Abu Hisham Saquafi

Official Website Of Hafiz Ilyas Saquafi Padaladka

Saturday, August 20, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -65 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಸಲಾಂ ಹೇಳಿ ಅಲ್ಲಿಂದ ಹಿಂತಿರುಗಿ ಬಂದೆನು. ಕಅಬಾದ ಬಳಿ ತಲುಪಿದಾಗ, ಅಲ್ಲಿ ಬಹಳಷ್ಟು ಖುರೈಶ್ ನಾಯಕರು ಇದ್ದರು. ನಾನು ಅಲ್ಲಿಗೆ ಬಂದು ಉಚ್ಛ ಸ್ವರದಲ್ಲಿ 'ಅಶ್'ಹದು ಅನ್'ಲಾಯಿಲಾಹ ಇಲ್ಲಲ್ಲಾಹ್...' ಎಂದು ಹೇಳಿ, ನಾನು.ಅಲ್ಲಾಹನನ್ನು ಆರಾಧನಾಗ್ಯ ಸ್ವೀಕರಿಸುತ್ತಿದ್ದೇನೆ, ಅಲ್ಲಾಹನಲ್ಲದೆ ಬೇರಾರು ಆರಾಧನೆಗೆ ಅರ್ಹರು ಇಲ್ಲವೆಂದೂ, ಮುಹಮ್ಮದ್'ರು ﷺ ಅಲ್ಲಾಹನ ಸಂದೇಶ ವಾಹಕರಾಗಿರುವರೆಂದೂ ನಾನು ಒಪ್ಪಿಕ್ಕೊಳ್ಳುತ್ತೇನೆ ಎಂದೂ ಉಚ್ಛ ಧ್ವನಿಯಲ್ಲಿ ಹೇಳಿದಾಗ. ತಕ್ಷಣವೇ ಅವರು ಆ 'ಸಾಬಿಯಿ'ಯನ್ನು ಹಿಡಿಯಿರಿ ಎಂದೂ ಹೇಳುತ್ತಾ, ಒಂದು ಗುಂಪೇ ಅಲ್ಲಿಗೆ ಬಂದು ಬಿಟ್ಟಿತು. ನನ್ನನ್ನು ಸಾಯಿಸುವಷ್ಟು ನನ್ನ ಮೇಲೆ ಹಲ್ಲೆ ಮಾಡಿ, ನನ್ನನ್ನು ಕೆಳಗೆ ಹಾಕಿ ಬಿಟ್ಟರು. ತಕ್ಷಣವೇ ಆ ಸ್ಥಳಕ್ಕೆ ಅಬ್ಬಾಸ್'ರವರು (ರ) ಬಂದು ನೀವು ಇವರನ್ನು ತಕ್ಷಣವೇ ಬಿಟ್ಟು ಬಿಡದಿದ್ದರೆ, ಖಂಡಿತ ನೀವು ದೊಡ್ಡ ಅಪಾಯವನ್ನೇ ಎದುರಿಸಬೇಕಾಗುತ್ತದೆ. ಕಾರಣ ಇವರು ಗಿಫಾರಿ ಜನಾಂಗದ ವ್ಯಕ್ತಿಯಾಗಿದ್ದಾರೆ, ಇವರ ಊರಿನ ಮೂಲಕವೇ ನಮ್ಮ ವ್ಯಾಪಾರ ಸಂಘವು ಹಾದು ಹೋಗಬೇಕಾಗಿದೆ. ಎಂದು ಹೇಳಿದಾಗ ನನ್ನನ್ನು ಬಿಟ್ಟು ಬಿಟ್ಟರು. 

    ಮರು ದಿನವೂ ಕೂಡ ನಾನು ಕಅಬಾದ ಬಳಿ ಬಂದು ಉಚ್ಛ ಧ್ವನಿಯಲ್ಲಿ ಹೇಳಿದಾಗ, ಪುನಃ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆಗಲೂ ಅಬ್ಬಾಸ್'ರವರೇ ಬಂದು ನನ್ನ ರಕ್ಷಿಸಿದರು. 
     ಅಂದು ರಾತ್ರಿ ಅಬೂಬಕ್ಕರ್'ರವರು (ರ) ನನಗೆ ಆತಿಥ್ಯ ನೀಡಲು, ಪ್ರವಾದಿಯವರಲ್ಲಿ ﷺ ﷺ ಅನುಮತಿ ಪಡೆದರು. ಹೀಗೆ ಪ್ರವಾದಿಯವರ ﷺ ಜೊತೆಯಲ್ಲಿ ನಾನು ಕೂಡ ಅಬೂಬಕ್ಕರ್'ರವರ (ರ) ಮನೆಗೆ ತಲುಪಿದೆನು. ತ್ವಾಹಿಫಿನ ಒಣ ದ್ರಾಕ್ಷಿ ನೀಡುವ ಮೂಲಕವಾಗಿತ್ತು ನನ್ನನ್ನು ಸ್ವೀಕಾರ ಮಾಡಿದ್ದು. ಮಕ್ಕಾದಲ್ಲಿ ಸೇವಿಸುವ ಮೊದಲ ಆಹಾರವೂ ಕೂಡ ಅದುವೇ ಆಗಿತ್ತು. ನಂತರ ಪ್ರವಾದಿಯವರ ﷺ ಬಳಿ ತೆರಳಿದಾಗ, ಅವರು ಖರ್ಜುರ ತುಂಬಿದ ಊರಿಗೆ ಹೋಗಲು ನನಗೆ ನಿರ್ದೇಶನ ಬಂದಿರುತ್ತದೆ, ಅದು ಬಹುಶಃ ಯಸ್'ರಿಬ್ ಆಗಿರಬಹುದೆಂದು ನನ್ನ ಊಹೆ, ನೀವು ನಿಮ್ಮ ಜನರಿಗೆ ಈ ಸಂದೇಶವನ್ನು ತಲುಪಿಸಿ ಅವರಿಗೊಂದು ಉಪಕಾರ ಮಾಡುವಿರ? ಎಂದು ಕೇಳಿದರು. 

      ನಾನು ಅಲ್ಲಿಂದ ತಕ್ಷಣವೇ ಊರಿಗೆ ಹಿಂತಿರುಗಿ ಬಂದೆನು. ಉನೈಸ್ ನನ್ನ ಬಳಿ ಬಂದು ಏನಾಯಿತು.? ಎಂದು ಕೇಳಿದಾಗ, ನಾನು ಇಸ್ಲಾಮ್ ಸ್ವೀಕರಿಸಿದೆನು, ಪ್ರವಾದಿಯವರು ﷺ ಸತ್ಯ ದೂತರೆ ಆಗಿರುವರು. ನಾನು ಅವರನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದೆನು. ಅದಕ್ಕೆ ಉನೈಸ್ ನೀವು ಸ್ವೀಕರಿಸಿದ ನಂತರ ನನಗೂ ಯಾವುದೇ ಅಭ್ಯಂತರವಿಲ್ಲ, ನಾನು ಕೂಡ ಇಸ್ಲಾಮ್ ಸ್ವೀಕರಿಸುತ್ತೇನೆ ಎಂದು ಹೇಳಿದರು. ಅಷ್ಟೊತ್ತಿಗಾಗಲೇ ನಮ್ಮ ತಾಯಿ ಕೂಡ ಅಲ್ಲಿಗೆ ಬಂದು ಬಿಟ್ಟರು. ಅವರಿಗೂ ಕೂಡ ಎಲ್ಲಾ ವಿಷಯವನ್ನು ತಿಳಿಸಿಕೊಟ್ಟೆವು, ನಂತರ ನಮ್ಮ ತಾಯಿಯೂ ಕೂಡ ಇಸ್ಲಾಮ್ ಸ್ವೀಕರಿಸಿದರು. 

     ಸಂಪೂರ್ಣ ಗಿಫಾರ್ ಜನಾಂಗವನ್ನೇ ಇಸ್ಲಾಮಿಗೆ ಆಹ್ವಾನಿಸಿದೆನು, ಅದರಲ್ಲಿ ಅರ್ಧದಷ್ಟು ಜನರು ತಕ್ಷಣವೇ ಇಸ್ಲಾಮ್ ಸ್ವೀಕರಿಸಿದರೇ, ಇನ್ನೂ ಕೆಲವರು ಪ್ರವಾದಿಯವರು ﷺ ಯಸ್'ರಿಬಿಗೆ ಬರಲಿ, ಆ ನಂತರ ನಾವೂ ಕೂಡ ಇಸ್ಲಾಮ್ ಸ್ವೀಕರಿಸುತ್ತೇವೆ ಎಂದು ಹೇಳಿದರು. ಪ್ರವಾದಿಯವರು ﷺ ಹಿಜ್'ರ ನಡೆಸಿ, ಯಸ್'ರಿಬಿಗೆ ತಲುಪಿದಾಗ ಅವರೆಲ್ಲರೂ ಇಸ್ಲಾಮ್ ಸ್ವೀಕರಿಸಿದರು. ಈ ವಿಷಯವನ್ನು ತಿಳಿದ ಪಕ್ಕದ 'ಅಸ್'ಲಂ' ಜನಾಂಗವೂ ಕೂಡ ಪ್ರವಾದಿಯವರನ್ನು ﷺ ಭೇಟಿಯಾದರು. ಅವರು ಕೂಡ ಪ್ರವಾದಿಯವರಲ್ಲಿ, ಗಿಫಾರ್ ಜನಾಂಗ ಅಂಗೀಕರಿಸಿದ ಹಾಗೆ ನಾವೂ ಕೂಡ ಅಂಗೀಕರಿಸುತ್ತೇವೆ.! ಎಂದು ಹೇಳುತ್ತಾ, ಅವರೂ ಕೂಡ ಇಸ್ಲಾಮ್ ಸ್ವೀಕರಿಸಿದರು. ಇದನ್ನು ಕೇಳಿದ ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷವಾಯಿತು. ಅವರು ಗಿಫಾರ್ ಜನಾಂಗದ ಜನರಿಗೆ ಅಲ್ಲಾಹನು ಗುಫ್'ರಾನ್ (ಪಾಪ ಮೋಚನೆ) ನೀಡಲಿ ಎಂದೂ, ಅಸ್'ಲಂ ಜನಾಂಗಕ್ಕೆ ಅಲ್ಲಾಹನು ಸಲಾಮತ್ (ರಕ್ಷಣೆ) ನೀಡಲಿ ಎಂದು ಪ್ರಾರ್ಥನೆ ಮಾಡಿದರು. (ಜನಾಂಗದ ಹೆಸರು ಎತ್ತಿ ಹಿಡಿದು ಆಗಿತ್ತು ಪ್ರಾರ್ಥನೆ ನಡೆಸಿದ್ದು.)

       ಇಮಾಮ್ ಬುಖಾರಿಯವರು ಉಲ್ಲೇಖಿಸಿದ ಹದೀಸಿನಲ್ಲಿ ಈ ರೀತಿ ಕಾಣಬಹುದು. ಅಬ್ದುಲ್ಲಾಹಿಬಿನ್ ಸ್ವಾಮಿತ್'ರಲ್ಲಿ ಅಬೂದರ್ರ್'ರವರು, (ರ) ನಾನು ಪ್ರವಾದಿಯವರನ್ನು ﷺ ಭೇಟಿಯಾಗುದಕ್ಕೂ ಮುಂಚೆಯೇ ಮೂರು ವರ್ಷದವರೆಗೆ ನಮಾಝ್ ಮಾಡಿದ್ದೆನು ಎಂದು ಹೇಳಿದಾಗ, ನೀವು ಯಾರಿಗಾಗಿ ಆಗಿತ್ತು ನಮಾಝ್ ಮಾಡಿದ್ದು.? ಎಂದು ಅವರು ಪುನಃ ತಿರುಗಿ ಕೇಳಿದ್ದರು. ನಾನು ಅಲ್ಲಾಹನಿಗಾಗಿ, ಅವನು ತಿರುಗಿಸಿದ ಕಡೆಗೆ ಮುಖ ಮಾಡಿ ನಿಂತು, ರಾತ್ರಿ ದೀರ್ಘ ಕಾಲದವರೆಗೆ ನಮಾಝ್ ಮಾಡುತ್ತಿದ್ದೆನು. ನಂತರ ಸೂರ್ಯೋದಯ ಆಗುವವರೆಗೆ ವಿಶ್ರಾಂತಿ ಪಡೆಯುತ್ತಿದ್ದೆನು ಎಂದು ಹೇಳಿದರು. 
     ಇಸ್ಲಾಮ್ ಸ್ವೀಕರಿಸಿದ ಐದನೇ ವ್ಯಕ್ತಿ ಎಂಬ ಪ್ರಯೋಗವೂ ಕೂಡ ಮಹಾನರ ಕುರಿತು ಗ್ರಂಥಗಳಲ್ಲಿ ಕಾಣಬಹುದು. ಪ್ರವಾದಿಯವರ ﷺ ಜೀವನ ಚರಿತ್ರೆಯಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಅಬೂದರ್ರ್'ರವರನ್ನು ನಮಗೆ ಕಾಣಲು ಸಾಧ್ಯವಾಗುತ್ತದೆ.

     (ಮುಂದುವರಿಯುತ್ತದೆ...) 

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: