Abu Hisham Saquafi

Official Website Of Hafiz Ilyas Saquafi Padaladka

Thursday, July 28, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -44 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

   ಪ್ರವಾದಿಯವರು ﷺ ಅಧಿಕೃತವಾಗಿ ತಮ್ಮ ಜವಾಬ್ದಾರಿಯನ್ನು ಪಡೆಯುದಕ್ಕೂ ಮುಂಚಿನ ಒಂದು ಘಟನೆಯನ್ನು ತಿಳಿಯೋಣ. ರಮದಾನಿನ ಕೊನೆಯ ದಿನಗಳಲ್ಲಿ ಪ್ರವಾದಿಯವರು ﷺ ಹಿರಾ ಗುಹೆಯಲ್ಲಿ ಆರಾಧನೆಯಲ್ಲಿ ನಿರತರಾಗಿದ್ದರು. ಶನಿವಾರ ಹಾಗೂ ಆದಿತ್ಯವಾರ ರಾತ್ರಿಗಳಲ್ಲಿ ಜಿಬ್'ರೀಲ್ (ಅ) ಪ್ರವಾದಿಯವರಿಗೆ  ﷺ ಕಾಣಿಸಿಕೊಂಡಿದ್ದರು. ಸೋಮವಾರ ರಾತ್ರಿ ಜಿಬ್'ರೀಲ್ ಹಾಗೂ ಮೀಕಾಯಿಲ್ (ಅ) ಒಟ್ಟು ಸೇರಿ ಪ್ರವಾದಿಯವರ ﷺ ಮುಂದೆ ಕಾಣಿಸಿಕೊಂಡರು. ಮೀಕಾಯಿಲ್ (ಅ) ಆಕಾಶ ಹಾಗೂ ಭೂಮಿಯ ನಡುವೆ ನಿಂತುಕೊಂಡಿದ್ದರು. ಮಲಕುಗಳಲ್ಲಿ (ಫರಿಶ್ತ) ಒಬ್ಬರು ಇನ್ನೊಬ್ಬರಲ್ಲಿ ನಾವು ಉದ್ದೇಶಿಸಿರುವ ವ್ಯಕ್ತಿ ಇವರೇ ಅಲ್ಲವೇ.? ಎಂದು ಕೇಳಿದಾಗ. ಹೌದು  ಇವರೇ ಆಗಿರುತ್ತಾರೆ ಎಂದು ಪಕ್ಕದಲ್ಲಿ ಇದ್ದ ಮಲಕ್ ಉತ್ತರಿಸಿದರು. ಹಾಗಾದರೆ ಇವರನ್ನು ಇನ್ನೊಬರ ಜೊತೆ ತೂಕ ಮಾಡಿ ನೋಡೋಣ ಎಂದು ಹೇಳಿ ತೂಕ ಮಾಡಿದಾಗ, ಪ್ರವಾದಿಯವರು ﷺ ಅಧಿಕ ಭಾರವಿದ್ದರು. ಹತ್ತು ಜನರನ್ನು ಇಟ್ಟು ತೂಕ ಮಾಡಿದಾಗಲೂ ಪ್ರವಾದಿಯವರೇ ﷺ ಅಧಿಕ ಭಾರವಿದ್ದರು. ನೂರು ಜನರನ್ನು ಇಟ್ಟು ತೂಕ ಮಾಡಿದಾಗಲೂ ಇದೆ ರೀತಿಯಾಗಿತ್ತು. ಕೊನೆಗೆ ಅವರು ಹೀಗೆ ಹೇಳಿದರು ಕಅಬಾಲಯದ ಒಡೆಯನಾಣೆಗೂ ಈ ವ್ಯಕ್ತಿಯನ್ನು ಒಂದು ಭಾಗದಲ್ಲಿ ಇರಿಸಿ, ಮತ್ತೊಂದು ಭಾಗದಲ್ಲಿ ಸಂಪೂರ್ಣ ಸಮುದಾಯವನ್ನು ಇರಿಸಿದರೂ ಈ ವ್ಯಕ್ತಿಯೇ ಅಧಿಕ ಭಾರ ಇರುವರು ಎಂದು. 

    ನಂತರ ಮುತ್ತು ರತ್ನಗಳಿಂದ ಕೂಡಿದ ಒಂದು ಚಾಪೆಯನ್ನು ಹಾಕಿ ಅದರ ಮೇಲೆ ಪ್ರವಾದಿಯವರನ್ನು ಕುಳ್ಳಿರಿಸಿದರು. ಇವರ ಒಳಭಾಗವನ್ನು ಒಮ್ಮೆ ಪವಿತ್ರಗೊಳಿಸಬೇಕೆಂದು ಒಬ್ಬರು ಹೇಳಿದಾಗ ಇತರರು ಅದನ್ನು ಮಾಡಿದರು. (ಮನುಷ್ಯ ಸ್ವಭಾವಿಕವಾಗಿ) ಪೈಶಾಚಿಕ ಪ್ರಭಾವಕ್ಕೆ ಒಳಗಾಗುವ ರಕ್ತದ ದ್ರವ್ಯರಾಶಿಯನ್ನು ದೇಹದಿಂದ ತೆಗೆದುಹಾಕಿದರು. ಚೆನ್ನಾಗಿ ತೊಳೆದು ನಂತರ ತೆರದ ದೇಹದ ಭಾಗವನ್ನು ಹೊಲಿದು ಸೇರಿಸಿ ಪ್ರವಾದಿಯವರನ್ನು ﷺ ಸರಿಯಾಗಿ ಕುಳ್ಳಿರಿಸಿದರು. 
      ನಂತರ ಪ್ರವಾದಿತ್ವದ ಜವಾಬ್ದಾರಿಯನ್ನು ನೀಡಲಾಯಿತು. ಮನೋ ಧೈರ್ಯಕ್ಕೆ ಅವಶ್ಯವಾದ ಎಲ್ಲವನ್ನು ನೀಡಿದ ಬಳಿಕ ಪ್ರವಾದಿಯವರ ﷺ ಬಳಿ ಬಂದು ಜಿಬ್'ರೀಲ್ (ಅ) ಓದಿರಿ ಎಂದು ಹೇಳಿದರು. ನಾನು ಓದುವ ವ್ಯಕ್ತಿಯಲ್ಲ ಎಂದು ಉತ್ತರಿಸಿದಾಗ ಜಿಬ್'ರೀಲ್ (ಅ) ಪ್ರವಾದಿಯವರನ್ನು ﷺ ಗಟ್ಟಿಯಾಗಿ ತಬ್ಬಿಕೊಂಡರು. ಅಪ್ಪುಗೆಯ ಗಾಢತೆಯು ಪ್ರವಾದಿಯವರಿಗೆ ﷺನೋವಿನ ಅನುಭವ ಉಂಟುಮಾಡಿತ್ತು. ಪುನಃ ಓದಿರಿ ಎಂದು ಹೇಳಿದಾಗ, ನಾನು ಓದುವ ವ್ಯಕ್ತಿಯಲ್ಲ ಎಂದು ಪುನಃ ಉತ್ತರಿಸಿದರು. ಇದೇ ರೀತಿ ಮೂರು ಬಾರಿ ಪುನರಾವರ್ತನೆಯಾದ ಬಳಿಕ ಪವಿತ್ರ ಕುರ್'ಆನಿನ ಖಲಂ ಅಧ್ಯಾಯದ ಇಖ್'ರಅ ಬಿಸ್ಮಿ... ಎನ್ನುವ ಸೂಕ್ತವನ್ನು ಜಿಬ್'ರೀಲ್ (ಅ) ಹೇಳಿ ಕೊಟ್ಟರು. ಹೇಳಿ ಕೊಟ್ಟ ಸೂಕ್ತದ ಅರ್ಥ ಈ ರೀತಿಯಾಗಿದೆ. ನಿಮ್ಮನ್ನು ಸೃಷ್ಟಿಸಿದ ಒಡೆಯನ ಹೆಸರಿನಿಂದ ಆರಂಭಿಸಿರಿ.! ಅಲಖಿನಿಂದ (ರಕ್ತಪಿಂಡ) ಮನುಷ್ಯನನ್ನು ಸೃಷ್ಟಿಸಲಾಗಿದೆ. ಓದಿರಿ... ತಮ್ಮ ಪ್ರಭು ಅತ್ಯಂತ ಉದಾರಿಯಾಗಿರುವನು. ಅವನು ಲೇಖನಿಯಿಂದ ಕಲಿಸುವವನಾಗಿದ್ದಾನೆ. 

      ನಾನು ಓದುವ ವ್ಯಕ್ತಿಯಲ್ಲ ಎನ್ನುವ ಪದವು ಬಹಳ ಗಮನಾರ್ಹವಾಗಿದೆ. ಕಾರಣ ಪ್ರವಾದಿಯವರು ﷺ ಯಾವುದೇ ಗುರುವಿನಿಂದ ಓದಲು, ಬರೆಯಲು ಕಲಿತ ವ್ಯಕ್ತಿಯಾಗಿರಲಿಲ್ಲ. ಆದರೂ ಅಲ್ಲಾಹನ ಹೆಸರಿನಿಂದ ಓದಲು ಹೇಳಿದಾಗ ಪ್ರವಾದಿಯವರು ﷺ ನಿರಾಕರಿಸಿರಲಿಲ್ಲ, ಕಾರಣ  ಆಗ ಅಲ್ಲಾಹನು ಅವರಿಗೆ ಓದುವ ಸಾಮರ್ಥ್ಯ ನೀಡಿದ್ದನು. ಅಥವಾ ಪ್ರವಾದಿಯವರಿಗೆ ﷺ ಲಭಿಸಿದ್ದೆಲ್ಲವೂ ಅಲ್ಲಾಹನು ನೇರವಾಗಿ ನೀಡಿದ ಅನುಗ್ರಹವಾಗಿತ್ತು. 'ಉಮ್ಮೀಯ್ಯ್' ಎನ್ನುವ ಅರಬಿ ಪದದ ಅರ್ಥ ಅಕ್ಷರ ಜ್ಞಾನ ಇಲ್ಲದ ವ್ಯಕ್ತಿ ಎಂದಾಗಿದೆ. ಆದರೆ ಪ್ರವಾದಿಯವರು ﷺ ಉಮ್ಮೀಯ್ಯ್ ಆಗಿರುತ್ತಾರೆ ಎನ್ನುವುದರ ಅರ್ಥ ಅದಲ್ಲ, ಸಾಮಾನ್ಯವಾಗಿ ಎಲ್ಲರ ರೀತಿಯಲ್ಲಿ ವಿದ್ಯಾರ್ಜನೆ ಮಾಡಲಿಲ್ಲ ಎಂದಾಗಿದೆ. ಪ್ರಾಯೋಗಿಕವಾಗಿ ಏನನ್ನೂ ಕಲಿಯದೆ ಎಲ್ಲಾ ಜ್ಞಾನವನ್ನು ನಿಭಾಯಿಸಿದಾಗ ಪ್ರವಾದಿಯವರ ﷺ ಜ್ಞಾನದ ಬಗ್ಗೆ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. 

      ಹಿರಾ ಗುಹೆಯಲ್ಲಿ ಕುರ್'ಆನ್ ಲಭಿಸಿದ ಬಳಿಕ, ಪ್ರವಾದಿಯವರು ﷺ ಮನೆಗೆ ತೆರಳಿದರು. ದಾರಿಯಲ್ಲಿ ಸಿಗುವ ಕಲ್ಲುಗಳು, ಸಸ್ಯಗಳು ಪ್ರವಾದಿಯವರಿಗೆ ﷺ ಸಲಾಂ ಹೇಳುತ್ತಿದ್ದವು. ಲಭಿಸಿದ ವೇದದ ಬಾರ ಹಾಗೂ ನಿಯೋಗಿಸಿದ ಜವಾಬ್ದಾರಿಯ ಬಾರವು ಬಹಳ ಅಧಿಕವಾಗಿತ್ತು.  ಪ್ರವಾದಿಯವರ ﷺ ಹೃದಯವು ಕಂಪಿಸ ತೊಡಗಿತು.  ಪ್ರವಾದಿಯವರು ﷺ ಪ್ರೀತಿಯ ಪತ್ನಿ ಖದೀಜರನ್ನು (ರ) ಕೂಗಿ ನನ್ನನ್ನು ಹೊದಿಕೆಯಿಂದ ಮುಚ್ಚಿ ಮಲಗಿಸಿರಿ ಎಂದು ಹೇಳಿದಾಗ, ತಕ್ಷಣವೇ ಖದೀಜ (ರ) ಬೀವಿ ಹೊದಿಕೆಯಿಂದ ಮುಚ್ಚಿದರು. ಅತ್ಯುನ್ನತವಾದ ಜವಾಬ್ದಾರಿಯಾಗಿದೆ ತನಗೆ ಲಭಿಸಿದ್ದು ಎಂದು ಪ್ರವಾದಿಯವರಿಗೆ ﷺ ತಿಳಿದಿತ್ತು, ಆದರೆ ಜವಾಬ್ದಾರಿಯ ಬಾರವು ಪ್ರವಾದಿಯವರನ್ನು ﷺ ಸ್ವಾಧೀನ ಪಡಿಸಿತ್ತು. ಖದೀಜ ಹತ್ತಿರದಲ್ಲೇ ಕುಳಿತು ಸಮಾಧಾನ ಪಡಿಸುತ್ತಿದ್ದರು.... 

(ಮುಂದುವರಿಯುವುದು...) 

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: