Abu Hisham Saquafi

Official Website Of Hafiz Ilyas Saquafi Padaladka

Friday, July 22, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -38 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
 
    ಉಸ್ಮಾನ್ ಬಿನ್ ಅಲ್ ಹುವೈರಿಸ್ ತಮ್ಮ ಅನ್ವೇಷಣೆಯನ್ನು ಮುಂದುವರಿಸಿದರು. ರೋಮನ್ ಚಕ್ರವರ್ತಿ ಸೀಸರಿನ ಆಸ್ಥಾನಕ್ಕೆ ತಲುಪಿದಾಗ, ಅರೇಬಿಯಾದಿಂದ ಬಂದ ಜ್ಞಾನಿಯಾದ ಉಸ್ಮಾನರನ್ನು ಸೀಸರ್ ಗೌರವಿಸಿದರು. ಉಸ್ಮಾನ್ ಕ್ರೈಸ್ತ ಧರ್ಮವನ್ನು ಸ್ವೀಕರಿಸಿ, ಪ್ರವಾದಿಯವರ ﷺ ಪ್ರವಾದಿತ್ವದ ನಿಯೋಗಕ್ಕೂ ಮುಂಚೆಯೇ ಮರಣ ಹೊಂದಿದರು.

     ನಾಲ್ಕನೇ ವ್ಯಕ್ತಿಯಾದ ಝೈದ್ ಬಿನ್ ಅಂರ್ ಬಿನ್ ನುಫೈಲ್, ಚಿಂತಕರು, ತತ್ವಜ್ಞಾನಿಯೂ ಆಗಿದ್ದರು. ಅರೇಬಿಯಾದಲ್ಲಿ ಜಾಲಾಡುತ್ತಿದ್ದ ಅನಾಚಾರಗಳನ್ನು ಬಹಳ ಕಟುವಾಗಿಯೇ ವಿರೋಧಿಸಿದ್ದರು. ಮೂರ್ತಿ ಪೂಜೆ ಮಾಡುವುದೋ, ಬಹುದೈವತ್ವವನ್ನು ಸ್ವೀಕರಿಸುವುದೋ ಮಾಡಿರಲಿಲ್ಲ. ಹರಕೆ ಸಂದಾಯದ ಪೂಜೆಗಳನ್ನು ಒಪ್ಪುತ್ತಿರಲಿಲ್ಲ. ಹೆಣ್ಣು ಮಕ್ಕಳನ್ನು ಜೀವಂತ ಸಮಾಧಿ ಮಾಡುತಿದ್ದ ವಿಚಿತ್ರ ಸಂಪ್ರದಾಯದ ವಿರುದ್ಧ ಎದ್ದು ನಿಂತರು. ಸಮಾಧಿ ಮಾಡಲು ಕೊಂಡೊಗುತ್ತಿದ್ದ ಮಕ್ಕಳನ್ನು ಅವರು ದತ್ತು ಪಡೆದುಕೊಂಡರು. ಕ್ರೈಸ್ತ ಧರ್ಮವನ್ನಾಗಲಿ, ಯಹೂದಿ ಧರ್ಮಾವನ್ನಾಗಲಿ ಸ್ವೀಕರಿಸದೆ, ನೈಜವಾದ ಪ್ರವಾದಿ ಇಬ್ರಾಹಿಮರು (ಅ) ತೋರಿಸಿ ಕೊಟ್ಟ ಆದರ್ಶವನ್ನು (ಏಕ ದೈವ ವಿಶ್ವಾಸವನ್ನು) ಸ್ವೀಕರಿಸಿದರು. ಅಬೂಬ್ಬಕ್ಕರ್'ರವರ (ರ) ಮಗಳು ಅಸ್ಮಾ (ರ) ಬೀವಿಯವರು ತಮಗಾದ ಒಂದು ಅನುಭವವನ್ನು ಈ ರೀತಿ ವಿವರಿಸುತ್ತಾರೆ. ಝೈದ್ ಬಿನ್ ಅಂರ್ ಒಮ್ಮೆ ಕಅಬಾಲಯದ ಗೋಡೆಗೆ ಒರಗಿ ನಿಂತು ಮಾತಾಡುತ್ತಿದ್ದಾಗ ಅಲ್ಲಿ ನೆರೆದಿದ್ದ ಜನರಲ್ಲಿ, ಓ ಖುರೈಶಿಗಳೇ ಈ ಗುಂಪಿನಲ್ಲಿ ಪ್ರವಾದಿ ಇಬ್ರಾಹಿಮರ (ರ) ಆದರ್ಶಗಳನ್ನು ಹಿಂಬಲಿಸುವ ವ್ಯಕ್ತಿ ನಾನೊಬ್ಬನೇ ಇರುವುದೆಂದು ಹೇಳಿದ್ದರು. 

      ಅಲ್ಲಾಹನೇ ನಿನಗೆ ಹೇಗೆ ಆರಾಧನೆ ಮಾಡಬೇಕೆಂಬೂದು ನನಗೆ ತಿಳಿದಿಲ್ಲ, ತಿಳಿದಿದ್ದರೆ ನಾನು ಅದೇ ರೀತಿ ಆರಾಧಿಸುತ್ತಿದ್ದೆ ಎಂದು ಝೈದ್ ಆಗಾಗ ಹೇಳುತ್ತಾ, ತನ್ನ ವಾಹನದ ಮೇಲೆ ಸುಜೂದ್ (ಸಾಷ್ಟಾಂಗ) ಹಾಕುತ್ತಿದ್ದರು. 
     ಇವರ ಸತ್ಯಾನ್ವೇಷಣೆ ಯಾತ್ರೆಯ ಕುರಿತಾದ ಒಂದು ವಿವರಣೆಯನ್ನು ಬುಖಾರಿ ಗ್ರಂಥದಲ್ಲಿ ಕಾಣಬಹುದು. ಅಬ್ದುಲ್ಲಾಹಿ ಬಿನ್ ಉಮರ್'ರವರು (ರ) ಈ ರೀತಿ ಉಲ್ಲೇಖಿಸುತ್ತಾರೆ, ಇಸ್ಲಾಮಿನ ಆಗಮನಕ್ಕೂ ಮುಂಚೆಯೇ ಝೈದ್ ಬಿನ್ ಅಂರ್ ಸತ್ಯಾನ್ವೇಷಣೆಗಾಗಿ ಸಿರಿಯಾಗೆ ತಲುಪಿದರು. ಒಬ್ಬರು ಯಹೂದಿ ಪಂಡಿತನಲ್ಲಿ ಅವರ ಧರ್ಮದ ಕುರಿತು ತಿಳಿದುಕೊಂಡರು. ನಾನು ಈ ಯಹೂದಿ ಧರ್ಮವನ್ನು ಸ್ವೀಕರಿಸಿದರೆ ಹೇಗೆ.? ಎಂದು ಕೇಳಿದಾಗ, ಇಂದು ಯಹೂದಿ ಧರ್ಮವು ಸಂಪೂರ್ಣವಾಗಿ ಮುರಿದು ಬಿದ್ದಿದೆ ನೀವು ಇಂದು ಈ ಧರ್ಮಕ್ಕೆ ಸೇರಿದರೆ ಸೃಷ್ಟಿಕರ್ತನ ಕೋಪವನ್ನು ಎದುರಿಸಬೇಕಾಗಬಹುದೆಂದು ಯಹೂದಿ ಪಂಡಿತರು ಹೇಳಿದರು. ಹಾಗಾದರೆ ಬೇಡ ಅಲ್ಲಾಹನ ಕೋಪವನ್ನಲ್ಲ ಬದಲಾಗಿ ಅಲ್ಲಾಹನ ಪ್ರೀತಿಯನ್ನು ಪಡೆಯುವ ಉದ್ದೇಶದಿಂದಾಗಿದೆ ನಾನು ಇಲ್ಲಿಗೆ ಬಂದದ್ದು, ಬೇರೆ ಏನಾದರೂ ದಾರಿ ಇದಿಯೇ ಎಂದು ಝೈದ್ ಕೇಳಿದರು. 

    ಹನೀಫಿ ದಾರಿ ಅಥವ ನೇರವಾದ ದಾರಿಯಲ್ಲದೇ ಬೇರೆ ಆಯ್ಕೆಗಳಿಲ್ಲ. ಎಂದು ಪಂಡಿತರು ಹೇಳಿದರು. 
     ಯಾವುದಾಗಿದೆ ಈ ನೇರವಾದ ದಾರಿ ಎಂದು ಝೈದ್ ಕೇಳಿದಾಗ, ಅದು ಪ್ರವಾದಿ ಇಬ್ರಾಹಿಮರ (ಅ) ಆದರ್ಶದ ದಾರಿಯಾಗಿದೆ. ಅವರು ಕ್ರೈಸ್ತರೋ, ಯಹೂದಿಯೋ ಆಗಿರಲಿಲ್ಲ. ಹನೀಫಿ ದಾರಿ ಅಥವಾ ಸತ್ಯವಾದ ದಾರಿಯಲ್ಲಾಗಿತ್ತು ಇದ್ದದ್ದು. ಅಲ್ಲಾಹನನ್ನು ಮಾತ್ರವೇ ಆರಾಧಿಸುತ್ತಿದ್ದರು. 
    ಝೈದ್ ಅಲ್ಲಿಂದ ಪುನಃ ಯಾತ್ರೆ ಆರಂಭಿಸಿದರು. ದಾರಿಯಲ್ಲಿ ಕ್ರೈಸ್ತ ಪಂಡಿತನನ್ನು ಭೇಟಿಯಾದಾಗ, ಅವರೂ ಕೂಡ ಯಹೂದಿ ಪಂಡಿತ ಹೇಳಿದ ರೀತಿಯಲ್ಲೇ ಹೇಳಿದರು. ಪ್ರವಾದಿ ಇಬ್ರಾಹಿಮರ (ಅ) ಪರಂಪರೆಯ ಕುರಿತು ಕೇಳಿದ ಝೈದ್ ಅಲ್ಲಾಹನೇ ಖಂಡಿತವಾಗಿಯೂ ನಾನು ಪ್ರವಾದಿ ಇಬ್ರಾಹಿಮರ (ರ) ಆದರ್ಶವನ್ನು ಹಿಂಬಾಲಿಸುತ್ತಾನೆ ಅದಕ್ಕೆ ನೀನೇ ಸಾಕ್ಷಿಯೆಂದು ಹೇಳಿದರು.

    ಝೈದಿನ ಸತ್ಯಾನ್ವೇಷಣೆ ಯಾತ್ರೆಯ ಕುರಿತಿರುವ ಮತ್ತೊಂದು ವಿವರಣೆ ಈ ರೀತಿಯಾಗಿದೆ. ಝೈದ್ ತಮ್ಮ ಸತ್ಯಾನ್ವೇಷಣೆ ಯಾತ್ರೆಯನ್ನು ಆರಂಭಿಸಿದರು. ಹಲವಾರು ದೇಶಗಳನ್ನು ದಾಟಿ ಅಲ್ ಜಝೀರದಲ್ಲೂ, ಮೌಸಿಲಿಯಲ್ಲೂ ಸಂಚರಿಸಿ, ಕೊನೆಗೆ "ಬಲ್'ಖಾಅ" ಎನ್ನುವ ಪ್ರದೇಶಕ್ಕೆ ತಲುಪಿದರು. ವೇದಗಳ ಕುರಿತು ಅಘಾದ ಜ್ಞಾನವಿರುವ ವೇದ ಜ್ಞಾನಿಯೊಬ್ಬರನ್ನು ಭೇಟಿಯಾಗಿ, ಸತ್ಯವಾದ ದಾರಿಯ (ಹನೀಫಿ ದಾರಿ) ಕುರಿತು ಕೇಳಿದಾಗ. ಸಹೋದರ ನೀವು ಹುಡುಕುತ್ತಿರುವ ಈ ಸತ್ಯವಾದ ದಾರಿ ಇವತ್ತು ಎಲ್ಲಿಯೂ ಕಾಣಲು ಸಾಧ್ಯವಿಲ್ಲ, ಆದರೆ ಸತ್ಯವಾದ ದಾರಿಗೆ ಆಹ್ವಾನ ನೀಡಲು  ಸಂದೇಶವಾಹಕರು ಬರುವ ಸಮಯವು ಹತ್ತಿರವಾಗಿದೆ. ಆ ಸಂದೇಶವಾಹಕರ ಆಗಮನ ನಿಮ್ಮ ಊರಿನಲ್ಲೇ ಆಗಿದೆ. ಹಾಗಾಗಿ ತಕ್ಷಣವೇ ಊರಿಗೆ ಮರಳಿರಿ ಶೀಘ್ರದಲ್ಲೇ ಅವರ ಆಗಮನವಾಗಲಿದೆ, ಆ ಪುಣ್ಯ ಪುರುಷರೊಂದಿಗೆ ಸೇರಲು ಪ್ರಯತ್ನಿಸಿರಿ ಎಂದು ವೇದ ಜ್ಞಾನಿ ಹೇಳಿದರು. 
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: