Abu Hisham Saquafi

Official Website Of Hafiz Ilyas Saquafi Padaladka

Thursday, July 7, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -22 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

 ಅಗಲವಾದ ಕಣ್ಣುಗಳಾಗಿತ್ತು ಪ್ರವಾದಿಯವರದ್ದು ﷺ, ಕಾಡಿಗೆ ಬಳಸದಿದ್ದರೂ ಕಾಡಿಗೆ ಬಳಸಿದ ಹಾಗೆ ಕಾಣುತಿತ್ತು. ಕಣ್ಣಿನ ಬಿಳಿ ಭಾಗದಲ್ಲಿ ಕೆಂಪು ಮಿಶ್ರಿತ ಹೊಳಪು ಇರುತ್ತಿತ್ತು, ಸುಂದರವಾದ ಕಪ್ಪು ಕಣ್ಪೊರೆಯಾಗಿತ್ತು, ತೆಳುವಾಗಿ ಉದ್ದವಾದ ಕಪ್ಪು ಕಣ್'ರೆಪ್ಪೆಲಾಗಿತ್ತು, ಕಣ್ಣಿನ ಮೂಲೆಗಳಲ್ಲಿ ತೆಳುವಾದ ಕೆಂಪು ಬಣ್ಣವಿತ್ತು, ಸುಂದರವಾದ ರೋಮಗಳಿರುವ ಹುಬ್ಬುಗಳಾಗಿತ್ತು. ದೂರ ನಿಂತು ನೋಡುವಾಗ ಎರಡು ಹುಬ್ಬುಗಳ ನಡುವೆ ಅಂತರವೇ ಇಲ್ಲದ ಹಾಗೆ ಕಾಣುತ್ತಿತ್ತು, ಆದರೆ ಅದರ ನಡುವೆ ಸಣ್ಣ ಪ್ರಕಾಶಮಯ ಅಂತರವಿತ್ತು, ಕೋಪ ಬಂದಾಗ ಅಲ್ಲಿರುವ ನರಗಳು ಎದ್ದು ಕಾಣುತ್ತಿತ್ತು, ಆಗ ಅದರ ನಡುವಿನ ಅಂತರವು ಎಲ್ಲರಿಗೂ ಸ್ಪಷ್ಟವಾಗಿ ಕಾಣುತಿತ್ತು. ಅವರ ನೋಟವು ಎಂಥವರನ್ನೂ ಗಮನಿಸುವಂತಿತ್ತು, ಕೆಳಗೆ ನೋಡಿ ಅತಿ ವಿನಮ್ರತೆಯಿಂದ ನಡೆಯುತ್ತಿದ್ದರು. ಅನುಚಿತವಾದ ದೃಶ್ಯಗಳು ಕಂಡಾಗ ವಿಶೇಷ ರೀತಿಯಲ್ಲಿ ನಾಚಿಕೆಯಿಂದ ಕಣ್ಣು ಮುಚ್ಚುತ್ತಿದ್ದರು, ಆಕಾಶದ ಅದ್ಭುತ ವಿಸ್ಮಯಗಳನ್ನು ಕಂಡು ಆಲೋಚಿಸುತ್ತಾ, ಬಹಳ ಹೊತ್ತು ನೋಡುತ್ತಾ ನಿಂತಿರುತಿದ್ದರು.

      ವಿಶಾಲವಾದ ಹಣೆಯಾಗಿತ್ತು ಪ್ರವಾದಿಯವರದ್ದು ﷺ, ಸಭೆಯಲ್ಲಿ ಕುಳಿತಿರುವಾಗ ಹಣೆಯ ಭಾಗದಿಂದ ವಿಶೇಷವಾದ ಬೆಳಕು ಹೊರಹೊಮ್ಮುತ್ತಿತ್ತು, ಕೆಲವೊಮ್ಮೆ ಅದು ದೀಪದ ಹಾಗೆ ಹೊಳೆಯುತ್ತಿತ್ತು. ಮೃದುವಾದ ಕೆನ್ನೆಗಳಾಗಿತ್ತು, ಮಾಂಸಗಳು ಅಧಿಕವಾಗಿಯೂ ಇರಲಿಲ್ಲ, ತೆಳ್ಳಗೆ ಮೂಳೆ ಎದ್ದು ಕಾಣುವಾಗೆಯೂ ಇರಲಿಲ್ಲ. ಕೆನ್ನೆಗಳಲ್ಲಿ ಶೋಭಿಸುತಿದ್ದ ಹೊಳಪಿನ ಕುರಿತು ಮಾತ್ರ ಬಹಳಷ್ಟು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ನಮಾಝಿನಲ್ಲಿ ಸಲಾಂ ಹೇಳುವಾಗ ಹಿಂಭಾಗದಲ್ಲಿರುವವರು, ವಿಶೇಷವಾಗಿ ಆ ಕೆನ್ನೆಗಳನ್ನು ಗಮನಿಸುತ್ತಿದ್ದರು. ಕೆನ್ನೆಗಳನ್ನು ಮಾತ್ರ ಗಮನವಿಟ್ಟು ನೋಡಿದರೆ ಸಂಪೂರ್ಣ ಶರೀರದ ಸೌಂದರ್ಯವು ಎದ್ದು ಕಾಣುತ್ತಿತ್ತು. ಶರೀರದ ಯಾವುದೇ ಭಾಗಗಳಲ್ಲೂ ಸುಕ್ಕುಗಳು ಕಾಣುತ್ತಿರಲಿಲ್ಲ. 

   ಪ್ರವಾದಿವರ್ಯರ ﷺ ಮೂಗು ದೂರ ನಿಂತು ನೋಡಿದರೆ ಉದ್ದನೆಯ ಮೂಗಿನಂತೆ ಕಾಣುತ್ತಿತ್ತು, ಆದರೆ ವಾಸ್ತವದಲ್ಲಿ ಮೂಗಿನ ತುದಿಯು ತೆಳ್ಳಗೆ ಪ್ರಕಾಶಮಯವಾಗಿತ್ತು. ಮಧ್ಯದಲ್ಲಿರುವ ಸಣ್ಣ ಏರಿಕೆಯು ಪ್ರಕಾಶಮಾನವಾಗಿ ಗಾಂಭೀರ್ಯತೆಯಿಂದ ಕೂಡಿತ್ತು. ಅವರ ಬಾಯಿಯೂ ಕಿರಿದಾಗಿರಲಿಲ್ಲ, ಅಗಲವಾಗಿ ಸುಂದರವಾಗಿತ್ತು. ಬಾಯಿಯ ರಚನೆ ಹಾಗೂ ನೋಟವು ಮಾತಿನ ಸೌಂದರ್ಯ ಹಾಗೂ ಸ್ಪಷ್ಟತೆಯನ್ನು ನಿರ್ಧರಿಸುತ್ತದೆಯಲ್ಲವೇ. ಉದ್ದವಾದ ತುಟಿಯಾಗಿತ್ತು, ಹೂವುಗಳು ತುಂಬಿರುವ ಕತ್ತರಿಸಿದ ಸಸ್ಯಗಳ ಸೌಂದರ್ಯವನ್ನು ನೆನಪಿಸುವಂತಿತ್ತು ಅವರ ತುಟಿಗಳು. ಪ್ರವಾದಿಯವರ ﷺ ತುಟಿಗಳು ಸಂಧಿಸುವ ಭಾಗವು ತೆಳುವಾಗಿ ಮೃದುವಾಗಿತ್ತು. ಹಿಮದ ಹನಿಗಳಂತೆ ಕಾಣುವ ಹಲ್ಲುಗಳಾಗಿತ್ತು ಅವರದ್ದು, ಹವಳದ ಮುತ್ತು ಉದುರವಂತಿತ್ತು ಅವರ ಮುಗುಳ್ನಗು. ಹಲ್ಲುಗಳ ನಡುವಿನಿಂದ ಬೆಳಕುಗಳು ಕಾಣಿಸುತಿತ್ತು, ಮುಂಭಾಗದ ಹಲ್ಲಿನ ನಡುವೆ ಕಾಣುತ್ತಿದ್ದ ಸಣ್ಣ ಅಂತರಗಳ ನಡುವಿನಿಂದ ಕೆಲವೊಮ್ಮೆ ಬೆಳಕು ಕಾಣುತಿತ್ತು. ಗೋಡೆಗಳಲ್ಲಿ ಆ ಬೆಳಕು ಪ್ರತಿಬಿಂಬಿಸುತ್ತಿತ್ತು. ಬೆಳಕು ಎಲ್ಲಿಂದ ಬರುತ್ತಲಿದೆಯೆಂದು ನೋಡುವಾಗ ಪ್ರವಾದಿವರ್ಯರ ﷺ ಅನುಚರರಿಗೆ ಅದು ಅರ್ಥವಾಗುತ್ತಿತ್ತು. 

    ಅವರ ಮೌನಕ್ಕೂ ಕೂಡ ವಾಕ್'ಚಾತುರ್ಯವಿತ್ತು. ನಿಜಕ್ಕೂ ಅದೊಂದು ಚಿಂತನಶೀಲವಾಗಿರುತಿತ್ತು. ಅವರ ಮಾತಿಗೆ ಎಂತಹ ಸೌಂದರ್ಯವಿತ್ತೆಂದರೆ.? ಪ್ರತಿಯೊಂದು ವಾಕ್ಯಗಳು ಕೂಡ ಸ್ಪಷ್ಟವಾದ  ಸಂಭಾಷಣೆಯಾಗಿತ್ತು, ಕೆಲವೇ ಕೆಲವು ಮಾತುಗಳಲ್ಲಿ ಬಹಳಷ್ಟು ವಿಚಾರಗಳನ್ನು ತಿಳಿಸುತ್ತಿದ್ದರು. "ಜವಾಮಿ ಉಲ್ ಕಲಿಮ್" ಎಂದಾಗಿದೆ ಅರಬಿಯಲ್ಲಿ ಅದಕ್ಕೆ ಹೇಳುವುದು. ಒಂದೇ ಒಂದು ಮಾತುಗಳನ್ನು ಕೂಡ ಬಿಡದೆ ಸಭಿಕರು ಅವರ ಸಂಭಾಷಣೆಯನ್ನು ಕೇಳುತ್ತಿದ್ದರು. ತಲೆಯ ಮೇಲೆ ಕುಳಿತಿರುವ ಗಿಳಿ ಹಾರಿ ಹೋಗದಂತೆ ಯಾವ ರೀತಿ ಎಚ್ಚರ ವಹಿಸುತ್ತೆವೆಯೋ, ಅದೇ ರೀತಿ ಪ್ರವಾದಿವರ್ಯರ ﷺ ಸಂಭಾಷಣೆಯನ್ನು ಅವರ ಅನುಚರರು ಕೇಳುತ್ತಿದ್ದರೆಂದು ಹದೀಸುಗಳಲ್ಲಿ ಉಲ್ಲೇಖಿಸಲಾಗಿದೆ. 

     ಅಧಿಕವಾಗಿ ಅನವಶ್ಯಕ ಮಾತುಗಳನ್ನು ಆಡುತ್ತಿರಲಿಲ್ಲ, ಅಂತಹ ಮಾತುಗಳಲ್ಲಿ ಅವರಿಗೆ ಆಸಕ್ತಿಯೂ ಇರಲಿಲ್ಲ, ಒಮ್ಮೆಯು ಕೂಡ ಕೆಟ್ಟ ಮಾತುಗಳನ್ನು ಆಡಿರಲಿಲ್ಲ. ಮನುಷ್ಯರ ಖಾಸಗಿ ಅಂಗಗಳ ಕುರಿತು ಅಥವಾ ಇನ್ಯಾವುದೋ ವಿಷಯಗಳ ಕುರಿತು ಹೇಳಬೇಕಾಗಿ ಬಂದರೆ, ಅದನ್ನು ವ್ಯಂಗ್ಯವಾಗಿ ತಿಳಿಸುತ್ತಿದ್ದರು. ಯಾರನ್ನು ಅಪಮಾನಿಸುತ್ತಿರಲಿಲ್ಲ, ಶಪಿಸುವ ಮಾತುಗಳನ್ನೂ ಆಡುತ್ತಿರಲಿಲ್ಲ. 

    ಅಗಲವಾದ ಭುಜಗಳಲಾಗಿತ್ತು, ಭುಜಗಳ ನಡುವೆ ವಿಶಾಲತೆಯಿತ್ತು. ಕುತ್ತಿಗೆಯ ಭಾಗ ಬೆಳ್ಳಿಯಂತೆ ಹೊಳೆಯುತ್ತಿತ್ತು. ಮೃದುವಾದ ಚರ್ಮವನ್ನು ಹೊಂದಿದ್ದರು. ಸಾಮಾನ್ಯವಾಗಿ ಕುತ್ತಿಗೆಯಲ್ಲಿ ಕಾಣುವ ಸುಕ್ಕುಗಳು ಪ್ರವಾದಿವರ್ಯರಲ್ಲಿ ﷺ ಕಾಣುತ್ತಿರಲಿಲ್ಲ. ಅಂಗಿ ಧರಿಸದಿದ್ದರೂ, ತಲೆ ಕೂದಲು ಕುತ್ತಿಗೆಗೆ ತಲುಪುದಿದ್ದರೂ, ಕುತ್ತಿಗೆ ಮಾತ್ರ ಬಹಳ ಪ್ರಕಾಶವಾಗಿ ಗೋಚರಿಸುತ್ತಿತ್ತು. ಯಾರೇಯಾದರು ಆ ಸೌಂದರ್ಯವನ್ನು ಗಮನಿಸಿದೆ ಇರಲಾರರು. ಪ್ರವಾದಿವರ್ಯರ ﷺ ಎದೆ ಹಾಗು ಹೊಟ್ಟೆ ಒಂದೇ ರೀತಿಯಾಗಿ ಕಾಣುತಿತ್ತು, ಹೊಟ್ಟೆ ಸ್ವಲ್ಪವೂ ಹಿಗ್ಗಿರಲಿಲ್ಲ.  ಹೊಟ್ಟೆಯ ಕೆಳಗಿನ ಪಟ್ಟು ಸೊಂಟದ ಕೆಳಭಾಗದಲ್ಲಿತ್ತು.

(ಮುಂದುವರಿಯುವುದು...)

No comments: