ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪ್ರಸಿದ್ಧರಾದ ಇಸ್ಲಾಮ್ ಸ್ವೀಕರಿಸಿದ ವ್ಯಕ್ತಿಗಳ ಎರಡನೇ ಘಟನೆಯನ್ನು ತಿಳಿಯೋಣ .
ಎರಡನೆದಾಗಿ ಪ್ರವಾದಿಯವರನ್ನು ﷺ ಅಂಗೀಕರಿಸಿದ್ದು ಅಲಿರವರು (ರ) ಆಗಿದ್ದರು. ಪುರುಷರ ಸಾಲಿನಲ್ಲಿ ಮೊದಲನೆದಾಗಿ ವಿಶ್ವಾಸವಿರಿಸಿದ ವ್ಯಕ್ತಿ ಅಲಿಯಾಗಿದ್ದರು (ರ), ಎನ್ನುವ ಇಬ್'ನು ಇಸ್'ಹಾಕರ ಅಭಿಪ್ರಾಯವು, ಮಕ್ಕಳ ಸಾಲಿನಲ್ಲಿ ಮೊದಲಿಗರು ಅಲಿಯಾಗಿದ್ದರು (ರ) ಎನ್ನುವ ಅದೇ ಅಭಿಪ್ರಾಯಕ್ಕೆ ಬಂದು ಸೇರುತ್ತದೆ. ಸಣ್ಣ ವಯಸ್ಸಿನಿಂದಲೂ ಪ್ರವಾದಿಯವರ ﷺ ಜೊತೆಯಲ್ಲೇ ಜೀವಿಸಲು ಅವರಿಗೆ ಅವಕಾಶ ಲಭಿಸಿತ್ತು. ಅದಕ್ಕಿರುವ ಕಾರಣ ಇದಾಗಿತ್ತು. ಪ್ರವಾದಿಯವರಿಗೆ ﷺ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿ ಸಾಕಿ ಸಲಹಿದ್ದ, ಚಿಕ್ಕಪ್ಪ ಅಬೂತ್ವಾಲಿಬರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರು. ಪ್ರವಾದಿಯವರಿಗೆ ﷺ ಈ ವಿಷಯವು ತಿಳಿದಾಗ, ಏನಾದರು ಪರಿಹಾರ ಹುಡುಕಿ ಚಿಕ್ಕಪ್ಪರಿಗೆ ಸಹಾಯ ಮಾಡಬೇಕೆಂದು ಅಂದುಕೊಂಡು, ಒಂದು ಉಪಾಯವನ್ನು ಹುಡುಕಿದರು. ಅಬೂತ್ವಾಲಿಬರ ಸಹೋದರ ಅಬ್ಬಾಸ್'ರವರು ತಕ್ಕ ಮಟ್ಟಿಗೆ ಶ್ರೀಮಂತರಾಗಿದ್ದರು. ಪ್ರವಾದಿಯವರು ﷺ ಅಬ್ಬಾಸ್'ರವರನ್ನು ಭೇಟಿಯಾಗಿ ಓ ಅಬುಲ್ ಫಳ್'ಲ್'ರವರೇ ನಿಮ್ಮ ಸಹೋದರನಾದ ಅಬೂತ್ವಾಲಿಬರು ಸಂಕಷ್ಟಕ್ಕೆ ಸಿಲುಕಿರುವ ವಿಷಯ ನಿಮಗೆ ತಿಳಿದಿದೆ ಅಲ್ಲವೇ.? ಸಾಮಾನ್ಯವಾಗಿ ಈಗ ಎಲ್ಲಾ ಜನರು ಬಹಳಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಬೂತ್ವಾಲಿಬರಾದರೆ ತಮ್ಮ ಮಕ್ಕಳು ಹಾಗೂ ಸುತ್ತಮುತ್ತಲಿನ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾರೆ. ನಾನು ಇದಕ್ಕೊಂದು ಪರಿಹಾರ ಸೂಚಿಸುತ್ತೇನೆ. ನಾವು ಅವರ ಬಳಿ ತೆರಳಿ, ಅವರ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡರೆ ಹೇಗೆ.? ಎಂದು ಕೇಳಿದರು. ಅದಕ್ಕೇನಂತೆ ಒಳ್ಳೆಯ ಕಾರ್ಯವಲ್ಲವೇ.? ಅದರಲ್ಲಿ ಬಹಳ ಸಂತೋಷವಿದೆ ಎಂದು ಅಬ್ಬಾಸ್'ರವರು ಉತ್ತರಿಸಿ, ಇಬ್ಬರೂ ಕೂಡ ಅಬೂತ್ವಾಲಿಬರನ್ನು ಭೇಟಿಯಾಗಲು ಹೊರಟರು.
ಅಬೂತ್ವಾಲಿಬರನ್ನು ಭೇಟಿಯಾಗಿ ಯೋಗಕ್ಷೇಮವನ್ನು ವಿಚಾರಿಸಿದರು. ನೀವು ಬಹಳಷ್ಟು ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ನಮಗೆ ತಿಳಿದಿರುವ ವಿಚಾರವೆ, ಹಾಗಾಗಿ ನಾವೊಂದು ಪರಿಹಾರದೊಂದಿಗೆ ಬಂದಿದ್ದೇವೆ. ನಿಮ್ಮ ಆರ್ಥಿಕ ಸಮಸ್ಯೆಯನ್ನು ನಿವಾರಿಸುವುದು ಅಲ್ಲ, ಬದಲಾಗಿ ನಿಮ್ಮ ಈ ಆರ್ಥಿಕ ಸಂಕಷ್ಟ ಸರಿಯಾಗುವ ವರೆಗೂ ನಿಮ್ಮ ಕೆಲವೊಂದು ಮಕ್ಕಳನ್ನು ನಾವು ಕರೆದುಕೊಂಡು ಹೋಗುತ್ತೇವೆ. ಇದಕ್ಕೆ ನೀವೇನು ಹೇಳುತ್ತೀರ.? ಎಂದು ಕೇಳಿದರು. ಅಬೂತ್ವಾಲಿಬರು ಅಧಿಕ ಯೋಚಿಸಿದೆ, ಕಿರಿಯ ಮಗನಾದ ಅಖೀಲನ್ನು ಬಿಟ್ಟು ಬೇರೆಯವರನ್ನು ಕರೆದುಕೊಂಡು ಹೋಗಲು ಒಪ್ಪಿಗೆ ನೀಡಿದರು. ಅದರ ಪ್ರಕಾರ ಅಬ್ಬಾಸ್'ರವರು ಜಅ್'ಫರನ್ನು, ಪ್ರವಾದಿಯವರು ﷺ ಅಲಿಯವರನ್ನು ಜೊತೆಯಲ್ಲಿ ತಮ್ಮ ಮನೆಗೆ ಕರೆದುಕೊಂಡು ಹೋದರು.
ಅಲಿಯವರ ಜವಾಬ್ದಾರಿ ತೆಗೆಯುವ ಮೂಲಕ ಅಬೂತ್ವಲಿಬರಿಗೆ ಪ್ರತ್ಯುಪಕಾರ ಮಾಡಲು ಒಂದು ಅವಕಾಶ ಲಭಿಸಿತ್ತು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಮುಹಮ್ಮದ್'ರನ್ನು ﷺ ನಾನಲ್ಲವೇ ಸಾಕಿದ್ದು ಎಂದು ಹೇಳಿಕೊಳ್ಳುವ ಅವಕಾಶವೂ ಇಲ್ಲದ ಹಾಗಾಯಿತು. ಕಾರಣ ಹಾಗೆ ಹೇಳುವಾಗ ನಿಮ್ಮ ಮಗನಾದ ಅಲಿಯನ್ನು ಸಾಕಿದ್ದು ನಾನಲ್ಲವೇ.? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಅಲ್ಲಿ ಉದ್ಭವಿಸುತ್ತದೆ.
ಸರಿ ಇನ್ನೂ ಅಲಿಯವರು (ರ) ಇಸ್ಲಾಮ್ ಸ್ವೀಕರಿಸಿದ ಘಟನೆಯ ಕುರಿತು ತಿಳಿಯೋಣ. ಪ್ರವಾದಿತ್ವದ ಘೋಷಣೆಯಾದ ಮರುದಿನ ಅಲಿಯವರು (ರ) ಪ್ರವಾದಿಯವರ ﷺ ಬಳಿ ಬಂದಾಗ, ಖದೀಜ (ರ) ಹಾಗೂ ಪ್ರವಾದಿಯವರು ﷺ ನಮಾಝ್ ಮಾಡುತಿದ್ದರು. ಬಹಳ ಕುತೂಹಲದಿಂದ ಅದನ್ನು ನೋಡುತ್ತಾ ನಿಂತರು, ನಂತರ ಇದೇನು ಮಾಡುತ್ತಿದ್ದೀರಿ ನೀವಿಬ್ಬರು.? ಎಂದು ಕೇಳಿದಾಗ. ಇದು ಅಲ್ಲಾಹನ ಧರ್ಮವಾಗಿದೆ, ಅವನು ಅವನ ಪ್ರವಾದಿಗಳನ್ನು ನಿಯೋಗಿಸುವ ಮೂಲಕ ಪ್ರಭೋಧನೆ ಮಾಡಿಸಿದ ಧರ್ಮ. ಮಗನೇ ಅಲೀ.. ಏಕನಾದ ಅಲ್ಲಾಹನ ಬಳಿ ನಿನ್ನನ್ನು ಆಹ್ವಾನಿಸುತ್ತಿದ್ದೇನೆ, ಲಾತ, ಉಝ್ಝನನ್ನು ತಿರಸ್ಕರಿಸಿ ಅಲ್ಲಾಹನನ್ನು ಆರಾಧಿಸಬೇಕು ಎಂದು ಪ್ರವಾದಿಯವರು ﷺ ಹೇಳಿದರು. ಅದಕ್ಕೆ ಇದು ಇಲ್ಲಿಯವರೆಗೆ ಕೇಳದ ವಿಷಯವಲ್ಲವೇ.? ನಾನು ತಂದೆಯ ಬಳಿ ಕೇಳಿ ನಿರ್ಧರಿಸುತ್ತೇನೆ, ಸಾಮಾನ್ಯವಾಗಿ ಹಾಗೆ ಅಲ್ಲವೇ ಮಾಡುವುದು ಎಂದು ಅಲಿಯವರು (ರ) ಹೇಳಿದಾಗ. ಮಗನೇ ಈಗ ನೀನು ಸ್ವೀಕರಿಸದಿದ್ದರೂ ಪರವಾಗಿಲ್ಲ ಆದರೆ ಸಧ್ಯಕ್ಕೆ ಈ ವಿಷಯವನ್ನು ಯಾರಿಗೂ ತಿಳಿಸಬೇಡ ಎಂದು ಪ್ರವಾದಿಯವರು ﷺ ಪುನಃ ಅಲಿಯವರಲ್ಲಿ (ರ) ಹೇಳಿದರು.
ಅಲಿಯವರು (ರ) ರಾತ್ರಿ ಅಲ್ಲಿಯೇ ಕಳೆದರು. ಬೆಳಗಾಗುವುದರೊಳಗೆ ಅಲ್ಲಾಹನು ಅಲಿಯವರ (ರ) ಹೃದಯಕ್ಕೆ ಸನ್ಮಾರ್ಗದ ಬೆಳಕು ಹಾಕಿದ್ದನು. ಮುಂಜಾನೆ ಎದ್ದ ತಕ್ಷಣವೇ ಪ್ರವಾದಿಯವರ ﷺ ಬಳಿ ಹೋಗಿ, ಇಸ್ಲಾಮಿನ ಕುರಿತು ಬಹಳ ಕುತೂಹಲದಿಂದ ಕೇಳಿದರು. ಪ್ರವಾದಿಯವರು ﷺ ಎಲ್ಲವನ್ನೂ ಸಂಪೂರ್ಣವಾಗಿ ವಿವರಿಸಿ ಕೊಟ್ಟರು. ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲ, ಅವನಿಗೆ ಲಾತ, ಉಝ್ಝ ಎನ್ನುವ ಇನ್ಯಾವ ಪಾಲುದಾರರು ಇಲ್ಲವೆಂದು ಘೋಷಣೆ ಮಾಡಬೇಕು ಎಂದು ಹೇಳಿದಾಗ , ಅಲಿಯವರು (ರ) ಅದೆಲ್ಲವನ್ನೂ ಅಂಗೀಕರಿಸಿ ಇಸ್ಲಾಮ್ ಸ್ವೀಕರಿಸಿದರು. ಅಬೂತ್ವಾಲಿಬರ ಪ್ರತಿಕ್ರಿಯೆ ಹೇಗಿರಬಹುದು ಎಂದು ತಿಳಿಯದ ಕಾರಣ ಸದ್ಯಕ್ಕೆ ಈ ವಿಷಯವನ್ನು ತಂದೆಗೆ ತಿಳಿಸಲು ಹೋಗಲಿಲ್ಲ.
(ಮುಂದುವರಿಯುತ್ತದೆ...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment