Abu Hisham Saquafi

Official Website Of Hafiz Ilyas Saquafi Padaladka

Sunday, July 10, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -24 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

   ನಾವು ಚರಿತ್ರೆಗೆ ಹಿಂತಿರುಗಿ ಬರೋಣ, ಪುಣ್ಯ ಪ್ರವಾದಿಯವರ ﷺ ಸೌಂದರ್ಯದ ಸ್ವರೂಪವನ್ನು ತಿಳಿದುಕೊಂಡೆವು. ಯಾರೇ ಆದರು ತಮ್ಮ ಮಕ್ಕಳಿಗೆ ಆಯ್ಕೆಮಾಡುವ, ವರನಿಗಿರಬೇಕಾದ ಎಲ್ಲಾ ಗುಣಗಳೂ ಪ್ರವಾದಿಯವರಲ್ಲಿತ್ತು ﷺ. ಯಾವುದೇ ಹೆಣ್ಣು ತಾನು ಆಸೆ ಪಡುವ, ಪ್ರಿಯತಮನಿಗಿರಬೇಕಾದ  ಎಲ್ಲಾ ಸೌಂದರ್ಯವೂ ಪ್ರವಾದಿಯವರಲ್ಲಿತ್ತು ﷺ. ವಿಶ್ವಸುಂದರಿಯನ್ನೇ ಆಯ್ಕೆ ಮಾಡಿದರೂ ಪ್ರವಾದಿವರ್ಯರ ﷺ ಸೌಂದರ್ಯದ ಮುಂದೆ ಸೋಲಲೇ ಬೇಕಿತ್ತು. 
      ಹೀಗಿರುವಾಗ ಖದೀಜರ ಮನೆಯೊಳಗಿನಿಂದ ಕೆಲವೊಂದು ಜವಾಬ್ದಾರಿಗಳಿಗೆ ತಯಾರಿ ನಡೆಸಲಾಗುತ್ತಿತ್ತು. ಇದೊಂದು ಕೇವಲ ಭಾವನಾತ್ಮಕ ವಿವಾಹ ಚರ್ಚೆಯಾಗಿರಲಿಲ್ಲ, ಒಂದು ಗಂಡಿಗೆ ಒಂದು ಹೆಣ್ಣು ಬೇಕಲ್ಲವೇ ಎನ್ನುವ ಅರ್ಥದಲ್ಲಿಯೂ ಆಗಿರಲಿಲ್ಲ. 

    ಮಕ್ಕ ಪಟ್ಟಣವನ್ನು, ಇಡೀ ಜಗತ್ತನ್ನು, ಬದಲಿಸುವ ವಿವಾಹನ್ವೇಷಣೆಯಾಗಿತ್ತದು. ಖದೀಜ (ರ) ತನ್ನ ನಂಬಿಕಸ್ಥೆಯಾದ ನಫೀಸ ಬಿಂತ್ ಮುನ್'ಯಳನ್ನು ಕರೆದು, ಮುಹಮ್ಮದರಲ್ಲಿ ﷺ ವಿವಾಹವಾಗುವ ಆಗ್ರಹವನ್ನು ತಿಳಿಸಿ, ವಿವಾಹಕ್ಕೆ ಮುಹಮ್ಮದರಿಗಿರುವ ﷺ ಆಸಕ್ತಿಯನ್ನು ತಿಳಿಯಲು ಹೇಳಿದರು. ನಫೀಸ ಈ ಘಟನೆಯ ಕುರಿತು ಈ ರೀತಿ ವಿವರಿಸುತ್ತಾರೆ. ನಾನು ರಹಸ್ಯವಾಗಿ ಮುಹಮ್ಮದರ ﷺ ಬಳಿ ತೆರಳಿ, ನಿಮಗೆ ಮದುವೆಯಾಗುವ ಆಸೆಯಿಲ್ಲವೇ.? ಏನಾದ್ರು ಯೋಚಿಸಿದ್ದೀರ.? ಅದಕ್ಕಿರುವ ಅಡಚಣೆಯಾದರೂ ಏನು.? ಎಂದು ನೇರವಾಗಿ ಕೇಳಿದೆನು. ತಕ್ಷಣವೇ ಮದುವೆಗೆ ಅವಶ್ಯಕವಾದ ಹಣ ನನ್ನ ಬಳಿಯಿಲ್ಲವೆಂದು ಅವರು ಹೇಳಿದರು. ಹಣಕಾಸಿನ  ಸಮಸ್ಯೆಯಲ್ಲ, ಶ್ರೀಮಂತ ಅಥವಾ ಉದಾತ್ತ ಸೌಂದರ್ಯದ  ಕುರಿತು ಏನಾದ್ರು ಯೋಚಿಸಿದ್ದೀರ.? ಅಂತಹ ಒಂದು ಆಹ್ವಾನ ನಿಮ್ಮನ್ನುಡುಕಿ ಬಂದರೆ? ನೀವು ಒಪ್ಪುತ್ತೀರ? ಎಂದು ಪುನಃ ಕೇಳಿದೆನು. ಯಾರ ಕುರಿತು ಕೇಳುತ್ತಿದ್ದೀರ ಎಂದು ಪ್ರವಾದಿಯವರು ﷺ ಕೇಳಿದಾಗ ಒಂದೇ ಮಾತಿನಲ್ಲಿ ಖದೀಜ ಅಂದೆನು. ಏನು ಅದ್ಹೇಗೆ ಸಾಧ್ಯವಾಗುತ್ತೆ.? ನನ್ನಲ್ಲಿ ಪುನಃ ಕೇಳಿದರು. ಅದೆಲ್ಲವನ್ನೂ ನಾನೇ ನೋಡಿಕೊಳ್ಳುತ್ತೇನೆ, ಅದನ್ನು ಬೇಕಾದ ರೀತಿಯಲ್ಲಿ ನಾನೇ ನಿಭಾಯಿಸುತ್ತೇನೆ ಎಂದು ಹೇಳಿದೆನು. ಪ್ರವಾದಿಯವರಿಂದ ﷺ ವಿರೋಧವಿಲ್ಲವೆಂದು ಅರಿತ ನಫೀಸ, ಖದೀಜರಿಗೆ ಇದರ ಕುರಿತು ಮಾಹಿತಿ ನೀಡಿದರು. ಖದೀಜರು (ರ) ಅಧಿಕೃತವಾಗಿ ಪ್ರವಾದಿಯವರ ﷺ ಬಳಿ ಒಬ್ಬ ವ್ಯಕ್ತಿಯನ್ನು ಕಳುಹಿಸಿ ಅಬೂತ್ವಾಲಿಬರಿಗೆ ಮಾಹಿತಿ ನೀಡಿದರು. 

     ಇನ್ನೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು. ನಫೀಸರಿಂದ  ಮಾಹಿತಿ ಲಭಿಸಿದ ನಂತರ, ಖದೀಜರು ನೇರವಾಗಿ ಪ್ರವಾದಿಯವರನ್ನು ﷺ ಭೇಟಿಯಾಗಿ, ನೀವು ಮದುವೆಯಾಗಲು ಬಯಸುತ್ತಿದ್ದೀರಲ್ವಾ.? ಎಂದು ಕೇಳಿದಾಗ. ಯಾರೊಂದಿಗೆ.? ಎಂದು ಪ್ರವಾದಿಯವರು ﷺ ಕೇಳಿದರು. ನನ್ನ ಜೊತೆಯಲ್ಲೆಂದು ಖದೀಜ (ರ) ಹೇಳಿದಾಗ, ಅದ್ಹೇಗೆ ಸಾಧ್ಯವಾಗುತ್ತೆ.? ನೀವು ಖುರೈಶಿಗಳಲ್ಲಿ ಉನ್ನತ ಸ್ಥಾನದಲ್ಲಿರುವ ಒಬ್ಬರು ವಿಧವೆ, ಆದರೆ ನಾನು ಒಂದು ಖುರೈಶಿ ಕುಟುಂಬದ ಒಬ್ಬ ಅನಾಥ ಎಂದು ಹೇಳಿದರು. ಅದಕ್ಕೆ ಅದ್ಯಾವುದು ನನಗೆ ಸಮಸ್ಯೆಯಲ್ಲ, ನನಗೆ ಅಧಿಕೃತವಾಗಿ ಅನ್ವೇಷಣೆ ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆಂದು ಖದೀಜ (ರ) ಹೇಳಿದರು. ಮತ್ತೊಂದು ಉಲ್ಲೇಖದಲ್ಲಿ ಈ ರೀತಿಯೂ ಇದೆ. ಯಬ್'ನ ಅಮ್ಮೀ (ಓ ಚಿಕ್ಕಪ್ಪನ ಮಗನೇ) ನಿಮ್ಮ ಕುಟುಂಬ, ಸ್ವಭಾವದ ಮಹಿಮೆ, ಪ್ರಾಮಾಣಿಕತೆ, ನಿಮಗೆ ಸಮಾಜದಲ್ಲಿರುವ ಮನ್ನಣೆ, ಇದೆಲ್ಲವೂ ನನ್ನನ್ನು ಇಂತಹ ಒಂದು ಆಸೆಗೆ ಪ್ರೇರೇಪಿಸಿತೆಂದು ಖದೀಜ ಹೇಳಿದ್ದರು. 

     ನಿಮ್ಮ ಕುಟುಂಬದವರನ್ನು ನಾಳೆಯೇ, ನಮ್ಮ ಮನೆಗೆ ಕಳುಹಿಸುತ್ತೀರಾ ಎಂದು ಖದೀಜ ಕೇಳಿದಾಗ, ಪ್ರವಾದಿಯವರು ﷺ ಅಬೂತ್ವಾಲಿಬರಿಗೆ ಮಾಹಿತಿ ತಿಳಿಸಿ, ಮರುದಿನವೇ ಖದೀಜರ (ರ) ಮನಗೆ ಅಬೂತ್ವಾಲಿಬರು ತೆರಳಿದರು ಬಹಳ ಗೌರವದಿಂದಲೇ ಅವರನ್ನು ಸ್ವೀಕರಿಸಿಲಾಗಿತ್ತು. ನಂತರ ಖದೀಜ ಓ ಅಬೂತ್ವಾಲಿಬರೇ ನೀವು ನನ್ನ ಚಿಕ್ಕಪ್ಪರ ಜೊತೆ ಮಾತಾಡಿ, ನಿಮ್ಮ ಸಹೋದರನ ಮಗನಾದ ಮುಹಮ್ಮದರನ್ನು ನನ್ನ ಜೊತೆ ಮದುವೆ ಮಾಡಲು ಹೇಳಿರಿ ಎಂದು ಹೇಳಿದರು. ಇದೇನು ಹೇಳ್ತಾ ಇದ್ದೀರ ಖದೀಜ, ತಮಾಷೆ ಮಾಡುತ್ತಿಲ್ಲ ತಾನೇ.? ಎಂದು ಅಬೂತ್ವಾಲಿಬರು ಕೇಳಿದಾಗ, ಇಲ್ಲ ಸತ್ಯವನ್ನೇ ಹೇಳ್ತಿದ್ದೇನೆ ಅಲ್ಲಾಹನ ತೀರ್ಮಾನ ಅದುವೇ ಆಗಿದೆಯೆಂದು ಖದೀಜ ಹೇಳಿದರು. ಅಬೂತ್ವಾಲಿಬ್ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದರು. 

      ವಿವಾಹ ನಿಶ್ಚಯ ಕಳೆಯಿತು. ಪ್ರವಾದಿವರ್ಯರಿಗೆ ﷺ 25 ವರ್ಷ, ಎರಡು ತಿಂಗಳು, ಹದಿನೈದು ದಿವಸ  ಪ್ರಾಯವಾಗಿತ್ತು. ಆದರೆ ಖದೀಜರಿಗೆ 40 ವರ್ಷ ಪ್ರಾಯವಾಗಿತ್ತು. ವಿವಾಹಕ್ಕೆ ತೆರಳದಕ್ಕೂ ಮುಂಚೆ ವಧುವಿನ ಕುರಿತು ಕೂಡ ಸ್ವಲ್ಪ ಮಾಹಿತಿ ತಿಳಿಯೋಣ. 
      ಖುರೈಶ್ ರಾಜವಂಶದ ಒಂದು ಶಾಖೆಯಾಗಿದೆ ಅಸದ್ ಜನಾಂಗ. ಅತೀ ಹೆಚ್ಚು ಗೌರವಿಸಲ್ಪಡುವವರು. ಪ್ರವಾದಿವರ್ಯರ ﷺ ಐದನೇ ಪಿತಾಮಹಾನರಾದ ಖುಸಯ್'ರವರ ಮಗನಾದ ಅಬ್ದುಲ್ ಉಝ್ಝರ ಮಗನಾಗಿದ್ದಾರೆ ಅಸದ್. ಅವರ ಮಗನಾಗಿದ್ದರು ಖದೀಜರ ತಂದೆ ಖುಬೈಲಿದ್. ಅಬ್ದುಲ್ ಮುತ್ತಲಿಬರ ಆತ್ಮೀಯ ಸ್ನೇಹಿತರೂ ಆಗಿದ್ದರು. ಅಬ್ದುಲ್ ಮುತ್ತಲಿಬರು, ಯಮನ್ ದೊರೆಯಾದ ಸೈಫ್ ಬಿನ್ ದೀಯಸನ್'ರಿಗೆ ಗೌರವ ಸಲ್ಲಿಸಲು ಹೋಗಿದ್ದಾಗ ಖುವೈಲಿದ್ ಕೂಡ ಜೊತೆಯಲ್ಲಿದ್ದರು. 
    ಖದೀಜರ ತಾಯಿ ಫಾತಿಮ. ಪ್ರವಾದಿಯವರ ﷺ ಒಂಬತ್ತನೇ ಪಿತಮಹಾನರಾದ ಲುಅಯ್ಯ್'ರವರ ಪರಂಪರೆಯಲ್ಲಿ ಬರುವ ಝಾಯಿದ್'ರ ಪುತ್ರಿ. ಫಾತಿಮರ ತಾಯಿ ಹಾಲ. ಪ್ರವಾದಿಯವರ ﷺ ಪಿತಮಹಾನರಾದ ಅಬ್ದುಮನಾಫ್'ರ ಪುತ್ರಿ.  ಖದೀಜರ ಕುಟುಂಬ ಪ್ರವಾದಿಯವರ ﷺ ಮೂರನೇ ಪಿತಮಹಾನರಿಗೆ ಸೇರುತ್ತದೆ. ಪ್ರವಾದಿಯವರ ﷺ ಪತ್ನಿಯರಲ್ಲಿ ಅತೀ ಹತ್ತಿರ ಸಂಬಂಧವಿರುವುದು ಖದೀಜ (ರ) ಬೀವಿಯವರಿಗಾಗಿತ್ತು.

(ಮುಂದುವರಿಯುವುದು...)

No comments: