Abu Hisham Saquafi

Official Website Of Hafiz Ilyas Saquafi Padaladka

Thursday, October 1, 2020

ಅಂಡಮಾನಿನ ಉದಯ ಸೂರ್ಯ,ಅಹ್ಲುಸ್ಸುನ್ನದ ಅಮರ ವೀರ್ಯ

ಅಲ್ಲಾಮಾ ಫಝ್ಲುಲ್ ಹಕ್ ಖೈರಾಬಾದಿಯ(ರ) ಹೆಸರು ನೀವು ಕೇಳಿರಬಹುದೇ?     ಅವರ ಹೆಸರನ್ನು ಕೇಳದವರು ಅತೀ ವಿರಳ.    ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ  ಸಕ್ರಿಯವಾಗಿ ಭಾಗವಹಿಸಿದ ಕಾರಣದಿಂದ ಬ್ರಿಟಿಷ್ ರಾಯಭಾರಿಗಳಿಂದ ನಿರಂತರವಾಗಿ  ಶಾರೀರಿಕ ಉಪಟಳಕ್ಕೆ ವಿಧೇಯರಾದ ಅತ್ಯಪೂರ್ವ  ಹೋರಾಟಗಾರಲ್ಲೊಬ್ಬರು.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಲ್ಲಾಮಾ ಪಾಲ್ಗೊಂಡಿದ್ದರು. ಇದು ಬ್ರಿಟಿಷರಿಗೆ ಸಹಿಸಲಾಗದೆ  ಅವರನ್ನು
ಇಲ್ಲಿಂದ   ಅಂಡಮಾನ್ ನಿಕೋಬಾರ್ ದ್ವೀಪದ ರಾಜಧಾನಿ ಪೋರ್ಟ್ ಬ್ಲೇರ್‌ಗೆ ಗಡೀಪಾರು ಮಾಡಲಾಯಿತು. 
ಬ್ರಿಟಿಷರ ವಿರುದ್ಧ ಹೆಚ್ಚುತ್ತಿರುವ ಸ್ವಾತಂತ್ರ್ಯ ಸಂಗ್ರಾಮದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಧೀರೋದಾತ್ತವಾಗಿ  ಹೋರಾಡಿದರು.
ಇದರಿಂದಾಗಿ ಬ್ರಿಟಿಷರು ಅವರನ್ನು  ಜೈಲಿನಲ್ಲಿ ಹಾಕಿದರು. ಅಂಡಮಾನ್ ದ್ವೀಪದಲ್ಲಿರುವ ಅದೆಷ್ಟು ದೂರದಲ್ಲಿರುವ ಸಂಕೀರ್ಣವಾದ ಸೆಲ್ಯುಲಾರ್ ಜೈಲಿನಲ್ಲಿ ವರ್ಷಗಳ ಕಾಲ ಕಳೆಯಬೇಕಾಯಿತು. 

ಸೆಲ್ಯುಲಾರ್,ಇದು ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ವಸಾಹತುಶಾಹಿ ಜೈಲು. ಬ್ರಿಟಿಷರ ವಿರುದ್ಧ ದಂಗೆತ್ತುವ  ಕೈದಿಗಳನ್ನು ದೂರದ ದ್ವೀಪಸಮೂಹಕ್ಕೆ ಗಡಿಪಾರು ಮಾಡುವ ಸ್ಪಷ್ಟ ಉದ್ದೇಶಕ್ಕಾಗಿ ಈ ಕಾರಾಗೃಹವನ್ನು ಬ್ರಿಟಿಷರು ಬಳಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ  ಅನೇಕ ಗಮನಾರ್ಹ ಸ್ವಾತಂತ್ರ್ಯ ಕಾರ್ಯಕರ್ತರನ್ನು ಇಲ್ಲಿ ಬಂಧಿಸಲಾಯಿತು. ಅನೇಕ ಬಂಡುಕೋರರನ್ನು ಇಲ್ಲಿ ಗಲ್ಲಿಗೇರಿಸಿದರು.
ಇಂದು, ಇದು ರಾಷ್ಟ್ರೀಯ ಸ್ಮಾರಕವಾಗಿ ಕಾರ್ಯನಿರ್ವಹಿಸುತ್ತದೆ.

ಈ ಕಾರಾಗೃಹ ಮಹಾನರಿಗೆ ಬರಹದ ಸಿಹಿ ತಿನಿಸುಗಳನ್ನು  ಮುಂದಿಟ್ಟಿತು. ಅವರು ಸುಮ್ಮನೆ ಇರಲಿಲ್ಲ, ಅದೊಂದು ಸುವರ್ಣಾವಕಾಶವಾಗಿತ್ತು. ತನ್ನ ಕೈಚಳಕದಿಂದ 
 ಗ್ರಂಥಗಳನ್ನು,ಕವನಗಳನ್ನು   ಬರೆದರು. *ಅಸ್ಸೌರತುಲ್ ಹಿಂದಿಯ್ಯ*  ಪ್ರಮುಖವಾದುದು. ಭಾರತೀಯ ಇತಿಹಾಸ ಮತ್ತು ಭಾರತದ ವಿರುದ್ಧ ಬ್ರಿಟಿಷರು ಮಾಡಿದ ದೌರ್ಜನ್ಯಗಳನ್ನು  ಅದರಲ್ಲಿ ವಿವರಿಸಿದರು. ಅಲ್ಲಿಂದ ಈ
ಕಿತಾಬ್ ನೊಂದಿಗೆ ಬಂದ ತನ್ನ ಸ್ನೇಹಿತ ಮುಫ್ತಿ ಇನಾಯತ್ ಅಹ್ಮದ್ ಕಾಕುರ್ವೀ ಎಂಬವರು ಅದನ್ನು ಅವರ ಕುಟುಂಬ, ಶಿಷ್ಯರು ಮತ್ತು ಸ್ಥಳೀಯರಿಗೆ ತಲುಪಿಸಿದರು. ವಿದ್ವಾಂಸರು ತಮ್ಮ ವಿದ್ಯಾರ್ಥಿಗಳಿಗೆ ಗ್ರಂಥವನ್ನು ಕಲಿಸಿದರು. ಇದು ಮುಸ್ಲಿಂ ಸ್ವಾತಂತ್ರ್ಯ  ಹೋರಾಟಗಾರರಿಗೆ ಪ್ರಚೋದನಾಕಾರಿ ಯೂ ಉತ್ಸಾಹವೂ ಆಯಿತು.

ನಾಲ್ಕು ಸಾವಿರ ಕ್ಕೂ ಅಧಿಕ  ಕವಿತಾ ಸಂಕಲನದಲ್ಲಿ
ಸಾವಿರಕ್ಕೂ ಹೆಚ್ಚು ಕವಿತೆಗಳ ಮೂಲಕ ಪವಿತ್ರ ಪ್ರವಾದಿ (ಸ.ಅ) ರವರ ಜೀವನವೈಶಿಷ್ಟ್ಯಗಳನ್ನು ಮಾತ್ರ ಬರೆದಿರುವ  ಮಹಾನರು ಹಸ್ಸಾನುಲ್ ಹಿಂದ್(ಭಾರತದ ಹಸ್ಸಾನ್)  ಎಂಬ ಅಪರನಾಮದಿಂದ ಪ್ರಸಿದ್ಧಿ ಪಡೆದರು. ಪ್ರವಾದಿ ಸ.ಅ ರವರ ಕವಿಯಾಗಿದ್ದ  ಹಸ್ಸಾನು ಬಿನ್ ಸಾಬಿತ್ (ರ) ರವರು ಇಸ್ಲಾಮಿನ  ಶತ್ರುಗಳ ಆರೋಪಗಳನ್ನು ಕವಿತಾ ಮೂಲಕ ಜವಾಬು ನೀಡುತ್ತಿದ್ದರು.  ಅದೇ ತರಹ ಅಲ್ಲಾಮಾ ಫಝ್ಲುಲ್ ಹಕ್ ಖೈರಾಬಾದಿಯು ತನ್ನ  ಕಾಲದ ನೂತನವಾದಿಗಳಾದ ವಹಾಬಿ ಪಾದ್ರಿಗಳ ಆರೋಪಪ್ರತ್ಯಾರೋಪಗಳಿಗೆ ಕವನ ಮೂಲಕ ದಿಟ್ಟ ಉತ್ತರವನ್ನು ನೀಡುತ್ತಿದ್ದರು.
ಉತ್ತರ ಭಾರತದಲ್ಲಿನ ದೆಹಲಿ ಕೇಂದ್ರವಾಗಿಟ್ಟುಕೊಂಡು ವೈಜ್ಞಾನಿಕ ಕ್ರಾಂತಿ ಸೃಷ್ಟಿಸಿದ ಮಹಾನ್ ಷಾಹ್ ವಲಿಯುಲ್ಲಾಹಿ ದಹ್ಲವಿ (ರ) ಅವರ ಮಗನಾದ ಶೇಖ್  ಅಬ್ದುಲ್ ಅಝೀಝ್ ದಹ್ಲವಿ(ರ) ರವರ ಪ್ರೀತಿಯ ಶಿಷ್ಯರಾಗಿದ್ದರು 

ಹಲವಾರು  ಪಂಡಿತರಿಗೂ ಆಧ್ಯಾತ್ಮಿಕ ನಾಯಕಿಗೂ ಜನ್ಮ ತಾಳಿದ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಖೈರಾಬಾದ್  ನಲ್ಲಿ  ಮಹಾನರು ಕ್ರಿಸ್ತಶಕ 1797, ಹಿಜರಿವರ್ಷ 1212 ರಂದು ಪ್ರಸಿದ್ಧ ಮನೆತನದಲ್ಲಿ ಜನಿಸಿದರು. ಅವರ ಕುಟುಂಬ ಪರಂಪರೆ ಎರಡನೇ ಖಲೀಫಾ ಉಮರು ಬಿನ್ ಖತ್ತಾಬ್(ರ) ರಿಗೆ ತಲುಪುತ್ತದೆ. ಅವರ ಸಹೋದರರು ಆ ಕಾಲದಲ್ಲಿನ ಹೆಸರುವಾಸಿಯಾದ ಉಲಮಾ ಶಿರೋಮಣಿಗಳಾಗಿದ್ದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು  ತನ್ನ ತಂದೆಯ ಸನ್ನಿಧಿಯಲ್ಲಿ ಕಲಿತರು.ಅವರೂ ಸಹ ಬಲು ದೊಡ್ಡ ವಿದ್ವಾಂಸರು ಆಗಿದ್ದರು. ನಂತರ ದಿಲ್ಲಿಯ ಪ್ರಮುಖ ವಿದ್ವಾಂಸರುಗಳಾದ ಶೈಖ್ ಅಬ್ದುಲ್ ಖಾದರ್ ದಹ್ಲವಿ (ರ) ಮತ್ತು ಶೈಖ್ ಅಬ್ದುಲ್ ಆಝೀಝ್ ದಹ್ಲವಿ(ರ) ದರ್ಸ್ ಲ್ಲಿ  ತಂದೆಯವರು  ಸೇರಿಸಿದರು. ಖೈರಾಬಾದಿಯ ಅಪಾರ ವಿಜ್ಞಾನ ವೈಭವವನ್ನು ಅರಿತ  ಶೈಖ್ ಅಬ್ದುಲ್ ಆಝೀಝ್ ದಹ್ಲವಿ(ರ) ರವರು ದೊಡ್ಡ ಆಲಿಮಾಗಿ  ಹೊರಬರಲಿ ಎಂದು ಎದೆ ತಟ್ಟಿ  ಪ್ರಾರ್ಥಿಸಿದರು.  ಅದುವೇ  ಅವರ  ವಿಜಯಕ್ಕೆ  ಹೇತು.ಸುದೀರ್ಘ ಅವಧಿಯ ವಿಜ್ಞಾನ ತಪಸ್ಸಿನಿಂದ ಖುರ್ ಆನ್, ಹದೀಸ್,ತಸವ್ವುಫ್ ನ್ಯಾಯಶಾಸ್ತ್ರ,ಭಾಷೆಯಲ್ಲಿ
ಮಹೋನ್ನತ ವಿದ್ವಾಂಸರಾಗಿ ಹೊರಬಂದರು.

 1857 ರ ವರೆಗೆ  ದಿಲ್ಲಿ,ಜಜ್ಜಾರ್,ಅಲ್ವಾರ್,ಲಕ್ನೋ,ತೋನಕ್   ಸಹಾರಾಂಪುರ್,ರಾಂಪುರ್,ಖೈರಾಬಾದ್ ಮುಂತಾದ ಅನೇಕ  ಸ್ಥಳಗಳಲ್ಲಿ ಮುದರ್ರಿಸಾಗಿಯೂ ಬರಹಗಾರರಾಗಿಯೂ ವಾಗ್ಮಿ ಯಾಗಿಯೂ ಪ್ರೋಜ್ವಲಿಸಿದ ಮಹಾನರು ಹಲವಾರು ಶಿಷ್ಯರನ್ನು  ಸಂಪಾದಿಸಿ ಸಮಾಜಕ್ಕೆ ಸನ್ಮಾನಿಸಿದರು. ಅಲ್ ಅನಾಸಿರುಲ್ ಅರ್ಬಅ ಎಂದು ಕರೆಯಲ್ಪಡುವ ಕೆಳಗಿನ ನಾಲ್ಕು ಮಹಾ ಉಲಮಾ ದಿಗ್ಗಜರು ಮಹಾನರ  ಶಿಷ್ಯಂದಿರಾಗಿದ್ದಾರೆ.
1. ಮೌಲಾನಾ ಅಬ್ದುಲ್ ಹಖ್ ಖೈರಾಬಾದಿ (ರ)
2. ಮೌಲಾನಾ ಫೈಝುಲ್ ಹಖ್ ಸಹಾರಾಂಪುರಿ (ರ)
3.  ಮೌಲಾನಾ ಹಿದಾಯತುಲ್ಲಾ ಖಾನ್ ಜೋದ್ ಪುರಿ(ರ)
4.   ಮೌಲಾನಾ   ಅಬ್ದುಲ್ ಖಾದರ್ ಉಸ್ಮಾನ್ ಬದಾಯೂನಿ(ರ)
ಹೀಗೆ   ಒಂದು ಸಾವಿರದಷ್ಟು  ಶಿಷ್ಯಂದಿರು ಅವರಿಗಿದೆ. ಇದು ಅಹ್ಲುಸ್ಸುನ್ನತಿ ವಲ್ ಜಮಾಅತ್ ಗೆ ಸಿಕ್ಕಿದ ಬಲುದೊಡ್ಡ ವರದಾನವಾಗಿದೆ. ಅಭಿಮಾನವೂ ಕೂಡ. 
ಅವರಿಂದ ವಿರಚಿತವಾದ ಗ್ರಂಥಗಳಲ್ಲಿ ಕೆಲವನ್ನು ನಾನು ಹೆಸರಿಸುತ್ತಿದ್ದೇನೆ.
1. ثورة الهندية
2. تقرىر اعتراضات علي الرد تقوية الايمان
3. الهدية السعيدية في الحكمة الطبيعية
4. الجنس الغالي في شرح جوهر  العالي
5.حاشية علي شرح السلم العلوم للقاضي المبارك رحمه الله
6.رسالةالرد  علي اسمعيل الشهيد المولوي
7. تحقيق الفتوي في ابطال الطغوي
8.حاشية افق المبين
9.القصيدة الهمزية
10.القصيدة الدالية
  
  ಹೀಗೆ 50 ರಷ್ಟು ಗ್ರಂಥಗಳು ಮಹಾನರು ರಚಿಸಿದರು. ಇಸ್ಮಾಯೀಲ್ ಶಹೀದ್  ಎಂಬ  ವಹಾಬಿಪಾದ್ರಿಯ ತಖ್ವಿಯತುಲ್ ಈಮಾನನ್ನು ಖಂಡಿಸಿ ಮೂರು ಸವಿಸ್ತಾರವಾದ ಪ್ರತ್ಯುತ್ತರ ಗ್ರಂಥಗಳು ಸಹ ಬರೆದಿದ್ದಾರೆ.
ಬ್ರಿಟಿಷರು ಮಹಾನರನ್ನು ಸೆರೆಹಿಡಿದು ಅಂಡಮಾನ್ ದ್ವೀಪಕ್ಕೆ
ಕೊಂಡೊಯ್ಯುವವೇಳೆ  ತನ್ನ ಜೊತೆಯಲ್ಲಿದ್ದವರು ಕೇಳಿದರು; ತಾವು ತಮ್ಮ ಇಲ್ಲಿನ ಕುಟುಂಬಸ್ಥರಿಗೂ  ಸ್ನೇಹಿತರಿಗೂ ಸ್ಮರಣಾರ್ಥವಾಗಿ ಏನನ್ನು ನೀಡುತ್ತೀರಿ.. ನನ್ನ ಮಗ ಮತ್ತು ಹಾಶಿಯತು ಶರಹಿ ಸುಲ್ಲಮಿಲ್ ಉಲೂಂ ಎಂಬ ನನ್ನ ಗ್ರಂಥವನ್ನು ವಾರೀಸಾಗಿ ನಾನು  ನೀಡುತ್ತೇನೆ ಎಂದು ಅಲ್ಲಾಮಾ ಫಝ್ಲುಲ್ ಹಕ್ ಖೈರಾಬಾದಿ(ರ) ಹೇಳಿದರು. ಇದು ಅವರ ದೈವನಂಬಿಕೆಗೆ ಉತ್ತಮ ಉದಾಹರಣೆ.

ಮಗನಾದ ಶಂಸುಲ್ ಉಲಮಾ ಅಬ್ದುಲ್ ಹಕ್ ಖೈರಾಬಾದಿಯು ಪ್ರಶಸ್ತ ವಿದ್ವಾಂಸರಾಗಿದ್ದರು.
ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಹದೀಸ್ ಸನದು ಮತ್ತು ಗುರು  ಪರಂಪರೆಯಲ್ಲೊಂದು ಮಹಾನರ ಮುಖಾಂತರ ಇಮಾಂ ಬುಖಾರಿ (ರ)ರವರೆಗೆ ಹಾದುಹೋಗುತ್ತದೆ.ಅಲ್ಲಿಂದ ವಿಶ್ವ ಗುರು ಮುಹಮ್ಮದ್ (ಸ:ಅ)ರವರೆಗೆ ತಲುಪುತ್ತದೆ.ಈಗ ಅದನ್ನು ಪ್ರತಿಪಾದಿಸಲು ಯತ್ನಿಸುವುದಿಲ್ಲ. ಮತ್ತೊಮ್ಮೆ ನೋಡೋಣ.
1861 ರ ಆಗಸ್ಟ್ 20 (ಸಫರ್ 12) ರಂದು
ಅಂಡಮಾನ್ ದ್ವೀಪದಲ್ಲಿ ಮಹಾನರು ಹುತಾತ್ಮರಾದರು.ಅಲ್ಲಿನ  ರಾಜಧಾನಿ ಪೋರ್ಟ್ ಬ್ಲೇರ್ ಸಮೀಪದ  ನಮಕ್ ಪೇಟೆಯಲ್ಲಿ  ಅಲ್ಲಾಮಾ (ರ) ರವರ ಪಾರ್ಥಿವ ಶರೀರ ದಫನ ಮಾಡಲಾಯಿತು.
ಸಹಸ್ರಾರು ಸಂಖ್ಯೆ  ಜನರು ದಿನಂಪ್ರತಿ  ಅವರ  ಮಖ್ ಬರ ಸಂದರ್ಶನ ಮಾಡುತ್ತಾರೆ. ಸೃಷ್ಟಿಕರ್ತನಾದ  ಅಲ್ಲಾಹು ಅವರ ಬರಕತ್ತಿನಿಂದ ನಮ್ಮನ್ನು  ಕಾಪಾಡಲಿ.

🖋 ಹಾಫಿಝ್ ರಫೀಕ್ ನಿಸಾಮಿ ಪಳ್ಳತ್ತೂರು
    31-09-2020

No comments: