Abu Hisham Saquafi

Official Website Of Hafiz Ilyas Saquafi Padaladka

Sunday, August 7, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -52 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ವಹಿಯ್ ಅಥವಾ ದಿವ್ಯ ಸಂದೇಶದ ಕುರಿತು ತಿಳಿದುಕೊಂಡೆವು. ಇನ್ನೂ 'ಪ್ರವಾದಿ' ಅಂದರೆ ಯಾರು.? ಎಂಬುದನ್ನು ತಿಳಿಯೋಣ. ಯಾವುದಾದರೂ ಸಾಧನೆ ಮಾಡಿ ಪಡೆಯುವ ಪದವಿಯಲ್ಲ, ಈ ಪ್ರವಾದಿತ್ವ ಎನ್ನುವುದು. ವಿದ್ಯೆ ಕಲಿಯುವ ಮೂಲಕವೋ, ಅಥವಾ ಹಲವಾರು ವರ್ಷಗಳ ಕಾಲ ತಪ್ಪಸ್ಸು ಮಾಡುವ ಮೂಲಕವೋ, ಪಡೆಯಬಹುದಾದ ಒಂದು ಪದವಿಯೂ ಅಲ್ಲ ಈ ಪ್ರವಾದಿತ್ವ ಎನ್ನುವುದು. ಬದಲಾಗಿ ಸೃಷ್ಟಿಕರ್ತನಾದ ಅಲ್ಲಾಹನು ಮೊದಲೇ ತೀರ್ಮಾನಿಸಿ ನಿಶ್ಚಯಿಸಿದವರಾಗಿದ್ದಾರೆ ಪ್ರವಾದಿಗಳು. ವಿಶೇಷವಾದ ಸಂದೇಶಗಳನ್ನು (ವಹಿಯ್) ಲಭಿಸಿದ ಪುಣ್ಯ ಪುರುಷರಾಗಿರುತ್ತಾರೆ ಪ್ರವಾದಿ ಎನ್ನುವವರು. ಇದಾಗಿದೆ ಪ್ರವಾದಿ ಎನ್ನುವ ಪದದ ಸರಳವಾದ ಅರ್ಥ. ದಿವ್ಯ ಸಂದೇಶದೊಂದಿಗೆ ಪ್ರಭೋಧನೆಯ (ಉಪದೇಶ) ಜವಾಬ್ದಾರಿಯೂ ಕೂಡ ಲಭಿಸಿದವರನ್ನು 'ರಸೂಲ್' ಎಂದು ಕರೆಯುತ್ತೇವೆ. ಎಲ್ಲಾ ರಸೂಲ್'ಗಳು (ಸಂದೇಶ ವಾಹಕರು) ಕೂಡ ಪ್ರವಾದಿಯಾಗಿರುತ್ತಾರೆ, ಆದರೆ ಎಲ್ಲಾ ಪ್ರವಾದಿಗಳೂ ರಸೂಲ್ ಆಗಿರುದಿಲ್ಲ. ಒಬ್ಬರು ಪ್ರವಾದಿಗೆ ಇರಬೇಕಾದ ಎಲ್ಲಾ ಗುಣಗಳನ್ನು ಮೊದಲೇ ಅಲ್ಲಾಹನು ಅವರಿಗೆ ನೀಡಿರುತ್ತಾನೆ. ಪ್ರವಾದಿತ್ವದ ನಿಯೋಗದ ಮೊದಲಾಗಲಿ, ನಂತರವಾಗಲಿ ಅವರು ಪಾಪಗಳಿಂದ ಮುಕ್ತರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಅವರಿಂದ ಸಣ್ಣ ತಪ್ಪು ಕೂಡ ಉಂಟಾಗುವುದಿಲ್ಲ. ಅವರ ನೋಟವಾಗಲಿ, ಶ್ರವಣ ಶಕ್ತಿಯಾಗಲಿ ಹಾಗೂ ಅವರ ಜೀವನವೂ ಕೂಡ ಅಸಾಮಾನ್ಯವಾಗಿರುತ್ತದೆ. "ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ, ಯಾರಿಗೆ ರಿಸಾಲತ್ತಿನ ಪದವಿ ನೀಡಬೇಕೆಂದು" ಎನ್ನುವ ಆದರ್ಶವನ್ನು ಪವಿತ್ರ ಕುರ್'ಆನಿನ ಅನ್'ಆಂ ಅಧ್ಯಾಯದ ನೂರ ಇಪ್ಪತ್ನಾಲ್ಕನೇ ಸೂಕ್ತದಲ್ಲಿ ವಿವರಿಸುವುದು ಕಾಣಬಹುದು. ಅಥವಾ ಅಲ್ಲಾಹನು ಎಲ್ಲದಕ್ಕೂ ಅರ್ಹತೆ ಇರುವ, ಯೋಗ್ಯತೆ ಇರುವ, ಪರಿಪೂರ್ಣರಾದ ವ್ಯಕ್ತಿಗಳನ್ನು ಪ್ರವಾದಿಗಳಾಗಿ ಆಯ್ಕೆ ಮಾಡುತ್ತಾನೆ ಎಂಬುವುದಾಗಿದೆ ಆ ಸೂಕ್ತದ ಅರ್ಥ. 

   ಒಟ್ಟು ಪ್ರವಾದಿಗಳು ಎಷ್ಟಿದ್ದಾರೆ, ಎನ್ನುವುದರಲ್ಲಿ ಕೆಲವು ಅಭಿಪ್ರಾಯಗಳಿದ್ದರೂ. ಪ್ರಧಾನ ಅಭಿಪ್ರಾಯದ ಪ್ರಕಾರ 'ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ' ಪ್ರವಾದಿಗಳಾಗಿರುತ್ತಾರೆ ಇರುವುದು. ಇದಕ್ಕೆ ಪುರಾವೆಯಾಗಿ ಅಬೂದರ್ರ್'ರವರು (ರ) ಉಲ್ಲೇಖಿಸುವ ಹದೀಸ್'ನಲ್ಲಿ ಈ ರೀತಿ ಕಾಣಬಹುದು. ಮಹಾನರು ಹೇಳುತ್ತಾರೆ, ನಾನು ಮುಹಮ್ಮದ್ ﷺ ಪ್ರವಾದಿಯವರಲ್ಲಿ ಒಟ್ಟು ಪ್ರವಾದಿಗಳು ಎಷ್ಟಿದ್ದಾರೆ ಎಂದು ಕೇಳಿದೆನು. ಒಂದು ಲಕ್ಷದ ಇಪ್ಪತ್ನಾಲ್ಕು ಸಾವಿರ ಎಂದು ಹೇಳಿದಾಗ, ಅದರಲ್ಲಿ ರಸೂಲ್ ಎಷ್ಟಿದ್ದಾರೆ ಎಂದು ಕೇಳಿದೆನು, ಮುನ್ನೂರ ಹದಿಮೂರು ಎಂದು ಹೇಳಿದರು. ಅವರಲ್ಲಿ ಮೊದಲು ಬಂದ ವ್ಯಕ್ತಿ ಯಾರೆಂದು ಕೇಳಿದಾಗ ಪ್ರವಾದಿ ಆದಂ (ಅ) ಎಂದು ಹೇಳಿದರು. ಆದಂ (ಅ) ಪ್ರವಾದಿಯವರು ರಸೂಲ್ ಆಗಿರುತ್ತಾರೆಯೇ.? ಎಂದು ಕೇಳಿದಾಗ ಹೌದು ಅವರು ರಸೂಲ್ ಆದ ಪ್ರವಾದಿಯಾಗಿರುತ್ತಾರೆ ಎಂದು ಉತ್ತರಿಸಿದರು. ಈ ಹದೀಸ್'ನ ಕುರಿತು ವಿಮರ್ಶೆಗಳಿದ್ದರೂ, ಇಮಾಮ್ ಅಹ್ಮದ್ ಬಿನ್ ಹಂಬಲ್'ರವರು (ರ) ಸೇರಿದಂತೆ ಹಲವಾರು ಜನರು ಈ ಹದೀಸನ್ನು ನಿರೂಪಿಸಿದ್ದಾರೆ. 

      ಪ್ರವಾದಿಗಳ ಪರಂಪರೆಯಲ್ಲಿ ಕೊನೆಯ ವ್ಯಕ್ತಿಯಾಗಿದ್ದರೂ, ಎಲ್ಲರಿಗೂ ನಾಯಕರಾಗಿರುತ್ತಾರೆ ಮುಹಮ್ಮದ್ ﷺ ಪ್ರವಾದಿಯವರು. ರಸೂಲ್'ಗಳಲ್ಲಿ ಐದು ಜನರು 'ಉಲುಲ್ ಅಝ್'ಮುಗಳೆಂಬ', ವಿಶೇಷವಾದ ಸ್ಥಾನ ಪಡೆದ ಪ್ರವಾದಿಗಳಿಗಿರುತ್ತಾರೆ. ನೂಹ್ (ಅ), ಇಬ್ರಾಹಿಂ (ಅ), ಮೂಸ (ಅ), ಈಸ (ಅ) ಮುಹಮ್ಮದ್ ﷺ ಎಂಬವರಾಗಿದ್ದಾರೆ ಆ ಐದು ಜನ ಪ್ರವಾದಿಗಳು. ಈ ಪದವಿಯು ಅಸಾಧಾರಣವಾದ ಕ್ಷಮೆಯನ್ನು ಹಾಗೂ ನಿರ್ಣಯವನ್ನು ಹೊಂದಿರುವ ಕಾರಣಕ್ಕಾಗಿದೆ ಅವರಿಗೆ ಲಭಿಸಿದ್ದು. ಮುಹಮ್ಮದ್ ﷺ ಪ್ರವಾದಿಯವರು ಭೌತಿಕವಾಗಿ ಹಾಗೂ ಜವಾಬ್ದಾರಿ ವಹಿಸೂದರಲ್ಲಿ ಕೊನೆಯ ಪ್ರವಾದಿಯಾಗಿದ್ದರೂ, ಆಧ್ಯಾತ್ಮಿಕವಾದ ನಿಯೋಗದಲ್ಲಿ ಎಲ್ಲಾ ಪ್ರವಾದಿಗಳ ನಾಯಕರಾಗಿರುತ್ತಾರೆ ಅವರು. ಇತರ ಎಲ್ಲಾ ಪ್ರವಾದಿಗಳೂ ಕೂಡ ಕೆಲವೊಂದು ನಿರ್ದಿಷ್ಟ ಕಾಲಘಟ್ಟಕ್ಕೆ, ಕೆಲವು ಪ್ರದೇಶಗಳಿಗೆ ಹಾಗೂ ಕೆಲವೊಂದು ಸಮೂಹಕ್ಕೆ ಮಾತ್ರ ಸೀಮಿತವಾಗಿ ನಿಯೋಗಿಸಿದ ಪ್ರವಾದಿಗಳಾಗಿರುತ್ತಾರೆ. ಹೂದ್ (ಅ) ಪ್ರವಾದಿಯವರು ಯಮನಿನ 'ಆದ್' ಸಮೂಹಕ್ಕೆ ನಿಯೋಗಿಸಿದ ಪ್ರವಾದಿಯಾಗಿದ್ದರು, ಹಾಗೂ ಸ್ವಾಲಿಹ್ (ಅ) ಪ್ರವಾದಿಯವರು 'ಸಮೂದ್' ಎನ್ನುವ ಸಾಮೂಹಿಕ ನಿಯೋಗಿಸಿದ ಪ್ರವಾದಿಯಾಗಿದ್ದರು ಎಂದು ಖುರ್'ಆನ್ ತಿಳಿಸುತ್ತದೆ. ಆದರೆ ಮುಹಮ್ಮದ್ ﷺ ಪ್ರವಾದಿಯವರು ಮಾತ್ರ ಇಡೀ ಪ್ರಪಂಚಕ್ಕೆ ನಿಯೋಗಿಸಿದ ಪ್ರವಾದಿಯಾಗಿರುತ್ತಾರೆ. ಈ ವಿಷಯವನ್ನು ತಿಳಿಸಲು ಖುರ್'ಆನಿನಲ್ಲಿ "ಕಾಫತುಲ್ ಲಿನಾಸ್..." ಎನ್ನುವ ಪದಪ್ರಯೋಗವಾಗಿತ್ತು ನಡೆಸಿದ್ದು. ಕೇವಲ ಮನುಷ್ಯ ವರ್ಗಕ್ಕೆ ಮಾತ್ರವಲ್ಲದೆ, ಭೂತ ವರ್ಗಕ್ಕೂ ಕೂಡ ಮುಹಮ್ಮದರನ್ನು ﷺ ಪ್ರವಾದಿಯಾಗಿ ನಿಯೋಜಿಸಲಾಗಿದೆ. ಜಿನ್ನ್'ಗಳು ಅಥವಾ ಭೂತ ವರ್ಗವು ಕೂಡ ಪ್ರವಾದಿಯವರಿಂದ ﷺ ಖುರ್'ಆನ್ ಕೇಳಿ ಆಶ್ಚರ್ಯವಾಗುತ್ತಿತ್ತು, ಎಂದು ತಿಳಿಸುವ ಅಧ್ಯಾಯವಾಗಿದೆ ಪವಿತ್ರ ಖುರ್'ಆನಿನ 'ಸೂರ ಜಿನ್ನ್' ಎಂಬ
 ಅಧ್ಯಾಯ. ಪ್ರವಾದಿಯವರಿಂದ ﷺ ಖುರ್'ಆನ್ ಕೇಳಿದ ಸ್ಥಳದಲ್ಲಿ ನಿರ್ಮಿಸಿದ ಮಸ್ಜಿದ್ ಆಗಿತ್ತು ಮಕ್ಕ ಪಟ್ಟಣದ ಪ್ರಸಿದ್ಧವಾದ 'ಮಸ್ಜಿದುಲ್ ಜಿನ್ನ್' ಎಂಬ ಮಸ್ಜಿದ್.

     ಎಲ್ಲಾ ಪ್ರವಾದಿಗಳು ಕೂಡ ಉತ್ತಮವಾದ ಶಬ್ದವನ್ನು ಹೊಂದಿರುವ, ಒಳ್ಳೆಯ ಸೌಂದರ್ಯವನ್ನು ಹೊಂದಿರುವ ವ್ಯಕ್ತಿಗಳಾಗಿದ್ದರು. ಎಲ್ಲರೂ ಕೂಡ ಅವರ ಸ್ವಂತ ಊರಿನಲ್ಲೇ ಪ್ರವಾದಿತ್ವದ ಘೋಷಣೆ ಮಾಡಿದವರಾಗಿದ್ದರು. ಆಯಾಯ ಊರಿನ ಪ್ರಸಿದ್ಧವಾದ ಉನ್ನತ ಮನೆತನಕ್ಕೆ ಸೇರಿದ ವ್ಯಕ್ತಿಗಳಾಗಿದ್ದರು. ಇಡೀ ಪ್ರಪಂಚದಲ್ಲೇ ಪ್ರಸಿದ್ಧವಾದ ಮನೆತನವಾಗಿತ್ತು ಪುಣ್ಯ ಪ್ರವಾದಿಯವರ ﷺ ಮನೆತನ. ಅಷ್ಟೇ ಪವಿತ್ರವಾದ ಕುಟುಂಬ ಪರಂಪರೆಯೂ ಆಗಿತ್ತು ಪ್ರವಾದಿಯವರ ﷺ ಕುಟುಂಬ ಪರಂಪರೆ. 

     (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: