Abu Hisham Saquafi

Official Website Of Hafiz Ilyas Saquafi Padaladka

Wednesday, August 31, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -76 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಗುಹೆಯಲ್ಲಿ ಜೀವಿಸಿದ್ದ "ಅಸ್'ಹಾಬುಲ್ ಕಹ್'ಫ್'ರ" ಕುರಿತಾಗಿತ್ತು ಅವರು ಮೊದಲು ಕೇಳಿದ್ದು. "ಝುಲ್'ಕರ್'ನೈನ್'ರವರ" ಕುರಿತಾಗಿತ್ತು ಎರಡನೇ ಬಾರಿ ಪ್ರಶ್ನೆ ಕೇಳಿದ್ದು. ಆತ್ಮದ ಕುರಿತು ಪ್ರವಾದಿಯವರು ﷺ ಏನು ಹೇಳಬಹುದೆಂದು? ಕಾದು ಕುಳಿತಿದ್ದರು. ಅದಕ್ಕೆ ಸಂಪೂರ್ಣವಾದ ವಿವರಣೆಯೊಂದಿಗೆ, ಸ್ಪಷ್ಟವಾದ ಉತ್ತರ ಕುರ್'ಆನ್ ನೀಡಿತು. 

      ಇಸ್ಲಾಮ್ ಚರ್ಚೆಗಳನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯೂ ಕೂಡ ಆಗಿದೆ ಇದು. ಆಧುನಿಕ ಯುಗದ ಇಸ್ಲಾಮ್ ವಿರೋಧಿಗಳು ಇತಿಹಾಸವನ್ನು ಸ್ಪಷ್ಟವಾಗಿ ಪರಿಶೀಲಿಸಲಿ. ಇಷ್ಟೊಂದು ಸೈದ್ಧಾಂತಿಕವಾದ ಚರ್ಚೆಗಳನ್ನು ಎದುರಿಸಿದ ಬೇರೆ ಯಾವ ಸಿದ್ದಾಂತವೂ ಕೂಡ ಬಹುಶಃ ಇರಲಿಕ್ಕಿಲ್ಲ. ಪ್ರವಾದಿಯವರ ﷺ ಪ್ರಭೋಧನೆಯ ಆರಂಭದಲ್ಲೇ, ಮುಕ್ತವಾದ ಚರ್ಚೆಗಳಾನ್ನಾಗಿತ್ತು ಎದುರಿಸಿದ್ದು. 
     ಸೈದ್ಧಾಂತಿಕವಾಗಿ ಸೋಲುವಾಗ ಹಿಂಸೆ ಮಾಡುವುದು ಅವತ್ತೂ ಕೂಡ ಇದ್ದ ಪದ್ಧತಿಯಾಗಿತ್ತು. ಮಕ್ಕಾದ ಅವಿಶ್ವಾಸಿಗಳು ಹಿಂಸೆಯನ್ನು ಅಧಿಕವಾಗಿ ಇಷ್ಟಪಡುವವರಾಗಿದ್ದರು. ಕಅಬಾಲಯದ ಸುತ್ತಮುತ್ತಲಿನಲ್ಲಿ ನಮಾಝ್ ಮಾಡುತಿದ್ದವರ ಮೇಲೆ ಕ್ರೂರವಾಗಿ ಹಿಂಸಿಸ ತೊಡಗಿದರು. ಖುರ್'ಆನ್ ಕಲಿಯುತ್ತಿದ್ದವರ ಮೇಲೆ ಬಹಳ ರಾಕ್ಷಸಿಯವಾಗಿ ವರ್ತಿಸತೊಡಗಿದರು. ಪ್ರವಾದಿಯವರು ﷺ ನಮಾಝಿನಲ್ಲಿ ಕುರ್'ಆನ್ ಪಠಿಸುವುದು ಕೇಳಿಯಾಗಿತ್ತು, ಹಲವಾರು ಜನರು ಕುರ್'ಆನ್ ಕಲಿತದ್ದು. ಇದು ಅವಿಶ್ವಾಸಿಗಳಿಗೆ ಅಸಹನೀಯವಾಗಿತ್ತು. ಇದರ ಬಗ್ಗೆ ಅಲ್ಲಾಹನು ತನ್ನ ಸೃಷ್ಟಿಗಳಿಗೆ ಪ್ರವಾದಿಯವರ ﷺ ಮೂಲಕ ಒಂದು ಒಳ್ಳೆಯ ಸಂದೇಶವನ್ನು ನೀಡಿದನು. "ನೀವು ನಮಾಝ್'ನಲ್ಲಿ ಅಧಿಕ ಶಬ್ದದಿಂದ ಪಠಿಸಿಬೇಕಾಗಿಲ್ಲ, ಹಾಗಂತ ಅಧಿಕವಾಗಿ ಕಡಿಮೆಯೂ ಮಾಡದಿರಿ" ಎಂದು. (ಇಸ್'ರಾಅ್ 110) ಶತ್ರುಗಳ ಹಿಂಸೆಯಿಂದ ರಕ್ಷೆ ಹೊಂದಲು, ಹಾಗು ವಿಶ್ವಾಸಿಗಳ ಕುರ್'ಆನ್ ಪಠಣೆಗೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದಾಗಿತ್ತು ಈ ತಂತ್ರವನ್ನು ಪ್ರಯೋಗಿಸಿದ್ದು. 

     ಆದರೆ ವಿಶ್ವಾಸಿಗಳ ಮನಸ್ಸಿನಲ್ಲಿ ಖುರ್'ಆನ್ ಆಳವಾಗಿ ಬೇರೂರಿತ್ತು. ಅವರಿಗೆ ಕುರ್'ಆನ್ ಕೇಳದೆ, ಅದನ್ನು ಪಠಿಸದೆ ಇರಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಸ್ವಾಹಾಬಿಗಳೆಲ್ಲರೂ ಜೊತೆ ಸೇರಿ ಒಂದು ತೀರ್ಮಾನಕ್ಕೆ ಬಂದರು. ವಿಮರ್ಶೆ ಮಾಡುವವರ ಮುಂದೆ, ಮೇಲು ಧ್ವನಿಯಲ್ಲಿ ಒಮ್ಮೆ ಕುರ್'ಆನ್ ಪಠಿಸಿದರೆ ಹೇಗೆ.? ಎಂದು. ಸರಿ ಆದರೆ ಅದನ್ನು ಪಠಿಸುವವರು ಯಾರು.? ಎಂದು ಚರ್ಚೆ ಬಂದಾಗ, ಅಬ್ದುಲ್ಲಾಹ್ ಬಿನ್ ಮಸ್'ಊದ್'ರವರು ◌ؓ ನಾನು ಪಠಿಸುತ್ತೇನೆ ಎಂದು ಹೇಳಿದರು. ಅದಕ್ಕೆ ಅವರ ಗೆಳೆಯರಲ್ಲರು, ನೀವು ಪಠಿಸಿದರೆ ಖಂಡಿತ ಅವರು ನಿಮ್ಮ ಮೇಲೆ ಹಿಂಸೆ ಮಾಡಬಹುದು. ನಾವು ಅಂದುಕೊಂಡದ್ದು ಉನ್ನತ ಮನೆತನದ ವ್ಯಕ್ತಿಗಳು ಯಾರಾದ್ರೂ ಪಠಿಸಿದರೆ ಅವರು ಅಷ್ಟು ಬೇಗ ಹಿಂಸೆ ಮಾಡಲು ಬರುವುದಿಲ್ಲ. ಎಂದಾಗಿತ್ತು ಎಂದು ಹೇಳಿದಾಗ, ನಾನೇ ಹೋಗಿ ಪಠಿಸುತ್ತೇನೆ. ಅಲ್ಲಾಹನು ನನ್ನನ್ನು ರಕ್ಷಿಸುವನು ಎಂದು ಹೇಳಿದರು. 

     ಹೀಗೆ ಮರು ದಿನ ಮುಂಜಾನೆ ಸೂರ್ಯೋದಯ ಕಳೆದ ನಂತರ (ಲುಹಾ), ಅವರು ಕಅಬಾಲಯದ ಬಳಿ ಬಂದು, ಮಖಾಮ್ ಇಬ್ರಾಹಿಮಿನ ಸಮೀಪ ಬಂದು ನಿಂತರು. ಪವಿತ್ರ ಕುರ್'ಆನ್'ನಿನ ಅರ್ರಹ್'ಮಾನ್ ಅಧ್ಯಾಯವನ್ನು ಪಠಿಸಲು ಆರಂಭಿಸಿದರು. ಕಟ್ಟೆಯಲ್ಲಿ ಕುಳಿತಿದ್ದ ಖುರೈಷಿಗಳು ಆಶ್ಚರ್ಯದಿಂದ ನೋಡುತ್ತಾ, ಉಮ್ಮು ಅಬ್'ದಿನ ಮಗ ಏನೋ ಹೇಳ್ತಿದ್ದಾರೆ ಅಲ್ವಾ.? ಅದೇನು ಎಂದು ಕೇಳಿದರು. ಓಹ್ ಅದಾ.! ಅದು ಮುಹಮ್ಮದ್'ರಿಗೆ ﷺ ಅವತರಿಸಿದ ಗ್ರಂಥದ ಕೆಲವು ಭಾಗವನ್ನು ಅವರನ್ನು ಪಠಿಸುತ್ತಿದ್ದಾರೆ ಎಂದು ಯಾರೋ ಒಬ್ಬ ಹೇಳಿದ್ದೆ ತಡ, ಅವರೆಲ್ಲರೂ ಜೊತೆ ಸೇರಿ ಇಬ್'ನು ಮಸ್'ವೂದ್'ರ ◌ؓ ಮೇಲೆ ಹಲ್ಲೆ ಮಾಡಲು ಆರಂಭಿಸಿದರು. ಕೆಲವರು ಮುಖಕ್ಕೂ ಕೂಡ ಹೊಡೆದರು, ಆದರೂ ಇಬ್'ನು ಮಸ್'ವೂದ್ ◌ؓ ಕುರ್'ಆನ್ ಪಠಿಸುತ್ತಲೇ ಇದ್ದರು. ಸ್ವಲ್ಪ ಸಮಯದ ನಂತರ ಇಬ್'ನು ಮಸ್'ವೂದ್ ◌ؓ ಅಲ್ಲಿಂದ ಹೊರಟು ಗೆಳೆಯರ ಕಡೆಗೆ ಹೋದರು. ಮುಖಕ್ಕೆ ಗಾಯ ಮಾಡಿಕೊಂಡು ಬರುತ್ತಿದ್ದ ಇಬ್'ನ್ ಮಸ್'ವೂದ್'ರನ್ನು ◌ؓ ಕಂಡು, ಇದನ್ನೇ ಆಗಿತ್ತು ನಾವು ಕೂಡ ಭಯ ಪಟ್ಟಿದ್ದು ಎಂದು ಹೇಳಿದರು. ಅದಕ್ಕೆ ಇಬ್'ನು ಮಸ್'ವೂದ್'ರವರು ◌ؓ ನನಗೆ ಅವರ ಹಿಂಸೆ ಕ್ಷುಲ್ಲಕವಾಗಿ ಕಾಣುತ್ತಿದೆ. ಅವಕಾಶ ಸಿಕ್ಕರೆ ನಾಳೆಯು ಕೂಡ ಖಂಡಿತ ಪಠಿಸುತ್ತೇನೆ ಎಂದು ಹೇಳಿದರು. ಹೀಗೆ ಇಸ್ಲಾಮಿನ ಇತಿಹಾಸದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕುರ್'ಆನ್ ಪಠಿಸಿದ ವ್ಯಕ್ತಿ ಎನ್ನುವ ಅಮರ ನಾಮವನ್ನು ಇಬ್'ನು ಮಸ್'ವೂದ್ ◌ؓ  ತಮ್ಮದಾಗಿಸಿಕೊಂಡರು. 

     ಕುರ್'ಆನಿನ ಸೌಂದರ್ಯ ಹಾಗೂ ಅದರ ಪ್ರಭಾವವು ಖುರೈಷಿಗಳ ನಡುವೆ ಬಹಳಷ್ಟು ಚರ್ಚೆ ಮಾಡಿ ಕೊಟ್ಟಿತು. ಕಟು ಶತ್ರುಗಳು ಕೂಡ ಒಮ್ಮೆ ಅದನ್ನು ಕೇಳಿ ನೋಡಿದರೆ ಹೇಗೆ.? ಎನ್ನುವಷ್ಟರ ಮಟ್ಟಿಗೆ ಅವರ ಮೇಲೆ ಪ್ರಭಾವ ಬೀರಿತ್ತು. ಹಾಗಾಗಿ ಮೂರು ಖುರೈಷಿಗಳ ಗಣ್ಯ ವ್ಯಕ್ತಿಗಳು ಪ್ರವಾದಿಯವರು ﷺ ಪಠಿಸುವ ಕುರ್'ಆನ್'ನನ್ನು ಕದ್ದು ಕೇಳಲು ತೀರ್ಮಾನಿಸಿದರು. ಹೀಗೆ ಅಬೂಜಹಲ್, ಅಬೂಸುಫಿಯಾನ್ ಹಾಗೂ ಅಖ್'ನಸ್ ಬಿನ್ ಶರೀಖ್ ರಾತ್ರಿ ಹೊತ್ತು ಪ್ರವಾದಿಯವರು ﷺ ನಮಾಝ್ ಮಾಡುವ ಸಂದರ್ಭದಲ್ಲಿ, ಕುರ್'ಆನ್ ಕದ್ದು ಕೇಳಲು ಮುಂದಾದರು. ತಿರುಗಿ ಹೋಗುವ ದಾರಿಯಲ್ಲಿ ಮೂವರು ಕೂಡ ಆಕಸ್ಮಿಕವಾಗಿ ಭೇಟಿಯಾದರು. ಇನ್ನುಮುಂದೆ ಇದು ಪುನರಾವರ್ತನೆ ಆಗಬರದು, ನಮ್ಮ ಅನುಯಾಯಿಗಳು ಯಾರಾದ್ರೂ ನೋಡಿದ್ರೆ ತಪ್ಪು ತಿಳಿಯಬಹುದು ಎಂದು ಹೇಳಿ, ಅವರು ಮೂವರೂ ಅಲ್ಲಿಂದ ಹೊರಟು ಹೋದರು. 

      (ಮುಂದುವರಿಯುವುದು...) 

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: