Abu Hisham Saquafi

Official Website Of Hafiz Ilyas Saquafi Padaladka

Saturday, July 23, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -39 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು 

ಝೈದ್'ಗೆ ಬಹಳ ಸಂತೋಷವಾಯಿತು. ಸತ್ಯಾನ್ವೇಷಣೆಯಲ್ಲಿ ಮುಗಿಯದ ಹಂಬಲದೊಂದಿಗೆ ಅವರು ಸಂಚರಿಸ ತೊಡಗಿದರು. ಹಲವಾರು ದಾರಿಗಳನ್ನು ದಾಟಿ ಕೊನೆಗೆ ತಮ್ಮ ಲಕ್ಷ್ಯದ ಬಳಿಯಾಗಿತ್ತು ಅವರ ಪ್ರಯಾಣ. ಆದರೆ ಲಖ್'ಮ ಎನ್ನುವ ಸ್ಥಳಕ್ಕೆ ತಲುಪಿದಾಗ ದರೋಡೆಕೊರರು ಝೈದನ್ನು ಹಿಡಿದರು. ತನ್ನ ಮರಣ ನಿಶ್ಚಿಯವಾಯಿತೆಂದು ಅರಿತಾಗ, "ನನಗೆ ನನ್ನ ಲಕ್ಷ್ಯದ ಕಡೆಗೆ ತೆರಳಲು ಸಾಧ್ಯವಾಗಲಿಲ್ಲ, ನನ್ನ ಮಗ ಸಈದಿಗಾದರೂ ಸತ್ಯವಾದ ದಾರಿಯನ್ನು ತೋರಿಸು ಒಡೆಯ!" ಎಂದು ಝೈದ್ ಪ್ರಾರ್ಥಿಸಿದರು. ಕೊಲೆಗಟುಕರಾದ ದರೋಡೆಕೋರರು ಝೈದನ್ನು ಕೊಲೆ ಮಾಡಿದರು. ಅವರ ಕೊನೆಯ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸಿದನು. ಝೈದಿನ ಮಗನಾದ ಸಈದ್ (ರ) ಸ್ವಹಾಬಿಯಾದರು. (ಪ್ರವಾದಿಯವರ ಅನುಚರರು) ಸ್ವರ್ಗ ಪ್ರವೇಶದ ಶುಭವಾರ್ತೆ ಲಭಿಸಿದ ಹತ್ತು ಪ್ರಮುಖರಲ್ಲಿ ಸಈದ್ (ರ) ಒಬ್ಬರಾದರು.

     ಝೈದ್ ಮರಣ ಹೊಂದಿದ ವಾರ್ತೆಯು ಮಕ್ಕ ಪಟ್ಟಣಕ್ಕೆ ತಲುಪಿತು. ಸತ್ಯಾನ್ವೇಷಿಯಾದ ಝೈದಿನ ಮರಣವು ವರಖತ್ ಬಿನ್ ನೌಫಲಿಗೆ ಸಹಿಸಲು ಅಸಾದ್ಯವಾಗಿತ್ತು. ಬಹಳ ಕಷ್ಟದಿಂದ ದುಃಖವನ್ನು ಸಹಿಸಿ ವಿರಹದ ಕವಿತೆಯನ್ನು ರಚಿಸಿದರು. ಸತ್ಯಪತದಲ್ಲಿ ಝೈದ್ ತೋರಿಸಿದ ಆವೇಶವನ್ನು ಬರೆದ ನಂತರ ಅವರು ಹೀಗೆ ಹೇಳಿದರು. "ಖಂಡಿತವಾಗಿಯೂ.! ನೀವು ಪ್ರವಾದಿ ಇಬ್ರಾಹಿಮರನ್ನು (ಅ) ಕಾಣಲಿದ್ದೀರಿ, ಭೂಮಿಯಡಿಯಲ್ಲಿ ಏಳು ಕಣಿವೆಗಳ ಅಂತರದ ದೂರದಲ್ಲಿದ್ದರೂ ಅಲ್ಲಾಹನ ಕರುಣೆಯು ನಿಮಗೆ ಖಂಡಿತ ಲಭಿಸಲಿದೆ" (ವ ಖದ್ ತುದ್ ರಿಕುಲ್ ಇನ್'ಸಾನ ರಹ್'ಮತು ರಬ್ಬಿಹಿ, ವಲೌಕಾನ ತಹ್'ತಲ್ ಅರ್'ಳಿ ಸಬ್'ಈನ ವಾದಿಯ..)

       ಝೈದ್ ಒಳ್ಳೆಯ ಕವಿಯೂ ಕೂಡ ಆಗಿದ್ದರು. ಏಕ ದೈವವಿಶ್ವಾಸದ ಮಹತ್ವವನ್ನು ತಿಳಿಸುವ, ಅವರು ಬರೆದ ಬಹಳಷ್ಟು ಸಾಲುಗಳನ್ನು ಗ್ರಂಥಗಳಲ್ಲಿ ಕಾಣಬಹುದು. ವಾಸ್ತವದಲ್ಲಿ ಅವರನ್ನು ಒಬ್ಬ ಏಕದೈವ ವಿಶ್ವಾಸಿಯಾಗಿಯೇ ಪರಿಗಣಿಸ ಬೇಕಾಗಿದೆ. ಪ್ರವಾದಿ ಇಬ್ರಾಹಿಮರ (ಅ) ದಾರಿಯನ್ನು ಇಷ್ಟಪಟ್ಟು, ಅಲ್ಲಾಹನನ್ನು ಮಾತ್ರ ತನ್ನ ಆರಾಧ್ಯನಾಗಿ ಸ್ವೀಕರಿಸಿದ ವ್ಯಕ್ತಿಯಾಗಿದ್ದರು ಅವರು. ನಂತರದ ಕಾಲದಲ್ಲಿ ಪ್ರವಾದಿಯವರು ﷺ ಅವರನ್ನು ಬಹಳಷ್ಟು ಹೊಗಳಿದ್ದರು. ಹದೀಸ್ ಗ್ರಂಥಗಳಲ್ಲಿ ಹೀಗೆ ಉಲ್ಲೇಖಿಸಲಾಗಿದೆ. "ಅವರನ್ನು ಮಾತ್ರ ಅಲ್ಲಾಹನು ಒಂದು ಸ್ವತಂತ್ರ ಸಮೂಹವಾಗಿ ನಾಳೆ ಪರಲೋಕದಲ್ಲಿ ಹಾಜರು ಪಡಿಸುವನೆಂದು" ಪ್ರವಾದಿಯವರು ﷺ ಹೇಳಿದ್ದರು. ಮತ್ತೊಂದು ಉಲ್ಲೇಖದಲ್ಲಿ ಪ್ರವಾದಿಯವರು ﷺ ಹೇಳಿದ್ದನ್ನು ಈ ರೀತಿ ಉಲ್ಲೇಖಿಸಲಾಗಿದೆ. "ನಾನು ಸ್ವರ್ಗಕ್ಕೆ ಪ್ರವೇಶಿಸಿದಾಗ ಝೈದ್ ಬಿನ್ ಅಂರ್'ರವರ ಎರಡು ಮನೆಗಳನ್ನು ನೋಡಿದ್ದೆನು. 

     ಎಲ್ಲಾ ಕಡೆಗಳಲ್ಲೂ ಕತ್ತಲು ಆವರಿಸಿ, ಸತ್ಯಪತದ ಬೆಳಕು ಮಾಯವಾಗ ತೊಡಗಿದವು. ಇಡೀ ಜಗತ್ತೇ ಪ್ರವಾದಿಯವರ ﷺ ಆಗಮನಕ್ಕಾಗಿ ಕಾಯುತ್ತಿದ್ದವು. ನಿಯೋಗಿಸಲ್ಪಡುವ ಸ್ಥಳದ ಕಡೆಗೆ ಕೆಲವರು ಸಂಚರಿಸ ತೊಡಗಿದರು. ಅದರಲ್ಲಿ ಕೆಲವರು ಮರಣ ಹೊಂದಿದರು, ಇನ್ನೂ ಕೆಲವರು ಬಹಳ ಶೀಘ್ರವಾಗಿ ಬಂದು ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರಿಗಾಗಿ ﷺ ಕಾಯತೊಡಗಿದರು. ಇಡೀ ಜಗತ್ತೇ ಪ್ರವಾದಿಯವರ ﷺ ಆಗಮನಕ್ಕಾಗಿ ಕಾಯುತ್ತಿದ್ದವು. ಎಲ್ಲಾ ಕಣ್ಣುಗಳು ತಿಹಾಮ ಕಣಿವೆಯತ್ತ ತಿರುಗಿದ್ದವು. ಪ್ರವಾದಿಯವರ ﷺ ಸಣ್ಣ ಚಲನೆಗಳನ್ನೂ ಕೂಡ ಕಾಲವು ಕಾಯುತ್ತಿತ್ತು. ಪ್ರವಾದಿಯವರ ﷺ ನಿಯೋಗಕ್ಕಾಗಿ ಕಾಲವು ಕಾಯುತ್ತಿರುವಾಗ ನಾವು ಕೆಲವೊಂದು ಉಲ್ಲೇಖಗಳನ್ನು ತಿಳಿಯಬೇಕಿದೆ. 

       ಮದೀನದ ಬನೂ ಖುರೈಳ ಜನಾಂಗವು ಜೀವಿಸುತಿದ್ದ ಸ್ಥಳದ ಬಳಿ, ಸಿರಿಯಾದ ಇಬ್'ನು ಹಯ್ಯಿಬಾನ್ ಎನ್ನುವ ಯಹೂದಿ ಪಂಡಿತರೊಬ್ಬರು ಬಂದು ನೆಲೆಸಿದರು. ಪ್ರವಾದಿತ್ವ ನಿಯೋಗದ ಎರಡು ವರ್ಷದ ಹಿಂದಿನ ಘಟನೆಯಾಗಿದೆ ಇದು. ಭೌತಿಕ ಜೀವನವನ್ನು ತ್ಯಾಗ ಮಾಡಿದ್ದ, ವೇದಗಳಲ್ಲಿ ಅಘಾದ ಜ್ಞಾನವಿರುವ ಪಂಡಿತನಾಗಿದ್ದರು ಅವರು. ಕ್ರಮೇಣ ಮದೀನದಲ್ಲಿ ಅವರು ಎಲ್ಲರ ಪ್ರೀತಿಗೆ ಪಾತ್ರರಾದರು. ಮಳೆ ಬರದೆ ಇದ್ದಾಗ ಮದೀನದ ನಿವಾಸಿಗಳು ಸ್ವತಃ ಆ ಪುರೋಹಿತನ ಬಳಿ ತೆರಳುತ್ತಿದ್ದರು. ಓ ಇಬ್'ನು ಹಯ್ಯಿಬಾನ್'ರವರೇ.! ಹೊರಗೆ ಬಂದು ನಮಗೆ ಮಳೆ ಬರಲು ನೀವು ಪ್ರಾರ್ಥಿಸಿರಿ ಎಂದು ಮದೀನ ನಿವಾಸಿಗಳು ಹೇಳಿದಾಗ, ಪ್ರಾರ್ಥನೆಗೆ ಮುಂಚೆ ಏನಾದರೂ ದಾನ ಮಾಡಿರಿ ಎಂದು ಹೇಳಿದರು. ಏನು ಮಾಡಬೇಕೆಂದು ಜನರು ಕೇಳಿದಾಗ, ಸ್ವಲ್ಪ ಖರ್ಜೂರ, ಬಾರ್ಲಿ ಮುಂತಾದ ಏನಾದರೂ ಎಂದು ಹೇಳಿದರು. ತಕ್ಷಣವೇ ಜನರು ದಾನದ ವಸ್ತುಗಳೊಂದಿಗೆ ತಲುಪಿದ ನಂತರ, ತೆರೆದ ಸ್ಥಳದಲ್ಲಿ ಒಟ್ಟು ಸೇರಿ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಗುಂಪು ಹಿಂತಿರುಗಿ ಹೋಗುದಕ್ಕೂ ಮುಂಚೆಯೇ ಮಳೆ ಬರುತಿತ್ತು. ಮದೀನಾ ನಿವಾಸಿಗಳು ಇಂತಹ ಹಲವಾರು ಅನುಭವಗಳಿಗೆ ಸಾಕ್ಷಿಯಾಗಿದ್ದರು. 

     ದಿವಸಗಳು ಕಳೆಯಿತು, ಇಬ್'ನು ಹಯ್ಯಿಬಾನ್ ರೋಗ ಪೀಡಿತರಾದರು. ಎಲ್ಲರೂ ಅವರನ್ನು ಸಂದರ್ಶಿಸಲು ತೆರಳಿದರು. ಓ ಯಹೂದಿಗಳೇ ನಾನು ಯಾಕೆ ಊರು ಬಿಟ್ಟು ಇಲ್ಲಿಗೆ ಬಂದದ್ದು ಎಂದು ನಿಮಗೆ ತಿಳಿದಿದೆಯೇ.? ಎಂದು ಅವರು ಕೇಳಿದರು.

(ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: