Abu Hisham Saquafi

Official Website Of Hafiz Ilyas Saquafi Padaladka

Monday, August 15, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -62 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ಖಾಲಿದ್ ಬಿನ್ ಸಈದ್ (ರಲಿಯಲ್ಲಾಹ್ ಅನ್'ಹು)
       ಇಸ್ಲಾಮ್ ಸ್ವೀಕರಿಸಿದ ನಾಲ್ಕನೆ ವ್ಯಕ್ತಿ ಎನ್ನುವ ಪ್ರಯೋಗ ಇತಿಹಾಸದಲ್ಲಿ ಬಹಳಷ್ಟು ಜನರಿಗೆ ಕಾಣಬಹುದು. ಅದರಲ್ಲಿ ಒಬ್ಬರಾಗಿದ್ದರು ಖಾಲಿದ್ ಬಿನ್ ಸಈದ್ (ರ). ಇವರು ಇಸ್ಲಾಮ್ ಸ್ವೀಕರಿಸುವುದರ ಹಿಂದೆ ಅಬೂಬಕ್ಕರ್'ರವರ (ರ) ಸಹಾಯವೂ ಬಹಳಷ್ಟಿದೆ. ಖುರೈಷಿಗಳಲ್ಲಿ ಗಣ್ಯ ವ್ಯಕ್ತಿಯಾಗಿದ್ದ ಆಸ್ ಬಿನ್ ಉಮಯ್ಯರವರ ಮಗನಾಗಿದ್ದರು ಖಾಲಿದ್'ರ (ರ) ತಂದೆ ಸಈದ್. ಹಾಗಾಗಿ ಅವರೂ ಕೂಡ ಬಹಳಷ್ಟು ಗೌರವಿಸಲ್ಪಡುವ ವ್ಯಕ್ತಿಯೂ ಕೂಡ ಆಗಿದ್ದರು. 

    ಖಾಲಿದ್'ರ ಮನ ಪರಿವರ್ತನೆಗೆ ಕಾರಣವಾದ, ಅವರಿಗೆ ಬಿದ್ದ ಕನಸಿನ ಕುರಿತು ತಿಳಿಯೋಣ. ಬಹಳ ರಾಕ್ಷಸಿಯವಾಗಿ ಹೊತ್ತಿ ಉರಿಯುತ್ತಿರುವ ಬೆಂಕಿಯ ಮುಂದೆ ಖಾಲಿದ್ (ರ) ನಿಂತಿದ್ದರು. ಅವರ ತಂದೆ ಸಈದ್ ಆ ಅಗ್ನಿಕುಂಡಕ್ಕೆ ಅವರನ್ನು ದೂಡಿ ಹಾಕಲು ಪ್ರಯತ್ನಿಸುತ್ತಿದ್ದರು, ಅಷ್ಟರಲ್ಲೇ ಮುಹಮ್ಮದ್'ರು ﷺ ಬಂದು ಅವರ ಸೊಂಟವನ್ನು ಹಿಡಿದು ಆ ಅಗ್ನಿಕುಂಡದಿಂದ ಅವರನ್ನು ರಕ್ಷಿಸಿದರು. ಈ ಭಯಾನಕವಾದ ದೃಶ್ಯವನ್ನು ಕಂಡ ಖಾಲಿದ್ (ರ) ಬಹಳಷ್ಟು ಭಯಗೊಂಡಿದ್ದರು. ಅವರು ಈ ಕನಸನ್ನು ತನ್ನ ಗೆಳೆಯನಾದ ಅಬೂಬಕ್ಕರ್'ರವರ (ರ) ಬಳಿ ತಿಳಿಸಿದರು. ಅಬೂಬಕ್ಕರ್'ರವರು ಇಸ್ಲಾಮ್ ಸ್ವೀಕರಿಸಿದ ಮರುದಿವಸವಾಗಿತ್ತು ಈ ಘಟನೆ ನಡೆದಿದ್ದು. ಅವರು ಖಾಲಿದ್'ರ (ರ) ಬಳಿ ಬಂದು, ಓ ಖಾಲಿದ್ ನಿಮಗೆ ಅಲ್ಲಾಹನು ಒಳಿತನ್ನು ವಿಧಿಸಿದ್ದಾನೆಂದು ನನಗೆ ಅನಿಸುತ್ತಿದೆ. ಕಾರಣ ಮುಹಮ್ಮದ್ ﷺ ಬಿನ್ ಅಬ್ದುಲ್ಲಾಹ್'ರವರು ಅಲ್ಲಾಹನ ಸಂದೇಶ ವಾಹಕರಾಗಿ ನಿಯೋಗಿಸಲ್ಪಟ್ಟಿದ್ದಾರೆ. ನೀವು ತಕ್ಷಣವೇ ಅವರ ಬಳಿ ಹೋಗಿ, ಪ್ರವಾದಿಯವರನ್ನು ﷺ ಹಿಂಬಾಲಿಸಿರಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಆಗಲೇ ಪರಿಹಾರ ಸಿಗುತ್ತದೆ ಎಂದು ಹೇಳಿದರು. ಖಾಲಿದ್ ತಕ್ಷಣವೇ ಅಲ್ಲಿಂದ ಹೊರಟು, ಪ್ರವಾದಿಯವರು ﷺ ಸನ್ನಿಧಿಗೆ ಬಂದು, ಇಸ್ಲಾಮ್ ಸ್ವೀಕರಿಸಿದರು. 
      ಅಬೂಬಕ್ಕರ್'ರವರ (ರ) ನಂತರ ಇಸ್ಲಾಮ್ ಸ್ವೀಕರಿಸಿದ ವ್ಯಕ್ತಿ ಎಂಬ ಸ್ಥಾನ ಇರುವುದು ಖಾಲಿದ್'ಗೆ (ರ) ಆಗಿದೆ. ಅವರ ಪತ್ನಿ ಉಮೈರ ಬಿಂತ್ ಖಲಫ್ ಕೂಡ ತಕ್ಷಣವೇ ಇಸ್ಲಾಮ್ ಸ್ವೀಕರಿಸಿದರು. 

     ಅಬ್ದುಲ್ಲಾಹಿ ಬಿನ್ ಮಸ್'ವೂದ್'ರಿಗೆ (ರ) ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸುವ ಭಾಗ್ಯ ಲಭಿಸಿತ್ತು. ನಂತರ ಪ್ರವಾದಿಯವರ ﷺಆತ್ಮೀಯ ಆತ್ಮೀಯ ಮಿತ್ರರ ಸಾಲಿನಲ್ಲಿ ಸೇರುವ ಭಾಗ್ಯವೂ ಲಭಿಸಿತು. ಅಬ್ದುಲ್ಲಾಹಿ ಬಿನ್ ಮಸ್'ವೂದ್ (ರ) ಅವರು ಇಸ್ಲಾಮ್ ಸ್ವೀಕರಿಸಿದ ಘಟನೆಯ ಕುರಿತು ಕೂಡ ತಿಳಿಯೋಣ. ಇಮಾಮ್ ಅಹ್ಮದ್ (ರ) ಮುಸ್'ನದ್'ರವರಿಂದ ಉಲ್ಲೇಖಿಸುವ ಹದೀಸ್'ನಲ್ಲಿ , ಸ್ವತಃ ಇಬ್'ನು ಮಸ್'ವೂದರೆ (ರ) ವಿವರಿಸುವುದು ಕಾಣಬಹುದು. ನಾನು ಹದಿಹರೆಯದ ಬಾಲಕನಾಗಿದ್ದ ಸಂದರ್ಭದಲ್ಲಿ, ಉಖ್'ಬತ್ ಬಿನ್ ಅಬೀ ಮುಐತಿನಬಳಿ ಬಳಿ ಮೇಕೆಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದೆ. ಹೀಗಿರುವಾಗ ಒಮ್ಮೆ ನಾನು ಹುಲ್ಲುಗಾವಲಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಒಬ್ಬರು ಓಡಿ ಬಂದರು. ಅದು ಮುಹಮ್ಮದ್'ರು ﷺ ಹಾಗೂ ಅಬೂಬಕ್ಕರ್ (ರ) ಆಗಿರುವರೆಂದು ನಂತರ ಅರ್ಥವಾಯಿತು. ಮಕ್ಕಾದ ವಿಗ್ರಹ ಆರಾಧಕರ ಕಿರುಕುಳದಿಂದ ಪಾರಾಗಿ ಬಂದಿದ್ದರು. ಅವರು ನನ್ನ ಬಳಿ ಬಂದು, ಮಗನೇ ನಮಗೆ ಕುಡಿಯಲು ಹಾಲು ಸಿಗಬಹುದೇ ಎಂದು ಕೇಳಿದಾಗ, ನಾನು ಈ ಮೇಕೆಗಳ ಯಜಮಾನನಲ್ಲ, ಕಾವಲುಗಾರ ಮಾತ್ರವಾಗಿರುವುದರಿಂದ ಹಾಲು ಕೊಡಲು ಸಾಧ್ಯವಿಲ್ಲ ಅಂದೆನು. ಅದಕ್ಕೆ ಇನ್ನೂ ಕೂಡ ಮರಿ ಹಾಕದ, ಕೆಚ್ಚಲಲ್ಲಿ ಹಾಲಿಲ್ಲದ ಮೇಕೆಗಳು ನಿನ್ನ ಬಳಿ ಇದೆಯೇ ಎಂದು ಕೇಳಿದರು. ನಾನು ಹಾಲಿಲ್ಲದ, ಕೆಚ್ಚಲು ಹಿಗ್ಗಿ ಹೋಗಿದ್ದ ಒಂದು ಮೇಕೆಯನ್ನು ತೋರಿಸಿ ಕೊಟ್ಟೆನು. ಪ್ರವಾದಿಯವರು ﷺ ಆ ಮೇಕೆಯ ಬಳಿ ಹೋಗಿ, ಏನೋ ಕೆಲವು ಮಂತ್ರಗಳನ್ನು ಹೇಳುತ್ತಾ, ಅವುಗಳ ಕೆಚ್ಚಲನ್ನು ಮೆಲ್ಲಗೆ ಕೈಗಳಿಂದ ಉಜ್ಜಿದರು. ಅಬೂಬಕ್ಕರ್'ರವರು (ರ) ಒಳ ಭಾಗಕ್ಕೆ ಸ್ವಲ್ಪ ಕುಗ್ಗಿ ಹೋಗಿದ್ದ ಪಾತ್ರೆಯ ರೂಪದ ಸಣ್ಣ ಬಂಡೆ ಕಲ್ಲನ್ನು, ಪಾತ್ರೆಯ ಬದಲಿಗೆ ಚಾಚಿ ಹಿಡಿದರು. ಏನದ್ಭುತ ಆ ಪಾತ್ರೆಯ ರೂಪದ ಕಲ್ಲಿನ ಒಳಗೆ ಹಾಲು ತುಂಬಿ ಹೋಯಿತು. ಪ್ರವಾದಿಯವರು ﷺ ಸಂತೋಷದಿಂದ ಹಾಲು ಕುಡಿದರು, ನಂತರ ಅಬೂಬಕ್ಕರ್'ರವರು (ರ) ಕೂಡ ಹಾಲು ಕುಡಿದು ನನ್ನ ಬಳಿ ಆ ಕಲ್ಲಿನ ಪಾತ್ರೆಯನ್ನು ಚಾಚಿದರು. ನಾನು ಕೂಡ ಹೊಟ್ಟೆ ತುಂಬಾ ಹಾಲು ಕುಡಿದೆನು. ನಂತರ ಪ್ರವಾದಿಯವರು ﷺ ಮೇಕೆಯ ಕೆಚ್ಚಲ ಬಳಿ ಬಂದು ಮೊದಲಿನ ಹಾಗೆ ಆಗಲಿ ಎಂದು ಹೇಳಿದಾಗ, ಮೇಕೆಯ ಕೆಚ್ಚಲು ಪೂರ್ವ ಸ್ಥಿತಿಗೆ ಮರಳಿತು. 

     ಈ ದೃಶ್ಯವು ಇಬ್'ನು ಮಸ್'ವೂದ್'ರವರ (ರ) ಮನಸ್ಸಿಗೆ ಆಳವಾಗಿ ಪರಿಣಾಮ ಬೀರಿತು. ಅವರು ಇಸ್ಲಾಮ್ ಸ್ವೀಕರಿಸಿದರು. ಅಂದು ಇದ್ದ ಕೇವಲ ಆರು ಜನ ಮುಸ್ಲಿಮರಲ್ಲಿ, ನಾನು ಆರನೇ ವ್ಯಕ್ತಿ ಆಗಿದ್ದೆನು ಎಂದು ಅವರು ಖುದ್ದಾಗಿ ಪರಿಚಯ ಪಡಿಸುತ್ತಿದ್ದರು. 
      ಸಾಮಾನ್ಯ ಎತ್ತರವೂ ಇಲ್ಲದ, ಗಿಡ್ಡ ಮನುಷ್ಯರಾಗಿದ್ದರು ಅವರು. ಒಮ್ಮೆ ಅವರ ಕಾಲಿನ ಪಾದರಕ್ಷೆಯನ್ನು ಕಂಡು ಅವರ ಕೆಲವು ಗೆಳೆಯರು ಗೇಲಿ ಮಾಡಿದಾಗ, ಪ್ರವಾದಿಯವರು ﷺ ಬಂದು ಅಲ್ಲಾಹನಾಣೆ.! ಅವರ ಕಾಲಿನ ಮಹತ್ವವು ನಾಳೆ ಪರಲೋಕದಲ್ಲಿ ಉಹ್'ದ ಪರ್ವತಕ್ಕಿಂತಲೂ ಅಧಿಕ ಭಾರವಾಗಿರುತ್ತದೆ ಎಂದು ಹೇಳಿದ್ದರು. ಜಿಬ್'ರೀಲ್'ರವರು (ಅ) ತಲುಪುಸಿದ ಪವಿತ್ರ ಕುರ್'ಆನನ್ನು ಅದೇ ರೀತಿಯಲ್ಲಿ ಕಲಿಯಬೇಕಾದರೆ, ಇಬ್'ನು ಮಸ್'ವೂದರಿಂದ ಕಲಿಯಿರಿ ಎಂದು ಪ್ರವಾದಿಯವರು ﷺ ಅವರ ಕುರಿತು ಪ್ರಶಂಸಿಸಿದ್ದರು. 

      (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: