ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪ್ರವಾದಿಯವರನ್ನು ﷺ ಶತ್ರುಗಳು ವಿರೋಧಿಸುತ್ತಿರುವಾಗ ಅವರು ಉಂಟಾದ ಕೆಲವು ವಿಸ್ಮಯಕಾರಿ ಅನುಭವಗಳಲ್ಲಿ ಒಂದನ್ನಾಗಿತ್ತು ನಾವು ತಿಳಿದದ್ದು. ಇಷ್ಟೆಲ್ಲಾ ಅದ್ಭುತವಾದ ಘಟನೆಗಳು ನಡೆಯುತ್ತಿದ್ದರೂ, ಅವರಿಗೆ ಮಾತ್ರ ಸತ್ಯವನ್ನು ಅಂಗೀಕರಿಸುವ ಅದೃಷ್ಟ ಇರಲಿಲ್ಲ. ನ್ಯಾಯ, ನೀತಿಯನ್ನು ಸ್ಥಾಪಿಸಲು ಬಂದಿದ್ದ ಪ್ರವಾದಿಯವರು ﷺ ಜನರಿಗೆ ಸಿಗಬೇಕಾದ ಹಕ್ಕುಗಳಿಗಾಗಿಯೂ ಧ್ವನಿ ಎತ್ತುತ್ತಿದ್ದರು, ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿತ್ತು ನಾವು ಈಗಾಗಲೇ ತಿಳಿದದ್ದು. ಅದೇ ರೀತಿ ಪ್ರವಾದಿಯವರು ﷺ ನಡೆಸಿದ್ದ ಇನ್ನೊಂದು ಮಧ್ಯಸ್ಥಿಕೆಯ ಕುರಿತು ಕೂಡ ತಿಳಿಯೋಣ.
ಒಮ್ಮೆ ಪ್ರವಾದಿಯವರು ﷺ, ತಮ್ಮ ಕೆಲವು ಶಿಷ್ಯರ ಜೊತೆಯಲ್ಲಿ ಕಅಬಾಲಯದ ಪಕ್ಕದಲ್ಲಿ ಕುಳಿತಿದ್ದರು. ಅಷ್ಟೊತ್ತಿಗೆ ಝುಬೈದ್ ಜನಾಂಗದ ಒಬ್ಬ ವ್ಯಕ್ತಿಯು, ಓ ಖುರೈಷಿಗಳೇ ನೀವು ಹೀಗೆ ತೊಂದರೆ ನೀಡಿದರೆ ಹೇಗೆ ಜನರು ಹರಮಿನ ಕಡೆ ಬರುತ್ತಾರೆ.? ಹೇಗೆ ವ್ಯಾಪಾರ ಮಾಡಲು ಬರುತ್ತಾರೆ.? ಎಂದು ಜೋರಾಗಿ, ಅಲ್ಲಿ ನೆರೆದಿದ್ದ ಪ್ರತಿಯೊಂದು ಖುರೈಷಿ ಗುಂಪಿನ ಬಳಿಯೂ ಹೇಳುತ್ತಾ ಹೋದರು. ಕೊನೆಗೆ ಪ್ರವಾದಿಯವರ ﷺ ಬಳಿ ತಲುಪಿದಾಗ, ಪ್ರವಾದಿಯವರು ﷺ, ಯಾರು ನೀವು.? ಯಾರು ನಿಮಗೆ ತೊಂದರೆ ಕೊಟ್ಟದ್ದು ಎಂದು ನಡೆದ ಘಟನೆಯ ಬಗ್ಗೆ ಕೇಳಿದರು. ಅದಕ್ಕೆ ಆ ವ್ಯಕ್ತಿ, ನಾನು, ನನ್ನ ದುಬಾರಿ ಬೆಲೆಯ ಮೂರು ಒಂಟೆಯ ಜೊತೆಯಲ್ಲಿ ಇಲ್ಲಿಗೆ ಬಂದಿದ್ದೆನು. ಅಷ್ಟೊತ್ತಿಗೆ ಅಬೂಜಹಲ್, ನನ್ನ ಬಳಿ ಬಂದು ಅದರ ಬೆಲೆಯ, ಮೂರನೇ ಒಂದು ಭಾಗದಷ್ಟು ಮಾತ್ರ ಬೆಲೆ ಹೇಳಿದರು. ಅಬೂಜಹಲ್ ಬೆಲೆ ಹೇಳಿದ ಕಾರಣ, ಇನ್ಯಾರೂ ಕೂಡ ಬೆಲೆ ಹೇಳಲಿಲ್ಲ. ಹಾಗಾಗಿ ನನ್ನ ಸರಕುಗಳ ಬೆಲೆಯೂ ಕುಸಿಯಿತು. ಅಷ್ಟೇ ಅಲ್ಲ ನನಗೆ ತೊಂದರೆಯೂ ಕೊಟ್ಟರು, ಎಂದು ಎಲ್ಲವನ್ನು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ಈಗ ಒಂಟೆ ಎಲ್ಲಿದೆ ಎಂದು ಕೇಳಿದಾಗ, ಅದು ಅವರ ಬಳಿಯೇ ಇದೆ ಎಂದು ಆ ವ್ಯಕ್ತಿ ಹೇಳಿದರು. ಅದನ್ನು ಕೇಳಿ, ಸರಿ ಹಾಗಿದ್ದರೆ ನಾವಲ್ಲಿಗೆ ಹೋಗೋಣ ಎಂದು, ಆ ವ್ಯಕ್ತಿಯ ಜೊತೆಯಲ್ಲಿ, ಪ್ರವಾದಿಯವರ ﷺ ಶಿಷ್ಯರು ಕೂಡ ಹೊರಟರು. ಒಂಟೆಯ ಹತ್ತಿರ ತಲುಪಿದಾಗ ಒಂಟೆಯನ್ನು ಕಂಡು, ಪ್ರವಾದಿಯವರು ﷺ ಒಂಟೆ ದಷ್ಟಪುಷ್ಟವಾಗಿದೆ. ನಂತರ ಅದಕ್ಕೆ ಒಳ್ಳೆಯ ಬೆಲೆಯನ್ನು ಹೇಳಿದರು, ಅದನ್ನು ಕೇಳಿ ಝುಬೈದ್ ಜನಾಂಗದ ವ್ಯಕ್ತಿಗೆ ಬಹಳ ಸಂತೋಷವಾಯಿತು. ಪ್ರವಾದಿಯವರು ﷺ ಅದರಲ್ಲಿ ಎರಡು ಒಂಟೆಯನ್ನು ಅಲ್ಲೇ ಮಾರಾಟ ಮಾಡಿದರು. ಮೂರನೇ ಒಂಟೆಯಿಂದ ಸಿಕ್ಕಿದ ಹಣವನ್ನು ಮುತ್ತಲಿಬ್ ಕುಟುಂಬದ ವಿಧವೆಯರಿಗೆ ನೀಡಿದರು. ಇದೆಲ್ಲವನ್ನೂ ಮಾರುಕಟ್ಟೆ ಒಂದು ಮೂಲೆಯಲ್ಲಿ, ಅಬೂಜಹಲ್ ಮೌನವಾಗಿ ಕೂತು ನೋಡುತ್ತಿದ್ದರು. ಅದನ್ನು ಕಂಡ ಪ್ರವಾದಿಯವರು ﷺ ಆ ಕಡೆ ಹೋಗಿ, ಅಲ್ಲಿದ್ದ ಅಂರನ್ನು ಕರೆದು, ಇನ್ನು ಮುಂದೆಯೂ ಇದೇ ರೀತಿ ಪುನರಾವರ್ತನೆ ಆದರೆ, ನಿಮಗೆ ಇಷ್ಟವಿಲ್ಲದ ಕೆಲಸ, ನನ್ನಿಂದ ನೀವು ಎದುರಿಸಬೇಕಾಗಿ ಬರಬಹುದು ಎಂದು ಹೇಳಿದಾಗ, ಅಬೂಜಹಲ್, ಇಲ್ಲ ಖಂಡಿತ ಇಲ್ಲ, ಇನ್ಯಾವತ್ತು ಇಂತಹ ಕೆಲಸ ಮಾಡುವುದಿಲ್ಲ ಎಂದು ಹೇಳಿದರು. ಅದನ್ನು ಕೇಳಿ ಪ್ರವಾದಿಯವರು ﷺ ಅಲ್ಲಿಂದ ಹಿಂತಿರುಗಿ ಹೋದರು.
ಅದೆಲ್ಲವನ್ನೂ ನೋಡುತ್ತಿದ್ದ, ಉಮಯತ್ ಬಿನ್ ಖಲಫ್ ಹಾಗೂ ಅವರ ಸಂಗಡಿಗರು, ಅಬೂಜಹಲ್'ನ ಹತ್ತಿರ ಬಂದು, ಇದೇನು ಇಷ್ಟು ವಿನಮ್ರತೆಯಿಂದ ನೀವು ಮುಹಮ್ಮದ್'ರಲ್ಲಿ ﷺ ವರ್ತಿಸಿದ್ದು.? ಮುಹಮ್ಮದ್'ರಿಗೆ ﷺ ಭಯಪಟ್ಟೋ.? ಅಥವಾ ಅವರನ್ನು ಅನುಸರಿಸುವ ಯೋಚನೆ ಏನಾದರೂ ಇದೆಯಾ.? ಎಂದು ಕೇಳಿದಾಗ. ಅಬೂಜಹಲ್, ಏಯ್ ಅವರನ್ನು ಅನುಸರಿಸುವ ಮಾತೇ ಇಲ್ಲ, ಆದರೆ ನಾನು ಮುಹಮ್ಮದ್'ರಲ್ಲಿ ﷺ ಹಾಗೆ ವರ್ತಿಸಲು ಒಂದು ಕಾರಣವಿದೆ. ಅದೇನೆಂದರೆ, ಮುಹಮ್ಮದ್ ﷺ ನನ್ನ ಬಳಿ ಬಂದಾಗ, ಅವರ ಎರಡು ಭಾಗದಲ್ಲೂ ಬಲಿಷ್ಠರಾದ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಆಯುಧ ಹಿಡಿದು ನಿಂತಿದ್ದರು. ನಾನು ಏನಾದರೂ ವಿರೋಧ ವ್ಯಕ್ತಪಡಿಸಿದರೆ ನನಗೆ ಏನಾದರೂ ಮಾಡಬಹುದೋ ಎಂದು ಹೆದರಿದ್ದೆನು ಎಂದು ಹೇಳಿದರು. (ಅಬೂಜಹಲ್'ಗೆ ಕಂಡದ್ದು ಪ್ರವಾದಿಯವರ ﷺ ಜೊತೆಯಲ್ಲಿ ಬಂದಿದ್ದ ವ್ಯಕ್ತಿಗಳು ಆಗಿರಲಿಲ್ಲ ಬದಲಾಗಿ ಅವರಿಗೆ ಉಂಟಾದ ಅಗೋಚರ ದೃಶ್ಯವಾಗಿತ್ತು ಅದು.)
ಮಕ್ಕಾದಲ್ಲಿರುವ ವಿರೋಧಗಳ ನಡುವೆಯೂ ಪ್ರವಾದಿಯವರು ﷺ ಕೀರ್ತಿ ಎಲ್ಲೆಡೆ ತಲುಪುತ್ತಲೇ ಇತ್ತು. ಶತ್ರು ಪಕ್ಷಕ್ಕೆ ಅದರಿಂದ ಸೋಲಾಗುತ್ತಲೇ ಇತ್ತು. ವಿವಿಧ ಪ್ರದೇಶಗಳಿಂದ ಬಹಳಷ್ಟು ಜನರು ಮಕ್ಕಾ ನಗರಕ್ಕೆ ಬರುತ್ತಲಿದ್ದರು. ಅವುಗಳಲ್ಲಿ ನಡೆಯುತ್ತಿದ್ದ ಎಲ್ಲಾ ಪ್ರಮುಖ ಘಟನೆಗಳ ಕುರಿತು ಖುರ್'ಆನ್ ಸೂಕ್ತಗಳು ಕೂಡ ಅವತರಿಸುತ್ತಿತ್ತು. ಅವುಗಳ ಬಗ್ಗೆ ಇಬ್'ನು ಇಸ್'ಹಾಖರು ಉಲ್ಲೇಖಿಸಿದ ಒಂದು ಘಟನೆಯನ್ನು ತಿಳಿಯೋಣ
ಯುಟೋಪಿಯದಿಂದ ವಿಷಯ ತಿಳಿದು ಸುಮಾರು ಇಪ್ಪತ್ತರಷ್ಟು ಕ್ರೈಸ್ತರು ಮಕ್ಕಾ ನಗರಕ್ಕೆ ಬಂದಿದ್ದರು. ಕಅಬಾಲಯದ ಪಕ್ಕದಲ್ಲಿ ಪ್ರವಾದಿಯವರನ್ನು ﷺ ಭೇಟಿಯಾದರು. ದೂರದಲ್ಲಿ ಈ ಎಲ್ಲಾ ದೃಶ್ಯವನ್ನು ಖುರೈಷಿಗಳು ಅವರ ಗುಂಪಿನ ಜೊತೆಯಲ್ಲಿ ಕುಳಿತು ನೋಡುತ್ತಿದ್ದರು. ಆ ಬಂದಿದ್ದ ವ್ಯಕ್ತಿಗಳು ಪ್ರವಾದಿಯವರಲ್ಲಿ ﷺ ಮಾತುಕತೆ ಆರಂಭಿಸಿದಾಗ, ಪ್ರವಾದಿಯವರು ಇಸ್ಲಾಮಿನ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿಸುತ್ತಾ, ಖುರ್'ಆನ್ ಪಠಣೆಯನ್ನು ಕೂಡ ಮಾಡಿದರು. ಖುರ್'ಆನಿನ ಮಾಧುರ್ಯವು ಅವರ ಮನಸ್ಸಿಗೆ ತರಚಿ, ಅವರು ಅದರ ಅರ್ಥವನ್ನು ಚಿಂತಿಸಿ ಕಣ್ಣೀರು ಸುರಿಸಿದರು. ಪ್ರವಾದಿಯವರ ﷺ ಆಹ್ವಾನಕ್ಕೆ, ಸಮ್ಮತಿಸಿ ಅವರೆಲ್ಲರೂ ಇಸ್ಲಾಮ್ ಸ್ವೀಕರಿಸಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment