ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಂದು ಅಲಿಯವರಿಗೆ (ರ) ಹತ್ತು ವರ್ಷ ಪ್ರಾಯವಾಗಿತ್ತು. ಅಲ್ಲ ಎಂಟು ವರ್ಷವಾಗಿತ್ತು ಎನ್ನುವ ಅಭಿಪ್ರಾಯವು ಇದೆ. ಬಾಲ್ಯದಿಂದಲೇ ಪ್ರವಾದಿಯವರ ﷺ ಜೊತೆಯಲ್ಲಿ ಇರುವ ಕಾರಣ ಒಂದು ಬಾರಿಯೂ ಕೂಡ ವಿಗ್ರಹಾರಾಧನೆ ನಡೆಸುವುದಾಗಲಿ, ಅವುಗಳ ಉತ್ಸವಗಳಲ್ಲಿ ಜೊತೆ ಸೇರುವುದಾಗಲಿ ಮಾಡಿರಲಿಲ್ಲ. ಆರಂಭಿಕ ಹಂತದಲ್ಲಿ ಬಹಳ ರಹಸ್ಯವಾಗಿ ಆಗಿತ್ತಲ್ಲವೇ ಪ್ರವಾದಿಯವರು ﷺ ಆರಾಧನೆ ನಡೆಸುತ್ತಿದ್ದದ್ದು. ಕೆಲವೊಮ್ಮೆ ಏಕಾಂತವಾಗಿ ಆರಾಧನೆ ಮಾಡಲು ಕಾಡಿಗೆ ಹೋಗುತ್ತಿದ್ದರು. ಆರಾಧನೆ ಮುಗಿದ ನಂತರವೆ ಮನೆಗೆ ಹಿಂತಿರುಗಿ ಬರುತ್ತಿದ್ದರು. ತಮ್ಮ ಚಿಕ್ಕಪ್ಪಂದಿರಿಗೆ ವಿಷಯ ತಿಳಿಯಬಾರದು ಎಂಬ ಉದ್ದೇಶವು ಕೂಡ ಆಗಿತ್ತು. ಆ ಸಂದರ್ಭಗಳಲ್ಲಿ ಅಲಿಯವರು (ರ) ಕೂಡ ಜೊತೆಯಲ್ಲಿ ಸೇರಿ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದರು.
ಆದರೆ ಒಮ್ಮೆ ಇಬ್ಬರೂ ಸೇರಿ ಆರಾಧನೆ ನಡೆಸುತ್ತಿದ್ದು ಅಬೂತ್ವಾಲಿಬರ ಕಣ್ಣಿಗೆ ಬಿದ್ದಿತ್ತು. ತಕ್ಷಣವೇ ಓ ಮುಹಮ್ಮದ್ ﷺ ಮಗನೇ ನೀವು ಯಾವುದೋ ಧರ್ಮದ ಆಚರಣೆಯನ್ನು ಮಾಡುತ್ತಿದ್ದೀರಿ ಅಲ್ವಾ.? ಏನಿದು ಎಂದು ಕೇಳಿದರು. ಪ್ರವಾದಿಯವರು ﷺ ಇದನ್ನು ಒಳ್ಳೆಯ ಅವಕಾಶವಾಗಿ ಕಂಡು ಅಬೂತ್ವಾಲಿಬರಲ್ಲಿ ಮುಕ್ತವಾಗಿ ಮಾತಾಡಿದರು. ಇದು ಅಲ್ಲಾಹನ ಧರ್ಮವಾಗಿದೆ, ಅವನ ಮಲಕ್'ಗಳ, (ದೇವದೂತ) ಪ್ರವಾದಿಗಳ ಧರ್ಮ. ಅದರ ಜೊತೆಯಲ್ಲೇ ಪಿತಾಮಹ ಪ್ರವಾದಿ ಇಬ್ರಾಹಿಂರವರ (ಅ) ಧರ್ಮವೂ ಕೂಡ. ಈ ಧರ್ಮಕ್ಕೆ ಲೋಕದ ಜನತೆಯನ್ನು ಆಹ್ವಾನಿಸಲು ನನ್ನನ್ನು ಅಲ್ಲಾಹನು ನಿಯೋಗಿಸಿದ್ದಾನೆ. ನನಗೆ ಬಹಳಷ್ಟು ಶುಭಹಾರೈಕೆ ಬಯಸುವ ವ್ಯಕ್ತಿಯಾಗಿದ್ದೀರಿ ನೀವು, ಸನ್ಮಾರ್ಗಕ್ಕೆ ಆಹ್ವಾನಿಸಲು ಅತ್ಯಂತ ಸೂಕ್ತವಾದ ವ್ಯಕ್ತಿಯಾದ ಕಾರಣ ನಿಮ್ಮನ್ನು ಈ ಆದರ್ಶಕ್ಕೆ ಆಹ್ವಾನಿಸುತ್ತಿದ್ದೇನೆ ಎಂದು ಹೇಳಿದರು.
ಅಣ್ಣನ ಮಗನ ಮಾತನ್ನು ಬಹಳ ಶ್ರದ್ಧೆಯಿಂದ ಕೇಳುತ್ತಿದ್ದರು. ನಂತರ ಅಬೂತ್ವಾಲಿಬ್ ಈ ರೀತಿ ಹೇಳಿದರು. ಮಗನೇ ನನಗೆ ನನ್ನ ಹಳೆಯ ಧರ್ಮವನ್ನು ಬಿಡಲು ಸಾಧ್ಯವಿಲ್ಲ, ಆದರೆ ನಾನು ನಿಮಗೆ ಮಾತು ಕೊಡುತ್ತೇನೆ. ಖಂಡಿತ ನಾನು ನಿಮ್ಮ ರಕ್ಷಕನಾಗಿರುತ್ತೇನೆ. ಒಂದೇ ಒಂದು ಸಮಸ್ಯೆಯೂ ಬರದ ಹಾಗೆ ನೋಡಿಕೊಳ್ಳುತ್ತೇನೆ. ನಾನು ಬದುಕಿರುವವರೆಗೂ ಖಂಡಿತ ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಮತ್ತೊಮ್ಮೆ ಅಬೂತ್ವಾಲಿಬ್ ತಮ್ಮ ಮಗನಾದ ಅಲಿಯವರನ್ನು (ರ) ಕರೆದು, ಈಗ ನೀನು ಆಚರಿಸುತ್ತಿರುವ ಧರ್ಮ ಯಾವುದು.? ಎಂದು ಕೇಳಿದರು. ಅಪ್ಪ ನಾನು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ಒಪ್ಪಿಕೊಂಡಿದ್ದೇನೆ. ಪ್ರವಾದಿಯವರು ﷺ ಏನನ್ನು ಪ್ರಸ್ತುತ ಪಡಿಸುತ್ತಾರೋ ಅದನ್ನು ಸತ್ಯವೆಂದು ನಾನು ಅಂಗೀಕರಿಸುತ್ತೇನೆ. ನಾನು ಅವರ ಜೊತೆಯಲ್ಲಿ ನಮಾಝ್ ಮಾಡುತ್ತಿದ್ದೇನೆ ಎಂದು ಹೇಳಿದರು. ಅದಕ್ಕೆ ಅಬೂತ್ವಾಲಿಬರು, ಮಗನೇ ನೀನು ಮುಹಮ್ಮದ್ ﷺ ಮಗನ ಜೊತೆಯಲ್ಲೇ ಇರು, ಏನೇ ಆದರೂ ಅವರು ನಿನ್ನನ್ನು ಒಳಿತಿಗೆ ಮಾತ್ರವೇ ಕೊಂಡು ಹೋಗುವರು ಎಂದು ಹೇಳಿದರು.
ನಂತರದ ಕಾಲದಲ್ಲಿ ಒಮ್ಮೆ ಅಲಿಯವರು (ರ) ಮಿಂಬರಿನಲ್ಲಿ (pulpit of arch) ನಿಂತು ಅಬೂತ್ವಾಲಿಬರು ಹೇಳಿದ್ದ ಮಾತನ್ನು ನೆನೆದು ಜೋರಾಗಿ ನಗುತ್ತಿದ್ದರು. ಅಲಿಯವರು (ರ) ಈ ವಿಷಯವನ್ನು ವಿವರಿಸತೊಡಗಿದರು . ನಾನು ಪ್ರವಾದಿಯವರ ﷺ ಜೊತೆಯಲ್ಲಿ ಮಕ್ಕಾದ ಉಪನಗರವಾದ "ನಖ್'ಲ" ಎನ್ನುವ ಸ್ಥಳದಲ್ಲಿ ರಹಸ್ಯವಾಗಿ ನಮಾಝ್ ಮಾಡುತ್ತಿದ್ದೆವು. ಅಚಾನಕ್ಕಾಗಿ ತಂದೆಯವರು ಬಂದು ಬಿಟ್ಟಿದ್ದರು, ಸ್ವಲ್ಪ ಹೊತ್ತು ನಾವು ಮಾಡುತಿದ್ದ ಆರಾಧನೆಗಳನ್ನು ನೋಡುತ್ತಾ ನಿಂತಿದ್ದರು. ನಂತರ ನಮ್ಮ ಬಳಿ ಬಂದು ಇದೇನು ಮಾಡುತ್ತಿದ್ದೀರಿ ನೀವು.? ಎಂದು ಕೇಳಿದರು, ಆಗ ಪ್ರವಾದಿಯವರು ﷺ ಎಲ್ಲವನ್ನು ಸಂಪೂರ್ಣವಾಗಿ ವಿವರಿಸಿ ಅವರನ್ನೂ ಕೂಡ ಇಸ್ಲಾಮಿಗೆ ಆಹ್ವಾನಿಸಿದರು. ಎಲ್ಲವನ್ನು ಗಮನವಿಟ್ಟು ಕೇಳಿದ ನಂತರ, ನೀವು ಹೇಳಿದ್ದು ಎಲ್ಲವೂ ಸರಿ ಆದರೆ ನನ್ನ ಹಣೆಯನ್ನು ನೆಲದ ಮೇಲೆ ಇಡಲು ಯಾವತ್ತೂ ನಾನು ತಯಾರಿಲ್ಲ ಎಂದು ಹೇಳಿದರು. (ನಮಾಝಿನಲ್ಲಿ ಸುಜೂದ್ (ಸಾಷ್ಟಾಂಗ) ಹೋಗುವ ಸಂದರ್ಭದ ಕುರಿತಾಗಿತ್ತು ಅವರು ಹೇಳಿದ್ದು. ನಿಜ ಹೇಳಬೇಕೆಂದರೆ, ಸೃಷ್ಟಿಕರ್ತನ ಮುಂದೆ ಮನುಷ್ಯನ ಅತ್ಯುತ್ತಮ ಭಾಗವಾದ ಅಂಗವನ್ನು,(ಮುಖವನ್ನು) ನೆಲದ ಮೇಲಿಟ್ಟು ವಿನಮ್ರತೆಯಿಂದ ತೋರಿಸುವ ಕ್ರಿಯೆಯಾಗಿದೆ ಈ ಸುಜೂದ್.) ಈ ಹೇಳಿದ ಮಾತುಗಳನ್ನು ನೆನಪಿಸಿ ಆಗಿತ್ತು ಅಲಿಯವರು (ರ) ನಗುತ್ತಿದ್ದದ್ದು.
ಪುರುಷರ ಸಾಲಿನಲ್ಲಿ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ್ದು ಅಬೂಬಕ್ಕರ್ (ರ) ಆಗಿದ್ದರು ಎನ್ನುವ ಅಭಿಪ್ರಾಯವನ್ನೂ, ಅದಲ್ಲ ಅಲಿ (ರ) ಆಗಿದ್ದರು ಎನ್ನುವ ಅಭಿಪ್ರಾಯವನ್ನು ಪರಿಗಣಿಸಿ ಈ ರೀತಿಯಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರಥಮವಾಗಿ ಸ್ವೀಕರಿಸಿದ್ದು ಅಲಿಯವರೇ (ರ) ಆಗಿದ್ದರೂ, ಕೆಲವು ಸಮಯದವರೆಗೆ ಅವರು ಅದನ್ನು ರಹಸ್ಯವಾಗಿ ಇಟ್ಟಿದ್ದರು. ಆದರೆ ಅಬೂಬಕ್ಕರ್'ರವರು (ರ) ಇಸ್ಲಾಮ್ ಸ್ವೀಕರಿಸಿದ ಅದೇ ಕ್ಷಣದಲ್ಲೇ ಎಲ್ಲರಿಗೂ ತಿಳಿದಿತ್ತು. ಹಾಗಾಗಿ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ ವ್ಯಕ್ತಿ ಅಬೂಬಕ್ಕರ್ (ರ) ಎಂದು ಎಲ್ಲರಿಗೂ ಅರಿಯಲ್ಪಟ್ತಿದ್ದರು, ಆದರೆ ವಾಸ್ತವದಲ್ಲಿ ಅಲಿಯಾಗಿದ್ದರು (ರ) ಪ್ರಥಮವಾಗಿ ಸ್ವೀಕರಿಸಿದ ವ್ಯಕ್ತಿ.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment