Abu Hisham Saquafi

Official Website Of Hafiz Ilyas Saquafi Padaladka

Saturday, September 3, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -79 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಖುರ್'ಆನ್ ಮದ್ಯ ಪ್ರವೇಶಿಸಿ, ವಲೀದ್'ನ ಎಲ್ಲಾ ಕುತಂತ್ರಗಳನ್ನೂ ತಲೆಕೆಳಗೆ ಮಾಡಿ, ಅದ್ಭುತ ಶೈಲಿಯಲ್ಲಿ ಉತ್ತರ ನೀಡಿತು. ಅಲ್'ಮುದಸ್ಸಿರ್ ಅಧ್ಯಾಯದ ಹತ್ತನೇ ಸೂಕ್ತದ ನಂತರದ ಅನುವಾದವು ಈ ರೀತಿಯಾಗಿದೆ. "ನಾನೇ ಸೃಷ್ಟಿ ಮಾಡಿದ ಅವನನ್ನು ನನಗೆ ಬಿಟ್ಟು ಕೊಡಿ, ನಾನವನಿಗೆ ಬಹಳಷ್ಟು ಸಂಪತ್ತು ನೀಡಿದೆನು. ಯಾವುದಕ್ಕೂ ಅವನ ಜೊತೆಯಲ್ಲೇ ನಿಲ್ಲುವ ಮಕ್ಕಳನ್ನೂ ನೀಡಿದೆನು. ಅವನಿಗೆ ನಾಯಕತ್ವದ ಸ್ಥಾನವನ್ನೂ ನೀಡಿದೆನು. ಅವನು ಇನ್ನೂ ಬೇಕೆಂದು ಅತೀ ಆಸೆ ಪಡುತ್ತಿದ್ದಾನೆ, ಇಲ್ಲ ಖಂಡಿತ ನೀಡುವುದಿಲ್ಲ. ಅವನು ನಮ್ಮ ವಚನಗಳ ವಿರೋಧಿಯಾಗಿರುತ್ತಾನೆ. ಹತ್ತಿರದಲ್ಲೇ ಅವನಿಗೆ ನಾವು ಪಾಠ ಕಲಿಸಲಿದ್ದೇವೆ. ಅವನು ಕೆಲವೊಂದು ತಂತ್ರಗಳನ್ನು ರೂಪಿಸಿದ್ದನು, ಅದರೊಂದಿಗೆ ಅವನು ಸೃಷ್ಟಿಕರ್ತನ ಶಾಪವನ್ನು ಪಡೆದುಕೊಂಡನು. ಹಾಗಾಗಿ ಅವನು ಖಂಡಿತ ನಾಶ ಹೊಂದುವನು. ಅವನು ಏನೋ ಯೋಜನೆ ಹಾಕಿದ್ದನು.? ನಂತರ ಅವನು ಜನರನ್ನು ನೋಡಿ ಕೋಪದ ಮುಖದೊಂದಿಗೆ, ಹಿಂದೆ ಸರಿದು ಅಹಂಕಾರದಿಂದ ಇದು ವಾಮಾಚಾರವಲ್ಲದೆ ಇನ್ನೇನು ಇಲ್ಲ, ಇದು ಖಂಡಿತವಾಗಿಯೂ ಮನುಷ್ಯನ ವಾಕ್ಯಗಳೇ ಆಗಿದೆ ಎಂದು ಹೇಳಿದನು. ಬರಲಿ ಅವನು, ನಾನವನನ್ನು (ಸಖರ್) ನರಕಾಗ್ನಿಯಲ್ಲಿ ಹಾಕಿ ಬಿಡುವೆನು. ಸಖಾರ್ ನರಕಾಗ್ನಿಯ ಕುರಿತು ನಿಮಗೆ ತಿಳಿದಿದೆಯೇ.? ಅದು ಯಾವುದನ್ನು ಬಾಕಿ ಬಿಡುವುದೂ ಇಲ್ಲ, ಉಳಿಸುವುದೂ ಇಲ್ಲ. ಅದು ಚರ್ಮವನ್ನು ಸುಟ್ಟು ಕರಕಲು ಮಾಡುತ್ತದೆ...."

    ವಲೀದ್'ನ ಜೊತೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದ ಆತನ ಸಹಚರರಿಗೂ ಖುರ್'ಆನ್ ಉತ್ತರಿಸಿತು. ಅಲ್ ಹಿಜ್'ರ್ ಅಧ್ಯಾಯದ ತೊಂಬತ್ತೊಂದರ ನಂತರದ ಸೂಕ್ತದಲ್ಲಿ ಕಾಣಬಹುದು. "ನಿಮ್ಮ ಪ್ರಭುವಿನ ಮೇಲಾಣೆ, ಖುರ್'ನಿನ ಕುರಿತು ವಿಮರ್ಶೆ ಮಾಡಿದವರೆಲ್ಲರನ್ನೂ ಖಂಡಿತವಾಗಿಯೂ ನಾವು ವಿಚಾರಿಸಿಯೇ ತೀರುವೆವು" 
     ಖುರ್'ಆನಿನ ಸಂದರ್ಭಕ್ಕನುಗುಣವಾದ ಉತ್ತರವನ್ನು ಕಂಡು ಶತ್ರುಗಳು ದಿಗ್ಭ್ರಮೆಗೊಂಡರು. ಯಾತ್ರಿಕರಲ್ಲಿ ಹೇಳಿದ್ದ ಮಾತುಗಳೆಲ್ಲವೂ ಪ್ರವಾದಿಯವರ ﷺ ಕುರಿತು ಎಲ್ಲಾ ಕಡೆಗಳಲ್ಲೂ ತಿಳಿಯಲು ಸಹಾಯಕವಾಯಿತು. ಮಕ್ಕಾ ನಗರಕ್ಕೆ ಬರುತ್ತಿದ್ದ ಜನರಲ್ಲಿ ಖುರೈಷಿಗಳು ಹೇಳುತ್ತಿದ್ದ ಮಾತುಗಳು, ಪ್ರವಾದಿಯವರ ﷺ ಕುರಿತು ಕಲಿಯಲು ಕಾರಣವಾದವು. 
     ಏನೇ ಮಾಡಿದರೂ ಗೆಲ್ಲದೆ ಇದ್ದಾಗ, ಶತ್ರುಗಳು ಪುನಃ ಹಿಂಸೆ ಮಾಡಲು ತಯಾರಾದರು. ವಿಶೇಷವಾಗಿ ದುರ್ಬಲ ವಿಶ್ವಾಸಿಗಳ ಮೇಲೆ ಹಲ್ಲೆ ಮಾಡಲು ಆರಂಭಿಸಿದರು, ಅಬೂಜಹಲ್ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸ ತೊಡಗಿದನು. ಯಾರಾದರೂ ಗೌರವಾನ್ವಿತ ವ್ಯಕ್ತಿ ವಿಶ್ವಾಸಿಯಾದರೆ, ಅವರ ಮಾನ ಹರಾಜು ಮಾಡುತಿದ್ದರು. ವ್ಯಾಪರಿಯಾಗಿದ್ದಲ್ಲಿ ಅವರ ವ್ಯಾಪಾರವನ್ನು ಕೆಡಿಸುತ್ತಿದ್ದರು. ಅವರು ಬಡವನಾಗಿದ್ದರೆ ಅವರ ಮೇಲೆ ಹಲ್ಲೆ ನಡೆಸುತ್ತಿದ್ದರು. ಹೀಗೆ ಹಲವಾರು ದುಷ್'ಕೃತ್ಯವನ್ನು ಮಾಡತೊಡಗಿದರು. 

    ಪವಿತ್ರ ಹೃದಯದ, ಬಡವನಾದ ಸೇವಕನಾಗಿದ್ದರು ಬಿಲಾಲ್. ಅವರು ಇಸ್ಲಾಮ್ ಸ್ವೀಕರಿಸಿದರು. ಅದನ್ನು ತಿಳಿದ ಒಡೆಯನಾದ ಉಮಯತ್ತಿಗೆ ಅದು ಇಷ್ಟವಾಗಲಿಲ್ಲ. ಅವರು ಬಿಲಾಲನ್ನು ◌ؓ ಹಿಂತಿರುಗಿ ಬರಲು ಬಹಳಷ್ಟು ಹೇಳಿದರೂ ಬಿಲಾಲ್ ◌ؓ ಕೇಳದಿದ್ದಾಗ, ಬಿಲಾಲ್'ರ ◌ؓ ಮೇಲೆ ಹಲ್ಲೆ ಮಾಡಲು ಮುಂದಾದರು. ಬಿಲಾಲನ್ನು ◌ؓ ಕಟ್ಟಿಹಾಕಿ ಸುಡುವ ಮರಳಿನಲ್ಲಿ ಬೆನ್ನ ಮೇಲೆ ಮಲಗಿಸಿ, ಅವರ ಎದೆಯ ಮೇಲೆ ಬಹಳಷ್ಟು ಭಾರವಾದ ಕಲ್ಲನ್ನು ಇಟ್ಟು, ಚಾಟಿಯಿಂದ ಹೊಡೆಯತೊಡಗಿದರು. ಉಮಯತ್ತ್ ಕೋಪದಿಂದ ಕುದಿಯುತ್ತಾ, ಒಂದೋ ನಿನ್ನ ಮರಣ, ಇಲ್ಲದಿದ್ದರೆ ಮುಹಮ್ಮದ್'ರ ﷺ ದೇವನನ್ನು ವಿರೋಧಿಸಿ, ಲಾತ, ಉಝ್ಝವನ್ನು ದೇವರಾಗಿ ಅಂಗೀಕರಿಸಬೇಕು ಎಂದು ಹೇಳಿದರು. ಆದರೂ ಬಿಲಾಲ್ ಏನು ಮಾತಾಡಲಿಲ್ಲ. ಉಮಯತ್ತ್ ಪುನಃ ಹಾಗೆ ಹೇಳುತ್ತಲೇ ಇದ್ದಾಗ, ಬಿಲಾಲ್ ಅಹದ್, ಅಹದ್ ಅಥವಾ ಒಡೆಯನಾದ ಒಬ್ಬನು ನಾನು ಲಾತ, ಉಝ್ಝವನ್ನು ವಿರೋಧಿಸುತ್ತೇನೆ ಎಂದು ಹೇಳಿದರು. ಅದನ್ನು ಕೇಳಿದ ಉಮೈಯತ್ತಿಗೆ ಕೋಪವು ನೆತ್ತಿಗೇರಿತು, ಅವರು ಇನ್ನು ಕ್ರೂರವಾಗಿ ಹಿಂಸಿಸತೊಡಗಿದರು. ಆದರೂ ಬಿಲಾಲರ ಅಹದ್ ಎನ್ನುವ ಧ್ವನಿ ಕೇಳುತ್ತಲೇ ಇತ್ತು. 

    ಅಂರ್ ಬಿನ್ ಅಲ್ಆಸ್ವ್ ಈ ಘಟನೆಯನ್ನು ಉದ್ದೇಶಿಸಿ ಈ ರೀತಿ ವಿವರಿಸುತ್ತಾರೆ. ನಾನು ಮಕ್ಕಾದ ಮೂಲಕ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಬಿಲಾಲ್'ಗೆ ಥಳಿಸುವುದು ನನಗೆ ಕಾಣಲು ಸಾಧ್ಯವಾಯಿತು. ಅಹದ್, ಅಹದ್ ಎಂದು ಹೇಳಿದಾಗಂತೂ ಉಮೈಯ್ ಕ್ರೂರಿಯಾದನು. ಬಿಲಾಲ್'ರ ಶರೀರವು ಬಿಸಿ ಮರಳಿನಿಂದ ಸುಡುತಿತ್ತು, ಆಗಾಗ ತಮ್ಮ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು. ಪ್ರಜ್ಞೆ ಬಂದಾಗ ಪುನಃ ಅಹದ್, ಅಹದ್ ಎಂದು ಹೇಳುತ್ತಲೇ ಇದ್ದರು. 
     ಹಸಾನ್ ಬಿನ್ ಸಾಬಿತ್'ರವರು ಈ ಘಟನೆಯನ್ನು ಉದ್ದೇಶಿಸಿ ಈ ರೀತಿ ವಿವರಿಸುತ್ತಾರೆ. ನಾನು ಉಮ್ರ ಮಾಡಲು ಕಅಬಾಲಯದ ಹತ್ತಿರ ಹೋಗಿದ್ದೆ. ಆಗ ಅಲ್ಲಿ ಒಂದು ಹಗ್ಗದಿಂದ ಬಿಲಾಲನ್ನು ಕಟ್ಟಿ ಎಳೆಯಲಾಗುತ್ತಿತ್ತು. ಅವರು ಉಚ್ಛ ಸ್ವರದಲ್ಲಿ ಲಾತ, ಉಝ್ಝ, ಮನಾತ, ಹುಬುಲ್, ನಾಯಿಲ, ಬುವಾನ ಎನ್ನುವ ದೇವರನ್ನು ನಾನು ವಿರೋಧಿಸುತ್ತೇನೆ ಎಂದು ಹೇಳುತ್ತಿದ್ದರು. ತಕ್ಷಣವೇ ಉಮೈಯತ್ ಬಂದು ಸುಟ್ಟು ಉರಿಯುತ್ತಿರುವ ಮರಳಿನ ಮೇಲೆ ಬಿಲಾಲನ್ನು ಮಲಗಿಸಿ....
 
   (ಮುಂದುವರಿಯುವುದು...)


اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: