ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಇಬ್'ನು ಇಸ್'ಹಾಖ್ ◌ؓ ಮಾತು ಮುಂದುವರಿಸುತ್ತಿದ್ದಾರೆ. ಅಬೂಬಕ್ಕರ್ ◌ؓ ಇಬ್'ನುದುಗನ್ನರ ಆಶ್ರಯದಿಂದ ಹೊರಗೆ ಬಂದು ನೇರವಾಗಿ ಕಅಬಾಲಯದ ಕಡೆಗೆ ನಡೆದರು. ಆ ಸಂದರ್ಭದಲ್ಲಿ ಅಬೂಬಕ್ಕರ್'ರವರ ◌ؓ ತಲೆಯ ಮೇಲೆ, ಒಬ್ಬ ದುಷ್ಟ ಬಂದು ಮಣ್ಣು ಎಸೆದನು. ಅದೇ ಸಮಯಕ್ಕೆ, ವಲೀದ್ ಬಿನ್ ಮುಗೀರ ಅಥವಾ ಆಸ್ವ್ ಬಿನ್ ವಾಯಿಲ್ ಅದೇ ದಾರಿಯಲ್ಲಿ ನಡೆದು ಬಂದರು. ಅಬೂಬಕ್ಕರ್ ◌ؓ ಅವರನ್ನು ನಿಲ್ಲಿಸಿ, ನೋಡಿ ನಿಮ್ಮ ಗುಂಪಿನ ಜನರು ಎಷ್ಟು ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದಾಗ, ಅದನ್ನು ನೀವೇ ಅಲ್ವಾ.? ಮಾಡಿದ್ದು ಎಂದು ಉತ್ತರಿಸಿದರು. ಅದನ್ನು ಕೇಳಿ ಅಬೂಬಕ್ಕರ್'ರವರು ◌ؓ ಅಲ್ಲಾಹನನ್ನು ಸ್ತುತಿಸಿದರು.
ಒಂದೊಂದು ಪರೀಕ್ಷೆಗಳು ಕೂಡ ಸತ್ಯ ವಿಶ್ವಾಸಿಗಳ ಉತ್ಸಾಹವನ್ನು ಇಮ್ಮಡಿ ಗೊಳಿಸುತ್ತಿತ್ತು. ಅಷ್ಟೊಂದು ವಿರೋಧಗಳಿದ್ದರೂ, ಭಾಗ್ಯಶಾಲಿ ವ್ಯಕ್ತಿಗಳು ಮಾತ್ರ ತಮ್ಮ ಸನ್ಮಾರ್ಗದ ದಾರಿಯನ್ನು ಹಾರಿಸುತ್ತಲೇ ಇದ್ದರು. ವಿವಿಧ ದಿಕ್ಕುಗಳಿಂದ ಬರುತ್ತಿದ್ದ ತೀರ್ಥ ಯಾತ್ರಿಕರಿಗೂ ಕೂಡ, ಹೊಸ, ಹೊಸ ಸುದ್ದಿಗಳು ಎಲ್ಲಾ ಕಡೆಗಳಿಂದ ತಿಳಿಯಲು ಸಾಧ್ಯವಾಯಿತು.
ಹೀಗಿರುವಾಗ ಔಸ್ ಜನಾಂಗದ ತುಫೈಲ್ ಬಿನ್ ಅಂರ್ ಎನ್ನುವ ವ್ಯಕ್ತಿಯು ಮಕ್ಕಾ ನಗರಕ್ಕೆ ಬಂದರು. ಅವರು ಪ್ರಸಿದ್ಧ ಜನಾಂಗದ, ನಾಯಕರೂ, ಕವಿಯೂ ಕೂಡ ಆಗಿದ್ದರು. ಅವರ ಕಲೆ ಹಾಗೂ ಪ್ರತಿಭೆಯ ಬಗ್ಗೆ ಎಲ್ಲರಿಗೂ ಚಿರಪರಿಚಿತವಾಗಿತ್ತು. ಖುರೈಷಿ ನಾಯಕರು ಅವರನ್ನು ಭೇಟಿಯಾಗಿ ಮುಹಮ್ಮದ್'ರ ﷺ ಕುರಿತು ತಿಳಿಸಲು ಮುಂದಾದರು. ಇಲ್ಲೊಬ್ಬರು ವ್ಯಕ್ತಿಯ ಆಗಮನವಾಗಿದೆ, ಅವರು ತಮ್ಮನ್ನು ಪ್ರವಾದಿ ಎಂದು ಹೇಳುತ್ತಿದ್ದಾರೆ. ಅವರು ಅವತರಿಸುವ ವಾಕ್ಯಗಳು ಬಹಳ ವಿಸ್ಮಯಕಾರಿಯಾಗಿದೆ. ಆದರೆ ಅದು ವಾಮಾಚಾರವಾಗಿದೆ, ನೀವು ಆ ವಾಕ್ಯಾಗಳನ್ನು ಕೇಳುವುದಾಗಲಿ, ಅವರನ್ನು ಭೇಟಿಯಾಗುವುದು ಆಗಲಿ ಮಾಡಬೇಡಿ ಎಂದು ಹೇಳಿದರು. ಅದನ್ನು ಕೇಳಿದ ತುಫೈಲ್ ಎಲ್ಲವನ್ನೂ ವಿಶ್ವಾಸವಿರಿಸಿದ್ದರು, ಅವರು ಬಹಳ ಮುಂಜಾಗರೂಕತೆಯಿಂದ ಕಅಬಾಲಯದ ಬಳಿ ಹೆಜ್ಜೆ ಹಾಕಿದರು. ಅಲ್ಲಿ ನೋಡಿದರೆ ಪ್ರವಾದಿಯವರು ﷺ ಈಗಾಗಲೇ ಬಂದು ನಮಾಝ್ ಮಾಡುತಿದ್ದರು. ಅದನ್ನು ಕಂಡ ತುಫೈಲ್, ಖುರ್'ಆನ್ ಕೇಳಬಾರದು ಎಂದು ಕಿವಿಯನ್ನು ಮುಚ್ಚಿದರು. ಆದರೆ ಸಣ್ಣ ಧ್ವನಿಯಲ್ಲಿ ಖುರ್'ಆನ್ ಓದುವುದು ಅವರಿಗೆ ಕೇಳಲು ಸಾಧ್ಯವಾಯಿತು. ಆ ಖುರ್'ಆನಿಗೆ ಅವರು ಆಕರ್ಷಿತರಾಗಿ, ಕವಿಯೂ ಬುದ್ಧಿವಂತನೂ ಆದ ನಾನು ಯಾಕೆ ನಾನು ಅದನ್ನು ಕೇಳಬಾರದು.? ಜ್ಞಾನಿಯಾದ ನನಗೆ ಅಲ್ಲಾಹನು ಒಳಿತು ತೋರಿಸಿಕೊಡಬಾರದೇ.? ಎಂದು ಸ್ವಯಂ ಚಿಂತಿಸುತ್ತಾ, ಏನೇ ಆಗಲಿ ಒಮ್ಮೆ ಕೇಳೋಣ. ಅದರಲ್ಲಿ ಏನಾದರೂ ಒಳಿತು ಇದ್ದರೆ ಸ್ವೀಕರಿಸೋಣ, ಇಲ್ಲದಿದ್ದರೆ ಬಿಟ್ಟಿಬಿಡೋಣ ಎಂದು ಆಲೋಚಿಸಿ, ಪ್ರವಾದಿಯವರು ﷺ ಮನೆಗೆ ಹಿಂತಿರುಗಿ ಹೋಗುವ ವರೆಗೂ ಕಾಯುತ್ತಾ ಕುಳಿತರು. ಮನೆಗೆ ಹೋಗಲು ಮುಂದಾದಾಗ ತುಫೈಲ್, ಪ್ರವಾದಿಯವರ ﷺ ಬಳಿ ಬಂದು, ನಿಮ್ಮ ಊರಿನವರು, ನಿಮ್ಮ ಬಗ್ಗೆ ಏನೇನೋ ಹೇಳಿ ನನ್ನನ್ನು ಭಯಗೊಳಿಸಿದ್ದರು. ಹಾಗಾಗಿ ನಾನು ನಿಮ್ಮ ಖುರ್'ಆನ್ ಪಠನೆ ಕೇಳಬಾರದು ಎಂದು ಕಿವಿ ಮುಚ್ಚಿದ್ದೆ, ಆದರೂ ನನಗೆ ಕುರ್'ಆನ್ ಕೇಳಲು ಭಾಗ್ಯ ಸಿಕ್ಕಿತು. ಎಷ್ಟೊಂದು ಸುಂದರವಾದ ವಾಕ್ಯಗಳು, ಎಂತಹ ಅದ್ಭುತ.! ನೀವು ಇತರರಿಗೆ ಏನನ್ನು ಕಲಿಸಿ ಕೊಡುತ್ತಿದ್ದೀರೋ ಅದನ್ನು ನನಗೂ ಕೂಡ ಕಲಿಸಿ ಕೊಡುತ್ತೀರಾ.? ಎಂದು ಕೇಳಿದಾಗ, ಪ್ರವಾದಿಯವರು ﷺ ಮೊದಲು 'ಅಲ್ ಇಖ್'ಲಾಸ್' ಅಧ್ಯಾಯವನ್ನು ಪಠಿಸಿದರು. ಅದು ತುಫೈಲ್'ರನ್ನು ಇನ್ನಷ್ಟು ಆಕರ್ಷಿತಗೊಳಿಸಿತು. ನಂತರ ಪ್ರವಾದಿಯವರು ﷺ ನೂರ ಹದಿಮೂರು ಹಾಗೂ ಹದಿನಾಲ್ಕನೇ (ಅಲ್ ಫಲಕ್, ಅನ್ನಾಸ್) ಅಧ್ಯಾಯವನ್ನು ಪಠಿಸಿ, ತುಫೈಲನ್ನು ಇಸ್ಲಾಮಿಗೆ ಆಹ್ವಾನಿಸಿದರು. ಅದೆಲ್ಲವನ್ನೂ ಕೇಳಿದ ತುಫೈಲ್, ವಾಹ್.! ಎಂತಾ ಅದ್ಭುತ ವಾಕ್ಯಗಳು. ಎಷ್ಟೊಂದು ಸುಂದರವಾದ ವಚನ, ಎಂದು ಹೇಳಿ ಅವರು ಇಸ್ಲಾಮ್ ಸ್ವೀಕರಿಸಿದರು. ನಂತರ ಮಾತು ಮುಂದುವರೆಸಿ, ನನ್ನ ಜನಾಂಗದಲ್ಲಿ ನಾನು ಎಲ್ಲರಿಗೂ ಅತೀ ಪ್ರೀಯ ವ್ಯಕ್ತಿಯಾಗಿರುವೆನು, ನಾನು ಅವರನ್ನೂ ಕೂಡ ಇಸ್ಲಾಮಿಗೆ ಆಹ್ವಾನಿಸುತ್ತೇನೆ. ಜೊತೆಯಲ್ಲಿ ನನಗೆ ವಿಶೇಷವಾದ ಪವಾಡದ ಪ್ರಮಾಣ ಕೂಡ ಕೊಟ್ಟಿದ್ದರೆ ಬಹಳ ಒಳ್ಳೆದಿತ್ತು, ಎಂದು ಹೇಳಿದಾಗ, ಪ್ರವಾದಿಯವರು ﷺ ಅವರಿಗಾಗಿ ಪ್ರಾರ್ಥನೆ ಮಾಡಿದರು.
ಕಗ್ಗತ್ತಲು ತುಂಬಿದ ರಾತ್ರಿಯಲ್ಲಿ, ಸುರಿಯುವ ಮಳೆಯ ನಡುವೆ ತುಫೈಲ್ ಊರಿನ ಕಡೆ ನಡೆಯುತ್ತಾ, ಕತ್ತಲಲ್ಲಿ ಹೇಗೋ ಒಂದು ಗುಡ್ಡದ ಬಳಿ ಬಂದು ತಲುಪಿದರು. ತಕ್ಷಣವೇ ಅವರ ಕಣ್ಣಿನ ನಡುವಿನಿಂದ ಒಂದು ಬೆಳಕು ಹೊಮ್ಮಿ, ಅದು ದಾರಿಯಲ್ಲಿ ಹೊಳೆಯುತ್ತಿತ್ತು. ಅದನ್ನು ಕಂಡ ತುಫೈಲ್, ಇದು ಹೀಗೆ ಕಣ್ಣಿನ ನಡುವೆ ನಿಂತರೆ ಅದೊಂದು ಮುಖದ ಮೇಲಿನ ಕಲೆಯಾಗಿ ಕಾಣುತ್ತದೆ. ಹಾಗಾಗಿ ಮುಖವಲ್ಲದ ಸ್ಥಳದಲ್ಲಿ ಇದು ಇದ್ದಿದ್ದರೆ ಬಹಳ ಒಳ್ಳೆದಿತ್ತು ಎಂದು ಆಲೋಚಿಸಿದ್ದೇ ತಡ, ಬೆಳಕು ಚಾವಟಿಯ ತುದಿಗೆ ಸ್ಥಳಾಂತರ ಗೊಂಡು, ತೂಗುದೀಪದಂತೆ ಹೊಳೆಯ ತೊಡಗಿತು. ತುಫೈಲ್ ಆ ಬೆಳಕಿನ ಸಹಾಯದಿಂದ ಮೆಲ್ಲ ಮೆಲ್ಲವಾಗಿ, ಗುಡ್ಡದಿಂದ ಇಳಿದು ಬಂದು ಮನೆಯ ಬಳಿ ತಲುಪಿದರು. ವಯಸ್ಸಾದ ತಂದೆ ತುಫೈಲ್'ರ ಬಳಿ ಬರುತ್ತಿದ್ದಾಗ, ತುಫೈಲ್ ಸ್ವಲ್ಪ ದೂರ ನಿಂತುಕೊಳ್ಳಿ ಅಪ್ಪ, ಎಂದು ಹೇಳಿದರು. ಅದನ್ನು ಕೇಳಿದ ಅವರ ತಂದೆ, ಅದು ಯಾಕೆ ಮಗನೇ ಎಂದು ಕೇಳಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment