Abu Hisham Saquafi

Official Website Of Hafiz Ilyas Saquafi Padaladka

Saturday, September 17, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -94 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಅಧಿಕಾರ ತಿರುಗಿ ನೀಡಿದಕ್ಕೆ ನಾನು ಅಲ್ಲಾಹನಿಗೆ ಲಂಚ ನೀಡಲಿಲ್ಲ, ಎಂಬ ಮಾತಿನ ಹಿಂದೆ ಒಂದು ನಿಗೂಢವಾದ ರಹಸ್ಯವಿತ್ತು. ನಜ್ಜಾಶಿ (ನೇಗಿಸ್) ಎನ್ನುವುದು ಹಬ್'ಷವನ್ನು ಆಳುತ್ತಿದ್ದ ರಾಜರನ್ನು ಕರೆಯುವ ಹೆಸರಾಗಿತ್ತು. ಪ್ರವಾದಿಯವರ ﷺ ಕಾಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ನಜ್ಜಾಶಿಯ ಹೆಸರು, ಅಸ್'ಹಮತ್ ಬಿನ್ ಅಬ್'ಜರ್ ಎಂಬುದಾಗಿತ್ತು. ಅವರ ಮುಂಚೆ ರಾಜನಾಗಬೇಕಾದದ್ದು ಅಸ್'ಹಮತಿನ ತಂದೆ ಅಬ್'ಜರ್ ಆಗಬೇಕಿತ್ತು. ಆದರೆ ಅಬ್'ಜರನ್ನು ಕೊಂದು ಅವರ ಸಹೋದರ ರಾಜನಾದರು. ಆದರೂ ಅವರಿಗೆ, ಅಸ್'ಹಮತಿನ ಮೇಲೆ ಬಹಳಷ್ಟು ಪ್ರೀತಿ ಇತ್ತು. ಆದರೆ ಅವರ ಹನ್ನೆರಡು ಮಕ್ಕಳಿಗೆ ಅದು ಇಷ್ಟವಿರಲಿಲ್ಲ, ಅವರು ಅಸ್'ಹಮ್'ನನ್ನು ಕೂಡ ಕೊಳ್ಳಬೇಕೆಂದು ಒತ್ತಾಯಿಸಿದರು. ಅಸ್'ಹಮ್ ಬೆಳೆದು ದೊಡ್ಡವನಾದರೆ ಖಂಡಿತ, ತನ್ನ ತಂದೆಯ ಕೊಲೆಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂದು, ಅವರು ತಂದೆಯಲ್ಲಿ ಹೇಳ ತೊಡಗಿದರು. ಈಗಷ್ಟೇ ತನ್ನ ಸಹೋದರನನ್ನು ಕೊಲೆ ಮಾಡಿದ ಕಾರಣ, ಮುದ್ದಾದ ಆ ಸಣ್ಣ ಮನಗನ್ನು ಕೊಲ್ಲಲು ಮನಸ್ಸು ಬರಲಿಲ್ಲ. ಆದರೆ ತನ್ನ ಮಕ್ಕಳ ಒತ್ತಾಯಕ್ಕೆ ಮಣಿದು ಆರ್ನೂರು ದಿರ್'ಹಂಗೆ ಆ ಮಗನನ್ನು ಮಾರಾಟ ಮಾಡಿ, ಬೇರೆ ಊರಿಗೆ ಕಳುಹಿಸಿ ಕೊಟ್ಟರು. 

    ಕೆಲವು ವರ್ಷಗಳ ಕಳೆದ ನಂತರ, ಅಲ್ಲಿನ ರಾಜ ಅಕಾಲಿಕ ಮರಣಕ್ಕೆ ತುತ್ತಾದರು. ಆದರೆ ಆತನ ಮಕ್ಕಳಿಗೆ, ಅಧಿಕಾರ ನೀಡಲು ಅಲ್ಲಿನ ಪ್ರಜೆಗಳಿಗೆ ಇಷ್ಟವಿರಲಿಲ್ಲ. ಹಾಗಾಗಿ ಅವರು ಅಸ್'ಹಮನ್ನು ಹುಡುಕಿ ತಂದು, ಅವರಿಗೆ ಪಟ್ಟಾಭಿಷೇಕ ಮಾಡಿ, ಹಬ್'ಶದ ಸಿಂಹಾಸನದಲ್ಲಿ ಕುಳ್ಳಿರಿಸಿದರು. ಅಸ್'ಹಮನ್ನು ಖರೀದಿಸಿದ ವ್ಯಕ್ತಿಯೂ ಹಬ್'ಶಕ್ಕೆ ಬಂದು, ಒಂದೋ ನಾನು ಕೊಟ್ಟ ಹಣ ವಾಪಸ್ಸು ಕೊಡಬೇಕು, ಇಲ್ಲದಿದ್ದರೆ ಅಸ್'ಹಮನ್ನು ವಾಪಸ್ಸು ಕಳುಹಿಸಿಬೇಕು ಎಂದು ಹಠ ಹಿಡಿದರು. ತಕ್ಷಣವೇ ಅಲ್ಲಿನ ಪ್ರಜೆಗಳು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ, ಅವರಿಗೆ ಆಗಬೇಕಿದ್ದ ಹಣವನ್ನು ಕೊಟ್ಟು ಅಲ್ಲಿಂದ ಕಳುಹಿಸಿದರು. 
     ಕುತೂಹಲಕಾರಿಯಾದ ಈ ಘಟನೆಯನ್ನು ನೆನೆಪಿಸಿ ಆಗಿತ್ತು, ಯಾವುದೇ ಲಂಚ ನೀಡದೆ ಅಲ್ಲಾಹನು ನನಗೆ ಅಧಿಕಾರ ತಿರುಗಿ ನೀಡಿದನು ಎಂದು ನಜ್ಜಾಶಿ ಚಕ್ರವರ್ತಿಯು ಹೇಳಿದ್ದು. 

    ಮುಸ್ಲಿಮರಿಗೆ ಬೆಂಬಲ ನೀಡಿದ ಕಾರಣಕ್ಕೆ ಹಬ್'ಷ ನಗರದ ಕ್ರೈಸ್ತರಾದ ಒಂದು ಗುಂಪಿಗೆ ರಾಜರ ಮೇಲೆ ಅಸಮಾಧಾನ ಉಂಟಾಯಿತು. ಇದನ್ನು ತಿಳಿದ ನಗೀಸ್ ಚಕ್ರವರ್ತಿಯು, ಬಹುಶಃ ಅವರನ್ನು ಸೋಲಿಸಿದರೂ, ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಮಾತ್ರ ಅನ್ಯಾಯ ಆಗಬಾರದು ಎಂದು ಅಂದುಕೊಂಡು, ಅವರು ಜಅಫರನ್ನು ◌ؓ ಕರೆದರು, ನಾನು ಇಲ್ಲೊಂದು ಹಡಗು ತಯಾರಿಸಿ ಇಟ್ಟಿದ್ದೇನೆ, ಒಂದು ವೇಳೆ ನಾನು ಸೋತರೆ ನೀವು ಈ ಹಡಗಿನ ಮೂಲಕ ಎಲ್ಲಿಯಾದರೂ ಸುರಕ್ಷಿತ ಸ್ಥಳಕ್ಕೆ ಹೋಗಬೇಕು, ನಾನು ಗೆದ್ದ ನಂತರವೇ ಇಲ್ಲಿಗೆ ಬಂದರೆ ಸಾಕು ಎಂದು ಹೇಳಿ, "ಅಲ್ಲಾಹು ಅಲ್ಲದೆ ಬೇರೆ ಆರಾಧ್ಯನಿಲ್ಲ ಎಂದು ಸಾಕ್ಷಿ ವಹಿಸುತ್ತೇನೆ, ಮುಹಮ್ಮದ್'ರು ﷺ ಅವನ ಸೇವಕರೂ, ದೂತರೂ ಆಗಿರುವರು. ಮರ್'ಯಮಿನ ◌ؓ ಮಗನಾದ ಈಸ ಪ್ರವಾದಿಯವರು (ಅ), ಕೂಡ ಅಲ್ಲಾಹನ ಸೇವಕರೂ, ದೂತರೂ ಆಗಿರುವರು." ಎನ್ನುವ ವಚನವನ್ನು ಬರೆದು, ಒಂದು ಕವಚದ ಒಳಗೆ ಹಾಕಿ ಬಲಬಾಗದ ಭುಜದ ಮೇಲೆ ಇಟ್ಟರು. ಆಮೇಲೆ ಅವರು ಜನರ ಬಳಿ ಬಂದು, ಓ ಹಬ್'ಶ ವಾಸಿಗಳೇ.! ನಾನು ನಿಮಗೆ ಯೋಗ್ಯನಾದ ರಾಜನಲ್ಲವೇ.? ಎಂದು ಕೇಳಿದರು. ಅದಕ್ಕೆ ಅವರೆಲ್ಲರೂ, ಹೌದು ನೀವು ಒಳ್ಳೆಯ ರಾಜರೇ ಆಗಿರುವಿರಿ ಎಂದು ಹೇಳಿದರು. ಹಾಗಾದರೆ ನಾನು ತೆಗೆದುಕೊಂಡ ತೀರ್ಮಾನಗಳಲ್ಲಿ ಏನಾದರೂ ಅಸಮಾಧಾನವಿದೆಯೆ.? ಎಂದು ಪುನಃ ರಾಜ ಕೇಳಿದರು. ಅದಕ್ಕೂ ಇಲ್ಲ ಎಲ್ಲವೂ ಒಳ್ಳೆಯ ತೀರ್ಮಾನಗಲೇ ಎಂದು ಉತ್ತರಿಸಿದರು. ಹಾಗಿದ್ದರೆ ನಿಮ್ಮ ಸಮಸ್ಯೆ ಏನೆಂದು.? ಹೇಳುವಿರ, ಎಂದು ರಾಜ ಕೇಳಿದಾಗ, ಮಹಾರಾಜ, ನೀವು ಧರ್ಮವನ್ನು ಬಿಟ್ಟು ಬಿಟ್ಟಿದೀರ, ನೀವು ಈಸ ಅಲ್ಲಾಹುವಿನ ಪ್ರವಾದಿ ಎಂದು ಹೇಳುತ್ತಿದ್ದೀರ, ಆದರೆ ಅವರು ಅಲ್ಲಾಹನ ಮಗನಾಗಿದ್ದಾರೆ, ಎಂದು ಅಲ್ಲಿದ್ದ ಜನರು ಹೇಳಿದಾಗ, ರಾಜರು ತಾನು ಬರೆದಿದ್ದ ಆ ವಚನದ ಮೇಲೆ ಕೈ ಇಟ್ಟು, ಇದರ ಮೇಲೆ ಇನ್ನೇನು ಇಲ್ಲ ಎಂದು ಹೇಳಿದರು. ಆದರೆ ಜನರು ಅಂದುಕೊಂಡದ್ದು, ಅವರು ಹೇಳಿದ ಹಾಗೆ ದೇವರ ಮಗ ಎಂಬುದರ ಮೇಲೆ ಇನ್ನೇನು ಇಲ್ಲ ಎಂದು. ಹಾಗಾಗಿ ಅವರು ಅಲ್ಲಿಂದ ಹಿಂತಿರುಗಿ ಹೋದರು.  ಆದರೆ ರಾಜರ ಉದ್ದೇಶ, ತಾನು ಬರೆದಿದ್ದ ವಚನದ ಕುರಿತಾಗಿತ್ತು.

    ಉಮ್ಮು ಸಲಮ ಬೀವಿಯವರು ◌ؓ ವಿವರಿಸುವುದು ಕಾಣಬಹುದು. ನಾವು ಹಬ್'ಶ ನಗರದಲ್ಲಿ, ನಗೀಸ್ ರಾಜರ ಆಶ್ರಯದಲ್ಲಿ ಜೀವಿಸುತ್ತಿದ್ದ ಸಂದರ್ಭದಲ್ಲಿ, ಹಬ್'ಷದ ಮತ್ತೊಂದು ವ್ಯಕ್ತಿಯೂ, ರಾಜಧಿಕಾರಕ್ಕಾಗಿ ದಂಗೆ ಎಬ್ಬಿಸಿ ಮುಂದೆ ಬಂದಿದ್ದನು. ಅದನ್ನು ಕಂಡು ನಮಗೆ ತುಂಬಾ ಬೇಸರವಾಗಿತ್ತು, ನೈಲ್ ನದಿಯ ದಡದಲ್ಲಿ ನಡೆಯುವ ಈ ಯುದ್ಧದಲ್ಲಿ, ಎಲ್ಲಿ ಆ ವ್ಯಕ್ತಿ ಗೆಲ್ಲುವರೋ ಎಂಬ ಭಯ ನಮ್ಮನ್ನು ಕಾಡುತ್ತಿತ್ತು. ಸ್ವಾಹಾಬಿಗಳೆಲ್ಲರೂ ಜೊತೆಗೂಡಿ ಆಲೋಚಿಸುತ್ತಿದ್ದೆವು, ನಮ್ಮಲ್ಲಿ ಯಾರು ಹೋಗಿ ಅಲ್ಲಿ ನಡೆಯುವ ದೃಶ್ಯವನ್ನು ನೇರವಾಗಿ ನೋಡುವ ಸಾಹಸ ಮಾಡುತ್ತಾರೆ.? ಎಂದು. ತಕ್ಷಣವೇ ನಮ್ಮ ಜೊತೆಯಲ್ಲಿದ್ದ, ಹದಿಹರೆಯದ ಯುವಕ ಝುಬೈರ್ ಬಿನ್ ಅಲ್ ಅವ್ವಾಮ್ ◌ؓ ಮುಂದೆ ಬಂದು, ನಾನು ಹೋಗುತ್ತೇನೆ ಎಂದು ಹೇಳಿದರು. 

     (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: