Abu Hisham Saquafi

Official Website Of Hafiz Ilyas Saquafi Padaladka

Tuesday, September 6, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -82 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
  
    ಅಮ್ಮಾರ್'ರವರು ◌ؓ ಬೇಸರದಿಂದ ಪ್ರವಾದಿಯವರ ﷺ ಬಳಿ ಬಂದರು. ಅಮ್ಮಾರ್'ನ ಕಣ್ಣೀರು ಒರೆಸಿ, ಸತ್ಯ ನಿಷೇಧಿಗಳು ನಿಮ್ಮನ್ನು ನೀರೊಳಗೆ ಮುಳುಗಿಸಿ ಏನೇನೋ ಹೇಳಲು ಒತ್ತಾಯಿಸಿದರು ಅಲ್ವಾ.? ಬೇಸರ ಮಾಡಬೇಡಿ ಎಂದು ಹೇಳುತ್ತಾ, ಪವಿತ್ರ ಕುರ್'ಆನಿನ ಅನ್ನಹ್'ಲ್ ಅಧ್ಯಾಯದ ನೂರಾ ಆರನೇ ಸೂಕ್ತವನ್ನು ಪಠಿಸಿದರು. "ವಿಶ್ವಾಸ ಗಟ್ಟಿಯಾದ ನಂತರ, ಸತ್ಯ ನಿಷೇಧದ ವಚನಗಳನ್ನು ಹೇಳಲು ಒತ್ತಾಯಿಸಿದರೆ, ಅವರು ತಪ್ಪಿತಸ್ಥರಲ್ಲ" ಎನ್ನುವ ಸೂಕ್ತವನ್ನು ಅಮ್ಮಾರ್ ◌ؓ ಕೇಳಿದಾಗ, ಅವರಿಗೆ ತುಸು ಸಮಾಧಾನ ಆಯಿತು. 
     ಕಳೆದುಹೋಗಿದ್ದ ಸಹೋದರನಾದ ಅಬ್ದುಲ್ಲಾಹ್'ರನ್ನು ಹುಡುಕಿಕೊಂಡು ಯಮನಿನಿಂದ ಮಕ್ಕಾ ನಗರಕ್ಕೆ ಬಂದ ವ್ಯಕ್ತಿಯಾಗಿದ್ದರು ಯಾಸಿರ್ ಬಿನ್ ಆಮಿರ್. ತನ್ನ ಜೊತೆಯಲ್ಲಿ ಬಂದಿದ್ದ ಇಬ್ಬರು ಸಹೋದರರಾದ ಮಾಲಿಕ್ ಹಾಗೂ ಹಾರಿಸ್ ಯಮನಿಗೆ ಹಿಂತಿರುಗಿ ಹೋದರು. ಯಾಸಿರ್ ಮಾತ್ರ ಮಕ್ಕದಲ್ಲೇ ಉಳಿದುಕೊಂಡರು. ಮಕ್ಕಾದಲ್ಲಿ ಯಾಸಿರ್'ಗೆ ಆಶ್ರಯ ನೀಡಿದ್ದ ಅಬೂಹುದೈಫ ಎನ್ನುವ ವ್ಯಕ್ತಿಯು ತನ್ನ ಜನಾಂಗದ ಒಬ್ಬಳು ಸೇವಕಿಯನ್ನು ಯಾಸಿರ್'ಗೆ ನೀಡಿದರು. ಆ ಸೇವಕಿಯಾಗಿದ್ದರು ಯಾಸಿರ್'ನ ಪತ್ನಿಯಾದ ಸುಮಯ್ಯಃ ಬಿಂತ್ ಖಯ್ಯಾತ್. ಅವರಿಬ್ಬರ ಮಗನಾಗಿದ್ದರು ಈ ಅಮ್ಮಾರ್ ◌ؓ.

    ಅಮ್ಮಾರ್ ◌ؓ ದಾರುಲ್ ಅರ್'ಖಮಿಗೆ ಹೋಗಿ ಕುರ್'ಆನ್ ಕೇಳಿ ಕಲಿತು, ಮನೆಗೆ ಬಂದು ತಾಯಿಯ ಜೊತೆಯಲ್ಲಿ ಹಂಚಿಕೊಂಡರು. ಕುರ್'ಆನ್ ಕೇಳಿದ  ತಕ್ಷಣವೇ ತಾಯಿಯ ಹೃದಯದಲ್ಲಿ ಸತ್ಯವಿಶ್ವಾಸದ ಬೆಳಕು ಹರಿಯಿತು. ಅವರು ಒಂದೊಂದೇ ಸೂಕ್ತವನ್ನೇ ಕೇಳುತ್ತಾ ಹೋದಂತೆ, ಅವರು ಅದಕ್ಕೆ ಆಕರ್ಷಿತರಾಗುತ್ತಾ ಹೋದರು. ಮನುಷ್ಯ ಕುಲವು ಒಂದು ಗಂಡು ಹಾಗೂ ಹೆಣ್ಣಿನಿಂದಾಗಿದೆ ಸೃಷ್ಟಿಸಲ್ಪಟ್ಟದ್ದು ಎಂಬ ಅರ್ಥವಿರುವ ಸೂಕ್ತವು ಅವರನ್ನು ಬಹಳಷ್ಟು ಆಕರ್ಷಿಸಿತು. ಪ್ರವಾದಿಯವರನ್ನು ﷺ ಕಾಣಬೇಕೆಂಬ ಆಸೆಯನ್ನು ಮಗನಿಗೆ ತಿಳಿಸಿದರು. ತಾಯಿಯ ಒತ್ತಾಯಕ್ಕೆ ಮಣಿದು, ತಾಯಿಯ ಜೊತೆಯಲ್ಲಿ ಎರಡು ದಿನದ ನಂತರ ದಾರುಲ್ ಅರ್'ಖಮಿಗೆ ಬಂದಾಗ, ಪ್ರವಾದಿಯವರು ﷺ ಅವರಿಬ್ಬರನ್ನೂ ಬಹಳ ಆದರದಿಂದ ಬರಮಾಡಿಕೊಂಡರು. ಪವಿತ್ರ ಕುರ್'ಆನಿನ ವಾಕ್ಯಗಳನ್ನು ಹೇಳಿ ಕೊಟ್ಟಾಗ, ಬಹಳ ಸಂತೋಷದಿಂದ ಸುಮಯ್ಯರು ಹೇಳತೊಡಗಿದರು. ಸುಮಯ್ಯರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ದಾರುಲ್ ಅರ್'ಖಮಿನಿಂದ ಹಿಂತಿರುಗಿ ಹೋಗಿ ತನ್ನ ಪತಿಗೂ ಕೂಡ ವಿಷಯ ತಿಳಿಸಿದಾಗ, ಅವರೂ ಕೂಡ ಇಸ್ಲಾಮ್ ಸ್ವೀಕರಿಸಿದರು. ಅದರೊಂದಿಗೆ ಇಸ್ಲಾಮ್ ಸ್ವೀಕರಿಸಿದ ಮೊದಲ ಹತ್ತರ ಸಾಲಿನಲ್ಲಿ ಯಾಸಿರ್ ಹಾಗೂ ಅವರ ಕುಟುಂಬ ಸೇರಿ ಕೊಂಡವು. 

    ಸುಮಾರು ಒಂದು ವರ್ಷದವರೆಗೆ ಅವರು ಇಸ್ಲಾಮನ್ನು ಗುಟ್ಟಾಗಿ ಇಟ್ಟಿದ್ದರು. ನಂತರ ಅದು ಎಲ್ಲರಿಗೂ ತಿಳಿಯಿತು. ಆದರೆ ಬನೂ ಮಖ್'ಸೂಮ್ ಜನಾಂಗಕ್ಕೆ ಮಾತ್ರ ಅದು ಇಷ್ಟವಾಗಲಿಲ್ಲ. ಅವರನ್ನು ಅದನ್ನು ಬಹಳಷ್ಟು ವಿರೋಧಿಸಿದರು, ಕೇಳದಿದ್ದಾಗ ಇಡೀ ಕುಟುಂಬಕ್ಕೆ ಚಿತ್ರಹಿಂಸೆ ನೀಡಿದರು. ಆದರೂ ಅವರು ತಮ್ಮ ವಿಶ್ವಾಸದಿಂದ ಹಿಂದೆ ಸರಿಯಲಿಲ್ಲ. 
     ಯಾಸಿರ್'ರವರ ಕುಟುಂಬದ ಒಬ್ಬೊಬ್ಬರ ಮೇಲೆ ಖುರೈಷಿಗಳು ಚಿತ್ರಹಿಂಸೆ ನೀಡಿದರು, ಸುಮಯ್ಯ ಬೀವಿಯಂತೂ ಬಹಳ ಧೈರ್ಯದಿಂದಾಗಿತ್ತು ಪರಿಸ್ಥಿತಿಯನ್ನು ಎದುರಿಸಿದ್ದು. ಈ ಕುಟುಂಬದ ಕುರಿತು ಪ್ರವಾದಿಯವರು ﷺ, "ಓ ಯಾಸಿರ್'ರವರೇ ನೀವು ಕ್ಷಮಿಸಿರಿ ನಿಮಗೆ ಸ್ವರ್ಗವಿದೆ" ಎಂದು ಹೇಳಿದ್ದರು. 

    ಹೆತ್ತ ಮಗನ ಮೇಲೆ ಬಿಸಿ ದಂಡನ್ನು ಇಟ್ಟು, ಮಗನು ಪ್ರಜ್ಞೆ ಕಳೆದುಕೊಂಡಾಗ, ಹೆತ್ತ ತಾಯಿಯ ಮನಸ್ಸು ಹೊಡೆದು ಹೋಯಿತು, ಬಹಳ ದುಃಖದಿಂದ ಕಣ್ಣೀರು ಸುರಿಸಿದರು. ಆದರೂ ತಮ್ಮ ವಿಶ್ವಾಸದಿಂದ ಹಿಂದೆ ಸರಿದಿರಲಿಲ್ಲ. ಖುರೈಷಿಗಳು ಅವರಿಗೆ ಇನ್ನಷ್ಟು ಚಿತ್ರಹಿಂಸೆ ನೀಡಿದರು. ಎಷ್ಟೇ ಚಿತ್ರಹಿಂಸೆ ನೀಡಿದರೂ ಯಾವುದೇ ಪ್ರಯೋಜನವಿಲ್ಲವೆಂದು ತಿಳಿದಾಗ, ಅಬೂಜಾಹಿಲಿನ ಕೋಪವು ನೆತ್ತಿಗೇರಿತು. ಅವನು ಕೋಪದಿಂದ ಒಂದು ಕಂಬವನ್ನು ತೆಗೆದು ಸುಮಯ್ಯ ಬಿವಿಯವರ ಹೊಟ್ಟೆಗೆ ಚುಚ್ಚಿದನು. ಅವರು ಸ್ವಲ್ಪವೂ ಕೂಡ ಹೆದರದೆ ಎಲ್ಲಾ ನೋವನ್ನೂ ಸಹಿಸಿಕೊಂಡು, ಇಸ್ಲಾಮಿನ ಮೊದಲ ಶಹೀದ್ (ರಕ್ತಸಾಕ್ಷಿ) ಆಗಿ, ಸ್ವರ್ಗಕ್ಕೆ ಹಾರಿ ಹೋದರು. ಬನೂ ಮಖ್'ಸೂಮ್ ಜನಾಂಗದ ಒಬ್ಬರು ಸೇವಕಿಯಾದ ಮಹಿಳೆ, ಅಂತ್ಯ ದಿನದವರೆಗೆ ಬರುವ ಎಲ್ಲಾ ವಿಶ್ವಾಸಿಗಳಿಗೆ ಮಾದರಿಯಾಗಿ ಬದಲಾದರು. ಇತಿಹಾಸದ ಪುಟಗಳಲ್ಲಿ ಧೀರವನಿತೆ ಎನ್ನುವ ಸ್ಥಾನವನ್ನು ಪಡೆದುಕೊಂಡರು. 

    ಸ್ವಲ್ಪ ಸಮಯದ ನಂತರ ಯಾಸಿರ್ ◌ؓ ಕೂಡ ಇಹಲೋಕ ತ್ಯಜಿಸಿದರು. ಯಾಸಿರ್'ನ ◌ؓ ಸಹೋದರ ಅಬ್ದುಲ್ಲಾಹ್ ಕೂಡ ಬಾಣ ತಾಗಿ ಮರಣ ಹೊಂದಿದರು. ಇದರೊಂದಿಗೆ ಅಮ್ಮಾರ್'ರವರು ◌ؓ ಒಬ್ಬಂಟಿಯಾದರು. ಅಬೂಜಹಲ್ ಬದ್'ರ್ ಯುದ್ಧದಲ್ಲಿ ಕೊಲ್ಲಲ್'ಪಟ್ಟಾಗ, ಪ್ರವಾದಿಯವರು ﷺ ಅಮ್ಮಾರನ್ನು ◌ؓ ಕರೆದು, "ನಿಮ್ಮ ತಾಯಿಯನ್ನು ಕೊಂದ ದುಷ್ಟನನ್ನು ಅಲ್ಲಾಹು ಕೊಂದು ಬಿಟ್ಟನು" ಎಂದು ಹೇಳಿದರು. 

    (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: