ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಯುಟೋಪಿಯಕ್ಕೆ ತಲುಪಿದ ಮುಸ್ಲಿಂಗಳನ್ನು ನೇಗಸ್ ಚಕ್ರವರ್ತಿಯು ಬಹಳ ಆದರದಿಂದ ಸ್ವಾಗತಿಸಿದರು. ಉಮರ್ ◌ؓ ಹಾಗೂ ಹಂಝರವರು ◌ؓ ಇಸ್ಲಾಂ ಸ್ವೀಕರಿಸಿದ್ದು, ಮುಸ್ಲಿಮರಿಗೆ ಬಹಳಷ್ಟು ಸಂತೋಷ ನೀಡಿತ್ತು. ಇತರ ಜನಾಂಗಕ್ಕೂ ಇಸ್ಲಾಮ್ ವ್ಯಾಪಿಸಲು ಆರಂಭವಾಯಿತು. ದಿನಗಳು ಕಳೆದಂತೆ ಹೊಸ ಹೊಸ ತಿರುವುಗಳು ಪಡೆಯುತ್ತಿದ್ದವು, ಇದೆಲ್ಲವು ಖುರೈಷಿಗಳಿಗೆ ಕಾಣಲು ಸಾಧ್ಯವಾಗದೇ ಹೊಸ ಷಡ್ಯಂತ್ರಗಳನ್ನು ರೂಪಿಸಲು ಆರಂಭಿಸಿದರು. ಅದರ ಭಾಗವಾಗಿ ಪ್ರವಾದಿಯವರನ್ನು ﷺ ಖುರೈಷಿ ಅಲ್ಲದ ಹೊರಗಿನ ವ್ಯಕ್ತಿಗಳ ಕೈಯಿಂದ ಕೊಲೆ ಮಾಡಿಸಬೇಕು, ಇದರಿಂದ ಆಂತರಿಕ ಕಲಹ ಆಗುವುದನ್ನುತಪ್ಪಿಸಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ, ಬನೂ ಹಾಷಿಂ ಹಾಗೂ ಬನೂ ಮುತ್ತಲಿಬ್ ವಂಶದ ಜನರು ಖಡಾಖಂಡಿತವಾಗಿ ವಿರೋಧಿಸಿದರು.
ಕೊಲೆ ಮಾಡುವ ತಂತ್ರ ಕೈತಪ್ಪಿದಾಗ, ಬಹಿಷ್ಕಾರ ವಿಧಿಸುವ ನಿರ್ಧಾರಕ್ಕೆ ಖುರೈಷಿಗಳು ಬಂದರು. ಅದಕ್ಕೆ ಅವಶ್ಯಕವಾದ ಬಹಿಷ್ಕಾರ ಒಪ್ಪಂದ ಪತ್ರವನ್ನು ಕೂಡ ತಯಾರು ಮಾಡಿದರು. ಇನ್ನುಮುಂದೆ ಬನೂ ಹಾಷಿಂ ಹಾಗೂ ಬನುಲ್ ಮುತ್ವಲಿಬ್ ವಂಶಗಳಿಂದ ಎಲ್ಲರೂ ಅಂತರ ಕಾಯ್ದುಕೊಳ್ಳಬೇಕು, ಅವರಿಂದ ಯಾವುದೇ ವಿವಾಹ ಸಂಬಂಧವನ್ನು ಮಾಡಿಕೊಳ್ಳಬಾರದು, ಅವರಲ್ಲಿ ಯಾವುದೇ ರೀತಿಯ ವಸ್ತುಗಳ ವ್ಯಾಪಾರವೂ ನಡೆಯಬಾರದು, ಅವರಿಗೆ ಯಾವುದೇ ಕನಿಕರ ತೋರಿಸುವುದಾಗಲಿ, ಅಥವಾ ಇತರ ಒಪ್ಪಂದ ಮಾಡುವುದಾಗಲಿ ಯಾವುದೇ ಕಾರಣಕ್ಕೂ ಮಾಡಲೇ ಬಾರದು. ಈ ಬಹಿಷ್ಕಾರ ಮುಹಮ್ಮದ್'ರನ್ನು ﷺ ಕೊಲೆ ಮಾಡಲು ಅನುಮತಿ ನೀಡುವವರೆಗೂ ಮುಂದುವರಿಯಬೇಕು. ಇದಾಗಿತ್ತು ಅವರ ಅಸಹಕಾರ ಒಪ್ಪಂದ, ಅದನ್ನು ಬರೆದು, ಕಅಬಾಲಯಾದ ಒಳಗೆ ಭದ್ರವಾಗಿ ಇಟ್ಟುಕೊಂಡರು. ಈ ಒಪ್ಪಂದವನ್ನು ಬರೆದ ವ್ಯಕ್ತಿಗಳ ಕುರಿತು ಇತಿಹಾಸದಲ್ಲಿ ಹಲವಾರು ಅಭಿಪ್ರಾಯಗಳನ್ನು ಕಾಣಬಹುದು. ಮನ್ಸೂರ್ ಬಿನ್ ಇಕ್'ರಿಮ, ನಳ್'ರ್ ಬಿನ್ ಹಾರಿಸ್, ಬುಗೈಳ್ ಬಿನ್ ಆಮಿರ್, ಹಿಷಾಮ್ ಬಿನ್ ಅಂರ್ ಎಂಬ ಹೆಸರುಗಳನ್ನು ಬೇರೆ ಬೇರೆ ಗ್ರಂಥಗಳಲ್ಲಿ ಹೆಸರಿಸಿದ್ದು ಕಾಣಬಹುದು. ಒಪ್ಪಂದ ಬರೆದ ವ್ಯಕ್ತಿಯ ಕೆಲವೊಂದು ಬೆರಳುಗಳು ಬಲಹೀನವಾಗಿತ್ತು ಎನ್ನುವ ಅಭಿಪ್ರಾಯವೂ ನಮಗೆ ಕಾಣಬಹುದು.
ಹೀಗೆ ಒಪ್ಪಂದ ಪ್ರಕಾರ, ಬನೂ ಹಾಷಿಂ ಹಾಗೂ ಬನೂ ಮುತ್ವಲಿಬ್ ವಂಶವನ್ನು ಶಿಆಬ್ ಅಬೀತ್ವಾಲಿಬ್ ಅಥವಾ ಅಬೂತ್ವಾಲಿಬರ ಕಣಿವೆಯಲ್ಲಿ ಒಂಟಿಯಾಗಿಸಿದರು. ಸತ್ಯ ವಿಶ್ವಾಸಿಗಳು, ಅಲ್ಲದವರೂ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದರು. ಇರುವ ಅಲ್ಪ ಸ್ವಲ್ಪ ಆಹಾರದಲ್ಲಿ ಹೇಗೋ ದಿನಗಳು ಕಳೆಯಿತು, ಅದೂ ಕೂಡ ಖಾಲಿಯಾದಾಗ ಸಂಪೂರ್ಣವಾಗಿ ಹಸಿವಿಂದ ಕಂಗಾಲಾದರು. ಹಸಿವಿನಿಂದ ವಿಧಿ ಇಲ್ಲದೆ ಕಣಿವೆಯಲ್ಲಿ ಸಿಗುತ್ತಿದ್ದ ಕಾಯಿಗಳನ್ನು, ಎಲೆಗಳನ್ನು ತಿಂದು ದಿನ ಕಳೆಯಬೇಕಾಗಿ ಬಂದಿತು.
ಖುರೈಷಿಗಳು, ಬಹಿಷ್ಕಾರವನ್ನು ಅತೀ ಕ್ರೂರವಾಗಿ ಮುಂದುವರಿಸಿದರು. ಯಾವುದೇ ಕಾರಣಕ್ಕೂ ಆಹಾರ ಧಾನ್ಯಗಳನ್ನು ಕಾಣಿವೆಗಳಿಗೆ ತಲುಪಿದ ರೀತಿಯಲ್ಲಿ ತಡೆಯುತ್ತಿದ್ದರು. ಹಕೀಮ್ ಬಿನ್ ಹಿಝಾಮ್ ತನ್ನ ಅತ್ತೆ ಖದೀಜರಿಗಾಗಿ ◌ؓ ಕೊಂಡುಹೋಗುತ್ತಿದ್ದ ಧಾನ್ಯವನ್ನು ಅಬೂಜಹಲ್ ದಾರಿಯಲ್ಲೇ ತಡೆ ನಿಲ್ಲಿಸಿ, ಇನ್ನು ಮುಂದೆ ಹೀಗೆ ಮುಂದುವರಿಸಿದರೆ ಸಾರ್ವಜನಿಕವಾಗಿಯೇ ಅವಮಾನ ಮಾಡಲಾಗುವುದು ಎಂದು ಹೆದರಿಸಿದರು. ಈ ದೃಶ್ಯವನ್ನು ಕಂಡ ಅಬುಲ್ ಬಕ್ತರಿ, ಅವರ ಅತ್ತೆಗೆ ಅವರು ಆಹಾರ ಧಾನ್ಯಗಳನ್ನು ಕೊಂಡುಹೋಗುತ್ತಿದ್ದದ್ದು ಅಲ್ಲವೇ.? ಎಂದು ಹೇಳಿದಾಗ, ಅಬೂಜಹಲ್ ಅವರ ಮಾತನ್ನು ಕೇಳಿಯೂ ಕೇಳದಂತೆ ನಟಿಸಿದರು. ಅವರ ನಡುವೆ ಮಾತಿನ ವಾಗ್ವಾದವೇ ನಡೆಯಿತು, ಕೊನೆಗೆ ಅಬುಲ್ ಬಕ್ತಾರಿ ಕೋಪದಿಂದ ಒಂಟೆಯ ಎಲುಬಿನಿಂದ ಬಲವಾಗಿ ಅಬೂಜಹಲಿಗೆ ಹೊಡೆದರು. ಈ ವಿಷಯವು ಪ್ರವಾದಿಯವರಿಗೆ ﷺ ತಿಳಿಯುವುದು ಖುರೈಷಿಗಳಿಗೆ ಮುಜುಗರ ತರುವ ವಿಷಯವಾಗಿತ್ತು. ಆದರೆ ಈ ದೃಶ್ಯವನ್ನು ಈಗಾಗಲೇ ಹಂಝರವರು ◌ؓ ನೋಡುತ್ತಿದ್ದರು.
ಬನೂ ಹಾಶಿಮ್ ವಂಶಸ್ಥನಾಗಿದ್ದ, ಅಬೂಲಹಬ್ ಕೂಡ ಪ್ರಾರಂಭದಲ್ಲಿ ಕಾಣಿವೆಯಲ್ಲೇ ವಾಸಿಸುತ್ತಿದ್ದರು. ಆದರೆ ಅವರು ಶತ್ರುಗಳ ಜೊತೆಯಲ್ಲಿ ಕೈ ಜೋಡಿಸಿ, ಮುಸ್ಲಿಮರ ವಿರುದ್ಧ ನಿಂತರು. ಹೀಗಿರುವಾಗ ಉತ್'ಬರ ಮಗಳಾದ ಹಿಂದ್'ರನ್ನು ಭೇಟಿಯಾಗಿ, ಲಾತ ಉಝ್ಝದೇವರಿಗೆ ನಾವು ಸಹಾಯ ಮಾಡಬೇಕಲ್ಲವೇ.? ಹಾಗಾಗಿ ಅವರನ್ನು ವಿರೋಧಿಸಿದವರನ್ನು ನಾವು ಕೂಡ ದೂರ ಇಟ್ಟೆವು ಎಂದು ಹೇಳಿದರು.
ಹೀಗೆ ಮೂರು ವರ್ಷದ ವರೆಗೆ ಈ ಬಹಿಷ್ಕಾರ ಮುಂದುವರಿಯಿತು. ಈ ಸಂದರ್ಭದಲ್ಲಿಯೂ ಅಬೂತ್ವಾಲಿಬ್ ಮಾತ್ರ ಪ್ರವಾದಿಯವರಿಗೆ ﷺ ನೇರವಾಗಿಯೇ ನಿಂತರು. ಎಲ್ಲಾ ರಾತ್ರಿಗಳಲ್ಲೂ ಪ್ರವಾದಿಯವರು ﷺ ನಿದ್ರೆ ಮಾಡಲು ಹೋಗುವ ಸಂದರ್ಭದಲ್ಲಿ, ಪ್ರವಾದಿಯವರ ﷺ ಬಳಿ ಹೋಗಿ ಅಬೂತ್ವಾಲಿಬರ ಮಕ್ಕಳಲ್ಲಿ ಒಬ್ಬರನ್ನು ಅಲ್ಲಿ ಮಲಗಿಸಿ, ಪ್ರವಾದಿಯರನ್ನು ﷺ ಬೇರೆ ಕಡೆ ಮಲಗಿಸುತ್ತಿದ್ದರು. ಹೀಗೆ ಹಲವಾರು ರೀತಿಯಲ್ಲಿ ಶತ್ರುಗಳ ನೆರಳು ಕೂಡ ತಾಗದ ಹಾಗೆ ಕಾಯುತ್ತಿದ್ದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment