ಎಮ್ಮೆಸ್ಸೆಂ ಝೈನೀ ಕಾಮಿಲ್ ಕಕ್ಕಿಂಜೆ (ಪ್ರಧಾನ ಕಾರ್ಯದರ್ಶಿ SYS ಕರ್ನಾಟಕ)
*ನಾವು ಚಿಕ್ಕವರಿದ್ದಾಗ* ಕಕ್ಕಿಂಜೆಯ ನಮ್ಮ ಮನೆಗೆ ತಿಂಗಳಿಗೆ ಒಂದು ಬಾರಿಯಾದರೂ, ಕೆ.ಎಚ್. ಉಸ್ತಾದ್ ಬರುತ್ತಿದ್ದರು.ಅವರು ನಮ್ಮ ತಂದೆ ಮರ್ಹೂಂ ಎಂ.ಎಸ್.ಮೂಸ ಮುಸ್ಲಿಯಾರ್ ಅವರ ಶಿಷ್ಯರಾಗಿದ್ದ ಕಾರಣ ಅವರ ಮಟ್ಟಿಗೆ ಇಂತಹ ಸಂದರ್ಶನಗಳು ಸಹಜವಾಗಿದ್ದಿರಬಹುದು, ಆದರೆ ಮಕ್ಕಳಾದ ನಮ್ಮ ಪಾಲಿಗೆ ಕೆ.ಎಚ್. ಉಸ್ತಾದರ ಆಗಮನದ ದಿವಸ ವಿಶೇಷ ಸಂಭ್ರಮವಾಗಿತ್ತು. ಅವರು ಬರುವಾಗ ನಮಗೆ ಕೈ ತುಂಬಾ ಉಡುಗೊರೆಗಳನ್ನು ತರುತ್ತಿದ್ದರು. ತಿಂಡಿ ತಿನಿಸುಗಳು ಮಾತ್ರವಲ್ಲದೆ ಫೋರಿನ್ ಬಟ್ಟೆಗಳು, ದುಬಾರಿ ಪೆನ್ನುಗಳು, ಗಮಗಮಿಸುವ ಸೆಂಟ್ ಬಾಟಲಿಗಳು ಮುಂತಾದವು ನಮ್ಮ ಕೈ ಸೇರುತ್ತಿದ್ದವು. ತಂದೆಯ ಜತೆ ಅವರ ಹರಟೆ ಮಾತುಗಳು, ಜೋಕುಗಳು, ಸಾಹಸ ಕಥೆಗಳು, ಗಂಟೆಗಟ್ಟಲೆ ಮುಂದುವರಿಯುತ್ತಿತ್ತು. ನಾವೆಲ್ಲರೂ ಸುತ್ತಲೂ ಕುಳಿತು ಕೊಂಡು ಆ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆವು. ಹೋಗುವಾಗ ನಮ್ಮ ಕೈಗೆ ಹಣವನ್ನೂ ನೀಡಲು ಮರೆಯುತ್ತಿರಲಿಲ್ಲ.ಆ ಕಾಲದಲ್ಲಿ ಅವರು ಕಾಸರಗೋಡು ಜಿಲ್ಲೆಯ ಕೆಲವು ಮಸೀದಿಗಳಲ್ಲಿ ಕೆಲಸ ಮಾಡುತ್ತಿದ್ದರು.
*ಕಾಸರಗೋಡಿನ* ನಾಯಮಾರ್ಮೂಲ, ಪೊವ್ವಲ್, ಪೈಕ, ಕರ್ನಾಟಕದ ಕಾಜೂರು, ಕನ್ನಂಗಾರ್,ಸಾಗರ,ಮುಂತಾದ ಕಡೆ ಖತೀಬ್ ಹಾಗೂ ಮುದರ್ರಿಸ್ ಆಗಿ ಸೇವೆಗೈದ ಕೆ.ಎಚ್., ಕಳೆದ ಇಪ್ಪತ್ತು ವರ್ಷಗಳಿಂದ ದುಬೈ ಸೋನಾಪುರದಲ್ಲಿ *ಬೂ ಹಲೀಬ ಕಂಪನಿ*ಯ ಪುಟ್ಟ ಮಸೀದಿಯಲ್ಲಿ ಇಮಾಂ ಆಗಿ ಸೆವೆ ಮಾಡುತ್ತಿದ್ದರು.
*ಬಡವರ* ಮತ್ತು ನೊಂದವರ ಆಶಾ ಕೇಂದ್ರ ವಾಗಿದ್ದ ಅವರು ದುಬೈಗೆ ಕೆಲಸ ಅರಸಿಕೊಂಡು ಬಂದು ಯಾವುದೂ ಸರಿಯಾಗದೆ ಅಡ್ಡಾಡುವ ಯುವಕರ ಪಾಲಿಗೆ ಜೀವದಾತರಂತಿದ್ದರು.ಕೆಲವು ಸಂದರ್ಭಗಳಲ್ಲಿ ಅವರ ಕೋಣೆಯಲ್ಲಿ ಹತ್ತಿಪ್ಪತ್ತು ಮಂದಿ ನಿರುದ್ಯೋಗಿಗಳು ಉಚಿತ ಅನ್ನ ಪಾನೀಯಗಳನ್ನು ಪಡೆದು ದಿವಸಗಟ್ಟಲೆ ಆಶ್ರಯ ಪಡೆಯುತ್ತಾ ಹಾಯಾಗಿರುತ್ತಿದ್ದರು.. ಊರಿನಿಂದ ಬಂದು ಕೆಲಸ ಸಿಗದೆ ಕಷ್ಟ ಪಡುತ್ತಿರುವವರ ಮಾಹಿತಿ ಸಿಕ್ಕಿದರೆ ತಕ್ಷಣ ಅವರನ್ನು ಹುಡುಕಿ ತನ್ನ ರೂಮಿಗೆ ಕರೆತಂದು ಆಶ್ರಯ ನೀಡುವುದು, ಅವರಿಗೆ ಉದ್ಯೋಗ ದೊರಕಿಸಲು ಕಠಿಣ ಪರಿಶ್ರಮ ಪಡುವುದು ಇವೆಲ್ಲಾ ಅವರ ಅತಿ ಇಷ್ಟದ ಕೆಲಸಗಳಾಗಿದ್ದವು.
*ಮಾತಿನ* ವಿಶಿಷ್ಟ ಶೈಲಿಯ ಮೂಲಕ ಎಲ್ಲರನ್ನೂ ಹಿಡಿದಿಡುತ್ತಿದ್ದ ಅವರ ಜತೆ ಒಂದೈದು ನಿಮಿಷ ಕಳೆದರೆ ಎಲ್ಲಾ ಟೆನ್ಷನ್ ಗಳು ಮಾಯವಾಗಿ ಮನಸ್ಸು ನಿರಾಳವಾಗಿ ಬಿಡುತ್ತಿತ್ತು
*ಊರಿನಲ್ಲಿ* ಮಸೀದಿ ಕೆಲಸದಲ್ಲಿದ್ದಾಗ ಅವರೊಬ್ಬ ವಿಶೇಷ 'ಉಸ್ತಾದ್' ಆಗಿ ಗುರುತಿಸಿ ಕೊಂಡಿದ್ದರು. ಅವರು ಧರಿಸುವ ಬಟ್ಟೆ, ಚಪ್ಪಲಿ ಕಟ್ಟುವ ವಾಚು, ಎಲ್ಲವೂ ತುಂಬಾ ಬೆಲೆಬಾಳುವಂತವುಗಳಾಗಿದ್ದು ಅವರು ಒಂದು ಕಡೆ ಬಂದಿಳಿದರೆ ಐಶ್ವರ್ಯವೇ ಧರೆಗಿಳಿದು ಬಂದಂತೆ ಭಾಸವಾಗುತ್ತಿತ್ತು. ತನ್ನ ಆಕರ್ಷಕ ಭಂಗಿಯ ಪ್ರೌಢ ಗಂಭೀರ ನಡೆ ನೋಡುಗರಿಗೆ ಒಂದು ಹಬ್ಬವೇ ಸರಿ.
*ಅಪಾರ* ಧೈರ್ಯಶಾಲಿಯಾಗಿದ್ದ ಅವರು ಯಾರ ಮುಂದೆಯೂ ಬಗ್ಗದೆ ಜಗ್ಗದೆ ತನ್ನ ವಿಶಿಷ್ಟ ರೀತಿಯ ಜೀವನದ ಮೂಲಕ ಮನೆಮಾತಾಗಿದ್ದರು. ತನ್ನ ಸಾಹಸ ಗಾಥೆಗಳನ್ನು ತಾವೇ ಮನಮೋಹಕವಾಗಿ ವಿವರಿಸಿ ಕೇಳುಗರನ್ನು ರಂಜಿಸುತ್ತಿದ್ದರು. ಬಿಡುವಾದಾಗಲೆಲ್ಲ 'ಕೆಎಚ್ಉಸ್ತಾದರ ಬಳಿ ಹೋಗುವ' ಅಂತ ಯೋಚಿಸುವ ಅಪಾರ ಗೆಳೆಯರ ಬಳಗವನ್ನು ಹೊಂದಿರುವ ಸೂಜಿಗಲ್ಲಿನ ವ್ಯಕ್ತಿತ್ವವಾಗಿತ್ತು ಅವರದ್ದು.
*ಯು.ಎ.ಇ ಯ* ಎಲ್ಲಾ ಸುನ್ನೀ ಸಂಘಟನೆಗಳ ಸಹಚಾರಿಯೂ, ಸಹಕಾರಿಯೂ ಆಗಿದ್ದ ಉಸ್ತಾದರು *ಕೆಸಿಎಪ್ ಕಾರ್ಯಕರ್ತರ ಸ್ಪೂರ್ತಿಯ ಸೆಲೆಯಾಗಿದ್ದರು*. ಊರಿನಲ್ಲಿದ್ದಾಗ *ಎಸ್.ವೈ.ಎಸ್.ನ ರಾಜ್ಯ ಮಟ್ಟದ ನಾಯಕ* ರಾಗಿ ಬೆಳೆದಿದ್ದರು. *ಕುಂಬ್ರ ಮರ್ಕಝ್* ನ ಮೇಲೆ ಅಪಾರ ಅಭಿಮಾನ ಹೊಂದಿದ್ದ ಅವರು ಕೆಲಕಾಲ ಮರ್ಕಝುಲ್ ಹುದಾ ದುಬೈ ಘಟಕದ ಅಧ್ಯಕ್ಷರಾಗಿದ್ದರು.ತನ್ನ ಮಗಳು ಫರ್ಹಾನಾಳ ಪದವಿಪೂರ್ವ ಶಿಕ್ಷಣವನ್ನು ಮರ್ಕಝ್ ನಲ್ಲೇ ಮಾಡಿಸಿದ್ದರು.
*ಅವರ ತಂದೆ* ,ಕಕ್ಕಿಂಜೆ ಜುಮಾ ಮಸ್ಜಿದ್ ನಲ್ಲಿ ದೀರ್ಘ ಅರವತ್ತೈದು ವರ್ಷಗಳ ಕಾಲ ಮುಅಝ್ಝಿನ್ ಆಗಿದ್ದ ಕೆ.ಎಚ್.ಹೈದರ್ ಹಾಜಿಯವರು ಎರಡು ತಿಂಗಳ ಹಿಂದೆ ವಿಧಿವಶರಾದಾಗ ಅವರ ಮೂರನೇ ದಿನದ ದುಆದ ವೇಳೆ ಕೊನೆಯದಾಗಿ ,ನಾನು ಕೆ.ಎಚ್. ಉಸ್ತಾದರನ್ನು ಭೇಟಿಯಾಗಿದ್ದೆ. ದುಃಖದ ನಡುವೆಯೂ ಅದೇ ಲವಲವಿಕೆ, ಉತ್ಸಾಹದಿಂದ ಓಡಾಡುತ್ತಿದ್ದರು. ಕೆಲವು ರೋಗಗಳ ಆಕ್ರಮಣಕ್ಕೆ ತುತ್ತಾಗಿದ್ದರೂ ಮರಣ ಇಷ್ಟು ಬೇಗ ಅವರನ್ನು ಕರೆದೊಯ್ಯಬಹುದೆಂದೂ ಯಾರೂ ಊಹಿಸಿರಲಿಲ್ಲ.
*ಕೆಲದಿನಗಳ* ಹಿಂದೆ ದುಬೈಯ ತನ್ನ ಕೋಣೆಯಲ್ಲಿ ಬಿದ್ದು ಕಾಲಿಗಾದ ಗಾಯ, ತೀವ್ರ ಮಧುಮೇಹಿಯಾಗಿದ್ದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು. ಗಂಭೀರ ಸ್ಥಿತಿಯಲ್ಲಿ ದುಬೈ ಇರಾನಿ ಹಾಸ್ಪಿಟಲ್ ಗೆ ದಾಖಲಿಸಲಾಗಿದ್ದ ಅವರು ತೀರಾ ಅನಿರೀಕ್ಷಿತವಾಗಿ ತನ್ನ *ಅರವತ್ತ ನಾಲ್ಕನೇ ವಯಸ್ಸಿನಲ್ಲಿ* ಕಳೆದ ರಾತ್ರಿ (17/12/2017) ನಮ್ಮನ್ನು ಬಿಟ್ಟು, ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
*ಪತ್ನಿ ಹಫ್ಸಾ* ನಂದಾವರ, ಮಕ್ಕಳಾದ ನೌಫಲ್, ಸಿನಾನ್, ಫರ್ಹಾನ, ಅಫ್ರೀನಾ, ಅಪಾರ ಬಂಧುಬಳಗ, ಹಾಗೂ ಸಹಸ್ರಾರು ಸ್ನೇಹಜನರನ್ನು ಅಗಲಿದ್ದಾರೆ. ಅವರ ಆಕಸ್ಮಿಕ ಅಗಲಿಕೆ ಅಭಿಮಾನಿಗಳಿಗೆ ಅರಗಿಸಿ ಕೊಳ್ಳಾಲಾಗದಷ್ಟು ಕಠಿನವಾಗಿದೆ.
*ಅವರ* ಮರಣದ ಮೂಲಕ ಸುನ್ನೀ ಸಂಘ ಶಕ್ತಿ ಒಬ್ಬ ಉತ್ಸಾಹೀ ಕಾರ್ಯಕರ್ತ, ಧೀಮಂತ ನಾಯಕ, ಮತ್ತು ತೀವ್ರ ಪ್ರೇರಕನನ್ನು ಕಳಕೊಂಡಿದೆ.
*ಅಲ್ಲಾಹು* ಅವರ ಪಾರತ್ರಿಕ ಜೀವನ ಸುಮಧುರವಾಗಿಸಲಿ, ಸ್ವರ್ಗೋದ್ಯಾನಗಳಲ್ಲಿ ನಮ್ಮೆಲ್ಲರನ್ನು ಒಗ್ಗೂಡಿಸಲಿ, ಅವರ ಕುಟುಂಬಕ್ಕೆ ವಿರಹ ವೇದನೆ ಸಹಿಸುವ ಶಕ್ತಿ ದಯಪಾಲಿಸಲಿ. ಆಮೀನ್


No comments:
Post a Comment