ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಮರುದಿನವೂ ಕೂಡ ಅವರು ಅದೇ ರೀತಿ ಯಾರಿಗೂ ತಿಳಿಯದ ಹಾಗೆ ಕುರ್'ಆನ್ ಕೇಳಲು ಬಂದಿದ್ದರು. ಆದರೆ ಮರಳಿ ಹೋಗುವಾಗ ಮಾತ್ರ ಪುನಃ ಭೇಟಿಯಾದರು. ಕಳೆದ ದಿನ ಹೇಳಿದ ಹಾಗೆ ಇವತ್ತೂ ಕೂಡ ಹೇಳಿ ಅಲ್ಲಿಂದ ಹೊರಟರು.
ಮೂರನೇ ದಿನವೂ ಕೂಡ ಇದೇ ರೀತಿ ಪುನರಾವರ್ತನೆಯಾಗಿತ್ತು. ಅವರು ಪರಸ್ಪರ, ಇನ್ನು ಇದು ಯಾವುದೇ ಕಾರಣಕ್ಕೂ ಮುಂದುವರಿಯಲೇ ಬಾರದು, ನಾವು ಒಪ್ಪಂದ ಮಾಡಿದರೆ ಅದನ್ನು ಖಂಡಿತ ಪಾಲಿಸಬೇಕು ಎಂದು ಹೇಳಿ ಅಲ್ಲಿ ಹೊರಟು ಹೋದರು. ಮರುದಿನ ಅಖ್'ನಸ್ ತನ್ನ ಊರುಗೋಲು ತೆಗೆದುಕೊಂಡು ನೇರವಾಗಿ ಅಬುಸೂಫಿಯಾನ್'ರ ಮನೆಕಡೆ ಹೊರಟರು. ಅವರನ್ನು ಭೇಟಿಯಾಗಿ, ನಿಮಗೆ ಮುಹಮ್ಮದ್'ರಿಂದ ﷺ ಕೇಳಿದ ಕುರ್'ಆನಿನ ಕುರಿತು ಏನು ಅನಿಸುತ್ತದೆ ಎಂದು ಕೇಳಿದರು. ಅದಕ್ಕೆ ಅಬೂಸುಫಿಯಾನ್ ನಿಮಗೆ ಏನು ಅನಿಸುತ್ತದೆ ಎಂದು ತಿರುಗಿ ಅವರಲ್ಲೇ ಕೇಳಿದರು. ಅದಕ್ಕೆ ಅಖ್'ನಸ್ ನನಗೆ ಅದು ಸತ್ಯವಾಗಿರಬಹುದು ಎಂದು ಅನಿಸುತ್ತದೆ ಎಂದು ಹೇಳಿದರು. ಅಬೂಸುಫಿಯಾನ್ ಮಾತು ಮುಂದುವರಿಸುತ್ತಾ, ನನಗೆ ಅದರಲ್ಲಿ ಕೆಲವೊಂದು ಚೆನ್ನಾಗಿ ಅರ್ಥ ಆಗಿದೆ. ಕೆಲವೊಂದರ ಅನುವಾದದಲ್ಲಿ ಸಂಶಯವಿದೆ, ಇನ್ನೂ ಕೆಲವೊಂದಂತೂ ಅರ್ಥವೇ ಆಗಲಿಲ್ಲ ಎಂದು ಹೇಳಿದಾಗ, ಅಖ್'ನಸ್ ಕೂಡ ನನಗೂ ಅದೇ ರೀತಿ ಅನಿಸಿದೆ ಎಂದು ಹೇಳಿದರು.
ನಂತರ ಅಲ್ಲಿಂದ ಅಖ್'ನಸ್ ಅಬೂಜಹಲಿನ ಮನೆಗೆ ತೆರಳಿದರು. ಅವರೊಂದಿಗೆ ನಿನ್ನೆ ಮುಹಮ್ಮದ್'ರ ﷺ ಕುರ್'ಆನ್ ಪಠನೆ ಕೇಳಿದ ನಿಮಗೆ ಅದರ ಬಗ್ಗೆ ಏನು ಅನಿಸುತ್ತದೆ ಎಂದು ಕೇಳಿದರು. ಅದಕ್ಕೆ ಅಬೂಜಹಲ್, ನಮಗೂ ಅಬ್ದುಮನಾಫಿನ ಕುಟುಂಬಕ್ಕೂ (ಪ್ರವಾದಿಯವರ ﷺ ಕುಟುಂಬ) ಹಿಂದಿನಿಂದಲೂ ಸ್ಪರ್ಧೆಯಲ್ಲಿರುವ ಕುದುರೆಯ ಹಾಗೆ ಸ್ಪರ್ಧೆ ನಡೆಯುತ್ತಲೇ ಇರುತ್ತದೆ. ಅವರೇನೇ ಮಾಡಲು ಪ್ರಯತ್ನಿಸಿದರೂ ನಾವೂ ಕೂಡ ಅದನ್ನು ಮಾಡಲು ಮುಂದಾಗುತ್ತೇವೆ. ಹೀಗಿರುವಾಗ ಅಬ್ದುಮನಾಫಿನ ಕುಟುಂಬದ ಒಬ್ಬ ವ್ಯಕ್ತಿಗೆ ಉನ್ನತ ಪದವಿ ಲಭಿಸಿತು, ಪ್ರವಾದಿತ್ವ ಲಭಿಸಿತು ಎಂದು ಹೇಳಿದರೆ ನಾನು ಅದನ್ನು ಯಾವುದೇ ಕಾರಣಕ್ಕೂ ಅಂಗೀಕರಿಸುವುದಿಲ್ಲ ಎಂದು ಹೇಳಿದರು.
ಮೂವರಿಗೂ ಖುರ್'ಆನ್ ಅಲೌಕಿಕವಾಗಿದೆ ಎಂದೂ, ಪ್ರವಾದಿತ್ವ ಸತ್ಯವಾಗಿದೆ ಎಂದು ಅರ್ಥವಾಗಿತ್ತು, ಆದರೆ ಅವರ ಸ್ವಂತ ಹಿತಾಸಕ್ತಿಯಿಂದ ಅವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲಿ ಹೆಚ್ಚು ಕಟ್ಟುನಿಟ್ಟು ಪಾಲಿಸಿದ್ದು ಅಬೂಜಹಲ್ ಆಗಿದ್ದರು. ಅವರು ಕೊನೆಯವರೆಗೂ ವಿರೋಧಿಸುತ್ತಲೇ ಬದ್'ರ್ ಯುದ್ಧದಲ್ಲಿ ಕೊಲೆಯಾದರು. ಅಬೂಸುಫಿಯಾನ್ ಮಕ್ಕಾವಿಜಯದ ಸಂದರ್ಭದಲ್ಲಿ ಇಸ್ಲಾಮ್ ಸ್ವೀಕರಿಸಿದರು. ಅಖ್'ನಸ್ ಕೂಡ ಇಸ್ಲಾಂ ಸ್ವೀಕರಿಸಿದ್ದರು ಎನ್ನುವ ಅಭಿಪ್ರಾಯವೂ ಇದೆ.
ಅಬೂಜಹಲ್'ನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಒಂದು ಘಟನೆಯನ್ನು ಇಬ್'ಕಸೀರ್'ರವರು ◌ؓ ಉಲ್ಲೇಖಿಸಿದ್ದಾರೆ. ಮುಗೀರತ್ ಬಿನ್ ಶುಅಬ ◌ؓ ಎಂಬ ಸ್ವಾಹಾಬಿಯವರು ವಿವರಿಸುವುದು ಈ ರೀತಿಯಾಗಿದೆ. ನನಗೆ ಇಸ್ಲಾಮಿನ ಕುರಿತು ಕಲಿಯುವ ಮೊದಲ ಅವಕಾಶ ಸಿಕ್ಕಿದ್ದೂ ಕೂಡ ಇಲ್ಲಿಯೇ ಆಗಿತ್ತು, ನಾನು ಅಬೂಜಹಲರ ಜೊತೆಯಲ್ಲಿ ಮಕ್ಕಾದ ಒಂದು ಸಣ್ಣ ದಾರಿಯಲ್ಲಿ ಹೋಗುತ್ತಿದ್ದ ಸಂದರ್ಭವಾಗಿತ್ತು ಅದು. ಅದೇ ಸಂದರ್ಭದಲ್ಲಿ ಪ್ರವಾದಿಯವರು ﷺ ನಮ್ಮನ್ನು ಭೇಟಿಯಾದರು. ಅವರು ಅಬೂಜಹಲ್'ರ ಬಳಿ ಬಂದು , ಓ ಅಬುಲ್'ಹಕಮ್ ನಾನು ನಿಮ್ಮನ್ನು ಅಲ್ಲಾಹನ ಕಡೆಗೆ ಆಹ್ವಾನ ನೀಡುತ್ತಿದ್ದೇನೆ, ಹಾಗಾಗಿ ಬನ್ನಿ ಈ ಸುಂದರ ಸಿದ್ಧಾಂತಕ್ಕೆ ಎಂದು ಹೇಳಿದರು. ಅದಕ್ಕೆ ಅಬೂಜಹಲ್, ಓ ಮುಹಮ್ಮದ್'ರೇ ﷺ ನೀವು ನಮ್ಮ ದೇವರುಗಳನ್ನು ವಿರೋಧಿಸುವುದು ನಿಲ್ಲಿಸುತ್ತೀರ.? ಮತ್ತೇ, ನಾವು ನಿಮಗೆ ಪ್ರವಾದಿತ್ವದ ಜವಾಬ್ದಾರಿ ಸಿಕ್ಕಿದೆ ಎನ್ನುವುದನ್ನು ಮಾತ್ರ ಒಪ್ಪಿಕೊಳ್ಳಬೇಕು ಅಲ್ವಾ.? ಅಲ್ಲಾಹನ ಮೇಲಾಣೆ.! ನನಗೆ ನೀವು ಹೇಳುವುದು ಸತ್ಯ ಎಂದು ಯಾವಾಗ ಅನಿಸುತ್ತೋ ಅಂದು ಖಂಡಿತ ನಿಮ್ಮನ್ನು ಒಪ್ಪಿಕ್ಕೊಳ್ಳುತ್ತೇನೆ ಎಂದು ಹೇಳಿದಾಗ, ಪ್ರವಾದಿಯವರು ﷺ ಅಲ್ಲಿಂದ ಹೊರಟು ಹೋದರು. ತಕ್ಷಣವೇ ನನ್ನ ಮುಖ ನೋಡುತ್ತಾ, ಅಲ್ಲಾಹನಾಣೆಗೂ ಮುಹಮ್ಮದ್ ﷺ ಹೇಳುವುದು ಸತ್ಯ ಎಂದು ನನಗೆ ಗೊತ್ತಿದೆ. ಆದರೆ, ಬನೂ ಕುಸಯ್ಯ್ ಕಅಬಾಲಯದ ಕೀಲಿಯ ಪಾಲಕರು ಅವರಾಗಬೇಕು ಎಂದು ಹೇಳಿದ್ದಾಗ, ನಾವು ಅದಕ್ಕೆ ಒಪ್ಪಿಗೆ ನೀಡಿದ್ದೆವು. ಆಮೇಲೆ ಅವರು, "ನದ್'ವ" ಅಥವಾ ಮೀಟಿಂಗ್'ನ ನಾಯಕತ್ವವೂ ನಮಗೆಯೇ ಬೇಕು ಅಂದಾಗಲೂ, ನಾವು ಅದಕ್ಕೆ ಒಪ್ಪಿಗೆ ನೀಡಿದ್ದೆವು. ನಂತರ ಧ್ವಜಾರೋಹಣದ ಉಸ್ತುವಾರಿತ್ವವು ನಮಗೆ ಬೇಕು ಅಂದಾಗಲೂ ನಾವು ಅದಕ್ಕೂ ಒಪ್ಪಿಗೆ ನೀಡಿದ್ದೆವು. ನಂತರ ಅವರು ಯಾತ್ರಾರ್ಥಿಗಳಿಗೆ ಔತಣಕೂಟವನ್ನು ಏರ್ಪಡಿಸಿದ್ದರು, ನಾವು ಕೂಡ ಏರ್ಪಡಿಸಿದೆವು. ಹೀಗೆ ಪ್ರತಿಯೊಂದರಲ್ಲೂ ಸ್ಪರ್ಧೆ ನಡೆಸುತ್ತಿರುವ ನಮ್ಮೊಂದಿಗೆ, ಇನ್ನು ಈ ಪ್ರವಾದಿತ್ವದ ಪದವಿಯೂ ಕೂಡ ಅವರಿಗೆಯೇ ಸಿಕ್ಕಿದೆ ಎಂದು ಹೇಳುವಾಗ ಮನಸ್ಸು ಒಪ್ಪುತ್ತಿಲ್ಲ ಎಂದು ಅಬೂಜಹಲ್ ಹೇಳಿದರು. ಇದಾಗಿತ್ತು ಅಬೂಜಹಲ್'ನ ಸಮಸ್ಯೆ, ಅಸೂಯೆ ಹಾಗೂ ಸ್ಪರ್ಧಾತ್ಮಕ ಬುದ್ದಿ ಆದರೆ ಇದಕ್ಕೆ ಔಷಧವೇ ಇಲ್ಲ.
ಆಧುನಿಕ ಯುಗದ ವಿಮರ್ಶೆಕಾರರು, ಇಸ್ಲಾಮನ ಕುರಿತು ವಿಮರ್ಶೆಗಳನ್ನು ಉದ್ಧರಿಸುವುದು ಸೈದ್ಧಾಂತಿಕವಾದ ಚರ್ಚೆ ನಡೆಸುವ ಉದ್ದೇಶದಿಂದ ಅಲ್ಲ. ಬದಲಾಗಿ ಇಸ್ಲಾಮಿನ ವಿರುದ್ಧ ಟೀಕಿಸಲು, ಹಾಗೂ ಆಧಾರ ರಹಿತ ಆರೋಪಿಗಳನ್ನು ಮಾಡುವ ಉದ್ದೇಶದಿಂದಾಗಿದೆ. ಇಸ್ಲಾಮಿನ ನ್ಯಾಯ, ನೀತಿ, ಪ್ರಾಮಾಣಿಕತೆ ಅವರನ್ನು ಬಹಳಷ್ಟು ಕಾಡುತ್ತಿದೆ ಎಂಬುದಾಗಿದೆ ಇದರ ಪ್ರಮುಖ ಕಾರಣ.
ಬಹಳಷ್ಟು ಪರೀಕ್ಷೆಗಳನ್ನು ಎದುರಿಸಿ, ಸುಮಾರು ಹದಿನೈದು ಶತಮಾನಗಳನ್ನು ದಾಟಿ ಬಂದ ಇಸ್ಲಾಮನ್ನು ಈಗ ಸುಲಭವಾಗಿ ಬೇಟೆಯಾಡಬಹುದು ಎಂದು ಅಂದುಕೊಂಡಿದ್ದರೆ, ಅದು ಅವರಿಗೆ ಇಸ್ಲಾಮಿನ ಇತಿಹಾಸದ ಕುರಿತು ಜ್ಞಾನದ ಕೊರತೆಯಿದೆ ಎಂದು ಮಾತ್ರವೇ ಹೇಳಲು ಸಾಧ್ಯ.
ಖುರ್'ಆನಿನ ಸಾರ ಹಾಗೂ ಅದರ ಕಾಂತಿಯನ್ನು ಅರ್ಥೈಸಿಕೊಂಡ ಮತ್ತೊಂದು ಖುರೈಷಿ ನಾಯಕನ ಕುರಿತು ನಾವು ತಿಳಿಯೋಣ...
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment