ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಆರಂಭಿಕ ಹಂತದಲ್ಲಿ ಇಸ್ಲಾಮ್ ಸ್ವೀಕರಿಸಿದ ಎಪ್ಪತ್ಮೂರು ಜನರ ಹೆಸರನ್ನು ತಿಳಿದುಕೊಂಡೆವು. ನಮಗೆ ಲಭಿಸಿದ ಉಲ್ಲೇಖಗಳ ಆಧಾರದ ಮೇಲೆ ಒಂದು ಪಟ್ಟಿಯನ್ನು ತಯಾರಿಸಿದೆವು ಎಂದು ಮಾತ್ರ. ಆದರೆ ಇದು ಇಸ್ಲಾಮ್ ಸ್ವೀಕರಿಸಿದ ಸರಿಯಾದ ಕ್ರಮದಲ್ಲಿ ತಯಾರಿಸಿದ ಪಟ್ಟಿಯಲ್ಲ, ಆ ಕಾರಣದಿಂದಲೇ ಕೆಲವು ಪ್ರಸಿದ್ಧ ವ್ಯಕ್ತಿಗಳ ಹೆಸರು ಈ ಪಟ್ಟಿಯಲ್ಲಿ ಕಾಣಲು ಸಾಧ್ಯವಾಗಿಲ್ಲ. ಉಮರ್, ಹಂಝ (ರ) ಹಾಗೂ ಪ್ರವಾದಿಯವರ ﷺ ಮಕ್ಕಳು ಹೀಗೆ ಬಹಳಷ್ಟು ಜನರು ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದವರಾಗಿದ್ದರು.
ಪ್ರಸಿದ್ಧರಾದ ಕೆಲವರು ಇಸ್ಲಾಮ್ ಸ್ವೀಕರಿಸಿದ ಆ ಸುಂದರ ಕ್ಷಣಗಳು ಬಹಳ ರೋಮಾಂಚನಕಾರಿಯಾಗಿದೆ. ಅವುಗಳ ಕುರಿತು ಸ್ವಲ್ಪ ತಿಳಿಯೋಣ.
ಪ್ರವಾದಿಯವರನ್ನು ﷺ ಮೊಟ್ಟ ಮೊದಲು ಅಂಗೀಕರಿಸಿದ್ದು ಖದೀಜ (ರ) ಬೀವಿಯಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೂ ಮುಂಚೆ ಯಾವುದೇ ಪುರುಷನಾಗಲಿ, ಸ್ತ್ರೀಯಾಗಲಿ ಮುಹಮ್ಮದ್ ﷺ ಪ್ರವಾದಿಯವರ ಅನುಯಾಯಿ ಆಗಿರಲಿಲ್ಲ. ಈ ವಿಷಯದಲ್ಲಿ ಯಾರಿಗೂ ಯಾವುದೇ ಅಭಿಪ್ರಾಯ ವ್ಯತ್ಯಾಸವಿಲ್ಲವೆಂದು ಇಮಾಮ್ ಇಬ್'ನುಲ್ ಅಸೀರ್'ರವರು (ರ) ಉಲ್ಲೇಖಿಸಿದ್ದು ಕಾಣಬಹುದು. ಈ ಅಂಗೀಕಾರವು ಪತ್ನಿಯಾದ ಕಾರಣ ತಮ್ಮ ಪತಿಯನ್ನು ಕುರುಡಾಗಿ ಒಪ್ಪಿಕೊಂಡರು ಎನ್ನುವ ಅರ್ಥದಲ್ಲಿ ಆಗಿರಲಿಲ್ಲ, ಬದಲಾಗಿ ಪ್ರವಾದಿಯವರ ﷺ ಜೀವನವನ್ನು ಸಂಪೂರ್ಣವಾಗಿ ತಿಳಿದ ನಂತರವೇ ಆಗಿತ್ತು ಅವರೂ ಕೂಡ ವಿಶ್ವಾಸವಿರಿಸಿದ್ದು. ಪ್ರವಾದಿಯವರನ್ನು ﷺ ಸಮಾಧಾನ ಪಡಿಸುತ್ತಿದ್ದದ್ದು ಸಾಮಾನ್ಯವಾಗಿ ಒಬ್ಬರು ಸಂಗಾತಿಯನ್ನು ಸಮಾಧಾನ ಪಡಿಸುವ ರೀತಿಯಲ್ಲಿ ಆಗಿರಲಿಲ್ಲ. ಬದಲಾಗಿ ಪ್ರವಾದಿಯವರ ﷺ ಜೀವನದಲಿದ್ದ ಮಹತ್ವಗಳನ್ನು ಹೇಳುವ ಮೂಲಕವಾಗಿತ್ತು. ಸ್ವಂತ ಪತಿಯಾದರೂ ಹೇಳುತ್ತಿದ್ದ ಮಾತುಗಳನ್ನು ಖಚಿತ ಪಡಿಸಲು ಅಗತ್ಯವಾದ ವಿಚಾರಣೆಗಳನ್ನು ನಡೆಸುತ್ತಿದ್ದರು. ಅದರ ಭಾಗವಾಗಿತ್ತು ವೇದ ಪಂಡಿತ ವರಕತ್'ರನ್ನು ಹಾಗೂ ವೇದದ ಬಗ್ಗೆ ಅರಿವಿದ್ದ ಅದ್ದಾಸನ್ನು ಭೇಟಿಯಾದದ್ದು ಕೂಡ.
ಪ್ರೀತಿಯ ಪತಿಯವರನ್ನು ಭೇಟಿಯಾಗಿ, ಮಾಹಿತಿಯನ್ನು ನೀಡುವುದು ನಿಜವಾಗಿಯೂ ಜಿಬ್'ರೀಲರೇ ಆಗಿದ್ದಾರೆಯೇ.? ಎಂದು ತಿಳಿಯಲು ಸ್ವತಃ ಅವರೇ ಒಂದು ಅವಲೋಕನೆ ನಡೆಸಿದರು. ಪ್ರವಾದಿತ್ವದ ಆರಂಭಿಕ ಸಮಯದ ಸಂಭಾಷಣೆ ನಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ಪ್ರೀತಿಯ ಪತಿಯೊಂದಿಗೆ ಖದೀಜ (ರ) ಬಂದು ಮುಂದಿನ ಬಾರಿ ತಮಗೆ ದಿವ್ಯ ಸಂದೇಶ ನೀಡುವ ನಿಮ್ಮ ಆ ಸನ್ಮಿತ್ರನ ಆಗಮನವಾದರೆ ನನ್ನ ಬಳಿ ಒಮ್ಮೆ ತಿಳಿಸಲು ಸಾಧ್ಯವೇ.? ಎಂದು ಕೇಳಿದಾಗ ಪ್ರವಾದಿಯವರು ﷺ ಅದಕ್ಕೆ ಸಮ್ಮತಿಸಿದರು. ಸ್ವಲ್ಪ ಸಮಯದ ನಂತರ ಜಿಬ್'ರೀಲ್'ರ (ಅ) ಆಗಮನವಾದಾಗ ತಕ್ಷಣವೇ ಖದೀಜರನ್ನು (ರ) ಕರೆದರು. ಖದೀಜ (ರ) ಪ್ರವಾದಿಯವರಲ್ಲಿ ﷺ ನೀವು ಎದ್ದು ಒಮ್ಮೆ ನನ್ನ ಬಲ ಕಾಲಿನ ಮೇಲಿನ ಮೇಲೆ ಕುಳಿತು ಕೊಳ್ಳುತ್ತೀರ.? ಎಂದು ಕೇಳಿದಾಗ ಪ್ರವಾದಿಯವರು ﷺ ಅದೇ ರೀತಿ ಮಾಡಿದರು. ಈಗ ಅವರು ಇಲ್ಲೇ ಇದ್ದಾರಾ.? ಎಂದು ಖದೀಜ (ರ) ಕೇಳಿದಾಗ. ಹೌದು ಇದ್ದಾರೆ ಎಂದು ಪ್ರವಾದಿಯವರು ﷺ ಉತ್ತರಿಸಿದರು. ಈಗ ಎಡ ಕಾಲಿನ ಮೇಲೆ ಕುಳಿತು ಕೊಳ್ಳುವಿರ.? ಎಂದು ಕೇಳಿದಾಗ, ಪ್ರವಾದಿಯವರು ﷺ ಅದೇ ರೀತಿ ಮಾಡಿದರು. ಈಗ ಅವರು ಇಲ್ಲೇ ಇದ್ದಾರಾ.? ಎಂದು ಕೇಳಿದಾಗ, ಹೌದು ಇದ್ದಾರೆ ಎಂದು ಉತ್ತರಿಸಿದರು. ಸರಿ ಆಗಿದ್ದರೆ ಈಗ ನನ್ನ ಮಡಿಲಿನಲ್ಲಿ ಕುಳಿತು ಕೊಳ್ಳುತ್ತೀರ.? ಎಂದು ಕೇಳಿದಾಗ, ಪ್ರವಾದಿಯವರು ﷺ ಅದೇ ರೀತಿ ಮಾಡಿದರು. ಈಗಲೂ ಅಲ್ಲೇ ಇದ್ದಾರಾ.? ಎನ್ನುವ ಪ್ರಶ್ನೆಗೆ ಅದೇ ಉತ್ತರವಾಗಿತ್ತು. ಆಗ ಖದೀಜರು (ರ) ಮೆಲ್ಲ ತಮ್ಮ ತಲೆಯ ಮೇಲೆ ಧರಿಸಿದ್ದ ಶಾಲನ್ನು ಸ್ವಲ್ಪ ಕೆಳಗೆ ಸರಿಸಿ ಈಗ ಅವರು ಅಲ್ಲೇ ಇದ್ದಾರಾ.? ಎಂದು ಕೇಳಿದರು. ಅದಕ್ಕೆ ಪ್ರವಾದಿಯವರು ﷺ ಇಲ್ಲ ಅವರು ಮಾಯವಾದರು ಎಂದು ಹೇಳಿದರು.
ಅದಕ್ಕೆ ಖದೀಜ (ರ) ನೀವು ಯಾವುದೇ ಭಯವಿಲ್ಲದೆ, ಸಂತೋಷದಿಂದ ಮುಂದೆ ಸಾಗಿರಿ. ನಿಮ್ಮನ್ನು ಭೇಟಿಯಾಗುವುದು ನಿಜವಾಗಿಯೂ ಅಲ್ಲಾಹನ ಮಲಕ್ಕೇ (ದೇವ ದೂತ) ಆಗಿದ್ದಾರೆ ಎಂದು, ನನಗೆ ಸಂಪೂರ್ಣವಾಗಿ ಅರ್ಥವಾಯಿತು ಎಂದು ಹೇಳಿದರು.
ಈ ಘಟನೆಯನ್ನು ಇಮಾಮ್ ಹಲಬಿ ಈ ರೀತಿ ವಿವರಿಸುತ್ತಾರೆ. "ಪ್ರವಾದಿತ್ವದ ಘೋಷಣೆಯ ತಕ್ಷಣವೇ ನಡೆದ ಘಟನೆಯಾಗಿತ್ತು ಅದು. ಪ್ರವಾದಿಯವರಿಗೆ ﷺ ಲಭಿಸುತ್ತಿದ್ದ ಸಂದೇಶಗಳು ಯಾರಿಂದಾಗಿದೆ ಲಭಿಸುತ್ತಿರುವುದು ಎಂದು ಅರ್ಥ ಮಾಡಿಕೊಳ್ಳಲು ಬೀವಿಯವರು ಮಾಡಿದ ತಂತ್ರವಾಗಿತ್ತು". ಬುದ್ದಿವಂತರು ಯಾವತ್ತೂ ಹಾಗೆ ಅಲ್ಲವೇ. ಸಾಕ್ಷಿ ಸಮೇತವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುದಾದರೆ ಆ ದಾರಿಯನ್ನೇ ಆಯ್ಕೆ ಮಾಡುವರು. ಅದರರ್ಥ ಪ್ರವಾದಿಯವರ ﷺ ಮಾತಿನಲ್ಲಿ ಖದೀಜರಿಗೆ (ರ) ವಿಶ್ವಾಸ ಇರಲಿಲ್ಲ ಎಂದು ಅಲ್ಲ, ಬದಲಾಗಿ ಸ್ವತಃ ಖುದ್ದಾಗಿ ಅರ್ಥ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಇತರರಿಗೆ ಸಂಶಯ ಪಡಲು ಯಾವುದೇ ಕಾರಣ ಸಿಗುವುದಿಲ್ಲ ಎನ್ನುವ ಉದ್ದೇಶದಿಂದಾಗಿತ್ತು.
ತನ್ನಲ್ಲಿರುವ ಎಲ್ಲಾ ಸರ್ವಸ್ವವನ್ನೂ ಪ್ರವಾದಿಯವರಿಗೆ ﷺ ನೀಡಲು ಭಾಗ್ಯ ಲಭಿಸಿದ ಯುವತಿಯಾಗಿದ್ದರಲ್ಲವೇ ಖದೀಜ ﷺ ಬೀವಿಯವರು. ಇಸ್ಲಾಮ್ ಸ್ವೀಕರಿಸಲು, ಮೊದಲ ಬಾರಿ ನಮಾಝ್ ಮಾಡಲು ಎಲ್ಲದಕ್ಕೂ ಭಾಗ್ಯ ಲಭಿಸಿದ್ದು ಕೂಡ ಖದೀಜ (ರ) ಬೀವಿಯವರಿಗೆ ಮಾತ್ರವಾಗಿತ್ತು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment