Abu Hisham Saquafi

Official Website Of Hafiz Ilyas Saquafi Padaladka

Sunday, July 31, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -46 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು 

     ಪ್ರವಾದಿಯವರು ﷺ ಖದೀಜರನ್ನು (ರ) ಕರೆದರು. ಪ್ರಿಯೆ ನನ್ನನ್ನು ಒಮ್ಮೆ ತಂಪು ಗೊಳಿಸಿರಿ, ತುಂಬಾ ಬಿಸಿಯಿದೆ. ಜ್ವರ ಬಂದ ಹಾಗೆ ಅನಿಸುತ್ತದೆ. ಬೀವಿಯವರು ಸ್ನಾನ ಮಾಡಲು ಒಳ್ಳೆಯ ತಣ್ಣಗಿನ ನೀರನ್ನು ತಯಾರು ಮಾಡಿ ಕೊಟ್ಟರು. ಪ್ರವಾದಿಯವರು ﷺ ಸ್ನಾನ ಮುಗಿಸಿ, ವಿಶ್ರಾಂತಿ ಪಡೆಯಲು ಮುಂದಾದರು. ಮಲಗಿದ ಸ್ವಲ್ಪ ಸಮಯದ ನಂತರ ಜಿಬ್'ರೀಲ್ (ಅ) ಆಗಮಿಸಿದರು. ಪ್ರವಾದಿಯವರ ﷺ ತಲೆಯ ಬಳಿ ಬಂದು ಓ ಹೊದ್ದುಕೊಂಡು ನಿದ್ರಿಸುವ ಪ್ರಭುವೆ ಎದ್ದೇಳಿ. (ಜನರನ್ನು) ಎಚ್ಚರಿಕೆ ನೀಡಿರಿ, ತಮ್ಮ ಒಡೆಯನ ಹಿರಿಮೆಯನ್ನು ಪ್ರಕೀರ್ತಿಸಿರಿ, ತಮ್ಮ ವಸ್ತುಗಳನ್ನು ಶುಚಿಗೊಳಿಸಿರಿ, ಪಾಪಗಳಿಂದ ದೂರ ಸರಿಯಿರಿ, ಲಾಭಕ್ಕಾಗಿ ಉಪಕಾರವನ್ನು ಮಾಡಬೇಡಿರಿ, ಸೃಷ್ಟಿಕರ್ತನ ತೃಪ್ತಿಗಾಗಿ ತಾಳ್ಮೆಯಿಂದ ವರ್ತಿಸಿರಿ, ಆದರೆ ಕಹಳೆ ಮೊಳಗಿಸಿದರೆ, ಅದೊಂದು ಬಹಳ ಪ್ರಯಾಸ ದಾಯಕವಾದ ದಿನವಾಗಿರುತ್ತದೆ. ಎನ್ನುವ ಪವಿತ್ರ ಕುರ್'ಆನಿನ ಎಪ್ಪತ್'ನಾಲ್ಕನೇ ಅಧ್ಯಾಯ 'ಅಲ್ ಮುದ್ದಸಿರ್' ಓದಿ ತಿಳಿಸಿದರು. 

       ಹಿರಾ ಗುಹೆಯಲ್ಲಿ ಜಿಬ್'ರೀಲರೊಂದಿಗೆ (ಅ) ನಡೆದ ಘಟನೆಯನ್ನು ಇಮಾಮ್ ಝೈನಿ ದಹ್'ಲಾನಿಯವರು (ರ) ಈ ರೀತಿ ವಿವರಿಸುತ್ತಾರೆ. ದ್ರವಿಸುವ ಸುವಾಸನೆಯೊಂದಿಗೆ ಸುಂದರ ರೂಪದಲ್ಲಿ ಜಿಬ್'ರೀಲ್ (ಅ) ಪ್ರವಾದಿಯವರಿಗೆ ﷺ ಕಾಣಿಸಿಕೊಂಡರು. ನಂತರ ಓ ಮುಹಮ್ಮದರೇ ﷺ ಅಲ್ಲಾಹನು ನಿಮಗೆ ಶುಭಾಶಯ ನೀಡಿರುವನು, ನೀವು ಮನುಷ್ಯ, ಭೂತ ಸಮೂಹಕ್ಕಿರುವ ಸಂದೇಶ ವಾಹಕರಾಗಿರುತ್ತೀರಿ. "ಅಲ್ಲಾಹು ಅಲ್ಲದೆ ಇನ್ಯಾರು ಆರಾಧನೆಗೆ ಅರ್ಹರಲ್ಲ, ಮುಹಮ್ಮದ್ ﷺ ಅಲ್ಲಾಹನ ದೂತನಾಗಿರುವರು." (ಸಂದೇಶ ವಾಹಕ) ಈ ಆದರ್ಶಗಳಿಗೆ ಅವರನ್ನು ಆಹ್ವಾನಿಸಿರಿ. ಎಂದು ಹೇಳಿ ತಮ್ಮ ಕಾಲಿನಿಂದ ಭೂಮಿಯ ಮೇಲೆ ಒಮ್ಮೆ ಬಡಿದರು. ತಕ್ಷಣವೇ ಒಂದು ಚಿಲುಮೆ ಚಿಮ್ಮಿತು, ಅದರಿಂದ ಜಿಬ್'ರೀಲ್ (ಅ) ಅಂಗಸ್ನಾನ (ಉಳೂಹ್) ಮಾಡಿದರು. ಅದನ್ನು ನೋಡುತ್ತಾ ನಿಂತ್ತಿದ್ದ ಪ್ರವಾದಿಯವರಲ್ಲಿ ﷺ ಅದೇ ರೀತಿ ಮಾಡಲು ಹೇಳಿದರು. ನಮಾಝ್ ಮಾಡಲು, ಅಂಗಸ್ನಾನ ಮಾಡಲು ಕಲಿಸಿ ಕೊಡುವುದಾಗಿತ್ತು ಅದು. ನಂತರ ಜಿಬ್'ರೀಲ್ (ಅ) ಕಅಬಾಲದ ಕಡೆಗೆ ಮುಖ ಮಾಡಿ ನಿಂತರು. ಜೊತೆಯಲ್ಲಿ ನಿಂತು, ಆರಾಧನೆಗಳನ್ನು ಮಾಡುವ ರೀತಿಯಲ್ಲೇ ಹಿಂಬಾಲಿಸಲು ಪ್ರವಾದಿಯವರಿಗೆ ﷺ ಹೇಳಿದರು. ಜಿಬ್'ರೀಲ್ ನಮಾಝ್ ಮಾಡಿದ ರೀತಿಯಲ್ಲೇ ಪ್ರವಾದಿಯವರು ﷺ ಕೂಡ ನಮಾಝ್ ಮಾಡಿದರು. ನಮಾಝ್ ಮುಗಿದ ನಂತರ ಮಲಕ್ ಜಿಬ್'ರೀಲ್ (ಅ) ಆಕಾಶಕ್ಕೆ ಹಾರಿ ಹೋದರು. ಪ್ರವಾದಿಯವರು ﷺ ಅಲ್ಲಿಂದ ಎದ್ದು ಮನೆಗೆ ಹಿಂತಿರುಗಿದರು. ದಾರಿಯುದ್ದಕ್ಕೂ ಕಲ್ಲುಗಳು, ಸಸ್ಯಗಳು ಕೂಡ ಸಲಾಂ ಹೇಳುತ್ತಿದ್ದವು. ಪ್ರವಾದಿಯವರು ﷺನೇರವಾಗಿ ಖದೀಜರ ಬಳಿ ಬಂದು ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದರು. ವಿಷಯ ತಿಳಿದ ಖದೀಜರಿಗೂ ﷺ ಬಹಳಷ್ಟು ಸಂತೋಷವಾಯಿತು. ಪ್ರವಾದಿಯವರು ﷺ ಪತ್ನಿಯ ಜೊತೆಯಲ್ಲಿ ಝಮ್ ಝಮ್ ಬಾವಿಯ ಕಡೆಗೆ ತೆರಳಿದರು. ಅಂಗಸ್ನಾನ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಅದೇ ರೀತಿ ಬೀವಿಯು ಕೂಡ ಮಾಡಿದರು. ನಂತರ ಪ್ರವಾದಿಯವರು ﷺ ನಮಾಝ್ ಮಾಡಿದ ರೀತಿಯಲ್ಲೇ ಖದೀಜರು (ರ) ಕೂಡ ನಮಾಝ್ ಮಾಡಿದರು. ಹೀಗೆ ಖದೀಜ (ರ) ಬೀವಿಯವರು ಒಂದನೇ ವಿಶ್ವಾಸಿಯಾಗಿ, ಪ್ರಥಮವಾಗಿ ಉಳೂಹ್, ನಮಾಝ್ ಮಾಡಿದ ವ್ಯಕ್ತಿಯ ಸಾಲಿಗೆ ಸೇರಿದರು. ಪ್ರವಾದಿಯವರ ﷺ ಧರ್ಮಪತ್ನಿಯವರಿಗೆ ಒಂದೂವರೆ ದಶಕಗಳ ಕಾಲದ ಕುಟುಂಬ ಜೀವನವು ಎಲ್ಲವನ್ನು ಅರ್ಥ ಮಾಡಿಕೊಳ್ಳಲು ಪುರಾವೆಯಾಗಿತ್ತು. 

      ಇಷ್ಟೆಲ್ಲ ಘಟನೆ ನಡೆದ ನಂತರ ಹೊರಗೆ ಬಹಳಷ್ಟು ಚರ್ಚೆ ನಡೆಯತೊಡಗಿತು. ಪ್ರವಾದಿತ್ವದ ನಿಯೋಗದ ವಿಷಯವು ಬಹಳಷ್ಟು ಕಡೆಗಳಲ್ಲಿ ಚರ್ಚಾ ವಿಷಯವಾಯಿತು. ಪ್ರವಾದಿ ಮುಹಮ್ಮದರಿಂದ ﷺ ಆದ ಬದಲಾವಣೆಗಳನ್ನು ಮಕ್ಕಾ ನಿವಾಸಿಗಳು ಗಮನಿಸ ತೊಡಗಿದರು. ಯುಗ ಪುರುಷನಿಗಾಗಿ ಕಾಯುತ್ತಿದ್ದವರು ಸಮಯ ನಿರ್ಧರಿಸಿ ಮಾಹಿತಿ ಹಂಚ ತೊಡಗಿದರು. ಹಲವು ಕಡೆಗಳಲ್ಲಿ ಮಕ್ಕಾ ನಿವಾಸಿಗಳನ್ನು ಹುಡುಕಿ ವಿಷಯವನ್ನು ತಿಳಿದುಕೊಂಡರು. ವಿದೇಶದಲ್ಲಿದ್ದವರು ಮಕ್ಕಾ ಪಟ್ಟಣಕ್ಕೆ ಮರಳಿ ವಿಷಯವನ್ನು ಖಚಿತ ಪಡಿಸಿಕೊಂಡರು. ಕೆಲವರು ದೂತರನ್ನು ಕಳುಹಿಸಿ ವಿವರಗಳನ್ನು ಪಡೆದುಕೊಂಡರು. 

      ಮಾರುಕಟ್ಟೆಯಲ್ಲೂ, ಹುಲ್ಲುಗಾವಲಿನಲ್ಲಿ ಚರ್ಚೆಗಳು ಹುಟ್ಟಿಕೊಂಡವು. ಮನುಷ್ಯರು ಮಾತ್ರವಲ್ಲದೆ ಭೂತ ವರ್ಗವೂ, ಜಾನುವಾರುಗಳೂ ಕೂಡ ಸಂದೇಶ ತಲುಪಿಸ ತೊಡಗಿದವು. ಪ್ರಪಂಚಕ್ಕೆ ಕರುಣೆ ತೋರುವ ಒಬ್ಬ ಮಹಾತ್ಮರಿಗಾಗಿ ಎಲ್ಲಾ ಜೀವಿಗಳು ಕಾಯುತ್ತಿರುವಂತೆ. ನ್ಯಾಯ, ನೀತಿ ಇಲ್ಲದ ಎಲ್ಲಾ ಕ್ಷೇತ್ರಗಳಲ್ಲೂ ಒಬ್ಬ ನ್ಯಾಯ ದೂತನಿಗಾಗಿ ಕಾಯುತ್ತಿರುವ ಹಾಗೆ. ಗುಲಾಮರ ಮಾರುಕಟ್ಟೆಯಲ್ಲಿ ಮಾರಲ್ಪಡುವ ಮನುಷ್ಯರೂ, ಶಕ್ತಿಗಿಂತ ಮೀರಿ ಬಾರ ಹೊರೆಸಲ್ಪಡುವ ಪ್ರಾಣಿಗಳೂ ಕೂಡ ತಮ್ಮ ಹಕ್ಕುಗಳಿಗಾಗಿ ಹಾತೊರೆಯುತಿದ್ದವು. ಕೆಲವು ದಿನಗಳಿಂದ ಅವುಗಗಳಿಗೆ ಏನೋ ಒಂದು ಆಶ್ವಾಸನೆ ಮೂಡಿತ್ತು. ಅವುಗಳಿಗೆ ಮೋಚನೆ ನೀಡಲು ಯಾರೋ ಒಬ್ಬ ಮಹಾನ್ ವ್ಯಕ್ತಿಯ ಉದಾಯವಾಗಿದೆ ಎಂದು. 

      ಕಾಲವು ಕಾಯುತ್ತಿದ್ದ ಪ್ರವಾದಿಯವರ ﷺ ನಿಯೋಗದ ಭವ್ಯ ಮುಹೂರ್ತವನ್ನು ಪ್ರಪಂಚದ ವಿವಿಧ  ಭಾಗಗಳಲ್ಲಿ ನಡೆದ ಘಟನೆಗಳ ಮೂಲಕ ತಿಳಿಯೋಣ... 

(ಮುಂದುವರಿಯುವುದು...)

No comments: