Abu Hisham Saquafi

Official Website Of Hafiz Ilyas Saquafi Padaladka

Saturday, September 10, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -87 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

   ಇಸ್ಲಾಮ್ ಸ್ವೀಕರಿಸಿದ ನಂತರ ಉಮರಿಗೆ ◌ؓ ಒಂದು ಆಗ್ರಹ ಉಂಟಾಯಿತು, ನಾನು ಇಸ್ಲಾಮ್ ಸ್ವೀಕರಿಸಿದ ವಿಷಯವನ್ನು ಅತೀ ಬಲಶಾಲಿ ವ್ಯಕ್ತಿಯ ಮುಂದೆ ನಿಂತು ಹೇಳಬೇಕು ಎಂದು. ಹಾಗಾಗಿ ಮರುದಿನ ಬೆಳಿಗ್ಗೆ ಅಬೂಜಹಲ್'ನ ಮನೆಗೆ ಹೋಗಿ, ಅವರ ಮನೆಯ ಬಾಗಿಲನ್ನು ತಟ್ಟಿದರು. ಬಾಗಿಲ ತೆರದ ಅಬೂಜಹಲ್, ಒಳಗೆ ಬಾ ಉಮರ್◌ؓ, ಏನು ಸಮಾಚಾರ ಯಾಕೆ ಬಂದಿದ್ದು.? ಎಂದು ಕೇಳಿದರು, ಉಮರ್ ◌ؓ, ನಾನು ಅಲ್ಲಾಹನನ್ನು ಹಾಗೂ ಅವನ ಪ್ರವಾದಿಯವರನ್ನು ﷺ ಅಂಗೀಕರಿಸಿದ್ದೇನೆ. ಅಷ್ಟೇ ಅಲ್ಲ ಅವರಿಗೆ ಅವತರಿಸಿದ ಖುರ್'ನನ್ನೂ ಕೂಡ ಅಂಗೀಕರಿಸಿದ್ದೇನೆ ಎಂದು ಹೇಳಿದರು. ಅದನ್ನು ಕೇಳಿದ ಅಬೂಜಹಲ್'ನ ಕೋಪ ನೆತ್ತಿಗೇರಿತು, ನಿನ್ನನ್ನೂ, ನಿನ್ನ ಈ ಆದರ್ಶವನ್ನೂ ದೇವರು ನಾಶಮಾಡಲಿ ಎಂದು ಹೇಳಿ ಕೋಪದಲ್ಲೇ ಬಾಗಿಲು ಹಾಕಿದರು. 

     ಅಲ್ಲೇ ನಿಂತು ಉಮರ್, ಪುನಃ ಆಲೋಚಿಸ ತೊಡಗಿದರು, ಮಕ್ಕಾದಲ್ಲಿ ಅತೀ ವೇಗವಾಗಿ ಸುದ್ದಿ ಹಬ್ಬಿಸುವುದು ಯಾರು.? ತಕ್ಷಣ ನೆನಪಾಯಿತು, ಅದು ಜಮೀಲ್ ಬಿನ್ ಮಅಮರ್ ಅಲ್ವಾ.? ಹಾಗೆ ಅವರ ಬಳಿ ಹೋಗಿ, ನಿಮಗೆ ಒಂದು ವಿಷಯ ಗೊತ್ತಾ.? ನಾನು ಇಸ್ಲಾಮ್ ಸ್ವೀಕರಿಸಿದ್ದೇನೆ. ನಾನು ಮುಹಮ್ಮದ್ ಪ್ರವಾದಿಯವರನ್ನು ﷺ ಅಂಗೀಕರಿಸಿದ್ದೇನೆ ಎಂದು ಹೇಳಿದರು. ಆದರೆ ಆ ವ್ಯಕ್ತಿ ಅದನ್ನು ಕೇಳಿಯೂ ಕೇಳದಂತೆ ಮುಂದೆ ಹೋದರು. ಉಮರ್ ◌ؓ ಅವರನ್ನು ಹಿಂಬಾಲಿಸುತ್ತಾ ಕಅಬಾಲಯದ ಬಳಿ ನಡೆದರು. ಕಅಬಾದ ಬಳಿ ಖುರೈಷಿಗಳು ಹರಟೆ ಹೊಡಿಯುತ್ತಾ ಕುಳಿತಿದ್ದರು. ಅಲ್ಲಿಗೆ ತಲುಪಿದ ಜಮೀಲ್, ಓ ಖುರೈಷಿಗಳೇ ಖತ್ತಾಬಿನ ಮಗ ಉಮರ್ ◌ؓ ಸಾಬಿಯೀ ಆಗಿದ್ದಾನೆ ಎಂದು ಜೋರಾಗಿ ಕೋಗಿ ಹೇಳಿದರು. ಅವರ ಹಿಂದೆ ನಿಂತಿದ್ದ ಉಮರ್ ◌ؓ, ಅದು ಹಾಗೆ ಅಲ್ಲ ನಾನು ಮುಸ್ಲಿಮಾಗಿದ್ದೇನೆ, ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲ, ಮುಹಮ್ಮದ್'ರು ﷺ ಅವನ ಪ್ರವಾದಿ ಆಗಿರುವರೆಂದು ನಾನು ಸಾಕ್ಷಿ ವಹಿಸುತ್ತೇನೆ, ಎಂದು ಘೋಷಣೆ ಮಾಡುವ ರೀತಿಯಲ್ಲಿ ಹೇಳಿದರು. ಅದನ್ನು ಕೇಳಿದ್ದೆ ತಡ ಅಲ್ಲಿದ್ದ ಖುರೈಷಿಗಳೆಲ್ಲರೂ ಅವರ ಹತ್ತಿರ ಓಡಿ ಬಂದು, ಬಹಳಷ್ಟು ವಿಮರ್ಶಿಸಿದರು, ಮದ್ಯಾಹ್ನದವರೆಗೆ ಅದು ಮುಂದುವರಿಯಿತು. ಅಷ್ಟೇ ಅಲ್ಲದೆ ಅವರಿಗೆ ಬಹಳಷ್ಟು ಹೊಡೆದರು. ಎಲ್ಲವನ್ನು ಸಹಿಸುತ್ತಾ ಉಮರ್ ◌ؓ, ಅಲ್ಲಾಹನ ಮೇಲಾಣೆ.! ಒಮ್ಮೆ ನಮ್ಮಲ್ಲಿ ಮುನ್ನೂರು ಜನ ವಿಶ್ವಾಸಿಗಳು ದಾಟಿದರೆ, ಖಂಡಿತ ಅಂದು ನಿಮಗೆ ಈ ರೀತಿ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.

     ಅಷ್ಟೊತ್ತಿಗೆ, ಆ ಸ್ಥಳಕ್ಕೆ ಖುರೈಷಿಯಾದ ಒಬ್ಬರು ವಯಸ್ಸಾದ ವ್ಯಕ್ತಿ ಆಗಮಿಸಿ, ಏನು ವಿಷಯ ಎಂದು ಕೇಳಿದರು. ಅದಕ್ಕೆ ಅಲ್ಲಿರುವವರು ಉಮರ್ ◌ؓ ಸಾಬಿಯೀ ಆಗಿದ್ದಾನೆ ಎಂದು ಹೇಳಿದರು. ಅದನ್ನು ಕೇಳಿದ ಆ ವ್ಯಕ್ತಿ, ಛೇ ಇದೆಂಥ ಕಷ್ಟ.! ಒಬ್ಬ ಯುವಕ, ಆತನ ವೆಯ್ಯುಕ್ತಿಕ ವಿಷಯದಲ್ಲಿ ಒಂದು ತೀರ್ಮಾನ ತೆಗಿದಿದ್ದಾನೆ, ಅದಕ್ಕೆ ನೀವೇನು ಮಾಡುತ್ತಿದ್ದೀರ.? ಅವರ ಬನೂ ಅದಿಯ್ಯ್ ಜನಾಂಗದವರು ಸುಮ್ಮನೆ ಕುಳಿತುಕೊಳ್ಳಬಹುದೆಂದು ನೀವು ಅಂದುಕೊಂಡಿದ್ದೀರ.? ಎಂದು ಹೇಳಿದರು. ಅವರು ಅಷ್ಟು ಹೇಳಿದ್ದೆ ತಡ, ಉಳಿದವರೆಲ್ಲಾ ಕ್ಷಣ ಮಾತ್ರದಲ್ಲಿ ಅಲ್ಲಿಂದ ಹೊರಟು ಹೋದರು. ನಂತರದ ದಿನಗಳಲ್ಲಿ, ಈ ಘಟನೆಯನ್ನು ಉದ್ದೇಶಿಸಿ ಉಮರ್'ರವರ ◌ؓ ಮಗ ಅಬ್ದುಲ್ಲಾಹ್ ತನ್ನ ತಂದೆಯಲ್ಲಿ ಕೇಳಿದ್ದರು. ನೀವು ಅಂದು ಇಸ್ಲಾಮ್ ಸ್ವೀಕರಿಸಿದ ಸಂದರ್ಭದಲ್ಲಿ ಯಾರೋ ಒಬ್ಬರು ಬಂದು ನಿಮ್ಮನ್ನು ರಕ್ಷಿಸಿದ್ರು ಅಲ್ವಾ.? ಅವರು ಯಾರು. ಅದಕ್ಕೆ ಉಮರ್ ◌ؓ, ಅದು ಆಸ್ವ್ ಬಿನ್ ವಾಯಿಲ್ ಅಸ್ಸಹ್ಮಿ ಎಂಬ ವ್ಯಕ್ತಿಯಾಗಿದ್ದರು. ಅವರು ಮರಣ ಹೊಂದಿದ್ದು ಬಹು ದೈವ ವಿಶ್ವಾಸಿಯಾಗಿ ಆಗಿತ್ತು ಎಂದು ಹೇಳಿದರು.  

    ಇಬ್'ನು ಉಮರ್'ರವರಿಂದ ◌ؓ ಇಮಾಮ್ ಬುಖಾರಿಯವರು ◌ؓ ಉಲ್ಲೇಖಿಸಿದ ಮತ್ತೊಂದು ಘಟನೆಯು ಈ ರೀತಿಯಾಗಿದೆ. ಉಮರ್, ಖುರೈಷಿಗಳ ಕೊಲೆ ಬೆದರಿಕೆಯ ಆತಂಕದಲ್ಲಿ ಮನೆಯಲ್ಲೇ ಕೆಲವು ದಿನ ಕಳೆದಿದ್ದರು. ಅವರ ಮನೆಗೆ ಆಸ್ವ್ ಬಿನ್ ವಾಯಿಲ್ ಎನ್ನುವ ವ್ಯಕ್ತಿಯು ಬಂದರು. ಅವರು ಬನೂ ಸಹಮ್ ಜನಾಂಗದ ವ್ಯಕ್ತಿಯಾಗಿದ್ದರು. ಅವರು ಉಮರಿನ ◌ؓ ಬಳಿ ಬಂದು, ಸಮಸ್ಯೆ ಏನೆಂದು ಕೇಳಿದರು. ಅದಕ್ಕೆ ಉಮರ್ ◌ؓ ನಾನು ಮುಸ್ಲಿಮಾದ ಕಾರಣ ನಿಮ್ಮ ಜನತೆಯು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು. ತಕ್ಷಣವೇ ಆಸ್ವ್ ನಾನು ಅವರಲ್ಲಿ ಹೇಳುತ್ತೇನೆ, ಆ ನಂತರ ಯಾರೂ ಕೂಡ ನಿಮಗೆ ತೊಂದರೆ ಕೊಡುವುದಿಲ್ಲ, ಎಂದು ಹೇಳಿ ಅಲ್ಲಿಂದ ಹೊರಗೆ ಹೋದರು. ಅಷ್ಟೊತ್ತಿಗೆ ಕೆಲವು ಜನರು ಉಮರಿನ ◌ؓ ಮನೆ ಕಡೆ ಬರುತಿದ್ದರು. ಅದನ್ನು ಕಂಡ ಆಸ್ವ್ ನೀವೆಲ್ಲಿಗೆ ಹೋಗುತ್ತಿದ್ದೀರಿ.? ಎಂದು ಕೇಳಿದರು. ಅಲ್ಲಿದ್ದ ಜನರು, ನಮಗೆ ಉಮರ್ ◌ؓ ಬೇಕು ಎಂದು ಹೇಳಿದಾಗ, ನೀವು ಉಮರನ್ನು ◌ؓ ಯಾವುದೇ ಕಾರಣಕ್ಕೂ ಮುಟ್ಟಲೂ ಸಾಧ್ಯವಿಲ್ಲ ಎಂದು ಆಸ್ವ್ ಹೇಳಿದರು. ಅದನ್ನು ಕೇಳಿದ, ಜನರೆಲ್ಲರೂ ಹಿಂತಿರುಗಿ ಹೋದರು.  

    ಉಮರ್ ಇಸ್ಲಾಮ್ ಸ್ವೀಕರಿಸಿದ್ದು, ಸತ್ಯ ವಿಶ್ವಾಸಿಗಳಿಗೆ ಬಹಳಷ್ಟು ಸಂತೋಷ ತಂದಿತ್ತು. ಇಬ್'ನು ಮಸ್'ವೂದ್'ರವರು ◌ؓ ಹೇಳುವುದು ಕಾಣಬಹುದು, ಉಮರ್ ◌ؓ ಇಸ್ಲಾಮ್ ಸ್ವೀಕರಿಸುವ ವರೆಗೂ ನಮಗೆ ಕಅಬಾದ ಬಳಿ ಸಾರ್ವಜನಿಕವಾಗಿ ಪ್ರಾರ್ಥಿಸಲು ಸಾಧ್ಯವಾಗುತ್ತಿರಲಿಲ್ಲ. ಇಬ್'ನು ಅಬ್ಬಾಸ್'ರವರು ◌ؓ ಹೇಳುವುದು ಕಾಣಬಹುದು, ಉಮರ್ ◌ؓ ಇಸ್ಲಾಮ್ ಸ್ವೀಕರಿಸಿದ್ದನ್ನು ಕಂಡು ಆಕಾಶವಾಸಿಗಳು ಸಂತೋಷದಿಂದ ನಲಿಯುತ್ತಿದ್ದಾರೆ ಎಂದು ಜಿಬ್'ರೀಲ್ (ಅ) ಬಂದು ಹೇಳಿದ್ದರು.
     ಇಬ್'ನು ಉಮರ್ ◌ؓ ಹೇಳುವುದು ಕಾಣಬಹುದು, ಅಬೂಜಹಲ್ ಹಾಗೂ ಉಮರ್ ಇಬ್ಬರಲ್ಲಿ ನಿನ್ನಿಷ್ಟದ ವ್ಯಕ್ತಿಯಿಂದ ಇಸ್ಲಾಮನ್ನು ಶಕ್ತಿಗೊಳಿಸು ಎಂದು ಪ್ರವಾದಿಯವರು ﷺ ಅಲ್ಲಾಹನಲ್ಲಿ ಪ್ರಾರ್ಥನೆ ನಡೆಸಿದ್ದರು. ಅಲ್ಲಾಹನು ಆಯ್ಕೆ ಮಾಡಿದ್ದು ಉಮರ್'ರವರನ್ನು ಆಗಿತ್ತು. 

     (ಮುಂದುವರಿಯುವುದು...)

 اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: