ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ವ್ಯಾಪಾರ ಮಕ್ಕಾ ನಿವಾಸಿಗಳ ಪ್ರಮುಖ ಕಸುಬಾಗಿತ್ತು. ಅದೇ ರೀತಿ ಇತರ ಉಪಜೀವನದ ಸಾಲಿನಲ್ಲಿ ಪ್ರಮುಖವಾಗಿದ್ದದ್ದು ಪಶುಸಂಗೋಪನೆಯಾಗಿತ್ತು. ಅಂದರೆ ಜಾನುವಾರುಗಳನ್ನು ಮೇಯಿಸುವ ವೃತ್ತಿ. ಅದರಲ್ಲಿಯೂ ಮೇಕೆ ಮೇಯಿಸುವ ವೃತ್ತಿಯು ಬಹಳ ವೈಶಿಷ್ಟ್ಯತೆಯಿಂದ ಕೂಡಿತ್ತು. ತಮ್ಮ ಬಾಲ್ಯದಿಂದಲೇ ಪ್ರವಾದಿವರ್ಯರಿಗೆ ﷺ ಪಶುಪಾಲನೆಯಲ್ಲಿ ಬಹಳಷ್ಟು ಅರಿವಿತ್ತು. ಬನೂಸಅದ್ ಜನಾಂಗದ ಮಕ್ಕಳೊಂದಿಗೆ ಮೇಕೆಯನ್ನು ಮೇಯಿಸಲು ಹೋದ ಘಟನೆಯನ್ನು ಬಹಳಷ್ಟು ಬಾರಿ ಪ್ರವಾದಿವರ್ಯರು ﷺ ನೆನಪಿಸಿದ್ದರು. ಸಂಬಂಧಿಕರ ಮೇಕೆಯನ್ನು ನಿಶುಲ್ಕವಾಗಿಯೂ, ಇತರರ ಮೇಕೆಯನ್ನು ಸಣ್ಣ ವೇತನ ಪಡೆದುಕೊಂಡು ಮೇಯಿಸುತ್ತಿದ್ದರು. ನಾನು ಮಕ್ಕಾ ನಿವಾಸಿಗಳಿಗಾಗಿ ಚಿಲ್ಲರೆ ನಾಣ್ಯಗಳನ್ನು ಮಾತ್ರ ಪಡೆದುಕೊಂಡು ಮೇಕೆಯನ್ನು ಮೇಯಿಸಿದ್ದೇನೆ ಎಂದು ಪ್ರವಾದಿವರ್ಯರು ﷺ ಹೇಳುತ್ತಿದ್ದರು. ಈ ಘಟನೆಯನ್ನು ನೆನಪಿಸುತ್ತಾ ಜಾಬಿರ್'ರವರು (ರ) ಈ ರೀತಿ ಹೇಳುತ್ತಾರೆ: ನಾವು ಒಮ್ಮೆ ಪುಣ್ಯ ಪ್ರವಾದಿಯವರೊಂದಿಗೆ ﷺ ಅರಾಕ್ ಮರದ ಹಣ್ಣುಗಳನ್ನು ಕೀಳುತ್ತಿದ್ದ ಸಂದರ್ಭದಲ್ಲಿ ತಕ್ಷಣವೇ ಪ್ರವಾದಿವರ್ಯರು ﷺ ಹೇಳಿದರು: ಒಳ್ಳೆಯ ಬಣ್ಣವಿರುವ ಹಣ್ಣುಗಳನ್ನು ತೆಗೆಯಿರಿ ಅದು ತುಂಬಾ ರುಚಿಯಾಗಿವಾಗಿರುತ್ತದೆ ನಾನು ಮೇಕೆ ಮೇಯಿಸುತ್ತಿದ್ದ ಸಂದರ್ಭದಲ್ಲಿ ಅದನ್ನು ಕೀಳುತಿದ್ದೆ ಎಂದು. ಏನು ನೀವು ಮೇಕೆಯನ್ನು ಮೇಯಿಸಿದ್ದೀರ.? ಎಂದು ನಾವು ಕೇಳಿದಾಗ ಹೌದು ಎಲ್ಲಾ ಪ್ರವಾದಿಗಳೂ ಕೂಡ ಮೇಕೆಯನ್ನು ಮೇಯಿಸಿದ್ದಾರಲ್ವಾ ಎಂದು ಪ್ರವಾದಿಯವರು ﷺ ಹೇಳಿದರು. ಮತ್ತೊಮ್ಮೆ ಪ್ರವಾದಿವರ್ಯರು ﷺ ಬಹಳ ಅಭಿಮಾನದಿಂದ ಹೀಗೆ ಹೇಳಿದ್ದರು. ಪ್ರವಾದಿ ಮೂಸ (ಅ) ರವರನ್ನು ಪ್ರವಾದಿಯಾಗಿ ನಿಯೋಗಿಸಿದ್ದು ಅವರು ಮೇಕೆ ಮೇಯಿಸುತ್ತಿದ್ದ ಸಂದರ್ಭದಲ್ಲಾಗಿತ್ತು, ಪ್ರವಾದಿ ದಾವುದ್ (ಅ) ಅವರನ್ನೂ ಕೂಡ ಅದೇ ರೀತಿಯಾಗಿತ್ತು ನಿಯೋಗಿಸಿದ್ದು, ಅಜಿಯಾದ್ ಎನ್ನುವ ಸ್ಥಳದಲ್ಲಿ ನನ್ನ ಸಂಬಂಧಿಕರ ಮೇಕೆಯ ಹಿಂಡನ್ನು ನಾನು ಮೇಯಿಸುತ್ತಿದ್ದ ಸಂದರ್ಭದಲ್ಲಾಗಿತ್ತು ನನ್ನನ್ನು ಪ್ರವಾದಿಯಾಗಿ ನಿಯೋಗಿಸಿದ್ದು ಎಂದು. ಈ ಘಟನೆಯನ್ನು ಅಬೂಸಈದ್ (ರ) ರವರಾಗಿದ್ದಾರೆ ಉಲ್ಲೇಖಿಸಿದ್ದು.
ಮೇಕೆ (ಆಡು) ಮೇಯಿಸುವ ವೃತ್ತಿಯು ಉಪಜೀವನ ಮಾತ್ರವಲ್ಲದೆ ಅದರಲ್ಲಿ ಬಹಳಷ್ಟು ಒಳಿತುಗಳು ಕೂಡ ಅಡಗಿತ್ತು. ಬಹಳ ವಿಶಾಲವಾದ ಒಂದು ಜನತೆಯನ್ನು ಭವಿಷ್ಯದಲ್ಲಿ ನಿಯಂತ್ರಿಸುವ ಒಬ್ಬ ನಾಯಕನಿಗಿದ್ದ ತರಬೇತಿಯಾಗಿತ್ತು ಅದು. ಮೇಕೆಯ ಹಿಂಡನ್ನು ಮೇಯಿಸುವವರು ಬಹಳಷ್ಟು ಶ್ರದ್ಧೆಯಿಂದಿರಬೇಕಾಗುತ್ತದೆ. ಸಾಮಾನ್ಯವಾಗಿ ಮೇಕೆಗಳು ದುರ್ಬಲವಾಗಿರುವ ಕಾರಣ ಬಹಳಷ್ಟು ಶ್ರದ್ಧೆಯಿಂದಲೇ ಕಾಳಜಿವಹಿಸಬೇಕಾಗುತ್ತದೆ. ಮೇಕೆಗಳು ಗುಂಪಿನಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಸಾಧ್ಯತೆಯಿರುತ್ತದೆ. ತೋಳದ ವಂಚನೆಯಿಂದಲೂ ರಕ್ಷಿಸಬೇಕಾಗಿತ್ತದೆ. ಕಳ್ಳತನವಾಗದ ಹಾಗೆಯೂ ಕಾಯಬೇಕಾಗುತ್ತದೆ. ಬಹಳ ತಾಳ್ಮೆಯಿಂದಲೇ ಇದನ್ನೆಲ್ಲ ನೋಡಬೇಕಾಗುತ್ತದೆ. ಇಂತಹ ಒಂದು ತರಬೇತಿಯಿಂದ ಸಿಗುವ ಪ್ರಯೋಜ ಲೆಕ್ಕವಿಲ್ಲದಷ್ಟು. ಇದೆಲ್ಲವನ್ನೂ ಕಲಿಯುವ ಅವಕಾಶವಾಗಿತ್ತು ಪುಣ್ಯ ಪ್ರವಾದಿಯವರಿಗೆ ﷺ ಲಭಿಸಿದ್ದು. ಈ ಘಟನೆಗಳನ್ನು ಉದ್ದೇಶಿಸಿ ವಿಶ್ವ ವಿಖ್ಯಾತ ಪಂಡಿತರಾದ ಇಬ್'ನು ಹಜರ್'ರವರು (ರ) ಈ ರೀತಿ ವಿವರಿಸುತ್ತಾರೆ. ಪುಣ್ಯ ಪ್ರವಾದಿಯವರನ್ನು ﷺ ಲೋಕಕ್ಕೆ ನಾಯಕರಾಗಿ ನಿಯೋಗಿಸಿದ ನಂತರವೂ ಕೂಡ ತಾನು ಬಾಲ್ಯದಲ್ಲಿ ನಿರ್ವಹಿಸಿದ್ದ ಪಶುಪಾಲನೆ ವೃತ್ತಿಯ ಕುರಿತು ಹೇಳುತ್ತಲಿದ್ದರು ಅದು ಪ್ರವಾದಿವರ್ಯರ ﷺ ಅತೀ ದೊಡ್ಡ ವಿನಮ್ರತೆಯಾಗಿತ್ತು ಎಂದು. ಶೂನ್ಯದಿಂದ ಆರಂಭವಾಗಿ ಎಲ್ಲಾ ಅನುಗ್ರಹವೂ ಲಭಿಸಿದ್ದು ಅಲ್ಲಾಹನ ಉದಾರತೆಯಿಂದ ಮಾತ್ರವಾಗಿದೆ ಎಂದು ಚಿಂತಿಸಲು ಕೂಡ ಆಗಿದೆ.
ಪ್ರವಾದಿವರ್ಯರ ﷺ ಆರ್ಥಿಕ ಪರಿಶುದ್ದಿಯನ್ನು ಕಲಿಸುವ ಅಧ್ಯಾಯವಾಗಿದೆ ಇದು. ಅಷ್ಟೇ ಅಲ್ಲ ಕಷ್ಟ ಪಡುವ ಎಲ್ಲಾ ವ್ಯಕ್ತಿಗಳ ಮೂಲ್ಯಗಳನ್ನೂ ಒಳಗೊಂಡಿದೆ. ಅಲ್ಲಾಹನಿಗೆ ಅವನ ಪ್ರೀತಿಯ ಪ್ರವಾದಿವರ್ಯರಿಗೆ ﷺ ಯಾವುದೇ ಕಷ್ಟವಿಲ್ಲದೆ ಸಂಪತ್ತು ನೀಡಬಹುದಿತ್ತು ಆದರೆ ಇಲ್ಲಿ ಮನುಷ್ಯ ಸಮೂಹಕ್ಕೆ ಒಬ್ಬರು ಮಾದರಿಯೋಗ್ಯ ಪ್ರವಾದಿಯವರನ್ನು ﷺ ನೀಡಬೇಕಿತ್ತು. ಅನುಮತಿಯಿರುವ ಯಾವುದೇ ವೃತ್ತಿಯನ್ನೂ ಸ್ವೀಕರಿಸಬಹುದು. ಸಾಮಾನ್ಯವಾಗಿ ಪಶುಪಾಲನೆ ವೃತ್ತಿಯನ್ನು ಕೆಳಮಟ್ಟದ ವೃತ್ತಿಯಾಗಿ ಕಾಣುತ್ತಿದ್ದರಲ್ಲವೇ ಆದರೆ ಪ್ರವಾದಿವರ್ಯರು ﷺ ಅದನ್ನು ಬಹಳ ಅಭಿಮಾನದಿಂದ ಎತ್ತಿ ಹಿಡಿದರು. ಮೇಕೆ ಐಶ್ವರ್ಯವಾಗಿದೆ, ಒಂಟೆ ಅಭಿಮಾನವಾಗಿದೆ, ಅತ್ಯುತ್ತಮ ಆಹಾರ ಸ್ವಂತವಾಗಿ ಕಷ್ಟಪಟ್ಟು ದುಡಿದು ಸಂಪಾದಿಸುದರಲ್ಲಾಗಿದೆ ಎಂದಾಗಿತ್ತು ಪುಣ್ಯ ಪ್ರವಾದಿಯವರು ಸಂದೇಶ ನೀಡಿದ್ದು.
ಜನರೊಂದಿಗೆ ಬೆರೆತು ವ್ಯವಹಾರ ನಡೆಸುವ ಸಂದರ್ಭಗಳಲ್ಲಾಗಿದೆಯಲ್ಲವೇ ಒಬ್ಬರ ಕುರಿತು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುವುದು. ಆ ಸಂದರ್ಭದಲ್ಲಿ ಮಾತ್ರವಲ್ಲವೇ ಪ್ರಾಮಾಣಿಕತೆ, ನ್ಯಾಯ, ನಿಷ್ಠೆ ಮುಂತಾದ ಸದ್ಗುಣಗಳ ಕುರಿತು ತಿಳಿಯಲು ಸಾಧ್ಯವಾಗುವುದು. ಪ್ರವಾದಿಯವರ ﷺ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲು ಉತ್ತಮ ಅವಕಾಶವಾಗಿತ್ತು ಅವರ ಈ ರೀತಿಯ ಉತ್ತಮ ವಹಿವಾಟುಗಳು. ಸಮೂಹದೊಂದಿಗೆ ಜೀವಿಸುತ್ತಾ ಒಳಿತನ್ನು ಇನ್ನೊಬ್ಬರಿಗೆ ತಿಳಿಸುತ್ತಾ, ಕೆಡುಕುಗಳನ್ನು ವಿರೋಧಿಸುತ್ತಾ ಬದುಕುವುದರೊಂದಿಗೆ ಸಮೂಹಕ್ಕೆ ಮಾದರಿಯಾಗುವ ರೀತಿಯಾಲ್ಲಾಗಿತ್ತು ಪುಣ್ಯ ಪ್ರವಾದಿಯವರ ﷺ ಜೀವನ ಶೈಲಿ.
ಪುಣ್ಯ ಪ್ರವಾದಿಯವರ ﷺ ಯೌವನದ ಕುರಿತು ತಿಳಿದುಕೊಂಡವರು, ಸ್ವಾಭಾವವನ್ನು ಅರಿತುಕೊಂಡವರು ಆ ಸಂದರ್ಭದಲ್ಲಿ ಪುಣ್ಯ ಪ್ರವಾದಿಯವರಿಗೆ ﷺ ಒಟ್ಟಾಗಿ ನೀಡಿದ ಹೆಸರಾಗಿತ್ತು ಅಲ್ ಆಮೀನ್ ಅಥವಾ ವಿಶ್ವಾಸಯೋಗ್ಯ ಎಂದು. ಪ್ರಸಿದ್ಧ ಇತಿಹಾಸಕಾರನಾದ ಸರ್ ವಿಲ್ಯನ್ ಮೂರ್'ರವರು ಪುಣ್ಯ ಪ್ರವಾದಿಯವರ ﷺ ಕುರಿತು "The fair character and honorable bearing of the unobtrusive youth won the approbation of his fellow citizens :and he received the title by common consent of Al-Ameen,the Trustworthy"(The life of Muhammed) ಎಂದು ಬರೆದಿದ್ದಾರೆ.
ಎಲ್ಲಾ ಸಂದರ್ಭಗಳಲ್ಲೂ ಮಾದರಿಯಾಗಿ ಪುಣ್ಯ ಪ್ರವಾದಿಯವರ ﷺ ಯೌವನವನ್ನು ಗುರುತಿಸಲ್ಪಡುವ ವಾತಾವರಣದ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
(ಮುಂದುವರಿಯುವುದು...)

No comments:
Post a Comment