್ನ ಮನೆಯವರಿಗೆ ತಲುಪಿಸಿಬೇಕು, ಇದರಿಂದ ನನ್ನ ಅನುಪಸ್ಥಿತಿಯಲ್ಲಿ ಕಂಗಳಾಗಿರುವ ಮನೆಯವರಿಗೆ ನೆಮ್ಮದಿ ಸಿಗಬಹುದು. ಇಷ್ಟು ಹೇಳಿ ಅವನು ತನ್ನ ಒಡೆಯನ (ಪ್ರವಾದಿಯವರ ﷺ) ಹತ್ತಿರ ಓಡಿ ಹೋದನು. ಕಲ್'ಬ್ ಜನಾಂಗದ ಯಾತ್ರಿಕರಿಗೆ ಸಂತೋಷವಾಯಿತು. ಹಾರಿಸ್'ಗೂ ಕುಟುಂಬಕ್ಕೂ ಈ ವಿಷಯ ಬಹಳ ಸಂತೋಷವಾಗಬಹುದೆಂದು ಅಂದುಕೊಂಡರು. ಅವರು ಊರಿಗೆ ತಲುಪಿದ ತಕ್ಷಣವೇ ಹಾರಿಸ್'ಗೆ ವಿಷಯ ತಿಳಿಸಿದರು. ಹಾರಿಸ್'ರ ಮನಸ್ಸಲ್ಲಿ ಭರವಸೆ ಮೂಡಿತು. ಯಾತ್ರಿಕರಿಂದ ಸಂಪೂರ್ಣವಾಗಿ ಮಾಹಿತಿ ಪಡೆದರು.
ಇನ್ನು ತಡ ಮಾಡಬಾರದು, ತಕ್ಷಣವೇ ಮಕ್ಕಾ ಪಟ್ಟಣಕ್ಕೆ ತೆರಳಬೇಕು, ಎಷ್ಟೇ ಬೆಲೆ ಕೊಟ್ಟಾದರೂ ಸರಿ ಮಗನನ್ನು ಮೋಚಿಸಬೇಕೆಂದು ಸಹೋದರ ಕಅಬನ್ನು ಕರೆದರು. ಅವರು ಮಕ್ಕಾದಲ್ಲಿ ಪರಿಚಿತರೂ, ಸ್ವೀಕಾರಾರ್ಹ ವ್ಯಕ್ತಿಯೂ ಆಗಿದ್ದರು. ಬಹು ದೊಡ್ಡ ಮೊತ್ತದ ಹಣ್ಣದೊಂದಿಗೆ ಇಬ್ಬರೂ ಮಕ್ಕಾ ನಗರಕ್ಕೆ ತೆರಳಿದರು. ಮಕ್ಕಾ ಪಟ್ಟಣಕ್ಕೆ ತಲುಪಿದ ತಕ್ಷಣವೇ ಝೈದ್ ವಾಸಿಸುವ ಮನೆಯನ್ನು ಹುಡುಕಿದರು. ಝೈದಿನ ಒಡೆಯ ಮುಹಮ್ಮದರನ್ನು ﷺ ಭೇಟಿಯಾದರು. ಓ ಮಾನ್ಯ ಅಬ್ದುಲ್ ಮುತ್ತಲಿಬ್ ಹಾಗೂ ಹಾಶಿಮರ ಪೌತ್ರರೇ, ತಾವು ಈ ಊರಿನ ಅಭಿಮಾನವಾಗಿರುತ್ತೀರಿ ಎಂದು ನಮಗೆ ತಿಳಿದಿದೆ. ಖುರೈಶಿಗಳು ಅಲ್ಲಾಹನ ಅಥಿತಿಗಳನ್ನು ಸ್ವೀಕರಿಸುವವರು ಹಾಗೂ ಕಅಬಲಾಯದ ಸೇವಕರೂ ಆಗಿರುತ್ತೀರಿಯಲ್ಲವೇ.? ಪೀಡಿತರನ್ನು ರಕ್ಷಿಸುವವರು ಹಾಗೂ ಸೆರೆಯಾಳುಗಳನ್ನು ವಿಮೋಚಿಸುವವರಲ್ಲವೇ ತಾವು. ನಾವು ಈಗ ಬಂದಿರುವುದು ಕೂಡ ನಮ್ಮ ಮಗನನ್ನು ಮೋಚಿಸುವ ಉದ್ದೇಶದಿಂದಾಗಿದೆ. ತಮ್ಮ ಬಳಿಯಾಗಿದೆ ಅವನು ಇರುವುದು. ಅದಕ್ಕೆ ಎಷ್ಟು ಹಣ ಬೇಕಾದರೂ ನಾವು ನೀಡಲು ಸಿದ್ಧರಿದ್ದೇವೆ. ನಮ್ಮೊಂದಿಗೆ ದಯೆ ತೋರಿಸಿರಿ ಎಂದು ಹೇಳಿದರು.
ನೀವು ಯಾರ ಕುರಿತಾಗಿದೆ ಹೇಳುತ್ತಿರುವುದು.? ನಿಮ್ಮ ಯಾವ ಮಗ ನಮ್ಮ ಜೊತೆಯಲ್ಲಿದ್ದಾನೆ.? ಎಂದು ಪ್ರವಾದಿಯವರು ﷺ ಕೇಳಿದಾಗ. ತಮ್ಮ ಸೇವಕನಾದ ಝೈದ್ ಆಗಿರುತ್ತಾನೆ, ಅವನು ನನ್ನ ಮಗನಾಗಿದ್ದಾನೆ, ನನ್ನ ಹೆಸರು ಹಾರಿಸ್, ಇದು ನನ್ನ ಸಹೋದರ ಕಅಬ್ ಎಂದು ಹೇಳಿದರು.
ಸರಿ ಎಂದು ಪ್ರವಾದಿಯವರು ﷺ ಅವರ ಜೊತೆಯಲ್ಲಿ ಬಹಳ ಗೌರವದಿಂದಲೇ ಪ್ರತಿಕ್ರಿಯೆ ನೀಡಿದರು. ಅವನು ನಿಮ್ಮ ಮಗನಲ್ಲವೇ.? ಹಾಗಾದರೆ ನೀವು ಅವನನ್ನು ಕರೆದುಕೊಂಡು ಹೋಗಿರಿ. ಝೈದಿನ ತಂದೆಯಾಗಿದ್ದೀರಿ ಹಾಗಾಗಿ ನೀವು ಯಾವುದೇ ಬೆಲೆ ನೀಡಬೇಕಾದ ಅಗತ್ಯವೂ ಇಲ್ಲ. ಆದರೆ ಒಂದು ನಿಮಿಷ, ನಾನು ಅವನನ್ನು ಕರೆದು ವಿಷಯಗಳನ್ನು ತಿಳಿಸುತ್ತೇನೆ ಅವನು ಖುದ್ದಾಗಿ ನಿಮ್ಮ ಜೊತೆಯಲ್ಲಿ ಬರಲು ತಯಾರಿದ್ದರೆ ನಿಮಗೆ ಕರೆದುಕೊಂಡು ಹೋಗಬಹುದು. ಆದರೆ ಅವನು ನನ್ನ ಜೊತೆಯಲ್ಲಿ ಇಲ್ಲಿಯೇ ಇರುದಾಗಿ ತಿಳಿಸಿದರೆ ನೀವು ಬಲವಂತವಾಗಿ ಕರೆದುಕೊಂಡು ಹೋಗುವಂತಿಲ್ಲ.
ಸರಿ ಹಾಗೆ ಆಗಲಿ ನೀವು ಹೇಳುದರಲ್ಲೂ ನ್ಯಾಯವಿದೆ. ಇದಕ್ಕಿಂತಲೂ ಹೆಚ್ಚಾಗಿ ನಾವೇನು ನಿಮ್ಮಿಂದ ಆಗ್ರಹಿಸುದಿಲ್ಲ.
ಪ್ರವಾದಿಯವರು ﷺ ಝೈದನ್ನು ತಕ್ಷಣವೇ ಕರೆದರು. ಅವನು ಬಹಳ ಆವೇಶದಿಂದ ಓಡಿ ಬಂದನು. ಬಂದ ಅತಿಥಿಗಳನ್ನು ತಕ್ಷಣವೇ ಗುರುತಿಸಿದನು, ಅವರನ್ನು ಕಂಡು ಅವನ ಮುಖವು ಹರಳಿತು. ಅವನನ್ನು ಕಂಡು ಹಾರಿಸ್'ಗು ಕೂಡ ಬಹಳಷ್ಟು ಸಂತೋಷವಾಯಿತು. ವಿರಹದ ನೋವಿನಲ್ಲಿ ಬಳಲುತ್ತಿದ್ದವರಿಗೆ ಪುನಃ ಮಗನನ್ನು ಕಂಡಾಗ ಸಂತೋಷದಲ್ಲಿ ತಮ್ಮನ್ನೇ ತಾವೇ ಮರೆತು ಬಿಟ್ಟರು. ಇನ್ನು ಯಾವತ್ತೂ ಮಗನನ್ನು ಕಾಣಲು ಸಾಧ್ಯವಿಲ್ಲವೆಂದು ಅಂದುಕೊಂಡಿದ್ದವರ ಕಣ್ಣ ಮುಂದೆ ಬಹಳ ಆವೇಶದಿಂದ ಮಗ ನಿಂತಿದ್ದಾನೆ. ಒಂದು ಕ್ಷಣ ಅವರಿಗೆ ವಾಸ್ತವವನ್ನು ಅರ್ಥೈಸಲು ಸಾಧ್ಯವಾಗಿರಲಿಲ್ಲ. ಮಗನೇ ಇಲ್ಲಿ ನಿಂತಿರುವವರು ಯಾರೆಂದು ಪ್ರವಾದಿಯವರು ﷺ ಝೈದ್'ನಲ್ಲಿ ಕೇಳಿದಾಗ. ಇದು ನನ್ನ ತಂದೆ ಹಾರಿಸತ್ ಬಿನ್ ಶರಾಹೀಲ್ ಹಾಗೂ ನನ್ನ ಚಿಕ್ಕಪ್ಪ ಕಅಬ್ ಎಂದು ಉತ್ತರಿಸಿದನು. ಮಗನೇ ಇವರು ನಿನ್ನನ್ನು ಮೋಚಿಸಲು ಬಂದಿದ್ದಾರೆ, ಇವರ ಜೊತೆಯಲ್ಲಿ ನೀನು ಹೋಗುತ್ತಿಯೋ.? ಅಥವಾ ಇಲ್ಲೇ ನಮ್ಮ ಜೊತೆಯಲ್ಲಿ ಇರುತ್ತೀಯೋ.? ಮಗನ ಇಷ್ಟದಂತೆ ಮಾಡುತ್ತೇವೆ...
(ಮುಂದುವರಿಯುವುದು.)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment