Abu Hisham Saquafi

Official Website Of Hafiz Ilyas Saquafi Padaladka

Monday, August 22, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -68 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ಪ್ರವಾದಿಯವರಿಗೆ ﷺ ಅವಮಾನ ಮಾಡುವುದನ್ನು ಅಬೂತ್ವಲಿಬ್'ರು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಅವರಿಗೆ ಅರ್ಥವಾಗಿತ್ತು. ಹಾಗಾಗಿ ಅವರು ಉಮಾರತ್ ಬಿನ್ ವಲೀದ್ ಎನ್ನುವ ಸುಂದರ ಯುವಕನನ್ನು ಜೊತೆಯಲ್ಲಿ ಸೇರಿಸಿ, ಅಬೂತ್ವಾಲಿಬರನ್ನು ಭೇಟಿಯಾಗಲು ತೆರಳಿದರು. ಬಹಳಷ್ಟು ಸುಂದರನೂ, ಯುವಕನೂ ಆದ, ಉಮಾರನನ್ನು ನಿಮ್ಮ ಮಗನಾಗಿ ಸ್ವೀಕರಿಸಿ, ಆ ಮುಹಮ್ಮದ್'ರನ್ನು ﷺ ನಮಗೆ ಬಿಟ್ಟು ಕೊಡಿ, ನಾವು ಮುಂದಿನ ತೀರ್ಮಾನ ಆಲೋಚಿಸುತ್ತೇವೆ. ಎಂದು ಹೇಳಿದಾಗ, ಅಬೂತ್ವಾಲಿಬರು ಛೇ ಇದೆಂಥ ನೀಚ ಮನಸ್ಥಿತಿ.! ನನ್ನ ಮಗನನ್ನು ನಿಮಗೆ ಸಾಯಿಸಲು ಬಿಟ್ಟು ಕೊಟ್ಟು, ನಿಮ್ಮ ಮಗನನ್ನು ನಾನು ಸಾಕಬೇಕಾ.? ಪ್ರಾಣಿಗಳು ಕೂಡ ಇಂತಹ ವರ್ತನೆ ಮಾಡುವುದಿಲ್ಲ, ಅವುಗಳು ಯಾವತ್ತಾದರೂ ಇತರ ಜೀವಿಗಳ ಮರಿಗಳ ತನ್ನ ಮರಿಯಾಗಿ ಕಂಡದ್ದು ನೀವು ನೋಡಿದ್ದೀರಾ.? ಎಂದು ಹೇಳಿದರು.

     ಮುತ್ವ್'ಇಮು ಬಿನ್ ಅದಿಯ್ ಮುಂದೆ ಬಂದು, ಅದು ಹಾಗೆ ಅಲ್ಲ ಅಬೂತ್ವಾಲಿಬ್'ರವರೇ, ನಾವು ನಿಮ್ಮಲ್ಲಿ ನ್ಯಾಯವಾಗಿ ಅಲ್ಲವೇ ವರ್ತಿಸಿದ್ದು, ನೀವು ಯಾಕೆ ಸಮಸ್ಯೆ ಪರಿಹಾರ ಮಾಡಲು ಮುಂದಾಗುವುದಿಲ್ಲ .?ಎಂದು ಹೇಳಿದಾಗ, ಇಲ್ಲ.! ನೀವು ನ್ಯಾಯವಾಗಿ ವರ್ತಿಸಲೇ ಇಲ್ಲ, ಬದಲಾಗಿ ಅವಮಾನ ಮಾಡಲು ಬಂದದ್ದು. ಸಾರ್ವಜನಿಕವಾಗಿ ಎಲ್ಲರೂ ನನ್ನನ್ನು ಎದುರಿಸಲೆಂದೇ ಜನರನ್ನು ಕೆರಳಿಸಿ ಇಲ್ಲಿಗೆ ಬಂದದ್ದು, ಸರಿ ಇನ್ನೂ ನೀವು ಇಷ್ಟಬಂದದ್ದು ಮಾಡಿ ಎಂದು ರೋಷದಿಂದಲೇ ಹೇಳಿದರು.

    ಹೀಗೆ ಅವರೆಲ್ಲರೂ ಸಾರ್ವಜನಿಕವಾಗಿಯೇ ವಿರೋಧಿಸಲು ಆರಂಭಿಸಿದರು. ಅವಮಾನದ ಮಾತುಗಳು ಕೇಳಲು ಆರಂಭಿಸಿದವು. ಪ್ರತಿಯೊಂದು ಜನಾಂಗವೂ ಕೂಡ ಅವರ ನಡುವೆ ಇಸ್ಲಾಮ್ ಸ್ವೀಕರಿಸಿದ ಜನರಿಗೆ ಕಿರುಕುಳ ನೀಡಲು ಮುಂದಾದರು. ಆದರೆ ಅಬೂತ್ವಾಲಿಬ್ ಮಾತ್ರ ಮುಹಮ್ಮದ್'ರಿಗೆ ﷺ ಸುರಕ್ಷತೆ ನೀಡಲು ತೀರ್ಮಾನಿಸಿದರು. ಅವರ ಕುಟುಂಬದ ಬನೂ ಹಾಷಿಂ, ಬನುಲ್ ಮುತ್ವಲಿಬ್'ನ ಎಲ್ಲಾ ಸದಸ್ಯರನ್ನು ಜೊತೆ ಸೇರಿಸಿ, ನಮ್ಮ ಕುಟುಂಬದ ಸದಸ್ಯನಾದ ಮುಹಮ್ಮದ್'ರನ್ನು ﷺ ನಾವು ರಕ್ಷಣೆ ಮಾಡಬೇಕು ಎಂದು ಅವರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದಾಗ ಅಬೂಲಹಬನ್ನು ಬಿಟ್ಟು ಬಾಕಿ ಎಲ್ಲರೂ ಅದಕ್ಕೆ ಸಮ್ಮತಿ ನೀಡಿದರು. 
ಪ್ರವಾದಿಯವರ ﷺ ಗುಣಗಾನ ಹೇಳುತ್ತಾ, ಅಬೂತ್ವಾಲಿಬರು ಹೀಗೆ ಹಾಡಿದರು, (ಇದಜ್'ತಮಅತ್ ಯೌಮನ್ ಖುರೈಶುನ್...) 
ಖುರೈಶಿಗಳೆಲ್ಲರೂ ಒಂದು ದಿನ ಒಟ್ಟು ಸೇರಿದರೆ,
ಅಬ್'ದುಮನಾಫಲ್ಲವೇ ಅವರಲ್ಲಿ ಉನ್ನತರು.
ಅಬ್'ದುಮನಾಫಿನ ಗಣ್ಯರು ಮಾತ್ರ ಬಂದಾಗ,
ಹಾಷಿಮಲ್ಲವೇ ಅವರಲ್ಲಿ ಉನ್ನತರು.
ಅವರಲ್ಲೂ ಉನ್ನತ ವ್ಯಕ್ತಿ ಯಾರೆಂದು ನೋಡುವುದಾದರೆ 
ಅತ್ಯುನ್ನತ ವ್ಯಕ್ತಿತ್ವವಾದ ಮುತ್ತು ಮುಹಮ್ಮದ್ ﷺ ಆಗಿರುವರು.

    ಹೀಗಿರುವಾಗ ಒಂದು ದಿನ ಪ್ರವಾದಿಯವರು ﷺ ಕಅಬಾಲದ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ, ಅಬೂಜಹಲ್ ಅವರ ಮುಂದೆ ಬಂದು, ಪ್ರವಾದಿಯವರ ﷺ ಬಳಿ ಅಹಂಕಾರದಿಂದ ವರ್ತಿಸತೊಡಗಿದನು, ಬಹಳಷ್ಟು ಕಿರುಕುಳ ನೀಡಿದನು. ಆದರೆ ಪ್ರವಾದಿಯವರು ﷺ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಅಲ್ಲಿಂದ ಮುಂದೆ ಹೋದರು. ಸುತ್ತಮುತ್ತಲಿನ ಜನರೆಲ್ಲರೂ ಅದನ್ನು ನೋಡುತ್ತಾ ನಿಂತಿದ್ದರು. 
    ಅಷ್ಟರಲ್ಲೇ ಪ್ರವಾದಿಯವರ ﷺ ಚಿಕ್ಕಪ್ಪ ಹಂಝ'ರವರು ಬೇಟೆ ಮುಗಿಸಿ ಬರುತ್ತಿದ್ದರು. ಅವರ ಮುಂದಿನಿಂದ ಹಾದು ಹೋದ ಇಬ್ಬರು ಮಹಿಳೆಯರು, ಅಬೂಜಹಲ್ ಮುಹಮ್ಮದ್'ರಿಗೆ ﷺ ಕಿರುಕುಳ ಕೊಟ್ಟದ್ದು ಇವರಿಗೆ ತಿಳಿದರೆ ಏನಾಗಬಹುದು.? ಎಂದು ಮಾತಾಡುತ್ತಿದ್ದದ್ದು ಅವರ ಕಿವಿಗೆ ಬಿತ್ತು. ತಕ್ಷಣವೇ ಹಂಝ ಅವರಲ್ಲಿ ಎಲ್ಲಾ ವಿಷಯಗಳನ್ನು ಕೇಳಿ ತಿಳಿದುಕೊಂಡರು. ಅದನ್ನು ಕೇಳಿದ ಹಂಝರ ರಕ್ತ ಕುದಿಯತೊಡಗಿತು. ಅವರು ನೇರವಾಗಿ ಕಅಬಾಲಯದ ಬಳಿ ಹೆಜ್ಜೆ ಹಾಕಿದರು. ಸಾಮಾನ್ಯವಾಗಿ ಬೇಟೆ ಮುಗಿಸಿ ಕಅಬಾಲಯದ ಪ್ರದಕ್ಷಿಣೆ ಹಾಕಿ ಮನೆಗೆ ಹೋಗುವುದು ರೂಢಿಯಾಗಿತ್ತು. 
    ಅದೋ ಮಸ್ಜಿದ್'ನ ಒಂದು ಮೂಲೆಯಲ್ಲಿ ಅಬೂಜಹಲ್ ನಿಂತಿದ್ದನು. ಹಂಝ ನೇರವಾಗಿ ಅವನ ಬಳಿ ಹೋಗಿ ಬಿಲ್ಲಿನಿಂದ ಅವನ ತಲೆಯನ್ನು ಎತ್ತಿ, ನಾನು ಮುಹಮ್ಮದ್'ರ ﷺ ಧರ್ಮವನ್ನು ಸೇರುತ್ತಿದ್ದೇನೆ. ನೀವು ನಿಜಾವಾಗಿಯೂ ಸತ್ಯವಂತರೆ ಆಗಿದ್ದಲ್ಲಿ ನನ್ನನ್ನು ತಡೆಯಿರಿ ನೋಡೋಣ. ಎಂದು ಹೇಳಿದಾಗ, ಖುರೈಷಿಗಳ ಅವರ ಮೇಲೆ ಮುಗಿ ಬಿದ್ದು, ಇದೇನು ಹೇಳುತ್ತಿದ್ದೀರ.? ಅಬೂಯಅಲಾ.. ಅಬೂಯಅಲಾ. (ಇದೇನು ಹೇಳುತ್ತಿದ್ದೀರ ಹಂಝ) 

     ಈ ಘಟನೆಯ ಕುರಿತು ಇನ್ನೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು. ಪ್ರವಾದಿಯವರು ﷺ ಸಫಾ ಪರ್ವತದ ಬಳಿ ಕುಳಿತಿದ್ದರು. ಅಷ್ಟೊತ್ತಿಗೆ ಅಬೂಜಹಲ್ ಆ ದಾರಿಯಲ್ಲಿ ಬಂದವನೇ, ಪ್ರವಾದಿಯವರನ್ನು ﷺ ಬಾಯಿಗೆ ಬಂದಂತೆ ನಿಂದಿಸಲು ಆರಂಭಿಸಿದನು. ಆದರೂ ಪ್ರವಾದಿಯವರು ﷺ ಸುಮ್ಮನೆ ಕುಳಿತಿದ್ದರು. ಈ ದೃಶ್ಯವನ್ನು ಅಬ್ದುಲ್ಲಾಹಿಬಿನ್ ಜೂದಆನ್'ರ ಸೇವಕಿ ಅವರ ಮನೆಯಲ್ಲಿ ಕುಳಿತು ಕಾಣುತ್ತಿದ್ದರು. ಸ್ವಲ್ಪ ಸಮಯದ ನಂತರ ಹಂಝರವರು ತಮ್ಮ ಬೇಟೆ ಮುಗಿಸಿ ಆ ದಾರಿಯಲ್ಲಿ ನಡೆದು ಬಂದು, ಕಅಬಾಲಯದ ಪ್ರದಕ್ಷಿಣೆ ಹಾಕಿ ಸಾಮಾನ್ಯವಾಗಿ ಹೋಗುವ ಹಾಗೆ ಖುರೈಷಿಗಳು ಮಾತುಕತೆ ನಡೆಸುವ ಕಟ್ಟೆಯ ಬಳಿ ತೆರಳಿದರು. ತಕ್ಷಣವೇ ಆ ಸೇವಕಿ ಅವರ ಬಳಿ ಬಂದು, ಓ ಅಬೂಉಮಾರಃ ಸ್ವಲ್ಪ ಹೊತ್ತಿಗೆ ಮುಂಚೆ, ಅಬುಲ್ ಹಕಮ್ ನಿಮ್ಮ ಅಣ್ಣನ ಮಗನಿಗೆ ಏನು ಮಾಡಿದನು ಎಂದು ನಿಮಗೆ ಗೊತ್ತೇ.? ಎಂದು ಹೇಳಿದಾಗ...

      (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: