ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ತುಫೈಲ್ ◌ؓ ತಂದೆಯಲ್ಲಿ ನಾನು ಸತ್ಯ ವಿಶ್ವಾಸವನ್ನು ಸ್ವೀಕರಿಸಿ, ಮುಹಮ್ಮದ್ ﷺ ಪ್ರವಾದಿಯವರ ಧರ್ಮವನ್ನು ಹಿಂಬಾಲಿಸುತಿದ್ದೇನೆ ಎಂದು ಹೇಳಿದರು. ಅದಕ್ಕೆ ಅವರ ತಂದೆ, ನಾನೂ ಕೂಡ ಮಗನ ಧರ್ಮವನ್ನೇ ಸ್ವೀಕರಿಸುತ್ತೇನೆ ಎಂದು ಹೇಳಿದಾಗ ತುಫೈಲ್, ಹಾಗಿದ್ದರೆ ನೀವು ಅಂಗಸ್ನಾನ ಮಾಡಿ ಬನ್ನಿ ಎಂದು ಹೇಳಿದರು. ತುಫೈಲ್'ರ ತಂದೆ ತಕ್ಷಣವೇ ಅಂಗಸ್ನಾನ ಮಾಡಿ ಬಂದಾಗ, ತಂದೆಗೆ ಇಸ್ಲಾಮಿನ ಕುರಿತು ವಿವರಿಸಿಕೊಟ್ಟರು. ಅದನ್ನು ಕೇಳಿದ ನಂತರ ಅವರ ತಂದೆ ಇಸ್ಲಾಮ್ ಸ್ವೀಕರಿಸಿದರು. ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ತುಫೈಲ್'ರ್ ಪತ್ನಿ ಬಂದಾಗ, ನನ್ನಿಂದ ಸ್ವಲ್ಪ ಸರಿದು ನಿಲ್ಲು ಎಂದು ಹೇಳಿದರು. ಅದನ್ನು ಕೇಳಿದ ಪತ್ನಿ, ನನ್ನ ತಂದೆ, ತಾಯಿ ಸರ್ವಸ್ವ ಎಲ್ಲವೂ ಆದ ನೀವು ಹೀಗೇಕೆ ಹೇಳುತ್ತಿದ್ದೀರಿ.? ಎಂದು ಕೇಳಿದಾಗ, ತುಫೈಲ್ ನಾನು ಪ್ರವಾದಿ ಮುಹಮ್ಮದ್'ರ ﷺ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದೇನೆ. ಹಾಗಾಗಿ ಈಗ ನಮಗೆ ಜೊತೆ ಸೇರಲು ಸಾಧ್ಯವಿಲ್ಲ ಅಂದರು. ಅದಕ್ಕೆ ಅವರ ಪತ್ನಿ, ನೀವು ಯಾವ ಧರ್ಮವನ್ನು ಅಂಗೀಕರಿಸಿದ್ದೀರೋ.? ನಾನು ಕೂಡ ಅದೇ ಧರ್ಮವನ್ನು ಅಂಗೀಕರಿಸಿತ್ತೇನೆ ಎಂದು ಹೇಳಿದಾಗ, ತುಫೈಲ್ ಹಾಗಿದ್ದರೆ, ಕೂಡಲೇ ಅಂಗಸ್ನಾನ ಮಾಡಿ ಬಾ ಎಂದು ಹೇಳಿದರು. ಅವರು ಅದೇ ರೀತಿ ತಕ್ಷಣವೇ ಅಂಗಸ್ನಾನ ಮಾಡಿ ಬಂದಾಗ, ತುಫೈಲ್ ಇಸ್ಲಾಮಿನ ಬಗ್ಗೆ ಎಲ್ಲವನ್ನೂ ವಿವರಿಸಿದರು. ಅವರ ಪತ್ನಿ ಅದಕ್ಕೆ ಆಕರ್ಷಿತರಾಗಿ ಇಸ್ಲಾಮ್ ಸ್ವೀಕರಿಸಿದರು.
ಆದರೆ ತುಫೈಲ್'ರ ತಾಯಿ ಅದಕ್ಕೆ ಗಮನ ಕೊಡಲಿಲ್ಲ. ನಂತರ ಅವರು ದೌಸ್ ಜನಾಂಗದ ಜನರನ್ನು ಕೂಡ ಇಸ್ಲಾಮಿಗೆ ಆಹ್ವಾನಿಸಿದರು. ಆದರೆ ಅವರೆಲ್ಲರೂ ಉದಾಸೀನತೆ ತೋರಿಸಿದರು. ತುಫೈಲ್ ಅಲ್ಲಿಂದ ನೇರವಾಗಿ ಪ್ರವಾದಿಯವರ ﷺ ಬಳಿ ತೆರಳಿ, ದೌಸ್ ಜನಾಂಗದ ಜನರಲ್ಲಿ ವ್ಯಭಿಚಾರವು ಅಧಿಕವಾಗಿದೆ ಹಾಗಾಗಿ ನೀವು ಅವರ ವಿರುದ್ಧವಾಗಿ ಪ್ರಾರ್ಥನೆ ಮಾಡಬೇಕು ಎಂದು ಕೇಳಿಕೊಂಡರು, ಅದಕ್ಕೆ ಪ್ರವಾದಿಯವರು ﷺ ತುಫೈಲ್'ರನ್ನು ಸಮಾಧಾನ ಪಡಿಸಿ, ನೀವು ಊರಿಗೆ ಮರಳಿರಿ, ಹಾಗೂ ಅವರಲ್ಲಿಯೂ ಬಹಳ ಸೌಮ್ಯ ಸ್ವಭಾವದಿಂದಲೇ ವರ್ತಿಸಿರಿ ಎಂದು ಹೇಳಿ ಕಳುಹಿಸಿದರು.
ಪ್ರವಾದಿಯವರು ﷺ ಮದೀನಕ್ಕೆ ಪಲಾಯನ ಆಗುವ ವರೆಗೂ ತುಫೈಲ್ ಊರಲ್ಲೇ ನಿಂತರು. ನಂತರ ದೌಸ್ ಜನಾಂಗದಿಂದ ಇಸ್ಲಾಮ್ ಸ್ವೀಕರಿಸಿದ ಜನರ ಜೊತೆಯಲ್ಲಿ ಖೈಬರ್'ಗೆ ತೆರಳಿ ಪ್ರವಾದಿಯವರನ್ನು ﷺ ಸೇರಿಕೊಂಡರು.
ಪ್ರವಾದಿಯವರು ﷺ ಮಕ್ಕಾದಲ್ಲಿ ತಮ್ಮ ಪ್ರಭೋಧನೆಯಲ್ಲಿ ನಿರತರಾದರು. ಶತ್ರುಗಳು ಬಹಳಷ್ಟು ಸಂಚುಗಳನ್ನು, ವಿವಿಧ ಶೈಲಿಯಲ್ಲಿ ರೂಪಿಸಿದ್ದರು. ಆದರೆ ಯಾವುದು ಕೂಡ ಸಫಲವಾಗಲಿಲ್ಲ. ಅಷ್ಟೇ ಅಲ್ಲದೆ, ದಿನದಿಂದ ದಿನಕ್ಕೆ ಇಸ್ಲಾಂ ಸ್ವೀಕರಿಸುವವರ ಸಂಖ್ಯೆಯೂ ಕೂಡ ಅಧಿಕವಾಗುತ್ತಲೇ ಇತ್ತು. ಅದರ ನಡುವೆ ಖುರೈಷಿ ನಾಯಕರಿಗೆ ಪ್ರವಾದಿಯವರ ﷺ ಮಹತ್ವವನ್ನು ಅಂಗೀಕರಿಸಬೇಕಾಗಿ ಬಂತು. ಆ ಘಟನೆಯು ಈ ರೀತಿಯಾಗಿದೆ.
ಇರಾಷಿನಿಂದ ಒಬ್ಬ ವ್ಯಕ್ತಿಯು ಮಕ್ಕಾ ನಗರಕ್ಕೆ ಬಂದಿದ್ದರು. ಅವರಿಂದ ಅಬೂಜಹಲ್ (ಅಬುಲ್ ಹಕಮ್) ಒಂಟೆಗಳಿಗೆ ಬೆಲೆ ನಿಶ್ಚಯಿಸಿ ಖರೀದಿಸಿದರು. ಆದರೆ ಅದು ಅವರಿಗೆ ಅದರ ಬೆಲೆಯನ್ನು ನೀಡದೆ ಸತಾಯಿಸಿದರು. ಆ ವ್ಯಕ್ತಿ ತನ್ನ ಹಣ ಸಿಗದೆ, ತನ್ನ ಒಂಟೆಗಳನ್ನು ವಾಪಸು ಪಡೆಯಲು ಬಹಳಷ್ಟು ಜನರ ಮೊರೆ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಕಅಬಾಲಯದ ಬಳಿ ಬಂದ ಆ ವ್ಯಕ್ತಿಯು, ಒಂದು ಭಾಗದಲ್ಲಿ ಖುರೈಷಿಗಳ ಸಭೆ ಹಾಗೂ ಮಸ್ಜಿದ್'ನ ಮತ್ತೊಂದು ಭಾಗದಲ್ಲಿ ಪ್ರವಾದಿಯವರು ﷺ ಇರುವುದನ್ನು ನೋಡಿ, ಓ ಖುರೈಷಿಗಳೇ, ನನ್ನಿಂದ ಕಿತ್ತುಕೊಂಡ ಒಂಟೆಗಳನ್ನು ಅಬುಲ್ ಹಕಮ್'ನಿಂದ ವಾಪಸ್ಸು ಕೊಡಿಸಿರಿ ಎಂದು ಕೇಳಿದಾಗ, ಅಲ್ಲೇ ನೆರೆದಿದ್ದ ಕೆಲವರು ತಮಾಷೆ ಮಾಡುವ ರೀತಿಯಲ್ಲಿ, ಅದೋ ಅಲ್ಲಿ ಕುಳಿತಿರುವ ವ್ಯಕ್ತಿಯ ಬಳಿ ಹೋಗಿ ಹೇಳಿರಿ ಎಂದು ಪ್ರವಾದಿಯವರನ್ನು ﷺ ತೋರಿಸಿ ಹೇಳಿದರು. ಅಬೂಜಹಲ್'ಗೆ ಪ್ರವಾದಿಯವರ ﷺ ಮೇಲಿದ್ದ ದ್ವೇಷವನ್ನು ನೆನೆದು ತಮಾಷೆ ಮಾಡುವ ರೀತಿಯಲ್ಲಾಗಿತ್ತು ಅವರು ಹೇಳಿದ್ದು, ಆದರೆ ಅಸಹಾಯಕನಾಗಿದ್ದ ಆ ವ್ಯಕ್ತಿಯು, ಅವರ ಮಾತನ್ನ ನಂಬಿ ಪ್ರವಾದಿಯವರ ﷺ ಬಳಿ ತೆರಳಿದರು.
ಪ್ರವಾದಿಯವರ ﷺ ಬಳಿ ತಲುಪಿದ ಆ ವ್ಯಕ್ತಿಯು, ತನ್ನ ಎಲ್ಲಾ ಬೇಸರವನ್ನೂ ಅವರಲ್ಲಿ ತಿಳಿಸಿದರು. ಅದನ್ನು ಕೇಳಿ, ಪ್ರವಾದಿಯವರು ﷺ ಅವರ ಜೊತೆಯಲ್ಲಿ ಅಬೂಜಹಲ್'ನ ಮನೆ ಕಡೆ ನಡೆದರು. ಇದೆಲ್ಲವನ್ನೂ ದೂರದಿಂದಲೇ ನೋಡುತ್ತಿದ್ದ ಖುರೈಷಿಗಳು, ಅಲ್ಲಿ ಏನು ನಡೆಯಬಹುದು ಎಂದು ತಿಳಿಯಲು ಒಬ್ಬನನ್ನು ಅವರ ಹಿಂದೆ ಕಳುಹಿಸಿದರು. ಅಬೂಜಹಲ್'ನ ಮನೆಗೆ ತಲುಪಿದ, ಪ್ರವಾದಿಯವರು ﷺ ಅವರ ಮನೆಯ ಬಾಗಿಲನ್ನು ತಟ್ಟಿದರು. ಬಾಗಿಲು ತೆರೆದ ಅಬೂಜಹಲ್, ಪ್ರವಾದಿಯವರ ﷺ ಮುಂದೆ ಬಹಳ ವಿನಮ್ರತೆಯಿಂದ ನಿಂತರು. ಪ್ರವಾದಿಯವರು ﷺ ಬೇಸರದಿಂದ ಬೇಸತ್ತು ಹೋಗಿದ್ದ ಆ ವ್ಯಕ್ತಿಯನ್ನು ಮುಂದಕ್ಕೆ ಕರೆದರು. ಅವರು ಮುಂದೆ ಬಂದಾಗ, ಪ್ರವಾದಿಯವರು ﷺ ನೀವು ಇವರಿಗೆ ನೀಡಬೇಕಾದ, ಇವರ ಹಣವನ್ನು ತಿರುಗಿ ನೀಡಬೇಕು ಎಂದು ಹೇಳಿದರು. ಅದಕ್ಕೆ ಅಬೂಜಹಲ್ ಸರಿ ಎಂದು ಹೇಳಿದಾಗ, ಪ್ರವಾದಿಯವರು ﷺ ಈಗಲೇ, ಇಲ್ಲೇ ನೀಡಬೇಕು ಎಂದು ಹೇಳಿದರು. ಅದನ್ನು ಕೇಳಿ, ಅಬೂಜಹಲ್ ತಕ್ಷಣವೇ ಒಳಗೆ ಹೋಗಿ, ಒಂಟೆಗೆ ನಿಗದಿಪಡಿಸಿದ ಹಣವನ್ನು ತೆಗೆದು ಕೊಂಡು ಬಂದು, ಆ ವ್ಯಕ್ತಿಗೆ ನೀಡಿದರು. ಆ ವ್ಯಕ್ತಿಯೂ ಸಂತೋಷದಿಂದ ಪ್ರವಾದಿಯವರಿಗೆ ﷺ, ಖುರೈಷಿಗಳ ಎದುರಿನಲ್ಲೇ ಕೃತಜ್ಞತೆ ತಿಳಿಸಿದರು. ಅದನ್ನು ಕೇಳಿದ ಖುರೈಷಿಗಳು, ಅವರ ಹಿಂದೆ ಕಳಿಸಿದ್ದ ವ್ಯಕ್ತಿಯನ್ನು ಕರೆದು, ಇದೆಂತಹ ಕರ್ಮ, ಅಲ್ಲಿ ಏನಾಯಿತು ಎಂದು ಕೇಳಿದಾಗ, ಅವರು ಅಲ್ಲಿ ನಡೆದ ಎಲ್ಲಾ ಘಟನೆಯನ್ನು ವಿವರಿಸಿದರು.
ಅದನ್ನು ಕೇಳಿದ, ಖುರೈಷಿಗಳು ತಕ್ಷಣವೇ ಅಬೂಜಹಲ್'ರ ಬಳಿ ಹೋಗಿ, ಏನಾಯಿತು ಎಂದು ಕೇಳಿದರು. ಅದಕ್ಕೆ ಅಬೂಜಹಲ್, ಮುಹಮ್ಮದ್ ﷺ ಬಂದು ನನ್ನ ಮನೆಯ ಬಾಗಿಲನ್ನು ತಟ್ಟಿದರು. ಶಬ್ದ ಕೇಳಿದ ತಕ್ಷಣವೇ ಏನೋ ಒಂದು ಭಯ ಕಾಡಿತು. ಬಾಗಿಲು ತೆರೆದು ನೋಡಿದಾಗ, ಮುಹಮ್ಮದ್'ರ ﷺ ತಲೆಯ ಮೇಲೆ ಇವತ್ತಿನವರೆಗೂ ನೋಡಿರದ, ಒಂದು ಭೀಕರವಾದ ಒಂಟೆಯು ಬಾಯಿ ತೆರೆದು ನಿಂತಿತ್ತು. ಅದನ್ನು ಕಂಡು ಬಹುಶಃ ನಾನು ಅವರು ಹೇಳಿದ ಹಾಗೆ ಕೇಳದಿದ್ದರೆ ನನ್ನನ್ನು ಅದು ತಿಂದು ಬಿಡಬಹುದು ಎಂದು ಅನಿಸಿತು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment