Abu Hisham Saquafi

Official Website Of Hafiz Ilyas Saquafi Padaladka

Sunday, August 21, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -67 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು 

   ಪ್ರವಾದಿಯವರು ﷺ ಪ್ರಭೋಧನೆಯ ದಾರಿಯಲ್ಲೇ ಮುಂದುವರಿದರು. ಇಸ್ಲಾಮಿಗೆ ಜನರು ಆಕರ್ಷಿತರಾಗುತ್ತಲೇ ಇದ್ದರು. ಅದೇ ರೀತಿ ಮತ್ತೊಂದು ಭಾಗದಲ್ಲಿ ಶತ್ರುಗಳೂ ಕೂಡ ಬಹಳಷ್ಟು ಷಡ್ಯಂತ್ರಗಳನ್ನು ನಡೆಸುತ್ತಿದ್ದರು. ಕೊನೆಗೆ ಅವರು ಪ್ರವಾದಿಯವರ ﷺ ಚಿಕ್ಕಪ್ಪರಾದ ಅಬೂತ್ವಾಲಿಬರನ್ನು ಭೇಟಿಯಾಗಿ, ಮುಹಮ್ಮದ್'ರಿಗೆ ﷺ ಎಚ್ಚರಿಕೆ ನೀಡಲು ಹೇಳೋಣ, ಎಂದು ತೀರ್ಮಾನಿಸಿದರು. ಹೀಗೆ ಅಬೂತ್ವಾಲಿಬರ ಬಳಿ ಹೋಗಿ ಮಾತುಕತೆ ಆರಂಭಿಸಿದರು. ನೀವು ನಮ್ಮ ನಡುವೆ ಅತ್ಯುನ್ನತ ಸ್ಥಾನ ಪಡೆದ ವ್ಯಕ್ತಿಯಾಗಿರುತ್ತೀರಿ, ನಿಮ್ಮನ್ನು ನಾವು ಸಂಪೂರ್ಣವಾಗಿ ಅಂಗೀಕರಿಸುತ್ತೇವೆ, ಈಗ ನಾವು ಎದುರಿಸುತ್ತಿರುವ ಸಮಸ್ಯೆ ಏನೆಂದು ನಿಮಗೆ ಚೆನ್ನಾಗಿ ಗೊತ್ತಿದೆ ತಾನೇ.? ನಿಮ್ಮ ಅಣ್ಣನ ಮಗ ಆರಂಭಿಸಿದ ಈ ಪ್ರಭೋಧನೆಯಿಂದ ನಮ್ಮೆಲ್ಲರನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಆರಾಧ್ಯ ವಸ್ತುಗಳನ್ನು ವಿರೋಧಿಸಲಾಗುತ್ತಿದೆ, ನಮ್ಮ ಪೂರ್ವಿಕರನ್ನು ಧಿಕ್ಕರಿಸಲಾಗುತ್ತಿದೆ. ನಿಮಗೂ ಕೂಡ ಇದರಲ್ಲಿ ಬೇಸರವಿದೆ ಎಂದು ನಮಗೆ ತಿಳಿದಿದೆ. ಕಾರಣ ನೀವು ಆ ಧರ್ಮವನ್ನು ಸ್ವೀಕರಿಸಲಿಲ್ಲ ಅಲ್ಲವೇ.? ಒಂದೋ ನೀವು ನಿಮ್ಮ ಅಣ್ಣನ ಮಗನಿಗೆ ಉಪದೇಶ ನೀಡಿರಿ. ಅದು ಆಗದಿದ್ದರೆ ನಮಗೆ ಒಪ್ಪಿಸಿ, ನಾವೇ ಸರಿ ಮಾಡುತ್ತೇವೆ ಎಂದು ಹೇಳಿದಾಗ. ಅಬೂತ್ವಾಲಿಬರು ಅವರನ್ನು ಸಮಾಧಾನ ಪಡಿಸಿ ಅವರನ್ನು ಮರಳಿ ಕಳುಹಿಸಿದರು. 

    ಪ್ರವಾದಿಯವರು ﷺ ತಮ್ಮ ಪ್ರಭೋಧನೆಯನ್ನು ಮುಂದುವರಿಸಿದರು. ಖುರೈಷಿಗಳು ಪ್ರವಾದಿಯವರ ﷺ ಕುರಿತು ಸುಳ್ಳು ಆರೋಪಗಳನ್ನು ಹೊರಿಸ ತೊಡಗಿದರು. ಪ್ರವಾದಿಯವರನ್ನು ﷺ ವಿರೋಧಿಸಲು ವ್ಯತ್ಯಸ್ಥವಾದ ದಾರಿಗಳನ್ನು ಹುಡುಕುತ್ತಿದ್ದರು. ಮತ್ತೊಮ್ಮೆ ಅಬೂತ್ವಾಲಿಬರನ್ನು ಭೇಟಿಯಾಗೋಣ ಎಂದು ತೀರ್ಮಾನಿಸಿ ಅಬೂತ್ವಾಲಿಬರ ಬಳಿ ತೆರಳಿದರು, ನೀವು ನಮಗೆ ವಯಸ್ಸಿನಲ್ಲೂ, ಘನತೆಯಲ್ಲೂ, ಮನೆತನ ಹಿರಿಮೆಯಲ್ಲೂ ಹಿರಿಯರು. ಆದರೆ ನೀವು ನಿಮ್ಮ ಅಣ್ಣನ ಮಗನನ್ನು ನಿಯಂತ್ರಿಸಲು ಹೇಳಿದಾಗ, ಅದರ ಬಗ್ಗೆ ಗಮನವೇ ಕೊಡುತ್ತಿಲ್ಲ. ಇನ್ನು ನಮಗೆ ಸಹಿಸಲು ಸಾಧ್ಯವಿಲ್ಲ, ನಮ್ಮ ದೇವರುಗಳ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದಾರೆ, ನಮ್ಮ ಪೂರ್ವಿಕರನ್ನು ವಿರೋಧಿಸುತ್ತಿದ್ದಾರೆ. ಇದೆಲ್ಲವನ್ನು ನಿಮಗೆ ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ ಹೇಳಿ ನಾವೇ ನಿಯಂತ್ರಣ ಮಾಡುತ್ತೇವೆ. ಇನ್ನೂ ಇದು ಯಾವುದೇ ಕಾರಣಕ್ಕೂ ಮುಂದುವರಿಯಲೇ ಬಾರದು. ಎರಡರಲ್ಲಿ ಒಂದು ತೀರ್ಮಾನ ಆಗಲೇ ಬೇಕು ಎಂದು ಹೇಳಿದರು.

    ಈ ಮಾತನ್ನು ಕೇಳಿದ ಅಬೂತ್ವಾಲಿಬರಿಗೆ ಬಹಳ ಬೇಸರವಾಯಿತು. ಊರಿನ ಗಣ್ಯರ ವಿರೋಧವು, ಅವರ ಮನಸ್ಸಿಗೆ ಬಹಳಷ್ಟು ನೋವುಂಟುಮಾಡಿತು. ಜೊತೆಯಲ್ಲಿ ಮುಹಮ್ಮದ್ ﷺ ಮಗನ ಆದರ್ಶವನ್ನು ಹಿಂಬಾಲಿಸುವುದರ ಕುರಿತು ಹಾಗೂ ಅದನ್ನು ವಿರೋಧಿಸೂದರ ಕುರಿತೂ ಅಬೂತ್ವಲಿಬರು ಬಹಳಷ್ಟು ಚಿಂತಿತರಾದರು. ಏನೇ ಇರಲಿ ಮುಹಮ್ಮದ್'ರನ್ನು ﷺ ಮಾತುಕತೆ ನಡೆಸಲು ಕರೆಸೋಣ ಎಂದು, ಪ್ರವಾದಿಯವರ ﷺ ಬಳಿ ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಅವರು ಬಂದಾಗ, ಮಗನೇ ಊರಿನ ಗಣ್ಯರು ಬಂದು ನನ್ನ ಭೇಟಿಯಾಗಿ ಹೋದರು. ಎಲ್ಲಾ ವಿಷಯವನ್ನು ನನ್ನಲ್ಲಿ ತಿಳಿಸಿ ಹೋದರು, ನನ್ನಿಂದ ಸಾಧ್ಯವಾಗದ ಕೆಲಸವನ್ನು ಮಾಡಿಸದಿರು ಮಗನೇ ಎಂದು ಅಬೂತ್ವಲಿಬರು, ಪ್ರವಾದಿಯವರಲ್ಲಿ ﷺ ಬಹಳ ವಿನಮ್ರವಾಗಿ ಹೇಳಿಕೊಂಡರು.
     ಅಬೂತ್ವಾಲಿಬರ ಮಾತಿನಲ್ಲಿ ಎದ್ದು ಕಾಣುತ್ತಿದ್ದ, ಒತ್ತಡ ಅಸಹಾಯಕತೆಯೂ ಪ್ರವಾದಿಯವರಿಗೆ ﷺ ಅರ್ಥವಾಗಿತ್ತು. ತಕ್ಷಣವೇ ಪ್ರವಾದಿಯವರು ﷺ, ಅವರು ನನ್ನ ಬಲ ಕೈಯಲ್ಲಿ ಸೂರ್ಯನನ್ನೂ, ಎಡ ಕೈಯಲ್ಲಿ ಚಂದ್ರನನ್ನು ಕೊಡುತ್ತೇನೆ ಎಂದು ಹೇಳಿದರೂ ಕೂಡ, ನಾನು ನನ್ನ ಜವಾಬ್ದಾರಿಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಒಂದೋ ಈ ಆದರ್ಶವು ಜಯಶಾಲಿ ಆಗಬೇಕು, ಅಲ್ಲದಿದ್ದರೆ ಮರಣದವರೆಗೂ ನಾನು ಈ ಆದರ್ಶದಲ್ಲೇ ಗಟ್ಟಿಯಾಗಿ ನಿಲ್ಲುವೆನು ಎಂದು ಹೇಳಿ, ಪ್ರವಾದಿಯವರು ﷺ ಅಲ್ಲಿಂದ ಹೊರಗೆ ಬಂದರು. ತಕ್ಷಣವೇ ಅಬೂತ್ವಾಲಿಬರು ಪ್ರವಾದಿಯವರನ್ನು ಪುನಃ ಕರೆದು, ಮಗನೇ ನೀವು ನಿಮ್ಮ ಆದರ್ಶದಲ್ಲೇ ಮುಂದೆ ಸಾಗಿರಿ, ನಾನು ಯಾರಿಗೂ ನಿಮ್ಮನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿ ಅಬೂತ್ವಾಲಿಬರು ಈ ರೀತಿ ಹಾಡಿದರು. 

      (ವಲ್ಲಾಹಿ ಲನ್ ಯಸ್ವಿಲೂ ಇಲೈಕ...)
"ಅಲ್ಲಾಹನ ಮೇಲಾಣೆಗೂ ಅವರು ಗುಂಪಾಗಿ ಬಂದರೂ
     ಬಿಟ್ಟು ಕೊಡುವುದಿಲ್ಲ ಶರೀರದಲ್ಲಿ ಜೀವ ಇರುವವರೆಗೂ
    ಉದಾಸೀನ ತೋರಿಸಿದರೆ ಮುಂದೆ ಹೋಗಿರಿ
    ಸಂತೋಷದಿಂದ ಕಣ್ಣುಗಳಲ್ಲಿ ಆನಂದಬಾಷ್ಪ ಬರುವವರೆಗೂ
    ನನ್ನನ್ನೂ ಕೂಡ ಆಹ್ವಾನಿಸಿದರು ಸದುದ್ದೇಶದಿಂದ  
     ನೀವು ಸರಿಯಾಗಿರುವಿರಿ ಕಾರಣ ನೀವು ಅಲ್ ಅಮೀನಲ್ಲವೇ
    ಆದರೆ ನನಗೆ ಅಪಹಾಸ್ಯದ ಭಯ ಇರದೇ ಇರುತ್ತಿದ್ದಿದ್ದರೆ
    ನಾನು ಕೂಡ ಅಂಗೀಕರಿಸುತಿದ್ದೆ ಈ ಸತ್ಯವನ್ನು."

       ಅಬೂತ್ವಾಲಿಬರ ಈ ತೀರ್ಮಾನದಿಂದ ಖುರೈಷಿಗಳಿಗೆ ತೃಪ್ತಿಯಾಗಿರಲಿಲ್ಲ. ಅವರು ಮತ್ತೊಂದು ಅಭಿಪ್ರಾಯದೊಂದಿಗೆ ಪುನಃ ಭೇಟಿಯಾಗಲು ಅಬೂತ್ವಾಲಿಬರ ಬಳಿ ತಲುಪಿದರು. 

    (ಮುಂದುವರಿಯುವುದು...) 


اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: