ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಂರ್ ಬಿನ್ ಅಬಸ (ರಲಿಯಲ್ಲಾಹು ಅನ್'ಹು):
ಪ್ರವಾದಿಯವರ ﷺ ಪ್ರಭೋಧನೆಯ ಆರಂಭಿಕ ಹಂತದಲ್ಲೇ ಇಸ್ಲಾಮ್ ಸ್ವೀಕರಿಸಿದ ಗಣ್ಯರಲ್ಲಿ ಇನ್ನೊಬ್ಬರಾಗಿದ್ದರು ಅಂರ್ (ರ). ಮಕ್ಕಾ ಸ್ವದೇಶಿಯಲ್ಲದ ಕಾರಣ ಇವರು, ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ ವಿದೇಶಿ ಎನ್ನುವ ಮೆಚ್ಚುಗೆಗೂ ಪಾತ್ರವಾಗಿದ್ದರು. ಇಮಾಮ್ ಮುಸ್ಲಿಂ (ರ) ಉಲ್ಲೇಖಿಸಿದ ಹದೀಸಿನಲ್ಲಿ ಇಸ್ಲಾಮಿನ ನಾಲ್ಕರಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವುದು ಅಂರ್'ರವರಾಗಿದ್ದಾರೆ (ರ) ಎಂದು ಹೇಳಿರುವುದು ಕಾಣಬಹುದು.
ಪ್ರತಿ ದಿನ ಒಬ್ಬೊಬ್ಬರಾಗಿ ಇಸ್ಲಾಮ್ ಸ್ವೀಕರಿಸುವಾಗ, ಕಳೆದ ದಿನದವರೆಗಿನ ಸಂಖ್ಯೆಯನ್ನು ಸೇರಿಸಿ ಎಲ್ಲರಿಗೂ ತಮ್ಮ ಇಸ್ಲಾಮ್ ಸ್ವೀಕರಣೆಯ ಸಂಖ್ಯೆಯ ಕುರಿತು ಹೇಳಬಹುದಲ್ಲವೇ.? ಅಥವಾ ಪ್ರತಿಯೊಬ್ಬರೂ, ಅವರವರಿಗೆ ಸಿಕ್ಕಿದ ಮಾಹಿತಿಗೆ ಅನುಗುಣವಾಗಿ ಪರಿಚಯಿಸಿದ್ದು ಆಗಿರಬಹುದು. ಏನೇ ಆಗಲಿ, ಅಂರ್'ರವರು (ರ) ಇಸ್ಲಾಮ್ ಸ್ವೀಕರಿಸಿದ ಆ ಅಪೂರ್ವ ಘಟನೆಯನ್ನು ಸ್ವತಃ ಅವರೇ ವಿವರಿಸಿರುವುದಾಗಿ, ಅಬೂಸಲಾಂ ಅಲ್'ಹಬರಿರವರು ಉಲ್ಲೇಖಿಸಿರುತ್ತಾರೆ. ಅಂರ್ (ರ) ಆರಂಭಿಸುವುದು ಈ ರೀತಿಯಾಗಿದೆ. ವಿಗ್ರಹ ಆರಾಧನೆಯಿಂದ ಯಾವುದೇ ಪ್ರಯೋಜನವಿಲ್ಲವೆಂದು ಮೊದಲೇ ನನ್ನ ಮನಸ್ಸಿಗೆ ಅನಿಸಿತ್ತು. ಅದನ್ನು ನಾನು ಬಹಳಷ್ಟು ಜನರೊಂದಿಗೂ ಕೂಡ ಹಂಚಿಕೊಂಡಿದ್ದೆನು. ಒಮ್ಮೆ ನಾನು ವಿಗ್ರಹ ಆರಾಧನೆಯ ವಿರುದ್ಧ ಮಾತೆತ್ತಿದಾಗ, ನನ್ನ ಜನಾಂಗದ ಒಬ್ಬ ವ್ಯಕ್ತಿ ನನ್ನ ಬಳಿ ಬಂದು, ನಿಮ್ಮ ಇದೇ ಆದರ್ಶವನ್ನು ಹೇಳುತ್ತಿರುವ ಒಬ್ಬರು ಮಕ್ಕಾದಲ್ಲಿ ಇರುವುದಾಗಿ ನಾನು ಕೇಳಿದ್ದೇನೆ ಎಂದು ಹೇಳಿದರು.
ನಾನು ತಕ್ಷಣವೇ, ಮಕ್ಕಾ ನಗರಕ್ಕೆ ಬಂದೆನು. ವಿಗ್ರಹ ಆರಾಧನೆಯ ಕುರಿತು ಮಾತಾಡುತ್ತಿದ್ದ ಆ ವ್ಯಕ್ತಿಯನ್ನು ಹುಡುಕುತ್ತಾ ಹೊರಟಿದ್ದಾಗ, ಈಗ ಪ್ರವಾದಿಯವರು ﷺ ನಿಗೂಢವಾಗಿ ಪ್ರಭೋಧನೆ ನಡೆಸುತ್ತಿದ್ದಾರೆ, ಅವರನ್ನು ರಾತ್ರಿ ಮಾತ್ರವೇ ಕಾಣಲು ಸಾಧ್ಯವಾಗುವುದು. ಅವರು ರಾತ್ರಿ ಸಮಯದಲ್ಲಿ ಕಅಬಾಲಯವನ್ನು ಪ್ರದಕ್ಷಿಣೆ ಹಾಕಲು ಬರುವರು ಎನ್ನುವ ಮಾಹಿತಿ ನನಗೆ ಲಭಿಸಿತು. ನಾನು ಪ್ರವಾದಿಯವರನ್ನು ﷺ ಕಾಯುತ್ತಾ, ಕಅಬಾಲಯದ ಮೇಲೆ ಹೊದಿಸಲಾಗಿದ್ದ ಬಟ್ಟೆಯ (ಕಿಸ್'ವ) ಒಳ ಭಾಗದಲ್ಲಿ ಕುಳಿತು ಕಾಯುತ್ತಿದ್ದೆನು. ಹೀಗಿರುವಾಗ ''ಲಾ ಇಲಾಹ ಇಲ್ಲಲ್ಲಾಹ್'' ಎಂದು ಜೋರಾಗಿ ಉಚ್ಛರಿಸುತ್ತಾ ಪ್ರವಾದಿಯವರು ﷺ ಆಗಮಿಸಿದರು. ನಾನು ಅವರು ಬಳಿ ಹೋಗಿ ನೀವು ಏನಾಗಿರುತ್ತೀರಿ ಎಂದು ಕೇಳಿದನು.
ಪ್ರವಾದಿಯವರು ﷺ: ನಾನು ಅಲ್ಲಾಹುವಿನ ಪ್ರವಾದಿಯಾಗಿರುವೆನು
ಅಂರ್: ಹಾಗೆಂದರೆ.?
ಪ್ರವಾದಿಯವರು ﷺ: ಅಲ್ಲಾಹನು ಅವನ ಸಂದೇಶವನ್ನು ಜನರಿಗೆ ತಲುಪಿಸಲೆಂದು ನನ್ನನ್ನು ನಿಯೋಗಿಸಿದ್ದಾನೆ.
ಅಂರ್: ಯಾವ ಸಂದೇಶವನ್ನು ತಲುಪಿಸಲೆಂದು ನಿಮ್ಮನ್ನು ನಿಯೋಗಿಸಿದ್ದು.?
ಪ್ರವಾದಿಯವರು ﷺ: ನೀವು ಅಲ್ಲಾಹನನ್ನು ಮಾತ್ರವೇ ಆರಾಧನೆ ಮಾಡಿರಿ, ಅವನ ಜೊತೆಯಲ್ಲಿ ಇತರರನ್ನು ಪಾಲುದಾರರನ್ನಾಗಿ ಮಾಡಬೇಡಿರಿ, ಕುಟುಂಬ ಸಂಬಂಧಗಳನ್ನು ನೆಲೆ ನಿಲ್ಲಿಸಿರಿ ಎಂದು.
ಅಂರ್: ಈಗ ಯಾರೆಲ್ಲ ತಮ್ಮನ್ನು ಒಪ್ಪಿಕೊಂಡಿದ್ದಾರೆ.?
ಪ್ರವಾದಿಯವರು ﷺ: ಇಬ್ಬರು ಅದರಲ್ಲಿ ಒಬ್ಬರು ಗುಲಾಮನಾಗಿರುವರು,
ಇದನ್ನು ಕೇಳಿದ ತಕ್ಷಣವೇ ನಾನು ಅವರನ್ನು ಅಂಗೀಕರಿಸಲು ತಯಾರದೆನು. ಪ್ರವಾದಿಯವರು ﷺ ತಮ್ಮ ಕೈಯನ್ನು ಮುಂದೆ ಚಾಚಿದಾಗ, ನಾನು ಅವರ ಕೈಯನ್ನು ಹಿಡಿದು ಸತ್ಯ ವಿಶ್ವಾಸದ ಒಪ್ಪಂದವನ್ನು ಅಂಗೀಕರಿಸಿದೆನು. ನಂತರ ನಾನು ಅವರಲ್ಲಿ, ಓ ಪ್ರವಾದಿಯವರೆ ﷺ ಈಗ ನಾನು ನಿಮ್ಮನ್ನು ಸಂಪೂರ್ಣವಾಗಿ ಅಂಗೀಕರಿಸಿದೆ ಅಲ್ವೇ, ಹಾಗಾಗಿ ಇನ್ನುಮುಂದೆ ಇಲ್ಲಿಯೇ ಇರಬಹುದೇ ಎಂದು ಕೇಳಿದೆನು. ಅದಕ್ಕೆ ಪ್ರವಾದಿಯವರು ﷺ, ಸದ್ಯಕ್ಕೆ ಬೇಡ, ಈಗ ನಿಮಗೆ ಇಲ್ಲಿ ಮುಂದುವರೆಯಲು ಬಹಳಷ್ಟು ಕಷ್ಟಕರ ಆಗಬಹುದು, ಸಮಸ್ಯೆಗಳನ್ನು ಎದುರಿಸಬೇಕಾಗಿಯೂ ಬರಬಹುದು ಹಾಗಾಗಿ ನಾನು ಬಹಿರಂಗವಾಗಿ ಘೋಷಣೆ ಮಾಡಿದ ಬಳಿಕ ನೀವು ವಾಪಸು ಬನ್ನಿರಿ. ಈಗ ನೀವು ನಿಮ್ಮ ಊರಿಗೆ ತಿರುಗಿ ಮರಳಿರಿ ಎಂದು ಹೇಳಿದರು.
ನಾನು ತಿರುಗಿ ನನ್ನ ಊರಿಗೆ ಮರಳಿ ಬಂದು, ಒಳ್ಳೆಯ ರೀತಿಯಲ್ಲಿ ಸತ್ಯ ವಿಶ್ವಾಸದೊಂದಿಗೆ ಜೀವಸ ತೊಡಗಿದೆನು. ಪ್ರವಾದಿಯವರ ﷺ ಪ್ರತಿಯೊಂದು ವಿಷಯಗಳನ್ನು ನಾನು ತಿಳಿಯುತ್ತಲೇ ಇದ್ದೆನು. ಹೀಗಿರುವಾಗ ಪ್ರವಾದಿಯವರು ﷺ ಮದೀನಕ್ಕೆ ಹಿಜಿರ (ಪಲಾಯನ) ನಡೆಸಿರುವರು ಎಂಬ ಮಾಹಿತಿಯು ನನಗೆ ಲಭಿಸಿತು. ನಾನು ಮದೀನಕ್ಕೆ ತೆರಳಿ ಅಲ್ಲಿ ಪ್ರವಾದಿಯವರಲ್ಲಿ ﷺ ನನ್ನ ಪರಿಚಯವಿದೆಯೆ.? ಎಂದು ಕೇಳಿದಾಗ. ನೀವು ನನ್ನನ್ನು ಭೇಟಿಯಾಗಲು ಮಕ್ಕಾ ನಗರಕ್ಕೆ ಬಂದಿದ್ರಿ ಅಲ್ವಾ.? ಎಂದು ಹೇಳಿದರು. ತಮಗೆ ಲಭಿಸಿದ ಜ್ಞಾನಗಳನ್ನು ನನಗೆ ಕಲಿಸಿರಿ ಎಂದು ವಿನಂತಿಸಿದಾಗ ಪ್ರವಾದಿಯವರು ﷺ ಕಲಿಸಲು ಮುಂದಾದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment