Abu Hisham Saquafi

Official Website Of Hafiz Ilyas Saquafi Padaladka

Thursday, September 15, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -92 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

   ನಗೀಸ್ ರಾಜರು, ತಮ್ಮ ಮಂತ್ರಿಗಳನ್ನೂ, ಇತರ ಸೇವಕರನ್ನೂ ದರ್ಬಾರಿಗೆ ಕರೆಸಿಕೊಂಡರು. ಮುಸ್ಲಿಮರ ಪ್ರತಿನಿಧಿಗಳನ್ನೂ ಕೂಡ ಕರೆಸಿದರು. ಅವರು ಸಲಾಂ ಹೇಳುತ್ತಾ (ಶುಭಾಶಯ ತಿಳಿಸುತ್ತಾ) ಒಳಗೆ ಬಂದಾಗ, ರಾಜನು ಇದೇನು ರಾಜರಿಗೆ ಸಾಷ್ಟಾಂಗ ಮಾಡುತ್ತಿದ್ದೀರೇ.? ಎಂದು ಕೇಳಿದರು. ಅದಕ್ಕೆ ಆ ಪ್ರತಿನಿಧಿಗಳು, ಇಲ್ಲ ನಾವು ಅಲ್ಲಾಹನಿಗೆ ಮಾತ್ರವೇ ಸಾಷ್ಟಾಂಗ ಮಾಡುವುದು, ಅಲ್ಲದೆ ಸೃಷ್ಟಿಗಳಿಗೆ ಮಾಡುವುದಿಲ್ಲ ಎಂದು ಹೇಳಿದರು. ಮಹಾರಾಜ ಮಾತು ಮುಂದುವರಿಸುತ್ತಾ, ನೀವು ನಿಮ್ಮ ಜನತೆಯಿಂದ ದೂರ ಮಾಡಿದ ಧರ್ಮ ಯಾವುದು.? ನೀವು ನಿಮ್ಮ ಪೂರ್ವಿಕರ ಧರ್ಮವನ್ನೇನೋ ವಿರೋಧಿಸಿದಿರಿ, ಆದರೆ ನೀವುಗಳು, ನಮ್ಮ ಧರ್ಮವನ್ನಾಗಲಿ, ಇತರ ಧರ್ಮವನ್ನಾಗಲಿ ಸ್ವೀಕರಿಸಲಿಲ್ಲ, ಹಾಗಾದರೆ ಇದ್ಯಾವುದು ಹೊಸ ಧರ್ಮ ಎಂದು ಕೇಳಿದರು. 

   ರಾಜರ ಮಾತುಗಳಿಗೆ,  ಜಾಫರ್'ರವರು ◌ؓ ಉತ್ತರಿಸಲು ಮುಂದಾದರು. ಮಹಾರಾಜ.! ನಾವು ಅಜ್ಞಾನದಲ್ಲಿ ಮುಳುಗಿದ್ದ (ಅಥವಾ ಜ್ಞಾನವೇ ಇಲ್ಲದ) ಜನತೆಯಾಗಿದ್ದೆವು, ವಿಗ್ರಹಗಳನ್ನು ಆರಾಧಿಸುತ್ತಾ, ಶವವನ್ನು ತಿನ್ನುತ್ತಾ, ಕೊಳಕು ಕೆಲಸಗಳನ್ನು ಮಾಡುತ್ತಾ, ಕುಟುಂಬ ಸಂಬಂಧವನ್ನು ಬೇರ್ಪಡಿಸುತ್ತಾ, ನೆರೆಯವರನ್ನು ತಾತ್ಸಾರವಾಗಿ ಕಂಡು, ಬಲಿಶಾಲಿ ವ್ಯಕ್ತಿಗಳು ದುರ್ಬಲರನ್ನು ಹಿಂಸಿಸುತ್ತಾ, ಬೇಕಾಬಿಟ್ಟಿಯಾಗಿ ಜೀವಿಸುತ್ತಿದ್ದೆವು. ಹೀಗಿರುವಾಗ ಅಲ್ಲಾಹನು, ನಮ್ಮ ಜನತೆಯಿಂದಲೇ ಒಬ್ಬರು ಪ್ರವಾದಿಯವರನ್ನು ﷺ ನಮಗಾಗಿ ಕಳುಹಿಸಿ ಕೊಟ್ಟನು. ಸತ್ಯವಂತರಾದ, ನೀತಿವಂತರಾದ, ವಿಶ್ವಾಸದಲ್ಲಿಯೂ ಕೂಡ ಹೆಸರುವಾಸಿಯಾದ ವ್ಯಕ್ತಿ, ಪ್ರಸಿದ್ಧ ಮನೆತನದ ಉನ್ನತ ವ್ಯಕ್ತಿಯೊಬ್ಬರು ನಮ್ಮೆಲ್ಲರನ್ನೂ " ಏಕನಾದ ಅಲ್ಲಾಹನನ್ನು ಮಾತ್ರ ಆರಾಧಿಸಬೇಕು, ಅವನಿಗೆ ಯಾರನ್ನು ಜೊತೆ ಸೇರಿಸಬೇಡಿರಿ, ಅವನಲ್ಲದೆ ಆರಾಧಿಸುವ ಎಲ್ಲಾ ವಿಗ್ರಹಗಳನ್ನು ವಿರೋಧಿಸಿರಿ" ಎಂಬ ಸಂದೇಶದೊಂದಿಗೆ ನಮ್ಮೆಲ್ಲರನ್ನು ಅವರು ಒಳಿತಿನೆಡೆಗೆ ಆಹ್ವಾನಿಸಿದರು. ನಮಾಝ್, ದಾನಧರ್ಮ, ಉಪವಾಸ ಎಲ್ಲವನ್ನೂ ಕಲಿಸಿದರು. ಜೊತೆಯಲ್ಲಿ ಎಲ್ಲರಲ್ಲೂ ನಂಬಿಕೆಯಿಂದ ವರ್ತಿಸಬೇಕು. ಕುಟುಂಬದ ನಡುವೆ ಬಿರುಕುಗಳನ್ನು ಹೋಗಲಾಡಿಸಿ ಸಂತೋಷದಿಂದ ಜೊತೆಯಲ್ಲೇ ಜೀವಿಸಬೇಕು. ನೆರೆಯವರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಬೇಕು, ಅವರ ಸಂಪತ್ತಗಳನ್ನು ಅಪಹರಿಸುದಾಗಲಿ, ಅವರ ಪ್ರಾಣಕ್ಕೆ ಧಕ್ಕೆ ತರುವುದಾಗಲಿ, ಅವರಿಗೆ ತೊಂದರೆ ನೀಡುವುದಾಗಲಿ ಮಾಡಬಾರದು. ಸುಳ್ಳು ಸಾಕ್ಷಿಗಳನ್ನು ಹೇಳಬೇಡಿರಿ, ಸುಶೀಲೆಯರಾದ ಮಹಿಳೆಯರ ಮಾನಹಾನಿ ಮಾಡಬೇಡಿರಿ, ಮುಂತಾದ ಹಲವಾರು ಉಪದೇಶಗಳನ್ನು ನೀಡಿದರು. 
     ಹೀಗೆ ಒಳ್ಳೆಯ ರೀತಿಯಲ್ಲಿ ಯಾರಿಗೂ ತೊಂದರೆ ನೀಡದೆ ಜೀವಿಸುತ್ತಿದ್ದಾಗ, ನಮ್ಮ ಮೇಲೆ ಬಲ ಪ್ರಯೋಗಿಸಿ ನಮ್ಮನ್ನು ಹಳೆಯ ಸಂಪ್ರದಾಯಕ್ಕೆ ಹಿಂತಿರುಗಳು ಒತ್ತಾಯಿಸಿ, ನಮಗೆ ಬಹಳಷ್ಟು ಹಿಂಸೆಯನ್ನು ನೀಡಲು ಆರಂಭಿಸಿದರು. ನಮಗೆ ಅಲ್ಲಿ ಶಾಂತಿಯಿಂದ ಜೀವಿಸಲು ಕಷ್ಟವಾದಾಗ, ನಾವು ಇಲ್ಲಿಗೆ ಬಂದು ನೆಲೆಸಬೇಕಾಯಿತು. ನಿಮ್ಮ ಆಶ್ರಯದಲ್ಲಿ ಯಾವುದೇ ತೊಂದರೆ ಸಿಗುತ್ತಿಲ್ಲ ಎಂದು ಮನಗಂಡು, ಇಲ್ಲಿಗೂ ಕೂಡ ಬಂದಿದ್ದಾರೆ ಎಂದು ಜಅಫರ್'ರವರು ◌ؓ ಎಲ್ಲವನ್ನೂ ಸವಿಸ್ತಾರವಾಗಿ ತಿಳಿಸಿದರು.

    ಜಅಫರ್'ರವರ ◌ؓ ಮಾತುಗಳನ್ನು, ನಗೀಸ್ ರಾಜರು ಬಹಳ ಶ್ರದ್ಧೆಯಿಂದಲೇ ಕೇಳುತಿದ್ದರು. ನಂತರ ಅವರು, ನಿಮ್ಮ ಪ್ರವಾದಿಯವರಿಗೆ ﷺ ಅವತರಿಸಿದ ಗ್ರಂಥದ ಯಾವುದಾದರೂ ಭಾಗ ನಿಮಗೆ ನೆನಪಿದೆಯಾ.? ಎಂದು ಕೇಳಿದಾಗ, ಜಅಫರ್ ◌ؓ ಇದೆ ಎಂದು ಉತ್ತರಿಸಿದರು. ಹಾಗಾದರೆ ಅದನ್ನು ಸ್ವಲ್ಪ ಇಲ್ಲಿ ಪಠಿಸಿರಿ ಎಂದು ರಾಜರು ಕೇಳಿ ಕೊಂಡರು. ತಕ್ಷಣವೇ ಜಅಫರ್, ◌ؓ ಪವಿತ್ರ ಖುರ್'ಆನಿನ ಮರ್'ಯಂ ಅಧ್ಯಾಯದ ಪ್ರಾರಂಭದ ಭಾಗವನ್ನು ಪಠಿಸಿದರು. ಖುರ್'ಆನಿನ ಕೇಳುತ್ತಿದ್ದ ರಾಜರು, ಅದರ ಅರ್ಥವನ್ನು ಚಿಂತಿಸಿ ಕಣ್ಣೀರು ಹಾಕುತ್ತಿದ್ದರು. ಅವರ ಜೊತೆಯಲ್ಲೇ, ಸುತ್ತಲೂ ಇದ್ದ ಪಾದ್ರಿಗಳು ಕೂಡ ಕಣ್ಣೀರು ಸುರಿಸಿ, ಅವರ ಬಳಿಯಿದ್ದ ಗ್ರಂಥಗಳೆಲ್ಲವೂ ಒದ್ದೆಯಾಯಿತು. ಮರ್'ಯಂ ಅಧ್ಯಾಯದ ಅನುವಾದವೇ ಪ್ರವಾದಿ ಈಸ ಹಾಗೂ ಅವರ ತಾಯಿ ಮರ್'ಯಮ್'ರವರ ◌ؓ ಕುರಿತಲ್ಲವೇ.? ಮೂಲತಃ ಕ್ರೈಸ್ತರಾಗಿದ್ದ ರಾಜರ ಮನಸ್ಸಿಗೂ ಕೂಡ ಆ ಸೂಕ್ತಗಳು ಬಲವಾಗಿ ನಾಟಿತು. 

    ಅದನ್ನು ಕೇಳಿದ ರಾಜರು, ಪ್ರವಾದಿ ಈಸ, ಮೂಸರವರು (ಅ) ಅವತರಿಸಿದ ಗ್ರಂಥಗಳು ಹಾಗೂ ಈಗ ಕೇಳಿದ ಸೂಕ್ತಗಳು ಒಂದೇ ರೀತಿ ಇದ್ದ ಹಾಗೆ ಇದೆಯಲ್ಲವೇ.? ಒಂದೇ ಅರ್ಥವನ್ನು ಸೂಚಿಸುವ ಬೇರೆ ಬೇರೆ ವಾಕ್ಯಗಳು ಎಂದು ಹೇಳಿದರು. ನಂತರ ಮಾತು ಮುಂದುವರಿಸುತ್ತಾ, ಖುರೈಷಿ ಪ್ರತಿನಿಧಿಯಾಗಿ ಬಂದ ಅಂರ್'ರವರಲ್ಲಿ, ಇಲ್ಲಿ ಬಂದಿರುವ ಮುಸ್ಲಿಮರಲ್ಲಿ ನಿಮ್ಮ ಸೇವಕರು ಯಾರಾದರೂ ಇದ್ದಾರಾ.? ಎಂದು ಕೇಳಿದಾಗ, ಅಂರ್ ಇಲ್ಲ ಎಂದು ಉತ್ತರಿಸಿದರು. ಅದಕ್ಕೆ ಪುನಃ ರಾಜ, ನೀವುಗಳಿಗೆ ಏನಾದರೂ ಸಾಲ ಏನಾದರೂ ನೀಡಲು ಬಾಕಿಯಿದೆಯೇ.? ಎಂದು ಕೇಳಿದಾಗಲೂ, ಇಲ್ಲ ಎಂದೇ ಅಂರ್ ಉತ್ತರಿಸಿದರು. ಹಾಗಿದ್ದರೆ ಖಂಡಿತ ನಾನು, ನಿಮಗೆ ಇವರನ್ನು ಬಿಟ್ಟು ಕೊಡುವುದಿಲ್ಲ. ನಿಮಗಿನ್ನು ಇಲ್ಲಿಂದ ಹಿಂತಿರುಗಿ ಹೋಗಬಹುದು ಎಂದು ಹೇಳಿದರು. 

     ಹೊರಗೆ ಬಂದಾಗ, ನಾಳೆ ಕೊನೆದಾಗಿ ಮತ್ತೊಮ್ಮೆ ಹೋಗಿ ಮಾತಾಡಬೇಕು ಎಂದು ಅಂರ್ ಹೇಳಿದಾಗ, ಆಮಿರ್ ಬೇಡ ಪರವಾಗಿಲ್ಲ, ಅವರು ನಮ್ಮ ಸಂಬಂಧಿಕರೇ ಅಲ್ಲವೇ ಎಂದು ಹೇಳಿದರು. ಅದಕ್ಕೆ ಅಂರ್, ಅವರಿಗೆ ಈಸ (ಅ) ಪ್ರವಾದಿಯವರ ಕುರಿತು ಇರುವ ಅಭಿಪ್ರಾಯ ಸರಿಯಿಲ್ಲ ಎಂಬ ವಿಷಯವನ್ನು ನಾನು ನಾಳೆ ತಿಳಿಸುತ್ತೇನೆ, ಅದರೊಂದಿಗೆ ಎಲ್ಲವೂ ತಲೆಕೆಳಗಾಗುತ್ತದೆ ಎಂದು ಹೇಳಿದರು. 

    (ಮುಂದುವರಿಯುವುದು...)

 اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: