Abu Hisham Saquafi

Official Website Of Hafiz Ilyas Saquafi Padaladka

Saturday, August 13, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -59 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

      ಅಬೂಬಕ್ಕರ್ (ರ):
ಪ್ರವಾದಿಯವರ ﷺ ನಂತರ ಮುಸ್ಲಿಂ ಸಮುದಾಯದ ಒಂದನೇ ವಿಶ್ವಾಸಿಯಾಗಿ ಪರಿಗಣಿಸುವುದು ಅಬೂಬಕ್ಕರ್'ರವರನ್ನಾಗಿದೆ. (ರ) ಹಿರಿಯ ಪುರುಷರಲ್ಲಿ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ್ದು ಕೂಡ ಅಬೂಬಕ್ಕರ್'ರವರೇ (ರ) ಆಗಿದ್ದರು. ಸ್ವಹಾಬಿಗಳು ಹಾಗೂ ಕೆಲವು ಇತಿಹಾಸಕರಾರು ಆರಂಭದಲ್ಲಿ ಇಸ್ಲಾಮ್ ಸ್ವೀಕರಿಸಿದವರ ಪಟ್ಟಿ ತಯಾರಿಸುವಾಗ, ಪ್ರವಾದಿಯವರ ಹತ್ತಿರದ ಬಂಧುಗಳನ್ನು ಆ ಸಾಲಿನಲ್ಲಿ ಸೇರಿಸುವುದಿಲ್ಲ, ಹೀಗೆ ನೋಡುವಾಗ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದವರ ಸಾಲಿನಲ್ಲಿ ಮೊದಲು ಬರುವುದು ಅಬೂಬಕ್ಕರ್'ರವರು (ರ) ಆಗಿರುತ್ತಾರೆ. ಅತ್ವೀಖ್ ಅಥವಾ ಅಬ್ದುಲ್ಲಾಹ್ ಎಂದಾಗಿತ್ತು ಮಹಾನರ ನಿಜವಾದ ಹೆಸರು. ಬಾಲ್ಯದಿಂದಲೇ ಪ್ರವಾದಿಯವರ ﷺ ಜೊತೆಯಲ್ಲಿ ಹತ್ತಿರದ ಬಾಂಧವ್ಯ ಹೊಂದಿದ್ದ ಕಾರಣ, ಪ್ರವಾದಿತ್ವದ ಘೋಷಣೆಯ ನಂತರ ಖುರೈಶಿಗಳು ಅಬೂಬಕ್ಕರ್'ರವರ (ರ) ಬಳಿ ಬಂದು, ನಿಮ್ಮ ಗೆಳೆಯ ಬಹುದೈವ ವಿಶ್ವಾಸವನ್ನು ವಿರೋಧಿಸುತ್ತಿದ್ದಾರೆ. ನಮ್ಮ ಪರಂಪರೆಯ ವಿಶ್ವಾಸಗಳನ್ನು ವಿಮರ್ಷಣೆ ಮಾಡುತ್ತಿದ್ದಾರೆ, ಅದು ಬುದ್ದಿ ಶೂನ್ಯವೆಂದು ವಾದಿಸುತ್ತಿದ್ದಾರೆ, ಎಂದು ಹೇಳಿದಾಗ. ಅಬೂಬಕ್ಕರ್'ರವರು ಪ್ರವಾದಿಯವರಲ್ಲಿ ﷺ ಈ ಖುರೈಷಿಗಳು ಹೇಳಿದ್ದು ನಿಜವೇ.? ಎಂದು ಕೇಳಿದರು. ಅದಕ್ಕೆ ಅವರು ಹೇಳಿದ್ದು ಸತ್ಯವಾಗಿದೆ, ನಾನು ಅಲ್ಲಾಹುವಿನ ಪ್ರವಾದಿ ﷺ ಆಗಿರುತ್ತೇನೆ, ಅವನ ಜವಾಬ್ದಾರಿಯನ್ನು ಹೊತ್ತು ಕೊಂಡ ವ್ಯಕ್ತಿ ಆಗಿದ್ದೇನೆ, ನಾನು ನಿಮ್ಮನ್ನು ಕೂಡ ಸತ್ಯದ ಕಡೆಗೆ ಆಹ್ವಾನಿಸುತ್ತಿದ್ದೇನೆ ಎಂದು ಹೇಳಿದಾಗ. ತಕ್ಷಣವೇ ಅಬೂಬಕ್ಕರ್'ರವರು (ರ) ನಾನು ಸಂಪೂರ್ಣವಾಗಿ ಅಂಗೀಕರಿಸುದ್ದೇನೆ ಎಂದು ಹೇಳಿದರು, ಪ್ರವಾದಿಯವರು ﷺ ಕುರ್'ಆನ್ ಓದಿ ಕೊಟ್ಟಾಗ, ಬಹಳ ವಿನಮ್ರತೆಯಿಂದ ಅದನ್ನು ಕೇಳುತ್ತಿದ್ದರು. 
     ನಾನು ಯಾರನ್ನು ಇಸ್ಲಾಮಿಗೆ ಆಹ್ವಾನಿಸಿದರೂ, ಅವರು ಸಂಶಯ ಪಡುತ್ತಿದ್ದರು. ಆದರೆ ಅಬೂಬಕ್ಕರ್'ರವರು (ರ) ಕಿಂಚಿತ್ತೂ ಸಂಶಯ ತೋರಿಸದೆ, ತಕ್ಷಣವೇ ನನ್ನನ್ನು ಒಪ್ಪಿಕೊಂಡಿದ್ದರು ಎಂದು ಪ್ರವಾದಿಯವರು ನಂತರದ ಕಾಲದಲ್ಲಿ ಹೇಳುತ್ತಿದ್ದರು. 

      ಮತ್ತೊಮ್ಮೆ ಏನೋ ತೀರ್ಪು ನೀಡುತ್ತಿದ್ದ ಸಂದರ್ಭವಾಗಿತ್ತು ಅದು. ಅಲ್ಲಿ ಉಮರ್ (ರ) ಸಮೇತವಾದ ಬಹಳಷ್ಟು ಜನರು ಆ ಸಭೆಯಲ್ಲಿ ಉಪಸ್ಥಿತರಿದ್ದರು. ಆ ಸಂದರ್ಭದಲ್ಲಿ ಪ್ರವಾದಿಯವರು ಈ ರೀತಿ ಹೇಳಿದರು. "ಅಲ್ಲಾಹನು ನನ್ನನ್ನು ಪ್ರವಾದಿಯಾಗಿ ﷺ ನಿಯೋಗಿಸಿದಾಗ, ನಾನು ಅದೇ ರೀತಿ ಘೋಷಣೆ ಮಾಡಿದ್ದೆನು. ಆಗ ನಿಮ್ಮಲ್ಲಿ ಬಹಳಷ್ಟು ಜನರು ನನ್ನನ್ನು ವಿರೋಧಿಸಿದಾಗಲೂ, ಅಬೂಬಕ್ಕರ್ (ರ) ಮಾತ್ರ ನನ್ನ ಜೊತೆಯಲ್ಲೇ ನಿಂತು, ಸತ್ಯವಾಗಿದೆ ಅವರು ಹೇಳುತ್ತಿರುವುದು ಎಂದು ಹೇಳಿದ್ದರು. 
       ಅಬೂಬಕ್ಕರ್'ರವರು (ರ) ಹಿಂದಿನಿಂದಲೂ, ನೀತಿವಂತರಾದ ಉತ್ತಮ ವ್ಯಾಪಾರಿ, ಹಾಗೂ ದಾನಿಯೂ ಕೂಡ ಆಗಿದ್ದರು. ಜನ ಸೇವೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದ ಕಾರಣ, ಸಾರ್ವಜನಿಕ ವ್ಯವಹಾರಗಳಲ್ಲಿ ಜನರು ಅವರನ್ನು ಅವಲಂಬಿಸಿದ್ದರು. ಅರಬ್ ದೇಶದ ಜನಾಂಗಗಳ ಕುರಿತು ಹಾಗೂ ಅವರ ಪರಂಪರೆಯ ಬಗ್ಗೆಯೂ ಕೂಡ ಅವರಿಗೆ ಬಹಳಷ್ಟು ಜ್ಞಾನವಿತ್ತು. ಅವರ ತಂದೆ ಅಬೂಖುರಾಫರ ಎಂಟನೇ ಪಿತಾಮಹಾನರ ಪರಂಪರೆ ಹಾಗೂ ಪ್ರವಾದಿಯವರ ﷺ ಏಳನೇ ಪಿತಾಮಹಾನರ ಪರಂಪರೆಯು, 'ಮುರ್'ರ' ಎನ್ನುವ ವ್ಯಕ್ತಿಗೆ ಬಂದು ಸೇರುತ್ತಿತ್ತು. 

      ಅಬೂಬಕ್ಕರ್'ರವರು (ರ) ಇಸ್ಲಾಮ್ ಸ್ವೀಕರಿಸಿದಾಗ, ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷವಾಗಿತ್ತು. ಸಿರಿಯಾದ ವೇದಜ್ಞಾನಿ ಹೇಳಿದ ಭವಿಷ್ಯವಾಣಿ, ಹಾಗೂ ಅಲ್ಲಿ ಉಂಟಾದ ಕನಸುಗಳೆಲ್ಲವೂ ಅಬೂಬಕ್ಕರ್'ರವರಿಗೆ (ರ) ಆವೇಶ ತರಿಸಿತ್ತು. ಈ ವಿಷಯವನ್ನು ಅಬೂಬಕ್ಕರ್'ರವರು (ರ) ಹೇಳುವ ಮುಂಚೆಯೇ ಪ್ರವಾದಿಯವರು ﷺ ತಿರುಗಿ ಹೇಳಿದ್ದನ್ನು ಕಂಡು, ಅಬೂಬಕ್ಕರ್'ರವರಿಗೆ (ರ) ಪ್ರವಾದಿಯವರ ﷺ ಮೇಲಿದ್ದ ಆತ್ಮವಿಶ್ವಾಸವು ಇಮ್ಮಡಿಯಾಯಿತು. ವಯ್ಯಸಿನಲ್ಲಿ ಪ್ರವಾದಿಯವರಿಗಿಂತ ﷺ ಮೂರು ವರ್ಷ ಚಿಕ್ಕವರಾದರೂ, ಹಿಂದಿನಿಂದಲೂ ಬಹಳಷ್ಟು ಅನ್ಯೋನ್ಯತೆಯಿಂದ ಇರುತಿದ್ದರು. ಕುಟುಂಬವೂ ಕೂಡ ಅವರ ಗೆಳೆತನದಲ್ಲಿ ಜೊತೆಯಲ್ಲಿರುತಿತ್ತು. ಪ್ರವಾದಿತ್ವದ ನಿಯೋಗದ ಕುರಿತು, ಖದೀಜ (ರ) ಬೀವಿ ಹಾಗೂ ಅಬೂಬಕ್ಕರ್'ರವರ (ರ) ಸಂಭಾಷಣೆಯ ಕುರಿತು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. 

     ಇಸ್ಲಾಮ್ ಸ್ವೀಕರಿಸಿದ ಅಂದಿನಿಂದಲೂ ತಾನು ಕೂಡ ಪ್ರಭೋಧನೆಯಲ್ಲಿ ತೊಡಗಿದ್ದರು. ಆತ್ಮೀಯ ಗೆಳೆಯರಿಗೂ, ಹಿತೈಷಿಗಳಿಗೂ ಕೂಡ ವಿಷಯ ತಿಳಿಸಿದ್ದರು, ಅವರ ಪ್ರಭೋಧನೆಯಿಂದ ಬಹಳಷ್ಟು ಜನ ಗಣ್ಯವ್ಯಕ್ತಿಗಳು, ಬುದ್ದಿಜೀವಿಗಳು ಇಸ್ಲಾಮಿನ ಕುರಿತು ತಿಳಿದುಕೊಂಡು ಪ್ರವಾದಿಯವರ ಬಳಿ ತಲುಪಿದರು. ಅವರಲ್ಲಿ ಬಹಳಷ್ಟು ಜನರು ಇಸ್ಲಾಮ್ ಸ್ವೀಕರಿಸಿದ್ದರು. ಅವರಲ್ಲಿ ಕೆಲವರ ಪಟ್ಟಿ ಈ ಕೆಳಗಿನಂತಿದೆ. 
1. ಉಸ್ಮಾನ್ ಬಿನ್ ಅಫ್ಫಾನ್
2. ಝುಬೈರ್ ಬಿನ್ ಅಲ್ ಅವಾಂ
3. ತ್ವಲ್'ಹ ಬಿನ್ ಉಬೈದಿಲ್ಲಾಹ್
4. ಸಅದ್ ಬಿನ್ ಅಬೀ ವಖಾಸ್
5. ಅಬ್ದುಲ್ ರಹ್ಮಾನ್ ಬಿನ್ ಔಫ್
6. ಉಸ್ಮಾನ್ ಬಿನ್ ಮಳ್'ಗೂನ್
7. ಅಬೂಸಲಮತ್ ಬಿನ್ ಅಬ್ದುಲ್ ಅಸದ್
8. ಅಬೂಉಬೈದ್ ಅಲ್ ಜರ್ರಾಹ್ 
9. ಖಾಲಿದ್ ಬಿನ್ ಸಈದ್
10. ಅಲ್'ಖಂ ಬಿನ್ ಅಬಿಲ್ ಅಲ್'ಖಂ 
(ರಲಿಯಲ್ಲಾಹು ಅನ್'ಹುಂ)

     (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: