ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಉಮ್ಮುಸಲಮ ◌ؓ ಮಾತು ಮಾತು ಮುಂದುವರಿಸುತ್ತಾ, ನಾವು ಝುಬೈರಿಗಾಗಿ ◌ؓ ಒಂದು ದೋಣಿಯನ್ನು ನಿರ್ಮಿಸಿ, ಅವರನ್ನು ಅದರಲ್ಲಿ ಕಳುಹಿಸಿದೆವು. ಅವರು ಅದರಲ್ಲಿ ಹತ್ತಿ, ನೈಲ್ ನದಿಯಲ್ಲಿ ಸಂಚರಿಸಿ ಹೋದರು. ಅವರು ಅತ್ತ ರಣರಂಗದಲ್ಲಿ ನಡೆಯುವ ದೃಶ್ಯಗಳ ಗಮನವಿಟ್ಟು ನೋಡುತ್ತಿದ್ದರೆ, ಇತ್ತ ನಾವೆಲ್ಲರೂ ನಜ್ಜಾಶಿ ರಾಜನಿಗೆ ಬೇಕಾದ ಪ್ರಾರ್ಥನೆ ಮಾಡುತ್ತಿದ್ದೆವು. ಅಲ್ಲಿ ಏನು ನಡೆಯುತ್ತಿರಬಹುದು ಎಂದು ಬಹಳ ಚಿಂತೆಯಿಂದಲೇ ಕಾಯುತ್ತಿದ್ದೆವು, ಅಷ್ಟರಲ್ಲೇ ಝುಬೈರ್ ◌ؓ ಬಹಳ ಆವೇಶದಿಂದ ನೀವೆಲ್ಲರೂ ಸಂತೋಷ ಪಡಿರಿ, ನೇಗಿಸ್ ರಾಜ ಗೆದ್ದಿದ್ದಾರೆ ಎಂದು ಹೇಳುತ್ತಾ ಒಳಗೆ ಬಂದರು. ಅದನ್ನು ಕೇಳಿ ನಮಗೆ ಬಹಳಷ್ಟು ಸಂತೋಷವಾಗಿತ್ತು, ನಾವು ಅಷ್ಟೊಂದು ಸಂತೋಷ ಪಟ್ಟ ವಿಷಯ ಹಬ್'ಷದಲ್ಲಿ ಬೇರೆ ನಡೆದಿರಲಿಲ್ಲ.
ಬಹಳ ಕುತೂಹಲಕಾರಿಯಾದ, ಖುರೈಷಿ ಪ್ರತಿನಿಧಿಗಳಾಗಿ ಹಬ್'ಶ ನಗರಕ್ಕೆ ಬಂದಿದ್ದ ಅಂರ್ ಹಾಗೂ ಉಮಾರರ ಒಂದು ಕಥೆಯನ್ನು, ಇಲ್ಲಿ ಇಮಾಮ್ ತ್ವಬ್'ರಾನಿಯವರು ◌ؓ ವಿವರಿಸುತ್ತಾರೆ. ಅಂರ್ ಅಷ್ಟೊಂದು ಸೌಂದರ್ಯವಿರುವ ವ್ಯಕ್ತಿಯಾಗಿರಲಿಲ್ಲ, ಆದರೆ ಉಮಾರ ಬಹಳಷ್ಟು ಸುಂದರನಾದ ವ್ಯಕ್ತಿಯಾಗಿದ್ದರು, ಹಾಗಾಗಿ ಅಂರ್'ನ ಪತ್ನಿಯು ಉಮಾರನನ್ನು ಇಷ್ಟ ಪಟ್ಟರು. ದಾರಿ ಮಧ್ಯೆ ಅವರಿಬ್ಬರೂ ಸೇರಿ ಅಂರ್'ನನ್ನು ಸಮುದ್ರಕ್ಕೆ ದೂಡಿ ಹಾಕಿದರು. ಅಂರ್ ಈಜಿ ದಡ ಸೇರಲು ಬಹಳಷ್ಟು ಪ್ರಯತ್ನ ಪಟ್ಟರು. ಇದನ್ನು ನೋಡುತ್ತಿದ್ದ ಹಡಗಿನ ನಾವಿಕರು, ಅವರನ್ನು ರಕ್ಷಿಸಿ ಪುನಃ ಹಡಗಿಗೆ ಹತ್ತಿಸಿದರು. ಆದರೆ ಅಂರ್ ತನ್ನ ಪತ್ನಿಯ ವಿರುದ್ಧ ಯಾವುದೇ ವಿರೋಧ ವ್ಯಕ್ತಪಡಿಸದೆ, ಬದಲಾಗಿ ಉಮಾರ ಜೊತೆಯಲ್ಲಿ ಇರಲು ಅನುಮತಿ ಕೊಟ್ಟರು. ಹೀಗೆ ಯಾತ್ರೆ ಮುಂದುವರಿಯುತಿದ್ದವು.
ಅಂರ್ ಒಳಗೊಳಗೆ ಉಮಾರನ ವಿರುದ್ಧ, ಸೇಡಿಗಾಗಿ ಕಾಯುತ್ತಿದ್ದರು, ಹಬ್'ಷದಲ್ಲಿ ಅವರ ಯೋಜನೆಗಳೆಲ್ಲವೂ ಕೈ ಕೊಟ್ಟಾಗ, ಅಂರ್, ಉಮಾರನ ಬಳಿ ಬಂದು, ನೀನು ಬಹಳ ಸುಂದರನಾದ ವ್ಯಕ್ತಿ ಅಲ್ಲವೇ.? ನಿನ್ನ ಸೌಂದರ್ಯಕ್ಕೆ ಯಾರೂ ಬೇಕಾದರೂ ಬೀಳ್ತಾರೆ ಅಲ್ವಾ.? ನೀನು ರಾಜನ ಪತ್ನಿಯನ್ನು ಕೂಡ ನಿನ್ನ ಜಾಲದಲ್ಲಿ ಬೀಳಿಸು, ಇದರಿಂದ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಾಯವಾಗಬಹುದು ಎಂದು ಹೇಳಿದಾಗ, ಉಮಾರ ಅವರ ಕುತಂತ್ರಕ್ಕೆ ಬಲಿಯಾಗಿ ರಾಣಿಯನ್ನು ವಶೀಕರಿಸಲು, ಅವರಿಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಇತ್ತ ಅಂರ್ ರಾಜನ ಬಳಿ ಬಂದು, ಉಮಾರ ರಾಣಿಯನ್ನು ವಶೀಕರಿಸಲು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾನೆ, ಎಂದು ತಿಳಿಸಿದರು. ಅದನ್ನು ಕೇಳಿದ ತಕ್ಷಣ ರಾಜನ ಕೋಪವು ನೆತ್ತಿಗೇರಿತು. ರಾಜನು ಕೋಪದಿಂದ, ನನ್ನ ಊರಿಗೆ ಅತಿಥಿಯಾಗಿ ಬಂದು, ನನ್ನ ರಾಣಿಯ ಮೇಲೆಯೇ ಕಣ್ಣು ಹಾಕಿದ ಅಲ್ವಾ.? ನಾವು ಅತಿಥಿಗಳನ್ನು ಸಾಯಿಸುವುದಿಲ್ಲ, ಆದರೆ ಸಾಯಿಸುದಕ್ಕಿಂತ ಒಳ್ಳೆಯ ಶಿಕ್ಷೆಯನ್ನೇ ನಾವು ಅವನಿಗೆ ನೀಡುತ್ತೇವೆ ಎಂದು, ರಾಜರು ವಾಮಾಚಾರಿಯನ್ನು ಕರಿಸಿ, ಮೂತ್ರನಾಳದ ಮೇಲೆ ವಾಮಾಚಾರ ಮಾಡಿಯೇ ಬಿಟ್ಟರು. ಇದರಿಂದ ಉಮಾರ ಮನುಷ್ಯರನ್ನು ಕಂಡ ಕ್ಷಣವೇ, ಓಡಿ ಹೋಗಿ ಅಡಗಿಕೊಳ್ಳಲು ಆರಂಭಿಸಿದರು. ಹಾಗಾಗಿ ಅವರು ನೇರವಾಗಿ ಕಾಡಿಗೆ ಓಡಿ ಹೋಗಿ ಅಲ್ಲಿಯೇ ಉಳಿದುಕೊಂಡರು.
ಇದು ಹೀಗೆ ಉಮರ್'ರವರ ◌ؓ ಆಳ್ವಿಕೆಯ ವರೆಗೆ ಮುಂದುವರಿಯಿತು. ಒಂದು ದಿನ ಉಮಾರನ ಮಾವನ ಮಗನಾದ ಅಬ್ದುಲ್ಲಾಹ್ ಬಿನ್ ಅಬೀ ರಬೀಅ ಖಲೀಫರ ಅನುಮತಿಯಿಂದ ಹಬ್'ಷ ನಗರಕ್ಕೆ ಬಂದಿದ್ದರು. ದಾರಿ ಮಧ್ಯೆ ಅವರಿಗೆ ಅಲ್ಲಿ ಕಾಡು ಪ್ರಾಣಿಗಳ ಜೊತೆಯಲ್ಲಿದ್ದ ಉಮಾರನನ್ನು ಕಾಣಲು ಸಾಧ್ಯವಾಯಿತು. ಅವರ ದೇಹ ಸಂಪೂರ್ಣವಾಗಿ ಕೂದಲಿನಿಂದ ಮರೆಯಾಗಿತ್ತು, ಉದ್ದವಾದ ಉಗುರು, ಅಲ್ಲಲ್ಲಿ ಹರಿದಿರುವ ಬಟ್ಟೆ, ಒಟ್ಟಾರೆ ಹೇಳುವುದಾದರೆ ರಾಕ್ಷಸನ ಹಾಗೆ ಕಾಣುತ್ತಿದ್ದರು. ಕಾಡು ಪ್ರಾಣಿಗಳ ಜೊತೆಯಲ್ಲಿ ನೀರು ಕುಡಿಯಲು ಹೋಗುತ್ತಿದ್ದ ಸಂದರ್ಭದಲ್ಲಿ, ಅಬ್ದುಲ್ಲಾಹ್, ಅವರನ್ನು ಹೋಗಿ ಹಿಡಿದು, ಅವರ ಹೆಸರು, ಊರು ಎಲ್ಲವನ್ನೂ ತಿಳಿಸಿದರು. ಆದರೆ ಉಮಾರ ಅವರಿಂದ ತಪ್ಪಿಸಿ ಓಡಿ ಹೋದರು. ಮತ್ತೊಮ್ಮೆ ಹೋಗಿ ಹಿಡಿದುಕೊಂಡಾಗ, ಉಮಾರ ಜೋರಾಗಿ, ನನ್ನನ್ನು ಬಿಟ್ಟು ಬಿಡಿ ಬುಜೈರ್, ನನ್ನನ್ನು ಬಿಟ್ಟು ಬಿಡಿ ಬುಜೈರ್ ಎಂದು ಬೊಬ್ಬೆ ಹಾಕಲು ಆರಂಭಿಸಿದರು. ಅದನ್ನು ಕಂಡು ಅಬ್ದುಲ್ಲಾಹ್ ತನ್ನ ಹಿಡಿತವನ್ನು ಸ್ವಲ್ಪ ಬಿಗಿಗೊಳಿಸಿದರು. ಆದರೆ ಅಷ್ಟೊತ್ತಿಗಾಗಲೇ ಉಮಾರನ ಪ್ರಾಣ ಪಕ್ಷಿಯು ಹಾರಿ ಹೋಗಿತ್ತು.
ಯುದ್ಧದ ನಂತರ, ಸತ್ಯ ವಿಶ್ವಾಸಿಗಳು ಹಬ್'ಷ ನಗರದಲ್ಲಿ ಕ್ಷೇಮವಾಗಿ ಕಾಲ ಕಳೆಯುತಿದ್ದರು. ಅಲ್ಲಿನ ರಾಜ ಅವರಿಗೆ ಒಳ್ಳೆಯ ರೀತಿಯಲ್ಲಿ ಅತಿಥಿ ಸತ್ಕಾರ ನೀಡುತ್ತಿದ್ದರು. ಪ್ರವಾದಿಯವರು ﷺ, ನಗೀಸ್ ರಾಜನಿಗೆ ಬರೆದ ಪತ್ರದ ಕುರಿತು, ಇತಿಹಾಸದಲ್ಲಿ ಬಹಳಷ್ಟು ಚರ್ಚೆಗಳು ನಡೆದಿದೆ. ಅದರ ಕುರಿತು ಇಮಾಮ್ ಬೈಹಕಿಯವರು ◌ؓ ಈ ರೀತಿ ವಿವರಿಸುತ್ತಾರೆ.
"ಬಿಸ್ಮಿಲ್ಲಾಹ್.., ಅಲ್ಲಾಹನ ಸಂದೇಶ ವಾಹಕರಾದ ಮುಹಮ್ಮದ್ ﷺ ಬಿನ್ ಅಬ್'ದಿಲ್ಲಾಹ್ ಅವರಿಂದ, ನಜ್ಜಾಶಿಯಾದ ಅಲ್ ಅಸ್'ಹಂ ಅವರಿಗೆ, ನಿಮಗೆ ಸಂತೋಷ ಉಂಟಾಗಲಿ, ಅಲ್ಲಾಹನನ್ನು ಸ್ತುತಿಸುತ್ತಿದ್ದೇನೆ. ಈಸ (ಅ) ಪ್ರವಾದಿಯವರು ಅಲ್ಲಾಹುವಿನ ದೂತರೂ, ಸೇವಕರು, ಪವಿತ್ರ ಆತ್ಮವೂ ಕೂಡ ಆಗಿರುವರು ಎಂದು ನಾನು ಸಾಕ್ಷಿ ವಹಿಸುತ್ತೇನೆ. ಆ ಪವಿತ್ರ ಆತ್ಮಕ್ಕೆ, ಪವಿತ್ರಳಾದ ಮರ್'ಯಮಿನ ಮೂಲಕ ಜನ್ಮ ನೀಡಿದನು. ಪ್ರವಾದಿ ಆದಮರನ್ನು (ಅ), ನೇರವಾಗಿ ಅಲ್ಲಾಹನು ಸೃಷ್ಟಿಸಿದ ಹಾಗೆ , ಮರ್'ಯಮಿನ ಗರ್ಭಕ್ಕೆ ಆ ಪವಿತ್ರ ಆತ್ಮವನ್ನು ಹಾಕಿ, ಈಸ ಪ್ರವಾದಿಯವರಿಗೆ (ಅ) ಜನ್ಮ ನೀಡಿದನು. ಏಕನಾದ ಅಲ್ಲಾಹನನ್ನು ಆರಾಧಿಸಲು, ಅವನ್ನು ಅನುಸರಿಸಲು, ನಿಮಗೆ ನಾನು ಆಹ್ವಾನ ನೀಡುತ್ತಿದ್ದೇನೆ. ಅವನಿಗೆ ಯಾವುದೇ ಜೊತೆಗಾರರಿಲ್ಲ, ನಾನು ಅಲ್ಲಾಹನ ಸಂದೇಶ ವಾಹಕನಾಗಿರುವೆನು. ನನ್ನನ್ನು ಹಿಂಬಾಲಿಸಿ, ವಿಶ್ವಾಸವಿರಿಸಿ, ನಾನು ಹೇಳುವ ವಿಷಯಗಳನ್ನು ಸ್ವೀಕರಿಸಬೇಕಾಗಿ ವಿನಂತಿಸುತ್ತಿದ್ದೇನೆ. ನನ್ನ ದೊಡ್ಡಪ್ಪನ ಮಗನಾದ ಜಅಫರ್'ರವರ ◌ؓ ಜೊತೆಯಲ್ಲಿ ಒಂದು ಗುಂಪನ್ನು, ನಿಮ್ಮ ಬಳಿ ಕಳುಹಿಸಿದ್ದೇನೆ. ಅವರ ಮೇಲೆ ಕೋಪಿಸಿಕೊಳ್ಳದೆ, ಅವರಿಗೆ ಆಶ್ರಯ ನೀಡಿರಿ. ನಾನು ನಿಮ್ಮನ್ನು ಅಲ್ಲಾಹನ ದಾರಿಗೆ ಆಹ್ವಾನಿಸಿ, ನನಗೆ ಲಭಿಸಿದ ಒಳಿತುಗಳನ್ನು ನಿಮಗೆ ಉಪದೇಶ ಮಾಡುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿರಿ. ಸನ್ಮಾನ ಸ್ವೀಕರಿಸಿದವರಿಗೆ ಸಂತೋಷ ಉಂಟಾಗಲಿ." ಎಂದಾಗಿತ್ತು ಆ ಪತ್ರದಲ್ಲಿ ಇದ್ದದ್ದು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment