ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಸಲಾಂ ಹೇಳಿ, ಸತ್ಯ ವಿಶ್ವಾಸದ ವಚನವನ್ನು ಹೇಳಿದರು. "ಅಶ್'ಹದು ಅನ್ ಲಾಇಲಾಹ ಇಲ್ಲಲ್ಲಾಹ್... ವ ಅಶ್'ಹದು ಅನ್ನ ಮುಹಮ್ಮದರ್'ರಸೂಲುಲ್ಲಾಹ್ ﷺ..." ಇದನ್ನು ಕೇಳಿದ ತಕ್ಷಣವೇ ಪ್ರವಾದಿಯವರ ﷺ ಮುಖವು ಮಂದಹಾಸ ಭೀರಿತು. 'ಅಸ್ಸಲಾಂ ಅಲೈಕುಂ' ಎನ್ನುವ ಶುಭಾಶಯದ ವಾಕ್ಯವನ್ನು ಹೇಳಿದ ಮೊದಲ ವ್ಯಕ್ತಿ ನಾನಾಗಿದ್ದೆನು. ಅದಕ್ಕೆ ಪ್ರವಾದಿಯವರು ﷺ 'ವಅಲೈಕುಂ ಸಲಾಂ' ಎಂದು ಹೇಳಿ, ಎಲ್ಲಿಂದ ಬರುತಿದ್ದೀರಿ.? ಎಂದು ಕೇಳಿದರು. ಗಿಫಾರ್ ಜನಾಂಗದ ವ್ಯಕ್ತಿಯಾಗಿರುವೆನು ಎಂದು ಹೇಳಿದಾಗ. ಪ್ರವಾದಿಯವರು ﷺ ಕೈಯಿಂದ ಸನ್ನೆ ಮಾಡುತ್ತಾ, ಬೆರಳನ್ನು ಹಣೆಯ ಮೇಲೆ ಇಟ್ಟರು. ನಾನು ಗಿಫಾರ್ ಬುಡಕಟ್ಟು ಜನಾಂಗಕ್ಕೆ ಸೇರಿದ್ದ ವ್ಯಕ್ತಿಯಾದ ಕಾರಣ ಬಹುಶಃ ಅವರಿಗೆ ಇಷ್ಟವಾಗಲಿಲ್ಲ ಕಾಣಬೇಕು.? ಅಂದುಕೊಂಡು ಪ್ರವಾದಿಯವರ ﷺ ಕೈ ಹಿಡಿಯಲು ಹೋದಾಗ, ಅವರ ಜೊತೆಯಲ್ಲಿದ್ದ ವ್ಯಕ್ತಿ ನನ್ನನ್ನು ತಡೆದರು. ನನಗಿಂತ ಚೆನ್ನಾಗಿ ಪ್ರವಾದಿಯವರ ﷺ ಕುರಿತು ತಿಳಿದಿದ್ದ ವ್ಯಕ್ತಿ ಅವರೇ ಅಲ್ಲವೆ.! ತಕ್ಷಣವೇ ಅವರು ತಲೆ ಎತ್ತಿ, ಎಷ್ಟು ದಿನ ಆಯಿತು ಇಲ್ಲಿಗೆ ಬಂದು, ಎಂದು ಕೇಳಿದರು.? ಮೂವತ್ತು ದಿನವಾಯಿತು ಅಂದಾಗ, ಆಹಾರ ಪಾನೀಯ ಎಲ್ಲಿಂದ ಸಿಕ್ಕಿತು.? ಎಂದು ಕೇಳಿದರು. ಝಮ್ ಝಮ್ ನೀರಲ್ಲದೆ ಇನ್ನೇನು ಸಿಗಲಿಲ್ಲ, ಆದರೂ ಸ್ವಲ್ಪವೂ ಕೂಡ ಹಸಿವು ಆಗಲೇ ಇಲ್ಲ ಎಂದು ಹೇಳಿದೆನು. ಅದಕ್ಕೆ ಪ್ರವಾದಿಯವರು ಝಮ್ ಝಮ್ ಅನುಗ್ರಹಿತ ನೀರಾಗಿದೆ, ಅದು ಆಹಾರಕ್ಕೆ ಆಹಾರವೂ ಆಗುತ್ತದೆ, ಔಷಧಿಗೆ ಔಷಧಿಯೂ ಆಗುತ್ತದೆ ಎಂದು ಹೇಳಿದರು.
ಇಬ್'ನು ಅಬ್ಬಾಸ್'ರವರ (ರ) ಒಂದು ಉಲ್ಲೇಖದಲ್ಲಿ ಅಬೂದರ್ರ್ (ರ) ಹೇಳುವ ಮಾತುಗಳು ಈ ರೀತಿಯಾಗಿದೆ. ನಾನು ಮಕ್ಕಾ ಪಟ್ಟಣಕ್ಕೆ ತಲುಪಿದೆನು. ನನಗೆ ಪ್ರವಾದಿಯವರ ﷺ ಪರಿಚಯವೂ ಇರಲಿಲ್ಲ, ಯಾರಲ್ಲೂ ಕೇಳುವ ಧೈರ್ಯವೂ ಇರಲಿಲ್ಲ. ನಾನು ನೇರವಾಗಿ ಝಮ್ ಝಮ್ ಬಾವಿಯ ಬಳಿ ತೆರಳಿ, ನೀರು ಕುಡಿದು, ಮಸ್ಜಿದಿಗೆ ಹೋಗಿ ಮಲಗಿದೆನು. ಅಷ್ಟೊತ್ತಿಗೆ ಅಲಿಯವರು (ರ) ಬಂದಿದ್ದರು, ಪರ ಊರಿನಿಂದ ಬಂದ ವ್ಯಕ್ತಿಯ ಹಾಗೆ ಕಾಣುತ್ತೀರಿ ಅಲ್ವಾ.? ಎಂದು ಕೇಳಿದಾಗ, ಹೌದು ಎಂದು ಉತ್ತರಿಸಿದೆನು. ಅದಕ್ಕೆ ಅಲಿಯವರು (ರ), ಸರಿ ಹಾಗಾದರೆ ನಡಿರಿ ನಾವು ಮನೆಗೆ ಹೋಗೋಣ, ಎಂದು ಹೇಳಿ ಮನೆಗೆ ಕರೆದುಕೊಂಡು ಹೋದರು. ಅವರು ನನ್ನಲ್ಲಿ ಏನು ಕೇಳದ ಕಾರಣ, ನಾನು ಕೂಡ ಏನೂ ಹೇಳಲಿಲ್ಲ. ಬೆಳಿಗ್ಗೆ ನನ್ನ ವಸ್ತುಗಳನ್ನು ಎತ್ತಿ ಪುನಃ ಮಸ್ಜಿದಿಗೆ ವಾಪಸು ಬಂದು, ಪ್ರವಾದಿಯವರ ﷺ ಬಗ್ಗೆ ಕೆಲವರಲ್ಲಿ ಕೇಳಿದೆನು. ಏನು ಪ್ರಯೋಜನವಾಗಲಿಲ್ಲ, ಹಾಗಾಗಿ ನಾನು ಅಂದೂ ಕೂಡ ಹಾಗೆ ಮಸ್ಜಿದ್'ನಲ್ಲೇ ಮಲಗಿದೆನು. ಅಷ್ಟೊತ್ತಿಗೆ ಪುನಃ ಅಲಿಯವರು (ರ) ಮಸ್ಜಿದ್'ಗೆ ಬಂದು, ಇವತ್ತೂ ಕೂಡ ನಿಮಗೆ ಉಳಿದುಕೊಳ್ಳಲು ಸ್ಥಳ ಸಿಗಲಿಲ್ವಾ.? ಎಂದು ಕೇಳಿದಾಗ, ನಾನು ಇಲ್ಲ ಎಂದು ಉತ್ತರಿಸಿದೆನು. ಸರಿ ಹಾಗಾದರೆ ನನ್ನ ಜೊತೆಯಲ್ಲಿ ಬನ್ನಿ, ಎಂದು ಹೇಳಿ ಅವರು ಜೊತೆಯಲ್ಲಿ ಕರೆದುಕೊಂಡು ಹೋದರು. ಅವತ್ತು ಕೂಡ ಏನೂ ಕೇಳಿರಲಿಲ್ಲ. ಮರು ದಿನವು ಕೂಡ ಅದೇ ರೀತಿ ಪುನರಾವರ್ತನೆಯಾಗಿತ್ತು. ಅಂದು ಅಲಿಯವರು (ರ) ನೀವು ಈ ಊರಿಗೆ ಬಂದ ಉದ್ದೇಶ ಏನೆಂದು ಹೇಳಿಲ್ವಾ.? ಅಲ್ವಾ ಎಂದು ಕೇಳಿದಾಗ, ನೀವು ಅದನ್ನು ಗುಟ್ಟಾಗಿ ಇಡುವುದಾದರೆ ನಾನು ಹೇಳುತ್ತೇನೆ ಎಂದು ಹೇಳಿದೆನು. ಇನ್ನೊಂದು ಉಲ್ಲೇಖದ ಪ್ರಕಾರ ನೀವು ನನಗೆ ಮಾರ್ಗದರ್ಶನ ನೀಡುವುದಾದರೆ ನಾನು ಹೇಳುತ್ತೇನೆ ಎಂದು ಹೇಳಿದರು. ಅಲಿಯವರು (ರ) ಅದಕ್ಕೆ ಸಮ್ಮತಿಸಿದರು. ನಾನು ಎಲ್ಲಾ ವಿಷಯವನ್ನು ವಿವರಿಸಿದಾಗ, ನಿಮಗೆ ಮಾರ್ಗದರ್ಶನ ಖಂಡಿತ ಲಭಿಸುತ್ತದೆ. ನೀವು ಹುಡುಕಿ ಬಂದ ವ್ಯಕ್ತಿ ಅಲ್ಲಾಹನ ಸಂದೇಶ ವಾಹಕರಾಗಿರುತ್ತಾರೆ. ಬೆಳಿಗ್ಗೆ ನನ್ನ ಜೊತೆಯಲ್ಲಿ ಬನ್ನಿ, ದಾರಿಯಲ್ಲಿ ಏನಾದರೂ ಅಪಾಯ ಬಂದರೆ.? ನಾನು ನೀರು ತರಲು ಬಂದವರ ಹಾಗೆ ಪಕ್ಕಕ್ಕೆ ಸರಿದು ಹೋಗುತ್ತೇನೆ, ಆದರೆ ನೀವು ಮಾತ್ರ ಮುಂದೆ ಹೋಗುತ್ತಲೇ ಇರಬೇಕು. ಅಥವಾ ಚಪ್ಪಲು ಸರಿ ಮಾಡಲು ನಿಂತವರ ಹಾಗೆ ದಾರಿಯ ಪಕ್ಕಕ್ಕೆ ಸರಿದು, ಸ್ವಲ್ಪ ಕಳೆದು ನಾನು ಮುಂದೆ ಹೋದಾಗ ನನ್ನನ್ನು ಹಿಂಬಾಲಿಸುತ್ತಾ, ನಾನು ಹೋದ ದಾರಿಯಲ್ಲೇ ಬರಬೇಕು ಎಂದು ಹೇಳಿದರು.
ನಾವು ಬೆಳಿಗ್ಗೆ ನಡೆದು ಪ್ರವಾದಿಯವರ ﷺ ಬಳಿ ತಲುಪಿದೆವು. ನಾನು ಪ್ರವಾದಿಯವರಲ್ಲಿ ﷺ ಇಸ್ಲಾಮಿನ ಕುರಿತು ಹೇಳಿ ಕೊಡುವಿರ.? ಎಂದು ಕೇಳಿದಾಗ, ಪ್ರವಾದಿಯವರು ﷺ ಹೇಳಿ ಕೊಟ್ಟರು. ನಾನು ಇಸ್ಲಾಂ ಸ್ವೀಕರಿಸಿದೆನು. ನಂತರ ನನ್ನಲ್ಲಿ ನೀವು ಇದನ್ನು ಸದ್ಯಕ್ಕೆ ಗುಟ್ಟಾಗಿ ಇಡಬೇಕು, ಈಗ ಊರಿಗೆ ಹಿಂತಿರುಗಿ ಹೋಗಿ, ಊರಲ್ಲಿಯೂ ಕೂಡ ವಿಷಯವನ್ನು ತಿಳಿಸಿರಿ. ನಾವು ಸಾರ್ವಜನಿಕವಾಗಿ ಘೋಷಣೆ ಮಾಡಿದ ನಂತರ ನೀವು ಇಲ್ಲಿಗೆ ಬಂದರೆ ಸಾಕು ಎಂದು ಹೇಳಿದರು. ನಿಮ್ಮನ್ನು ಸಂದೇಶ ವಾಹಕನಾಗಿ ನಿಯೋಗಸಿದವನ ಮೇಲಾಣೆ.! ನಾನು ಅವರ ಮುಂದೆ ಸಾರ್ವಜನಿಕವಾಗಿಯೇ ಕೂಗಿ ಹೇಳುವೆನು ಎಂದು ಹೇಳಿದೆನು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment