Abu Hisham Saquafi

Official Website Of Hafiz Ilyas Saquafi Padaladka

Saturday, July 16, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -31 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
 
   ಪುಣ್ಯ ಪ್ರವಾದಿಯವರ ﷺ ಐದನೇ ಮಗುವಾಗಿದ್ದಾರೆ ಫಾತಿಮ (ರ). ಹೆಣ್ಣು ಮಕ್ಕಳಲ್ಲಿ ಕಿರಿಯವರೂ, ಮಕ್ಕಳಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ  ಮಗಳಾಗಿದ್ದರು ಬೀವಿಯವರು. ಪ್ರವಾದಿಯವರ ﷺ ಮುವ್ವತ್ತೈದನೇ ವಯಸ್ಸಿನಲ್ಲಾಗಿತ್ತು ಬೀವಿಯವರು ಜನಿಸಿದ್ದು. ಖುರೈಶಿಗಳು ಕಅಬಾಲಯವನ್ನು ನವೀಕರಣಗೊಳಿಸುತ್ತಿದ್ದ ಸಮಯವಾಗಿತ್ತದು. ಅಲ್ಲ ನಲ್ವತ್ತೊಂದು ವಯಸ್ಸಿನಲ್ಲಾಗಿತ್ತು ಎನ್ನುವ ಅಭಿಪ್ರಾಯವೂ ಇತಿಹಾಸದಲ್ಲಿ ಕಾಣಬಹುದು. 

     ತಂದೆಯೊಂದಿಗೆ ಬಹಳ ಪ್ರೀತಿಯಿಂದ ವ್ಯವಹರಿಸಲು ಭಾಗ್ಯ ಲಭಿಸಿದ ಮಗಳಾಗಿದ್ದರು ಫಾತಿಮ (ರ). ಪ್ರವಾದಿಯವರು ﷺ ತಮ್ಮ ಎಲ್ಲಾ ರಹಸ್ಯಗಳನ್ನೂ, ಬೇಸರವನ್ನು ಮಗಳು ಫಾತಿಮರೊಂದಿಗೆ (ರ) ಹೇಳುತ್ತಿದ್ದರು. ಕೆಲವೊಮ್ಮೆ ತಾಯಿಯ ಸ್ಥಾನದಲ್ಲಿ ನಿಂತು ಪರಿಹಾರ ಕೊಡುತ್ತಿದ್ದರು. ಆ ಕಾರಣದಿಂದಲೇ 'ಉಮ್ಮು ಅಬೀಹ' (ಸ್ವಂತ ತಂದೆಯ ತಾಯಿ) ಎನ್ನುವ ಹೆಸರು ಕೂಡ ಬೀವಿಯವರಿಗೆ ಲಭಿಸಿದ್ದು. ಪ್ರವಾದಿಯವರು ﷺ ಬಹಳಷ್ಟು ಬಾರಿ 'ಫಾತಿಮ ನನ್ನ ಕರುಳಿನ ಕುಡಿ' ಎಂದು ಹೇಳುತ್ತಿದ್ದರು. ಪ್ರಬೋಧನೆಯ ಆರಂಭದ ಕಾಲದಲ್ಲಿದ್ದ ಸಮಸ್ಯೆಗಳನ್ನು, ಬೇಸರವನ್ನು ನೇರವಾಗಿ ಕಂಡು ಅನುಭವಿಸಿದ್ದರು. ಚಿಕ್ಕಪ್ಪ ಅಬೂತ್ವಾಲಿಬರ ಮಗನಾದ ಅಲಿಯವರೊಂದಿಗೆ (ರ) ಮದುವೆ ಮಾಡಿದರು. ಫಾತಿಮ (ರ), ಅಲಿ (ರ) ದಂಪತಿಗಳಿಗೆ ಐದು ಮಕ್ಕಳು ಜನಿಸಿದವು, ಹಸನ್, ಹುಸೈನ್, ಮುಹ್ಸಿನ್ ಎಂಬ ಮೂರು ಗಂಡು ಮಕ್ಕಳೂ, ಝೈನಬ್, ಉಮ್ಮು ಕುಲ್ಸು ಎಂಬ ಎರಡು ಹೆಣ್ಣು ಮಕ್ಕಳಾಗಿತ್ತು. 

      ಸ್ವರ್ಗದ ರಾಣಿಯಾಗಿ ಬೀವಿಯವರನ್ನು ಪ್ರವಾದಿಯವರು ﷺ ಪರಿಚಯಿಸಿದ್ದರು. ಮಗಳನ್ನು ಬಹಳ ಮುದ್ದಾದ ಹೆಸರಿನಿಂದ ಕರೆಯುತ್ತಿದ್ದರು. ಬತೂಲ್, ಝಹ್'ರ, ಎಂಬ ಹೆಸರು ಅವುಗಳಲ್ಲಿ ಪ್ರಸಿದ್ಧವಾಗಿದೆ. ಮುಸ್ಲಿಮರು ಅತೀ ಹೆಚ್ಚು ನಾಮಕರಣ ಮಾಡುವ ಹೆಸರು ಕೂಡ ಫಾತಿಮ ಆಗಿದೆ. ಪ್ರವಾದಿಯವರ ﷺ ವಿಯೋಗದ ಆರು ತಿಂಗಳ ನಂತರ ಬೀವಿಯವರು ಕೂಡ ಇಹಲೋಕ ತ್ಯಜಿಸಿದರು. ಹಿಜ್'ರಾದ ಹನ್ನೊಂದನೇ ವರ್ಷದಲ್ಲಾಗಿತ್ತು ಮರಣ ಹೊಂದಿದ್ದು. ಪ್ರವಾದಿಯವರ ﷺ ಪರಂಪರೆಯು ಬೀವಿಯವರ ಮಕ್ಕಳ ಪರಂಪರೆಯಿಂದಾಗಿದೆ ಬರುವುದು. 

     ಪ್ರವಾದಿಯವರ ﷺ ಆರನೇ ಮಗುವಾಗಿತ್ತು ಅಬ್ದುಲ್ಲಾಹ್ ಎನ್ನುವ ಮಗು. ಪ್ರವಾದಿತ್ವದ ನಿಯೋಗದ ನಂತರವಾಗಿತ್ತು ಮಗನು ಜನಿಸಿದ್ದು. ಆದರೆ ಖಾಸೀಮ್'ರ ಹಾಗೆ ಬಾಲ್ಯದಲ್ಲೇ ಅಬ್ದುಲ್ಲಾಹ್ ಕೂಡ ಮರಣ ಹೊಂದಿದರು. ತ್ವಯ್ಯಿಬ್, ತ್ವಾಹಿರ್ ಎಂಬ ಮುದ್ದಾದ ಹೆಸರಿನಿಂದಲೂ ಮಗುವನ್ನು ಕರೆಯುತ್ತಿದ್ದರು. ತ್ವಯ್ಯಿಬ್, ತ್ವಾಹಿರ್ ಎಂಬ ಹೆಸರು ಬೇರೆ ಗಂಡು ಮಕ್ಕಳನ್ನೂ ಕರೆಯುತ್ತಿದ್ದರು ಎನ್ನುವ ಅಭಿಪ್ರಾಯವನ್ನು, ಪ್ರಮುಖ ಇತಿಹಾಸಗಾರರು ಯಾರೂ ಕೂಡ ಅಂಗೀಕರಿಸಲಿಲ್ಲ. 

    ಖದೀಜ (ರ) ಬೀವಿಯವರು ಪ್ರವಾದಿಯವರ ﷺ ಪ್ರತಿಯೊಂದು ಮಕ್ಕಳಿಗೂ ಸ್ವತಃ ತಾನೇ ಎದೆಹಾಲುಣಿಸಿದ್ದರು. ಅಂದಿನ ಅರಬ್ ಸಂಪ್ರದಾಯದಂತೆ ಸಾಕು ತಾಯಿಯರಿಗೆ ನೀಡಿರಲಿಲ್ಲ. ಸಣ್ಣ ಮಗು ಮರಣ ಹೊಂದಿದ ನಂತರ ಎದೆ ಹಾಲು ಅಧಿಕವಾಗಿ, ಪ್ರವಾದಿಯವರಲ್ಲಿ ﷺ ಬೇಸರ ವ್ಯಕ್ತಪಡಿಸಿದಾಗ. ಸ್ವರ್ಗದಲ್ಲಿ ಮಗನನ್ನು ಸ್ವರ್ಗದ ಸ್ತ್ರೀಯರು ಹಾಲುಣಿಸುವ ಶಬ್ದ ನಿಮಗೆ ಕೇಳುತ್ತಿಲ್ಲವೇ ಎಂದು ಪ್ರವಾದಿಯವರು ﷺ ಸಮಾಧಾನ ಪಡಿಸಿದರು. 
      ಒಂದೊಂದು ಮಗು ಜನಿಸಿದಾಗಲೂ ಪ್ರವಾದಿಯವರು ﷺ ಅಖೀಖ (ಖುರ್ಬಾನಿ) ನಡೆಸಿ ಕೊಟ್ಟಿದ್ದರು. ಗಂಡು ಮಕ್ಕಳಿಗೆ ಎರಡು ಮೇಕೆಯನ್ನು, ಹೆಣ್ಣು ಮಕ್ಕಳಿಗೆ ಒಂದು ಮೇಕೆಯ ರೀತಿಯಲ್ಲಾಗಿತ್ತು ಅಖೀಖ ನಡೆಸಿದ್ದು. 

     ಪ್ರವಾದಿಯವರ ﷺ ಎರಡು ಗಂಡು ಮಕ್ಕಳು ಕೂಡ ಬಾಲ್ಯದಲ್ಲೇ ಮರಣ ಹೊಂದಿದಾಗ, ಪರಂಪರೆ ನಷ್ಟ ಹೊಂದಿದ ವ್ಯಕ್ತಿಯೆಂದು ಕೆಲವರು ಪ್ರವಾದಿಯವರನ್ನು ﷺ ಗೇಲಿ ಮಾಡಿದ್ದರು. ಖುರೈಶಿಗಳಲ್ಲಿ ಗಣ್ಯರಾಗಿದ್ದ ಆಸ್ವ್ ಬಿನ್ ವಾಯಿಲ್ ಎಂಬ ವ್ಯಕ್ತಿಯಾಗಿದ್ದರು ಗೇಲಿಮಾಡಿದ್ದು. ಪರಿಹಾಸ್ಯ ಮಾಡಿದವರಿಗೆ ಉತ್ತರವಾಗಿ ಕುರ್'ಆನ್ ಸೂಕ್ತವು ಅವತರಿಸಿತು. ಓ ಪ್ರವಾದಿಯವರೇ ﷺ ತಮಗೆ ಬಹಳಷ್ಟು ಅನುಗ್ರಹಗಳನ್ನು ನಾವು ನೀಡಿದ್ದೇವೆ, ಹಾಗಾಗಿ ತಮ್ಮ ಒಡೆಯನಿಗಾಗಿ ನಮಾಝ್ ಮಾಡಿರಿ, ಅವನಿಗಾಗಿ ಖುರ್ಬಾನಿ ನೀಡಿರಿ, ನಿಶ್ಚಯವಾಗಿಯೂ ತಮ್ಮನ್ನು ಗೇಲಿ ಮಾಡಿದವರಿಗಾಗಿದೆ ಪರಂಪರೆ ಇಲ್ಲದಿರುವುದು. ಕುರ್'ಆನಿನ ನೂರಾ ಎರಡನೇ ಅಧ್ಯಾಯವಾದ 'ಅಲ್ ಕೌಸರ್'ನ ವ್ಯಾಖ್ಯಾನವಾಗಿದೆ ತಿಳಿಸಿದ್ದು. ಪ್ರವಾದಿಯವರ ﷺ ಪರಂಪರೆಯು ಇವತ್ತಿಗೂ ಪ್ರಪಂಚದಾದ್ಯಂತ ವ್ಯಾಪಿಸಿದೆ. ಲಕ್ಷಾಂತರ ಜನರು ಪ್ರವಾದಿಯವರನ್ನು ﷺ ತಲುಪುವ ಪರಂಪರೆಯ ಕುರಿತು ಸ್ಪಷ್ಟವಾದ ಆಧಾರಗಳೊಂದಿಗೆ ಇವತ್ತಿಗೂ ಜೀವಿಸುತ್ತಿದ್ದಾರೆ. ಇಷ್ಟೊಂದು ಸ್ಪಷ್ಟವಾದ ಕುಟುಂಬ ಪರಂಪರೆಯನ್ನು, ಇತಿಹಾಸವನ್ನು ತೋರಿಸಲು ಬೇರಾರಿಗೂ ಸಾಧ್ಯವಿಲ್ಲ. 

     ಪ್ರವಾದಿಯವರ ﷺ, ಖದೀಜರ (ರ) ಸಂಸಾರದಲ್ಲಿ ಹೊಸ ಅಥಿತಿಯೊಬ್ಬರ ಆಗಮನವಾಯಿತು...

(ಮುಂದುವರಿಯುವುದು...)

No comments: