ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಹಂಝರವರು ◌ؓ ಇಸ್ಲಾಮ್ ಸ್ವೀಕರಿಸಿದ್ದು ಖುರೈಷಿಗಳ ಭಾವನೆಗೆ ಬಹಳಷ್ಟು ಧಕ್ಕೆ ಉಂಟಾಗಿತ್ತು. ಕುರ್'ಆನಿನ ಸಂದರ್ಭೋಚಿತ ಅವತರಣೆಯೂ ಕೂಡ ಅವರನ್ನು ಬಹಳಷ್ಟು ಕಾಡಿತ್ತು. ಹೇಗಾದರೂ ಪ್ರವಾದಿಯವರನ್ನು ﷺ ಎದುರಿಸಲೇ ಬೇಕು, ಅದಕ್ಕಾಗಿ ಹಲ್ಲೆ ನಡೆಸುವುದಕ್ಕೂ ಸಿದ್ಧ, ಅಪವಾದ ಹೊರೆಸುವುದಕ್ಕೂ ಸಿದ್ಧ ಎನ್ನುವಷ್ಟರ ಮಟ್ಟಿಗೆ ತಲುಪಿದ್ದರು. ಅದಕ್ಕಾಗಿ ಖುರೈಷಿಗಳಲ್ಲಿ ಕೆಲವು ಗಣ್ಯ ವ್ಯಕ್ತಿಗಳು ಸೇರಿ, ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದರು. ನಮ್ಮ ಭಾಗದಿಂದ ವಾಮಾಚಾರ, ಜ್ಯೋತಿಷ್ಯ ವಿದ್ಯೆ, ಕವಿತೆ, ಮುಂತಾದ ಕಲೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಒಬ್ಬ ವ್ಯಕ್ತಿಯನ್ನು ಮುಹಮ್ಮದ್'ರ ﷺ ಮುಂದೆ ನಿಲ್ಲಿಸಿ, ಅವರನ್ನು ಪರೀಕ್ಷಿಸೋಣ. ಮುಹಮ್ಮದ್'ರಿಂದ ﷺ ಏನು ಉತ್ತರ ಬರುತ್ತದೆ ಎಂದು ನೋಡೋಣ. ಅದಕ್ಕಾಗಿ ಈಗ ಮುಹಮ್ಮದ್'ರಿಗೆ ﷺ ಇವುಗಳಲ್ಲಿ ಯಾವುದೇ ಕುರಿತು ಅರಿವಿದೆ ಎಂದು ತಿಳಿಯಲು, ಒಬ್ಬ ವ್ಯಕ್ತಿಯು ಹೋಗಿ ಭೇಟಿಯಾಗಬೇಕು. ಎಂದು ಹೇಳಿದಾಗ, ಎಲ್ಲರೂ ಒಂದೇ ಧ್ವನಿಯಲ್ಲಿ ಉತ್'ಬತ್ ಬಿನ್ ರಬೀಅ ಅಲ್ಲದೆ ಇನ್ಯಾರಿದ್ದಾರೆ ಇದಕ್ಕೆ ಯೋಗ್ಯವಾದ ವ್ಯಕ್ತಿ. ಅವರು ಉತ್'ಬತ್ ಬಿನ್ ರಬೀಅರನ್ನು ನೋಡಿದ ಕೂಡಲೇ ನೀವು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.
ಉತ್'ಬ ಪ್ರವಾದಿಯವರನ್ನು ﷺ ಭೇಟಿಯಾಗಿ, ಪರಸ್ಪರ ಮಾತಾಡಲು ಆರಂಭಿಸಿದರು. ಓ ಮುಹಮ್ಮದ್'ರೇ ﷺ ನೀವು ಉತ್ತಮ ಮನೆತನದಿಂದ ಬಂದಿರುವ, ಒಳ್ಳೆಯ ಸ್ಥಾನವನ್ನು ಹೊಂದಿರುವ ವ್ಯಕ್ತಿ ಆಗಿರುವಿರಿ. ಆದರೆ ನಿಮ್ಮ ಪ್ರವಾದಿತ್ವದ ಘೋಷಣೆಯಿಂದ, ಎಷ್ಟು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಬೇಕು ಎನ್ನುವುದು ಗೊತ್ತೇ ನಿಮಗೆ.? ನೀವು ಪೂರ್ವಿಕರನ್ನು ವಿರೋಧಿಸಿದ್ರಿ, ಅವರ ದೇವರುಗಳನ್ನು ನಿಷೇಧ ಮಾಡಿದ್ರಿ, ಇನ್ನೂ ಏನೇನೋ ಮಾಡಿದ್ರಿ. ಸರಿ ಹಾಗಿದ್ರೆ ನಾನೊಂದು ವಿಷಯ ಕೇಳಲೇ.? ನಿಮ್ಮ ತಂದೆ ಅಬ್ದುಲ್ಲಾಹ್'ರಿಗಿಂತ ನೀವು ಶ್ರೇಷ್ಠರೇ.? ಅಬ್ದುಲ್ ಮುತ್ತಲಿಬರಿಗಿಂತ ಮಹಾ ವ್ಯಕ್ತಿಯೋ ನೀವು.? ಬಹುಶಃ ಅವರೇ ಅತ್ಯುನ್ನತ ವ್ಯಕ್ತಿ ಆಗಿದ್ದಲ್ಲಿ, ಅವರ್ಯಾರೂ ಇಂತಹ ಕೆಲಸಗಳನ್ನು ಮಾಡಿಲ್ಲವಲ್ಲ.? ಇನ್ನೂ ಅವರಿಗಿಂತ ಶ್ರೇಷ್ಠತೆ ನಿಮಗಿದ್ದರೆ ಹೇಳಿ ನಾವು ಕೇಳುತ್ತೇವೆ. ಯಾವುದೇ ಜನಾಂಗದಲ್ಲೂ ಇಂತಹ ವ್ಯಕ್ತಿ ಇರಲಿಕ್ಕಿಲ್ಲ. ದೇವರುಗಳನ್ನು ವಿರೋಧಿಸಿ, ಸಾಮರಸ್ಯವನ್ನು ನಷ್ಟಪಡಿಸಿ, ಕೊನೆಗೆ ಅರಬಿಗಳ ನಡುವೆ ತಮ್ಮ ಘನತೆಯನ್ನೂ ಕಳೆದುಕೊಂಡು, ಎಲ್ಲರಿಂದಲೂ ತಮಾಷೆಗೆ ಒಳಗಾಗುತ್ತಿದ್ದೀರಿ. ಖುರೈಷಿಗಳಲ್ಲಿ ಈಗ ಒಬ್ಬ ಜ್ಯೋತಿಷಿ ಬಂದಿದ್ದಾರೆ, ವಾಮಾಚಾರಿ ಬಂದಿದ್ದಾರೆ ಎಂದು. ಇದು ಹೀಗೆ ಮುಂದುವರಿದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಿ ಇನ್ನೇನೋ ಅನಾಹುತ ಆಗುವ ಸಾಧ್ಯತೆ ಅಧಿಕವಿದೆ. ಹಾಗಾಗಿ ನಾನು ಕೆಲವು ವಿಷಯಗಳನ್ನು ಕೇಳುತ್ತೇನೆ. ಅದರಲ್ಲಿ ನಿಮಗೆ ಯಾವುದರ ಅಗತ್ಯವಿದೆ ಎಂದು ಹೇಳಿದರೆ ಸಾಕು ಎಂದು ಹೇಳಿದಾಗ, ಪ್ರವಾದಿಯವರು ﷺ ಅದಕ್ಕೆ ಸಮ್ಮತಿ ನೀಡಿದರು.
ಉತ್'ಬ ಮಾತು ಮುಂದುವರೆಸಿ, ಓ ಮುಹಮ್ಮದರೇ ﷺ, ನಿಮ್ಮ ಈ ಹೊಸ ಆದರ್ಶದ ತಾತ್ಪರ್ಯ ಹಣ ಸಂಪಾದನೆ ಆಗಿದಿಯೇ.? ಹಾಗಿದ್ದಲ್ಲಿ ನಿಮ್ಮನ್ನು ಇಲ್ಲಿರುವ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿ ನಾವು ಮಾಡುತ್ತೇವೆ. ಅಥವಾ ನೀವು ಬಯಸುತ್ತಿರುವುದು ನಾಯಕತ್ವವಾಗಿದೆಯೇ.?, ಹಾಗಿದ್ದಲ್ಲಿ ನಾವೆಲ್ಲರೂ ನಿಮ್ಮನ್ನೇ ನಮ್ಮ ನಾಯಕನಾಗಿ ಅಂಗೀಕಾರ ಮಾಡುತ್ತೇವೆ. ಅದೂ ಅಲ್ಲ ರಾಜನ ಪದವಿ ಬೇಕಾಗಿದೆಯೇ ನಿಮಗೆ.? ನಾವೆಲ್ಲರೂ ನಿಮ್ಮನ್ನು ರಾಜನಾಗಿ ಅಂಗೀಕರಿಸುತ್ತೇವೆ. ಅದೇನು ಅಲ್ಲದೆ ಏನಾದರೂ ಸಮಸ್ಯೆಗೆ ಒಳಗಾಗಿ ಹೀಗೆ ಹೇಳುವುದಾದರೆ, ಎಷ್ಟೇ ಖರ್ಚಾದರೂ ಚಿಂತೆಯಿಲ್ಲ ನಾವು ಸರಿ ಮಾಡುತ್ತೇವೆ. ಎಂದು ಹೇಳಿದರು.
ಪ್ರವಾದಿಯವರು ﷺ ಎಲ್ಲವನ್ನು ಬಹಳ ಶ್ರದ್ಧೆಯಿಂದ ಕೇಳಿದ ನಂತರ, ಓ ಅಬುಲ್ ವಲೀದ್ ನಿಮಗೆ ಕೇಳಲಿದ್ದ ಎಲ್ಲಾ ಮಾತುಗಳನ್ನು ಕೇಳಿ ಆಯಿತೆ.? ಹಾಗಿದ್ದಲ್ಲಿ ನಾನು ಮಾತು ಮುಂದುವರಿಸಲೇ ಎಂದು ಕೇಳಿದಾಗ, ಉತ್'ಬಃ ಸಮ್ಮತಿಸಿದರು.
ಪ್ರವಾದಿಯವರು ﷺ ಬಿಸ್ಮಿಲ್ಲಾಹಿ... ಎಂದು ಪವಿತ್ರ ಕುರ್'ಆನಿನ ನಲ್ವತ್ತೊಂದನೇ ಅಧ್ಯಾಯದ ಮೊದಲ ಭಾಗವನ್ನು ಪಠಿಸಿದರು. (ಹಾಮೀಂ...) ಸೂಕ್ತದ ಅರ್ಥವನ್ನು ಈ ರೀತಿ ತಿಳಿಯೋಣ. "ಹಾಮೀಂ.. ಗ್ರಹಿಸಿಕೊಳ್ಳಲು ಸಾಮರ್ಥ್ಯವಿರುವ ಜನರಿಗಾಗಿ ಅರಬಿ ಭಾಷೆಯಲ್ಲಿ ವಾಚಿಸಲ್ಪಡುವ, ವಚನಗಳನ್ನು ವಿವರಿಸಿದ ಒಂದು ವೇದ ಗ್ರಂಥ. ಸುವಾರ್ತೆಯನ್ನೂ ಮುನ್ನೆಚ್ಚರಿಕೆಯನ್ನೂ ನೀಡುವ ಈ ಗ್ರಂಥ, ಆದರೆ ಹೆಚ್ಚಿನವರು ಕೇಳಿಯೂ ಅರ್ಥ ಮಾಡಿಕೊಳ್ಳದೇ ವಿರೋಧಿಸಿದ್ದಾರೆ".
ಹೀಗೆ ಮುಂದುವರೆದು ಹದಿಮೂರನೇ ಸೂಕ್ತದ ಬಳಿ ತಲುಪಿದರು. ಅದರ ಅನುವಾದವು ಈ ರೀತಿಯಾಗಿದೆ. "ಅವರು ವಿರೋಧಿಸಿದರೆ, ಪ್ರವಾದಿಯವರೇ ﷺ ನೀವು ಅವರಲ್ಲಿ ಆದ್, ಸಮೂದ್ ಜನಾಂಗಕ್ಕೆ ನೀಡಿದ ಹಾಗೆ ಘೋರವಾದ ಶಿಕ್ಷೆಯನ್ನು ನಿಮಗೂ ಸಿಗಬಹುದು ಎಂದು ಎಚ್ಚರಿಕೆ ನೀಡಿರಿ." ಎಂದು ಹೇಳುತ್ತಾ ಮುಂದುವರಿಯುತ್ತಿದ್ದಾಗ,
ಅಷ್ಟರವರೆಗೆ ಶಾಂತವಾಗಿ ಕೇಳುತ್ತಿದ್ದ ಆ ವ್ಯಕ್ತಿ ಪ್ರವಾದಿಯವರ ﷺ ಬಾಯಿ ಮುಚ್ಚಲು ಮುಂದಾಗಿ, ಪ್ರವಾದಿಯವರಲ್ಲಿ ﷺ ಇನ್ನೂ ಮುಂದೆ ಹೋಗಬೇಡಿ ಎಂದು ವಿನಂತಿಸಿದರು.
ನಂತರ ಪ್ರವಾದಿಯವರು ﷺ ಸಾಷ್ಟಾಂಗ ಮಾಡಬೇಕಾದ ಸೂಕ್ತದವರೆಗೆ ಪಠಿಸಿ, ಸಾಷ್ಟಾಂಗ (ಸುಜೂದ್) ಮಾಡಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment