Abu Hisham Saquafi

Official Website Of Hafiz Ilyas Saquafi Padaladka

Saturday, September 10, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -85 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
 
    ಗಂಡನಿಗೆ ಹೊಡೆಯುತ್ತಿರುವುದನ್ನು ಕಂಡು, ತಕ್ಷಣವೇ ಫಾತಿಮ ◌ؓ ಬಂದು ಉಮರನ್ನು ತಡೆದರು. ಆಗ ಉಮರ್ ಅವರಿಗೂ ಕೂಡ ಹೊಡೆದರು. ಉಮರ್ ಹೊಡೆದ ಏಟಿಗೆ ರಕ್ತ ಬರುತಿತ್ತು. ಫಾತಿಮ ◌ؓ ಹಾಗೂ ಸಈದ್ ◌ؓ ಒಂದೇ ಧ್ವನಿಯಲ್ಲಿ ನಾವಿಬ್ಬರೂ ಇಸ್ಲಾಂ ಸ್ವೀಕರಿಸಿದ್ದೇವೆ, ನಾವು ಅಲ್ಲಾಹು ಹಾಗೂ ಅವನ ಪ್ರವಾದಿಯವರನ್ನು ﷺ ಅಂಗೀಕರಿಸುತ್ತೇವೆ, ನಿಮಗೆ ಇಷ್ಟಬಂದದ್ದು ಮಾಡಿ, ಎಂದು ಹೇಳಿದರು. 

    ತಂಗಿಯ ಮುಖದ ಮೇಲಿದ್ದ ರಕ್ತವನ್ನು ಕಂಡು ಉಮರಿಗೆ ತುಂಬಾ ಬೇಸರವಾಯಿತು. ನಂತರ ಕುತೂಹಲದಿಂದ ನೀವು ಏನೋ ಓದುತಿದ್ದೀರಿ ಅಲ್ವಾ, ಏನದು.? ಎಲ್ಲಿದೆ ಆ ಫಲಕ.? ನಾನೊಮ್ಮೆ ಅದನ್ನು ಓದಿ ನೋಡಲೇ ಮುಹಮ್ಮದ್ ﷺ ಏನನ್ನು ಕಲಿಸುತ್ತಿದ್ದಾರೆ ಎಂದು.? ಉಮರ್ ಓದು ಬರಹ ತಿಳಿದಿದ್ದ ವ್ಯಕ್ತಿಯಾಗಿದ್ದರು. ಅದಕ್ಕೆ ಅವರ ತಂಗಿ, ನಿಮಗೆ ನೀಡಲು ಹೆದರಿಕೆ ಆಗುತ್ತಿದೆ. ಒಂದೇ ವೇಳೆ ನೀವು ಅದನ್ನು ನಾಶ ಮಾಡಿದರೆ ಎಂದು ಹೇಳಿದಾಗ, ಇಲ್ಲ ಖಂಡಿತ ಇಲ್ಲ,  ನೀವು ಹೆದರಬೇಡಿ, ದೇವರಾಣೆಗೂ ನಾನು ನಿಮಗೆ ತಿರುಗಿ ಕೊಡುತ್ತೇನೆ ಎಂದು ಹೇಳಿದರು. ಉಮರ್'ರವರ ಮನಸ್ಸಿನ ಬದಲಾವಣೆಯನ್ನು ಗಮನಿಸಿದ ಫಾತಿಮ ◌ؓ, ಅದನ್ನು ಹಾಗೆ ನೀಡಲು ಸಾಧ್ಯವಿಲ್ಲ. ಶುದ್ಧಿಯಿದ್ದಾಗ ಮಾತ್ರವೇ ಅದನ್ನು ನೀಡಲು ಆಗುವುದು, ಹಾಗಾಗಿ ನೀವು ಶುದ್ದಿಯಾಗಿ ಬನ್ನಿ ಆಮೇಲೆ ನೀಡುತ್ತೇನೆ ಎಂದು ಹೇಳಿದರು. ಉಮರ್ ಸ್ನಾನ ಮಾಡಿ ಶುದ್ದಿಯಾಗಿ ಬಂದ ನಂತರ ಅವರ ತಂಗಿ ಫಾತಿಮ ಖುರ್'ಆನ್ ಬರೆದ ಫಲಕವನ್ನು ನೀಡಿದರು. ತ್ವಾಹ ಅಧ್ಯಾಯವಾಗಿತ್ತು ಅದು, ಉಮರ್ ಮನಸ್ಸಿಟ್ಟು ಅದನ್ನು ಓದಲು ಆರಂಭಿಸಿದರು. ವಾಹ್ ಎಂತಹ ಅದ್ಬುತ ವಾಕ್ಯ, ಎಷ್ಟೊಂದು ಶ್ರೇಷ್ಠವಾದ ಗ್ರಂಥ ಎಂದು ಹೇಳಿದರು. 

    ಇನ್ನೊಂದು ಉಲ್ಲೇಖದ ಪ್ರಕಾರ, ಅಲ್ ಹದೀದ್ ಅಧ್ಯಾಯದ ಏಳನೇ ಸೂಕ್ತದವರೆಗೆ ಓದಿದರು, ಅದರ ಅನುವಾದ ಈ ರೀತಿಯಾಗಿದೆ. "ಅಲ್ಲಾಹನಲ್ಲೂ, ಅವನ ಪ್ರವಾದಿಯವರಲ್ಲೂ ﷺ ವಿಶ್ವಾಸ ಇರಿಸಿರಿ. ಅವನು ನಿಮ್ಮನ್ನು ಯಾವ ಸಂಪತ್ತಿನ ಮೇಲೆ ವರಿಸುದಾರನ್ನನಾಗಿ ಮಾಡಿರುವನೋ, ಅವುಗಳಿಂದಲೇ ನೀವು ಖರ್ಚು ಮಾಡಿರಿ." ಈ ಸೂಕ್ತದ ವರೆಗೆ ಓದಿ ಮುಗಿಸಿದ್ದೇ ತಡ ಉಮರ್'ರವರು ◌ؓ ತಾನು ಇಸ್ಲಾಮ್ ಸ್ವೀಕರಿಸಿದ್ದಾಗಿ ಘೋಷಣೆ ಮಾಡಿದರು. 'ಅಶ್'ಹದು ಅನ್ ಲಾಯಿಲಾಹ ಇಲ್ಲಲ್ಲಾಹ್, ವಅಶ್'ಹದು ಅನ್ನ ಮುಹಮ್ಮದ್ ﷺ ರಸೂಲುಲ್ಲಾಹ್' (ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲ, ಮುಹಮ್ಮದ್'ರು ﷺ ಅವನ ಪ್ರವಾದಿ ಆಗಿರುವರು, ಎಂದು ನಾನು ಸಾಕ್ಷಿ ವಹಿಸುತ್ತೇನೆ.)

     ಅದನ್ನು ಕೇಳಿದ್ದೆ ತಡ, ಅಡಗಿ ಕುಳಿತಿದ್ದ ಖಬ್ಬಾಬ್ ◌ؓ ಹೊರಗೆ ಬಂದು, ಓ ಉಮರ್'ರವರೇ ನಿಮಗೆ ಪ್ರವಾದಿಯವರ ﷺ ಪ್ರತ್ಯೇಕವಾದ ಪ್ರಾರ್ಥನೆ ಲಭಿಸಿರುತ್ತದೆ, ನಿನ್ನೆ ಪ್ರವಾದಿಯವರು ﷺ ನಿಮಗಾಗಿ ಪ್ರಾರ್ಥನೆ ಮಾಡಿದ್ದನ್ನು ನಾನೇ ಖುದ್ದಾಗಿ ಕೇಳಿದ್ದೆನು. ಅಲ್ಲಾಹನೇ ಅಬುಲ್'ಹಕಮ್ (ಅಬೂಜಹಲ್) ಅಥವಾ ಉಮರ್ ಬಿನ್ ಖತ್ವಾಬ್ ಇಬ್ಬರಲ್ಲಿ ಯಾರಾದ್ರೂ ಒಬ್ಬರ ಮೂಲಕವಾದ್ರೂ ನೀನು ಇಸ್ಲಾಮನ್ನು ಶಕ್ತಿಗೊಳಿಸು ಎಂದು ಪ್ರಾರ್ಥಿಸಿದ್ದರು, ಉಮರ್'ರವರೇ ◌ؓ ಅಲ್ಲಾಹನು ನಿಮ್ಮನ್ನು ಆಯ್ಕೆ ಮಾಡಿರುವನು ಎಂದು ಹೇಳಿದರು. 

    ಈ ಘಟನೆಯ ಕುರಿತು ಇನ್ನೊಂದು ಉಲ್ಲೇಖವು ಈ ರೀತಿಯಾಗಿದೆ. ಉಮರ್ ◌ؓ ಖಬ್ಬಾಬ್'ರನ್ನು ◌ؓ ಕರೆದು, ಮುಹಮ್ಮದ್'ರು ﷺ ಎಲ್ಲಿದ್ದಾರೆ.? ನನಗೆ ನೇರವಾಗಿ ಅವರ ಮುಂದೆಯೇ ಇಸ್ಲಾಮ್ ಸ್ವೀಕರಿಸಬೇಕು ಎಂದು ಹೇಳಿದಾಗ, ಖಬ್ಬಾಬ್ ◌ؓ, ಪ್ರವಾದಿಯವರು ﷺ ಅವರ ಅನುಯಾಯಿಗಳ ಜೊತೆಯಲ್ಲಿ ಸ್ವಫಾ ಪರ್ವತದ ಬಳಿಯಿರುವ ಮನೆಯಲ್ಲಿದ್ದಾರೆ ಎಂದು ಹೇಳಿದರು. ಉಮರ್ ◌ؓ ನೇರವಾಗಿ ಅಲ್ಲಿ ಹೋಗಿ, ದಾರುಲ್ ಅರ್'ಖಮಿನ ಬಾಗಿಲು ತಟ್ಟಿದರು. ಬಾಗಿಲು ತೆರೆಯಲು ಬಂದ ವ್ಯಕ್ತಿ, ಕಿಟಕಿಯಿಂದ ಉಮರನ್ನು ◌ؓ ಕಂಡ ಕೂಡಲೇ ಓಡಿ ಹೋಗಿ ಪ್ರವಾದಿಯವರಿಗೆ ﷺ ವಿಷಯ ತಿಳಿಸಿದರು. ಓ ಪ್ರವಾದಿಯವರೇ, ಹರಿತವಿರುವ ಖಡ್ಗದ ಜೊತೆಯಲ್ಲಿ ಉಮರ್ ಹೊರಗೆ ನಿಂತಿರುವರು ಎಂದು ಹೇಳಿದಾಗ, ಪಕ್ಕದಲ್ಲೇ ಭಯದಿಂದ ನಡುಗುತ್ತಿದ್ದ ಅನುಯಾಯಿಗಳಲ್ಲಿ, ಹಂಝರವರು ಹೆದರಬೇಡಿ, ಅವರು ಒಳಗೆ ಬರಲಿ, ಅವರ ಉದ್ದೇಶ ಒಳ್ಳೆದಾಗಿದ್ದರೆ ಅವರಿಗೆ ಸ್ವಾಗತ, ಅದಲ್ಲ ದುರುದ್ದೇಶ ಏನಾದರೂ ಆಗಿದ್ದಲ್ಲಿ, ಅವರ ಖಡ್ಗದಿಂದಲ್ಲೇ ಅವರಿಗೆ ಪಾಠ ಕಲಿಸುವೆನು ಎಂದು ಹೇಳಿದರು. ಪ್ರವಾದಿಯವರು ﷺ ಬಾಗಿಲು ತೆರೆಯಲು ಅನುಮತಿ ನೀಡಿ, ಅವರು ಒಳಗೆ ಬರಲಿ ಅವರಿಗೆ ಅಲ್ಲಾಹನು ಒಳಿತು ವಿಧಿಸಿದ್ದರೆ,  ಖಂಡಿತ ಅದು ಅವರಿಗೆ ಲಭಿಸುತ್ತದೆ ಎಂದು ಹೇಳಿದರು. 

      ಬಾಗಿಲು ತೆರೆದು, ಉಮರ್ ಬಂದ ತಕ್ಷಣವೇ ಇಬ್ಬರು ಬಂದು, ಅವರ ಕೈಗಳನ್ನು ಎರಡು ಭಾಗದಿಂದ ಗಟ್ಟಿಯಾಗಿ ಹಿಡಿದು ಪ್ರವಾದಿಯವರ ﷺ ಮುಂದೆ ಹೋಗಿ ನಿಲ್ಲಿಸಿದರು. ಪ್ರವಾದಿಯವರು ﷺ ಅವರನ್ನು ಬಿಟ್ಟು ಬಿಡಲು ಹೇಳಿದಾಗ, ಉಮರ್ ಪ್ರವಾದಿಯವರಿದ್ದ ﷺ ಕೋಣೆಯೊಳಗೆ ಹೋದರು. ಅವರು ಒಳಗೆ ಬಂದಾಗ, ಪ್ರವಾದಿಯವರು ﷺ ಎದ್ದು ನಿಂತು, ಇಲ್ಲಿಗೆ ನೀವು ಯಾಕೆ ಬಂದದ್ದು.? ಎಂದು ಕೇಳಿದರು. ಅದಕ್ಕೆ ಉಮರ್ ನಾನು ಅಲ್ಲಾಹನನ್ನೂ, ಅವನ ಪ್ರವಾದಿಯವರನ್ನೂ ﷺ ಅಂಗೀಕರಿಸಲು ಬಂದಿದ್ದೇನೆ ಎಂದು ಹೇಳಿದರು, ಅದನ್ನು ಕೇಳಿದ ತಕ್ಷಣವೇ ಪ್ರವಾದಿಯವರು ﷺ, ಅಲ್ಲಾಹು ಅಕ್'ಬರ್ ಎಂದು ತಕ್'ಬೀರ್ ಉಚ್ಛರಿಸಿದರು. ಅದರೊಂದಿಗೆ ಎಲ್ಲರಿಗೂ ಉಮರ್ ◌ؓ ಇಸ್ಲಾಮ್ ಸ್ವೀಕರಿಸಿದ ವಿಷಯವು ತಿಳಿಯಿತು. ಅವರು ಕೂಡ ತಕ್'ಬೀರ್ ಹೇಳಲು ಆರಂಭಿಸಿದರು. ಮಕ್ಕಾದ ಬೀದಿ ಬೀದಿಗಳಲ್ಲಿ ಅದರ ಶಬ್ದವು ಪ್ರತಿಧ್ವನಿಸಿತ್ತಿತ್ತು, ಅದರೊಂದಿಗೆ ಸತ್ಯ ವಿಶ್ವಾಸಿಗಳ ಧೈರ್ಯವು ಇಮ್ಮಡಿಯಾಯಿತು. ಉಮರ್ ◌ؓ ಹಾಗೂ ಹಂಝ ◌ؓ ಈಗ ನಮ್ಮ ಜೊತೆಯಲ್ಲಿ ಇದ್ದಾರೆ ಎಂದು. 

     (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: