Abu Hisham Saquafi

Official Website Of Hafiz Ilyas Saquafi Padaladka

Tuesday, July 26, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -42 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು 

   ಹಿರಾ ಗುಹೆಗೆ ಬಹಳಷ್ಟು ವಿಶೇಷತೆಗಳಿದ್ದವು. ಒಂದು, ಅದರೊಳಗೆ ಕುಳಿತಾಗ ಕಅಬಾಲಯ ನೇರವಾಗಿ ಕಾಣುತಿತ್ತು. ಇನ್ನೊಂದು, ಪ್ರವಾದಿಯವರ ﷺ ತಾತ ಅಬ್ದುಲ್ ಮುತ್ತಲಿಬ್ ಧ್ಯಾನಕ್ಕೆ ಕುಳಿತಿದ್ದ ಸ್ಥಳವಾಗಿತ್ತು. ಹಿರಾ ಗುಹೆಯು ತನ್ನೆಡೆಗೆ ಬಹಳ ವಿನಮ್ರತೆಯಿಂದ ಸ್ವಾಗತಿಸಿದ ವಿವರಣೆಯನ್ನು ಬಹಳಷ್ಟು ಉಲ್ಲೇಖಗಳಲ್ಲಿ ಕಾಣಬಹುದು. ಇಮಾಮ್ ಕುಲಾಯಿಯವರು ಈ ರೀತಿ ವಿವರಿಸುತ್ತಾರೆ. ಎಲ್ಲಾ ವರ್ಷವೂ ಒಂದು ತಿಂಗಳವರೆಗೆ ಪ್ರವಾದಿಯವರು ﷺ ಗುಹೆಯಯೊಳಗೆ ಏಕಾಂತವಾಗಿ ಇರುತ್ತಿದ್ದರು. ಖುರೈಷಿಗಳ ನಡುವೆ ಇಂಥಹ ಒಂದು ಸಂಪ್ರದಾಯ ಹಿಂದೆಯೇ ಇತ್ತು. 'ತಹನ್ನುಸ್' ಅಥವಾ ವಿಗ್ರಹಗಳನ್ನು ದೂರಗೊಳಿಸುವುದು. ಅದು ಅಲ್ಲದಿದ್ದರೆ ತಹನ್ನುಫ್ ಅಥವಾ ಮೂರ್ತಿಗಳನ್ನು ಬಿಟ್ಟು ಸತ್ಯವಾದ ದಾರಿಯನ್ನು ಹುಡುಕುವುದು, ಮುಂತಾದ ಹೆಸರಿನಲ್ಲಿ ಅರಿಯಲ್ಪಟ್ಟಿದೆ. 

     ಒಂದು ತಿಂಗಳ ಏಕಾಂತ ವಾಸದ ಸಂದರ್ಭದಲ್ಲಿ ಅಲ್ಲಿಗೆ ಬರುತಿದ್ದವರಿಗೆ ಪ್ರವಾದಿಯವರು ﷺ ಆಹಾರ ದಾನ ಮಾಡುತಿದ್ದರು. ಧಾನ್ಯ ಮುಗಿದ ನಂತರ ಕೆಳಗೆ ಬರುವಾಗ ನೇರವಾಗಿ ಕಅಬಾಲಯದ ಬಳಿ ತೆರಳಿ, ಏಳು ಬಾರಿ ಅಥವಾ ಹಲವು ಬಾರಿ ಕಅಬಾದ ಪ್ರದಕ್ಷಿಣೆ ಹಾಕಿದ ನಂತರವೇ ಮನೆಗೆ ಹಿಂತಿರುಗಿ ಬರುತ್ತಿದ್ದರು.
     ಒಮ್ಮೆ ಹಿರಾ ಗುಹೆಗೆ ಬಂದರೆ ಎಷ್ಟು ದಿವಸ ತಂಗುತ್ತಿದ್ದರು ಎನ್ನುವುದರಲ್ಲಿ ಬಹಳಷ್ಟು ಅಭಿಪ್ರಾಯಗಳಿವೆ. ಮೂರು, ಏಳು, ರಮದಾನ್ ಮಾಸದಲ್ಲಾದರೆ ಒಂದು ತಿಂಗಳು ಹೀಗೆ ಬಹಳಷ್ಟು ಉಲ್ಲೇಖಗಳಿವೆ. ಒಂದು ತಿಂಗಳಿಗಿಂತ ಅಧಿಕ ತಂಗುವ ಕುರಿತು ಯಾವುದೇ ಉಲ್ಲೇಖವಿಲ್ಲ. ಅಲ್ಲಿಯೇ ವಾಸಿಸಲು ಆವಶ್ಯಕವಾದ ವಸ್ತುಗಳನ್ನು ಕೊಂಡೊಗುತ್ತಿದ್ದರು, ವಿಚಿತ್ರ ರೀತಿಯ ಕೇಕ್ ಹಾಗೂ ಆಲಿವ್ ಎಣ್ಣೆಯನ್ನಾಗಿತ್ತು ಕೊಂಡೊಗುತ್ತಿದ್ದದ್ದು ಎಂದು ಗ್ರಂಥಗಳು ತಿಳಿಸುತ್ತದೆ. 

    ಪ್ರವಾದಿಯವರು ﷺ ಹಿರಾ ಗುಹೆಯಲ್ಲಿ ಆರಾಧನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ, ಪತ್ನಿ ಖದೀಜ (ರ) ಬೀವಿಯವರು ಎಲ್ಲಾ ರೀತಿಯ ಸಹಕಾರ ನೀಡಿ ಸಹಕರಿಸಿದರು. ಪ್ರವಾದಿಯವರು ﷺ ಕೊಂಡುಹೋದ ವಸ್ತುಗಳು ಮುಗಿಯುವ ಹಂತಕ್ಕೆ ತಲುಪುವಾಗ ಬೀವಿಯವರು ಆಹಾರ ವಸ್ತುಗಳನ್ನು ತಲುಪಿಸುತ್ತಿದ್ದರು, ಕೆಲವೊಮ್ಮೆ ನೇರವಾಗಿ ಬೆಟ್ಟ ಹತ್ತಿ ಕೊಂಡುಹೋಗಿ ಕೊಡುತ್ತಿದ್ದರು. ಮನೆಯಿಂದ ನಾಲ್ಕು ಮೈಲಿ ದೂರವಾಗಿತ್ತು ಜಬಲ್'ನ್ನೂರು ಬೆಟ್ಟ, ಕಣಿವೆಯಿಂದ ಸುಮಾರು ಎಂಟುನೂರ ಎಪ್ಪತ್ತು ಮೀಟರ್'ಗಳಷ್ಟು ಕಡಿದಾದ ಪರ್ವತವನ್ನು ಹತ್ತಬೇಕಿತ್ತು. ಒಮ್ಮೆಯೂ ಕೂಡ ಕೋಪವನ್ನು ತೋರಿಸುದಾಗಲಿ, ಹೇಳಿ ಕೊಳ್ಳುವುದಾಗಲಿ ಮಾಡಿರಲಿಲ್ಲ. ತುಂಬು ಹೃದಯದಿಂದ ಪ್ರವಾದಿಯವರ ﷺ ಸೇವೆಯನ್ನು ಮಾಡುತಿದ್ದರು. ಪ್ರವಾದಿಯವರು ﷺ ಖದೀಜರನ್ನು ಪತ್ನಿಯಾಗಿ ಆಯ್ಕೆಮಾಡಿದ್ದು ಯಾಕಾಗಿ ಆದೇಶ ಲಭಿಸಿತ್ತೆಂದು ಅರ್ಥ ಮಾಡಿಕೊಳ್ಳುವ ಸಮಯವಾಗಿತ್ತದು. 

     ಕೆಲವೊಂದು ಸಂದರ್ಭಗಳಲ್ಲಿ ಪರ್ವತದ ಮೇಲೆ ಇರುವ ಪತಿಯ ಸೇವೆ ಮಾಡಲು ಪ್ರವಾದಿಯವರ ﷺ ಜೊತೆಯಲ್ಲಿಯೇ ಇರುತ್ತಿದ್ದರು, ಸೇವೆ ಮಾಡಿದ ನಂತರವೇ ಕಣಿವೆಯ ಕೆಳಗೆ ಬರುತ್ತಿದ್ದರು. 
      ಕೆಲವೊಮ್ಮೆ ಪ್ರವಾದಿಯವರನ್ನು ﷺ ನೂರ್ ಪರ್ವತಕ್ಕೆ ಯಾತ್ರೆ ಕಳುಹಿಸಿ ಅವರ ದಾರಿಯನ್ನೇ ನೋಡುತ್ತಿದ್ದರು, ಪರ್ವತವನ್ನು ಬಹಳ ಹೊತ್ತು ನೋಡುತ್ತಲೇ ಇರುತ್ತಿದ್ದರು. ನಂತರ ಪ್ರೀತಿಯ ಪತಿಯನ್ನು ಹುಡುಕುತ್ತಾ ನೂರ್ ಕಣಿವೆಯ ಬಳಿ ತೆರಳುತ್ತಿದ್ದರು. ಕಣಿವೆಯ ಕೆಳಗೆ ನಿಂತು ಬಹಳ ಹೊತ್ತು ಮೇಲೆ ನೋಡಿ ನಿಲ್ಲುತ್ತಿದ್ದರು, ಸ್ವಲ್ಪ ಸಮಯದ ನಂತರ ಪ್ರವಾದಿಯವರೇ ﷺ ನೇರವಾಗಿ ಕೆಳಗೆ ಬರುತ್ತಿದ್ದರು. ಬಹಳ ಸಂತೋಷದಿಂದ ಭೇಟಿಯಾದ ನಂತರ, ಮನೆಯಿಂದ ಕೊಂಡುಬಂದ ವಸ್ತುಗಳನ್ನು ನೀಡಿ ಬಹಳಷ್ಟು ಸೇವೆಯನ್ನು ಮಾಡುತಿದ್ದರು. ಸೂರ್ಯೋದಯವಾದಾಗ ಪ್ರವಾದಿಯವರು ﷺ ಪುನಃ ಪರ್ವತದ ಮೇಲೆ ಹೋಗುತ್ತಿದ್ದರು. ಹೀಗೆ ಒಂದು ರಾತ್ರಿ ಜೊತೆಯಲ್ಲಿ ಕಳೆದ ಆ ಸ್ಥಳದಲ್ಲಿ ನಂತರದ ದಿನಗಳಲ್ಲಿ ಮಸ್ಜಿದ್ ನಿರ್ಮಿಸಲಾಯಿತು. ಅದುವೇ 'ಮಸ್ಜಿದುಲ್ ಇಜಾಬಃ' ಎನ್ನುವ ಮಸ್ಜಿದ್. 

     ಕೆಲವೊಮ್ಮೆ ಬೀವಿಯವರು ಬೆಟ್ಟ ಹತ್ತಿ ಮೇಲೆ ತಲುಪಿದ ನಂತರ ಪ್ರವಾದಿಯವರನ್ನು ಕಾಣುತ್ತಿರಲಿಲ್ಲ. ಸುತ್ತಮುತ್ತಲು ಹುಡುಕಿದರೂ, ಬಹಳಷ್ಟು ಬಾರಿ ಕೂಗಿದರೂ, ಸಿಗದಿದ್ದಾಗ ಕೊನೆಗೆ ಸುತ್ತಮುತ್ತಲು ಹುಡುಕಲು ಸೇವಕರನ್ನು ಕಳುಹಿಸಿದಾಗ ಪ್ರವಾದಿಯವರು ﷺ ಬಹಳ ಗಂಭೀರವಾಗಿ ಧ್ಯಾನ ಮಾಡುತ್ತ ಕುಳಿತಿರುತಿದ್ದರು . ಬೀವಿಯವರಿಗೆ ವಿಷಯ ತಲುಪಿದ ನಂತರ ಪರಸ್ಪರ ಭೇಟಿಯಾಗಿ ಹಿಂತಿರುಗಿ ಹೋಗುತ್ತಿದ್ದರು. 
      ಕೆಲವೊಮ್ಮೆ ಪ್ರವಾದಿಯವರು ﷺ ಅಂದುಕೊಂಡದ್ದಕ್ಕೂ ಮುಂಚೆಯೇ ಮನೆಗೆ ಹಿಂತಿರುಗಿ ಬರುತ್ತಿದ್ದರು. ಅದಕ್ಕೆ ಕಾರಣ ಅವರು ಕೊಂಡುಹೋಗಿದ್ದ ಆಹಾರ ವಸ್ತುಗಳನ್ನು ಯಾರಿಗಾದರು ದಾನ ಮಾಡಿರುತ್ತಿದ್ದರು. 
      ಏನಾದರು ವಿಚಿತ್ರ ಅನುಭವ ಉಂಟಾದರೆ ಪ್ರವಾದಿಯವರು ﷺ ಬೀವಿಯವರಲ್ಲಿ ಹೇಳುತ್ತಿದ್ದರು. ಬುದ್ಧಿವಂತೆಯಾಗಿದ್ದ ಬೀವಿ ಬಹಳ ತಾಳ್ಮೆಯಿಂದ ಕೇಳಿ ಉತ್ತಮವಾದ ಪರಿಹಾರ ನೀಡುತ್ತಿದ್ದರು. 

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: