ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪ್ರವಾದಿಯವರು ﷺ ಆಂತರಿಕವಾಗಿ ಬಹಳಷ್ಟು ಪಕ್ವತೆಗೊಳ್ಳುತ್ತಿದ್ದರು. ಪ್ರವಾದಿಯವರನ್ನು ﷺ ಕಂಡವರೆಲ್ಲರೂ ಸತ್ಯ ಸಂದೇಶವಾಹಕರ ಲಕ್ಷಣವನ್ನು ಕಾಣುತ್ತಿದ್ದರು. ಪ್ರಕೃತಿಯೂ ಕೂಡ ಕೆಲವೊಂದನ್ನು ಪ್ರವಾದಿಯವರಲ್ಲಿ ﷺ ಕೂಗಿ ಹೇಳುತ್ತಿತ್ತು.
ಇಮಾಮ್ ಮುಸ್ಲಿಂರವರು (ರ) ಉಲ್ಲೇಖಿಸಿದ ಹದೀಸಿನಲ್ಲಿ ಈ ರೀತಿ ಕಾಣಬಹುದು. ಮಕ್ಕಾದಲ್ಲಿ ಒಂದು ಕಲ್ಲಿತ್ತು, ಅದು ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ನನಗೆ ಸಲಾಂ ಹೇಳುತ್ತಿತ್ತು, ಈಗಲೂ ನಾನು ಅದನ್ನು ಗುರುತಿಸಬಲ್ಲೆ ಎಂದು ಪ್ರವಾದಿಯವರು ﷺ ಹೇಳುತ್ತಿದ್ದರು. ಇದು ಕೇವಲ ಒಂದು ಕಲ್ಲಿಗೆ ಮಾತ್ರ ಸೀಮಿತವಾದದ್ದಲ್ಲ. ಇನ್ನೂ ಬಹಳಷ್ಟು ಅನುಭವಗಳು ಪುಣ್ಯ ಪ್ರವಾದಿಯವರ ﷺ ಕುರಿತು ವಿವರಿಸುತ್ತಿದ್ದವು. ಅಲಿಯವರು (ರ) ಈ ರೀತಿ ವಿವರಿಸುತ್ತಾರೆ, ನಾವು ಪ್ರವಾದಿಯವರೊಂದಿಗೆ ﷺ ಮಕ್ಕಾದಲ್ಲಿ ಜೀವಿಸುತ್ತಿದ್ದ ಸಮಯವಾಗಿತ್ತು ಅದು. ನಾವು ಒಟ್ಟಿಗೆ ಮಕ್ಕಾದ ಕೆಲವು ಉಪನಗರಗಳಿಗೆ ಗುಡ್ಡಗಾಡು, ಮರಗಳಿರುವ ಪ್ರದೇಶಗಳ ಮೂಲಕ ಸಂಚರಿಸುತ್ತಿದ್ದಾಗ, ಪ್ರತಿಯೊಂದು ಮರಗಳು ಕೂಡ ಪ್ರವಾದಿಯವರಿಗೆ ﷺ ಸಲಾಂ ಹೇಳುತ್ತಿದ್ದವು. ಅಸ್ಸಲಾಮ್ ಅಲೈಕುಂ ಯಾ ರಸೂಲಲ್ಲಾಹ್ (ಅಲ್ಲಾಹುವಿನ ಸಂದೇಶವಾಹಕರೆ ತಮಗಿದೋ ಸಲಾಂ) ಎಂದು. ಮತ್ತೊಂದು ಉಲ್ಲೇಖದಲ್ಲಿ ಈ ರೀತಿಯೂ ಕಾಣಬಹುದು. ಯಾವುದೇ ಮರದ ಸಮೀಪದಿಂದ ಸಂಚರಿಸುವಾಗ ಪ್ರತಿಯೊಂದು ಮರಗಳೂ ಕೂಡ ಪ್ರವಾದಿಯವರಿಗೆ ﷺ ಸಲಾಂ ಹೇಳುತ್ತಿದ್ದವು. ನನಗೆ ಅದು ಸ್ಪಷ್ಟವಾಗಿ ಕೇಳುತ್ತಿತ್ತು ಎಂದು.
ಇಂತಹ ಬಹಳಷ್ಟು ಘಟನೆಗಳು ಹದೀಸ್'ಗಳಲ್ಲಿ, ಇತಿಹಾಸ ಗ್ರಂಥಗಳಲ್ಲಿ ಕಾಣಬಹುದು. ಹೀಗೆಲ್ಲಾ ನಡೆದಿರಬಹುದೇ.? ಎಂದು ಯಾರೂ ಸಂಶಯ ಪಡಬೇಕಾಗಿಲ್ಲ, ಅಲಂಕಾರಕ್ಕಾಗಿ ಹೇಳಿದ್ದು ಅಲ್ಲ, ಇಂತಹ ಘಟನೆಗಳನ್ನು ಅಲ್ಲಾಹನು ಪ್ರವಾದಿಯವರಿಗೆ ﷺ ಮುಅಜಿಝತ್ತಾಗಿ (ಅಸಾಧರಣ ಮಹತ್ವ) ನೀಡಿದ್ದಾಗಿದೆ. ಅದರ ಭಾಗವಾಗಿಯಾಗಿತ್ತು ಕೆಲವೊಂದು ನಿರ್ಜೀವ ವಸ್ತುಗಳು ಕೂಡ ಬಹಳ ಪಕ್ವತೆಯಿಂದ ವರ್ತಿಸಿದ್ದು. ಅಲ್ಲಾಹನನ್ನು ಭಯಪಡುವ ಉರುಳುವ ಬಂಡೆ ಕಲ್ಲುಗಳ ಕುರಿತು ಕುರ್'ಆನಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಾಹನನ್ನು ಸ್ತುತಿಸದೇ ಇರುವ ಯಾವುದೇ ವಸ್ತುವಿಲ್ಲವೆಂದು ಖುರ್'ಆನ್ ಹೇಳುವ ವಾಕ್ಯವನ್ನು, ಇಮಾಮ್ ನವವಿ (ರ) ದಾಖಲಿಸಿದ ವಿವರಣೆಯಲ್ಲಿ ಒಂದಾಗಿತ್ತು ಇದು.
ಪ್ರವಾದಿತ್ವದ ಘೋಷಣೆಗೂ ಮುಂಚೆಯೇ ಪ್ರವಾದಿಯವರಿಗೆ ﷺ ಕೆಲವೊಂದು ಅಶರೀರವಾಣಿಗಳು ಕೇಳುತ್ತಿದ್ದವು. ಆಕಾಶದಲ್ಲಿ ಕೆಲವು ವಿಶೇಷವಾದ ಹೊಳಪುಗಳು ಕಾಣುತ್ತಿದ್ದವು. ಒಮ್ಮೆ ಪ್ರೀತಿಯ ಪತ್ನಿ ಖದೀಜರಲ್ಲಿ (ರ), ಓ ಖದೀಜ (ರ) ನನಗೆ ಕೆಲವು ಅಶರೀರವಾಣಿ ಕೇಳುತ್ತಿದೆ. ಕೆಲವು ವಿಶೇಷವಾದ ಪ್ರಕಾಶಗಳು ಕಾಣುತ್ತಿದೆ ಯಾಕಾಗಿ ಇರಬಹುದು.? ನಾನು ಏನು ಆಗುತ್ತೇನೋ ಎನ್ನುವ ಚಿಂತೆ ಕಾಡುತ್ತಿದೆ ಎಂದು ಪ್ರವಾದಿಯವರು ﷺ ಹೇಳಿದಾಗ. ಚಿಂತಿಸಬೇಡಿ, ಅಲ್ಲಾಹನಾಣೆ.! ನಿಮಗೆ ಒಳಿತಲ್ಲದೆ ಇನ್ನೇನು ಆಗುವುದಿಲ್ಲ. ನೀವು ಪ್ರಾಮಾಣಿಕರು ಹಾಗೂ ಕುಟುಂಬ ಸಂಬಂಧಗಳನ್ನು ಜೋಡಿಸುವ ವ್ಯಕ್ತಿಯಲ್ಲವೇ ನಿಮಗೇನು ಆಗುದಿಲ್ಲ. ಎಂದು ಬುದ್ದಿವಂತರಾದ ಖದೀಜ ಉತ್ತರಿಸಿದರು.
ಕ್ರಮೇಣ ಪ್ರವಾದಿಯವರಲ್ಲಿ ﷺ ಹಲವಾರು ಬದಲಾವಣೆ ಕಾಣುತ್ತಿದ್ದವು. ಬಹಳ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅಲ್ಲಾಹನು ಅವನ ಸಂದೇಶ ವಾಹಕರನ್ನು ಸಜ್ಜುಗೊಳಿಸುತ್ತಿದ್ದನು. ಇಡೀ ಜಗತ್ತನ್ನೇ ಶಾಂತಿಯಿಂದ ಹೊಲಿಸಿಕೊಳ್ಳಲು ಸಂಹಿತೆ ಸಿದ್ಧವಾಗುತ್ತಿತ್ತು. ಆ ಕಾಲದಲ್ಲಿ ಪ್ರವಾದಿಯವರು ﷺ ಒಂಟಿಯಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಅರಣ್ಯಗಳಿಂದ ಯಾರೋ ಸಲಾಂ ಹೇಳುವುದು ಕೇಳುತ್ತಿತ್ತು. ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಕೂಗಿ ಹೇಳುತ್ತಿದ್ದವು.
ನಂತರದ ದಿನಗಳಲ್ಲಿ ಏಕಾಂತವನ್ನು ಬಹಳ ಇಷ್ಟಪಡುತಿದ್ದರು. ಅಲ್ಲಾಹನ ಬಗ್ಗೆ ಚಿಂತಿಸುತ್ತಾ, ಅವನನ್ನು ಆರಾಧಿಸುತ್ತಾ ಒಂಟಿಯಾಗಿರುತ್ತಿದ್ದರು. ಈ ಒಂಟಿ ಧ್ಯಾನವು ಬೇರೆ ಏನಾದರೂ ಕಾರಣಕ್ಕೆ ಸ್ವತಃ ತಾವೇ ಹಾಕಿದ ಯೋಜನೆಯೂ ಅಲ್ಲ, ಸಾಮಾಜಿಕವಾಗಿ ನಡೆಯುತ್ತಿದ್ದ ಅನಾಚಾರಗಳಿಂದ ದೂರವಿರಲು ತತ್ವಜ್ಞಾನಿಯಂತೆ ಆಯ್ಜೆ ಮಾಡಿದ ದಾರಿಯೂ ಅಲ್ಲ, ಬದಲಾಗಿ ಅಲ್ಲಾಹನ ಆಧ್ಯಾತ್ಮಿಕತೆಯನ್ನು ಪಡೆಯುವ ಉದ್ದೇಶದಿಂದಾಗಿತ್ತು. ಮುಹಮ್ಮದರನ್ನು ﷺ ಅಂತ್ಯ ಪ್ರವಾದಿಯಾಗಿ ಆಯ್ಕೆ ಮಾಡಿರುವೂದರ ಭಾಗವಾಗಿತ್ತು. ಅದರಲ್ಲಿ ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷ ಸಿಗುತ್ತಿತ್ತು. ವಿಶೇಷ ಏಕಾಂತಕ್ಕಾಗಿ ಮಕ್ಕಾದ ಪ್ರಕಾಶಗಿರಿ (ಜಬಲುನ್ನೂರ್) ಮೇಲಿರುವ ಹಿರಾ ಗುಹೆಗೆ ಹೋಗಿ ಕುಳಿತುಕೊಳ್ಳಲು ಅವರ ಅಂತರಾತ್ಮ ಪ್ರೇರೇಪಿಸಿತು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment