Abu Hisham Saquafi

Official Website Of Hafiz Ilyas Saquafi Padaladka

Friday, October 7, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -115 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

  ಇಸ್'ರಾಅ್ ಮಿಅ್'ರಾಜ್ ಯಾತ್ರೆಯ ನಡುವೆ ವೀಕ್ಷಿಸಿದ ದೃಶ್ಯಗಳ ಬಗ್ಗೆ ಚರಿತ್ರೆ ಗ್ರಂಥಗಳಲ್ಲಿ ಹಲವಾರು ರೀತಿಯ ಉಲ್ಲೇಖಗಳು ಕಾಣಲು ಸಾಧ್ಯವಿದೆ. ಎಲ್ಲಾ ಉಲ್ಲೇಖಗಳನ್ನು ಜೊತೆ ಸೇರಿಸಿ ಬರೆದಿರುವ ಸುಬ್'ಲುಲ್ ಹುದಯ್ ಎಂಬ ಗ್ರಂಥದಲ್ಲಿ ಇದರ ಬಗ್ಗೆ ಒಂದು ಅಧ್ಯಾಯವನ್ನೇ ಕಾಣಬಹುದು ಅದು ಈ ರೀತಿಯಾಗಿದೆ. 

     ಮಲಕ್ ಜಿಬ್'ರೀಲ್'ರವರು (ಅ) ಪ್ರವಾದಿಯವರ ﷺ ಬಲ ಭಾಗದಲ್ಲಿ ಹಾಗೂ ಮೀಕಾಯಿಲ್'ರವರು (ಅ) ಎಡ ಭಾಗದಲ್ಲೂ ನಿಂತು ಮಕ್ಕಾದಿಂದ ಯಾತ್ರೆ ಹೊರಟರು. ಯಾತ್ರೆ ಬಹಳಷ್ಟು ದೂರ ಹೋದ ನಂತರ ಖರ್ಜುರಗಳು ತುಂಬಿ ತುಳುಕುತ್ತಿದ್ದ ಒಂದು ಊರಿಗೆ ತಲುಪಿದರು. ಅಲ್ಲಿ ಇಳಿದು ನಮಾಝ್ ಮಾಡಲು ಪ್ರವಾದಿಯವರಲ್ಲಿ ﷺ, ಜಿಬ್'ರೀಲರು (ಅ) ಹೇಳಿದಾಗ, ಪ್ರವಾದಿಯವರು ﷺ ಅಲ್ಲಿ ನಮಾಝ್ ಮಾಡಿ ಅಲ್ಲಿಂದ ಮುಂದೆ ಹೊರಟರು. ಯಾತ್ರೆ ಮುಂದುವರಿಸುತ್ತಾ ಜಿಬ್'ರೀಲರು (ಅ), ಈಗ ಇಲ್ಲಿ ನಮಾಝ್ ಮಾಡಿದ ಸ್ಥಳ ಯಾವುದೆಂದು ನಿಮಗೆ ಗೊತ್ತಿದೆಯೇ.? ಎಂದು ಪ್ರವಾದಿಯರಲ್ಲಿ ﷺ ಕೇಳಿದಾಗ, ಪ್ರವಾದಿಯವರು ﷺ ಇಲ್ಲ ಎಂದು ಉತ್ತರಿಸಿದರು. ಅದಕ್ಕೆ ಜಿಬ್'ರೀಲರು ಇದಾಗಿದೆ ತ್ವೈಬ, ಭವಿಷ್ಯದಲ್ಲಿ ಇಲ್ಲಿಗೆ ನೀವು ಪಲಾಯನ ಮಾಡಿ ಬರಲಿರುವಿರಿ ಎಂದು ಹೇಳುತ್ತಾ ಯಾತ್ರೆ ಮುಂದು ವರಿಸಿದರು. ಬುರಾಖ್ ತನ್ನ ವೇಗವನ್ನು, ಒಮ್ಮೆ ನೋಡುವಾಗ ಕಣ್ಣ ದೃಷ್ಟಿ ಎಷ್ಟು ದೂರದವರೆಗೆ ಚಲಿಸುತ್ತಿತ್ತೋ ಅಷ್ಟು ದೂರದ ವರೆಗೆ ಒಂದೊಂದೇ ಹೆಜ್ಜೆ ಇಟ್ಟು ಹೋಗುತ್ತಿತ್ತು. ಮುಂದಿನ ಒಂದು ಸ್ಥಳಕ್ಕೆ ತಲುಪಿದಾಗ, ಅಲ್ಲಿಯೂ ಕೂಡ ಜಿಬ್'ರೀಲರು, ಪ್ರವಾದಿಯವರಲ್ಲಿ ﷺ ನಮಾಝ್ ಮಾಡಲು ಹೇಳಿದರು. ಅಲ್ಲಿಯೂ ಕೂಡ ನಮಾಝ್ ಮಾಡಿ ಮುಂದೆ ಹೋಗುವಾಗ, ಜಿಬ್'ರೀಲರು (ಅ) ಪುನಃ ಈ ಸ್ಥಳ ಯಾವುದೆಂದು ನಿಮಗೆ ಗೊತ್ತಿದಿಯೇ.? ಕೇಳಿದಾಗ, ಪ್ರವಾದಿಯವರು ﷺ ಇಲ್ಲ ಎಂದು ಉತ್ತರಿಸಿದರು. ಅದಕ್ಕೆ ಜಿಬ್'ರೀಲರು (ಅ) ಇದಾಗಿದೆ ಮದ್'ಯನ್ ಎಂದು ಹೇಳುತ್ತಾ, ಮೂಸ ಪ್ರವಾದಿಯವರ ﷺ ಮರದ ಬಳಿ ನಿಂತು ಎಲ್ಲವನ್ನು ವಿವರಿಸಿದರು. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಇನ್ನೊಂದು ಸ್ಥಳಕ್ಕೆ ತಲುಪಿದಾಗ, ಅಲ್ಲಿಯೂ ಕೂಡ ಇಳಿದು ನಮಾಝ್ ಮಾಡಿ ಯಾತ್ರೆ ಮುಂದುವರೆಸಿದರು. ನಂತರ ಜಿಬ್'ರೀಲರು (ಅ), ಇದಾಗಿದೆ ಮೂಸ ಪ್ರವಾದಿಯವರು ಅಲ್ಲಾಹನ ಮಾತುಗಳನ್ನು ಕೇಳಿದ ಪವಿತ್ರವಾದ ಸೀನ ಪರ್ವತ ಎಂದು ಹೇಳಿದರು. 

     ಅಲ್ಲಿಂದ ಮುಂದುವರಿಯುತ್ತಾ ಕೋಟೆಗಳು ಕಾಣುತ್ತಿದ್ದ ಸ್ಥಳದಲ್ಲಿ ಇಳಿದು, ಅಲ್ಲಿಯೂ ನಮಾಝ್ ಮಾಡಿ ಯಾತ್ರೆ ಮುಂದುವರಿಸಿದಾಗ, ಜಿಬ್'ರೀಲರು (ಅ) ಇದು ಈಸ ಪ್ರವಾದಿಯವರ (ಅ) ಜನ್ಮ ನಾಡಾದ ಬತ್'ಲಹೆಂ ಎಂದು ವಿವರಿಸಿ ಕೊಟ್ಟರು. ಅಲ್ಲಿಂದ ಮುಂದೆ ಹೋದಾಗ, ಭೂತ ವರ್ಗದ ಇಫ್'ರೀತ್ ಭೂತವು ಬೆಂಕಿಯ ನಾಳದೊಂದಿಗೆ ಅಲ್ಲಿ ಪ್ರತ್ಯಕ್ಷವಾಯಿತು. ಹಿಂತಿರುಗಿ ನೋಡುವಾಗ ಅವರ ಹಿಂದೆ ಬರುತ್ತಿದ್ದ ಭಾಸವಾಗುತ್ತಿತ್ತು, ಅದಕ್ಕೆ ಜಿಬ್'ರೀಲರು (ಅ) ಪ್ರವಾದಿಯವರಲ್ಲಿ ﷺ, "ಖುಲ್ ಅವೂದು ಬಿ ವಜ್'ಹಿಲ್ಲಾಹಿಲ್ ಕರೀಂ...'' ಎಂಬ ಮಂತ್ರವನ್ನು ಹೇಳಿರಿ, ಅವನ ಬೆಂಕಿಯ ನಾಳವು ಬತ್ತಿ ಹೋಗುತ್ತದೆ, ಎಂದು ಹೇಳಿದಾಗ ಪ್ರವಾದಿಯವರು ﷺ ಅದೇ ರೀತಿ ಹೇಳಿದರು. ಅಷ್ಟ್ರರಲ್ಲೇ ಇಫ್'ರೀತ್'ನ ಬೆಂಕಿ ನಾಳವು ಕೆಟ್ಟು ಹೋಗಿ, ಅವನು ಕೆಳಗೆ ಬಿದ್ದು ಬಿಟ್ಟನು. 

    ಯಾತ್ರೆ ಪುನಃ ಅಲ್ಲಿಂದ ಮುಂದುವರಿದು, ಒಂದು ವಿಶಿಷ್ಟವಾದ ಜನತೆಯ ಬಳಿ ತಲುಪಿತು. ಅವರು ಒಂದು ದಿನ ಧಾನ್ಯಗಳನ್ನು ಬೆಳೆದರೆ, ಇನ್ನೊಂದು ದಿನ ಅದನ್ನು ಕೊಯ್ಯುವರು. ಕೊಯ್'ದಷ್ಟು ಬೆಳೆಗಳು ಪುನಃ ಪೂರ್ವ ಸ್ಥಾನಕ್ಕೆ ಮರಳುತ್ತಿದ್ದವು. ಅದನ್ನು ಕಂಡು ಅವರು ಯಾರೆಂದು ಪ್ರವಾದಿಯವರು ﷺ ಕೇಳಿದಾಗ, ಇವರು ಅಲ್ಲಾಹನಿಗಾಗಿ ಜೀವ ಸಮರ್ಪಣೆ ಮಾಡಿದವರಾಗಿದ್ದಾರೆ. ಅವರ ಮಾಡಿದ ಒಳಿತಿನ ಕಾರಣದಿಂದ, ಅವರಿಗೆ ಎಪ್ಪತ್ತು ಸಾವಿರದಷ್ಟು ದುಪ್ಪಟ್ಟು ಪ್ರತಿಫಲ ಸಿಗಲಿದೆ. ಅವರು ಖರ್ಚು ಮಾಡಿದ್ದೆಲ್ಲವೂ ಅವರಿಗೆ ಮರಳಿ ಸಿಗಲಿದೆ ಎಂದು ಹೇಳಿ ಮುಗಿಸುವಷ್ಟರಲ್ಲಿ, ಒಂದು ಒಳ್ಳೆಯ ಸುಗಂಧದ ಸುವಾಸನೆ ಬಡಿಯಿತು. ಅದು ಏನೆಂದು ಪ್ರವಾದಿಯವರು ﷺ ಕೇಳಿದಾಗ, ಅದು ಫಿರ್'ಔನ್'ನ ಮಗಳ ಸೇವಕಿ ಮಾಷಿತರ (ಕೂದಲು ಬಾಚುವ ಸೇವಕಿ) ಮಕ್ಕಳ ಸುವಾಸನೆಯಾಗಿದೆ ಅದು. ನನ್ನ ರಕ್ಷಕ, ಜಗತ್ ಪಾಲಕನಾದ ಅಲ್ಲಾಹನಾಗಿರುವನು ಅಲ್ಲದೆ ಫರೋವ ಅಲ್ಲ ಎಂದು ಹೇಳಿದ ಕಾರಣಕ್ಕೆ ಬಿಸಿ ಎಣ್ಣೆಯಲ್ಲಿ ಹಾಕಿ ಕೊಲ್ಲಲ್'ಪಟ್ಟವರಾಗಿದ್ದಾರೆ ಅವರು ಎಂದು ಹೇಳಿದರು. 

    ಹೀಗೆ ಯಾತ್ರೆ ಮುಂದುವರಿಯುತ್ತಾ ಹೋಗುತ್ತಿದ್ದಾಗ, ತಲೆ ಹೊಡೆದು ಹೋಗುವ ಹಾಗೂ ಸ್ವಲ್ಪ ಸಮಯದ ನಂತರ ಅದು ಪುನಃ ಪೂರ್ವ ಸ್ಥಾನಕ್ಕೆ ಮರಳುತಿದ್ದ ಒಂದು ಸಮೂಹವನ್ನು ಕಾಣಲು ಸಾಧ್ಯವಾಯಿತು. ಅವರು ಯಾರೆಂದು ಕೇಳಿದಾಗ, ನಮಾಝ್ ತ್ಯಜಿಸಿ ಇತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅನುಭವಿಸುವ ಶಿಕ್ಷೆಯಾಗಿದೆ ಇದು ಎಂದು ಹೇಳಿದರು. ಸ್ವಲ್ಪ ಮುಂದುವರಿದಾಗ, ಒಂದು ವಿಭಾಗವು ಜಾನುವಾರುಗಳಂತೆ ಮುಳ್ಳುಗಳ ಹುಲ್ಲುನ್ನು ಮೇಯುತ್ತಿದ್ದರು, ಅದು ನರಕವಕಾಶಿಗಳು ಅನುಭವಿಸುತ್ತಿದ್ದ ಶಿಕ್ಷೆಯ ಭಾಗವಾಗಿತ್ತು. ಅದನ್ನು ಕಂಡು ಪ್ರವಾದಿಯವರು ಇವರು ಯಾರೆಂದು ಕೇಳಿದಾಗ, ಜಿಬ್'ರೀಲರು (ಅ) ಎಲ್ಲವನ್ನೂ ವಿವರಿಸಿ ಕೊಟ್ಟರು, ಹೀಗೆ ಮುಂದುವರೆದು ಹೋಗುತ್ತಿದ್ದಾಗ, ಮತ್ತೊಂದು ವಿಭಾಗವನ್ನು ಕಂಡರು, ಅವರ ಮುಂದೆ ಒಂದು ಬಟ್ಟಲಿನಲ್ಲಿ ಒಳ್ಳೆಯ ಶುಚಿಯಿರುವ ಮಾಂಸ ಇದ್ದರೆ, ಇನ್ನೊಂದು ಬಟ್ಟಲಿನಲ್ಲಿ ಕೊಳೆತ ಮಾಂಸ ಇದ್ದವು. ಅವರು ಕೊಳೆತ ಮಾಂಸಗಳನ್ನು ತಿನ್ನುತ್ತಿದ್ದರು. ಅವರು ಯಾರೆಂದು ಕೇಳಿದಾಗ, ಅವರು ತಮಗಾಗಿ ಅನುಮತಿಸಿದ ಸಂಗಾತಿಗಳು ಇದ್ದರೂ ಕೂಡ, ಬೇರೆಯವರ ಜೊತೆಯಲ್ಲಿ ಸಂಪರ್ಕ ಇಟ್ಟುಕೊಂಡವರಾಗಿದ್ದರು ಎಂದು ಜಿಬ್'ರೀಲರು (ಅ) ಹೇಳಿದರು. 

    (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: